ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ@75: ಓದುಗರ ಅನಿಸಿಕೆಗಳು

Last Updated 18 ಅಕ್ಟೋಬರ್ 2022, 2:04 IST
ಅಕ್ಷರ ಗಾತ್ರ

ವಸ್ತುನಿಷ್ಠ ಸುದ್ದಿ...

75 ವರ್ಷ ಪೂರೈಸಿದ ‘ಪ್ರಜಾವಾಣಿ’ಯನ್ನು 1975ರಿಂದ ಒಂದಕ್ಷರವೂ ಬಿಡದೇ ಓದುವ ಅಭ್ಯಾಸವಿರುವ ಓದುಗ ನಾನು. ಸ್ಕೂಲ್ ರಜೆಯಲ್ಲಿ ತಿಂಗಳಾನುಗಟ್ಟಳೆ ಊರುಗಳಿಗೆ ಹೋದಾಗ, ಪತ್ರಿಕೆ ತರಿಸುವುದು ನಿಲ್ಲಿಸುತ್ತಿರಲಿಲ್ಲ. ಪತ್ರಿಕೆ ಹಾಕುವವ ಬಾಗಿಲ ಕೆಳಗಿನ ಸಂದಿಯಿಂದ ತೂರಿಸಿ ಹೋಗುತ್ತಿದ್ದ. ಊರಿಂದ ಬಂದ ಮೇಲೆ ಬಾಗಿಲು ತೆರೆದು ಪತ್ರಿಕೆ ರಾಶಿ ಸರಿಸಿ-ಜೋಡಿಸಿ ದಿನಾಂಕವಾರು ಓದದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಆಗೆಲ್ಲ ಪತ್ರಿಕೆ ಮನೆಗೆ ಬರಲು ಮದ್ಯಾಹ್ನ 2 ಗಂಟೆಯಾಗೋದು, ಅಲ್ಲಿಯವರೆಗೆ ಕಾಯಲು ತಾಳ್ಮೆಯಿರದೆ, ಬಸ್ ಸ್ಟ್ಯಾಂಡ್ ಹತ್ತಿರದ ಏಜೆಂಟರ ಅಂಗಡಿಗೇ ಹೋಗಿ ಪತ್ರಿಕೆ ಬರೋ ಬಸ್ ಬರುವವರೆಗೆ ಕಾಯ್ದು ತರುತ್ತಿದ್ದೆ.

ಪತ್ರಿಕೆ ಜೊತೆಗೇ ಬೆಳೆದೆ. ಮಕ್ಕಳು ಪದಗಳ ಕಾಗುಣಿತದ ತಕರಾರು ತೆಗೆದಾಗೆಲ್ಲ ‘ಪ್ರಜಾವಾಣಿಲೇ ಹೀಗೆ ಬಂದಿದೆ ನೋಡು’ ಎಂದು ಸುಮ್ಮನಿರಿಸಿದ್ದೇನೆ.

ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಞಾನ, ಕ್ರೀಡೆ…ಹೀಗೆ ಎಲ್ಲಾ ರಂಗಗಳಲ್ಲೂ ವಸ್ತುನಿಷ್ಠ ಸುದ್ದಿ ಪ್ರಕಟಿಸುತ್ತಲೇ ಬಂದಿದೆ. ಉತ್ತಮ ಚಿಂತನಾ ಕ್ರಮ ರೂಢಿಸುವಲ್ಲಿ ಪತ್ರಿಕೆ ಪ್ರಭಾವ ಬೀರಿ ಪ್ರಬುದ್ಧ ಸಮಾಜ ಬೆಳವಣಿಗೆಯಲ್ಲಿ ಭಾಗಿಯಾಗಿದೆ. ಪತ್ರಿಕೆಯಲ್ಲಿ ನನ್ನದೂ ಕೆಲ ‘ಪ್ರತಿಕ್ರಿಯೆ’ಗಳು ಪ್ರಕಟವಾಗಿರುವುದು ನನ್ನ ಹೆಮ್ಮೆ.
ಪ್ರಜಾವಾಣಿ ಚಿರಂಜೀವಿಯಾಗಿರಲಿ.
–ಕುಮಾರ್ ಬಿ.ಎನ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು

*

ವಿಶ್ವಾಸಾರ್ಹ ಮಿತ್ರ...

ಪ್ರಜಾವಾಣಿ ಪತ್ರಿಕೆಯನ್ನು ನಾನು 50 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಓದುತ್ತಿದ್ದೇನೆ. ನನಗೆ ಪ್ರಜಾವಾಣಿ ನಾಡಿನ ಸುದ್ದಿ ಸಮಾಚಾರಗಳ ಬಗೆಗಿನ ನಂಬಲರ್ಹ ಸಂಗಾತಿ. ಭಾನುವಾರದ ಪುರವಣಿ ಮತ್ತು ವಾರ್ಷಿಕ ದೀಪಾವಳಿ ಸಂಚಿಕೆಗಳ ಮೂಲಕ ಪ್ರೀತಿಯ ಸಾಹಿತ್ಯ ಸಂಗಾತಿ. ಪ್ರಜಾವಾಣಿ ನನ್ನ ಸುತ್ತ ಇರುವ ಸಮಾಜ, ಪರಿಸರ, ಭಾಷೆ ಮತ್ತು ರಾಜ್ಯ ಹಾಗೂ ರಾಷ್ಟ್ರಗಳ ಬಗ್ಗೆ ನಿತ್ಯ ವರದಿ ನೀಡುವ ನೆಚ್ಚಿನ ವಿಶ್ವಾಸಾರ್ಹ ಮಿತ್ರ. ಇತರ ಪತ್ರಿಕೆಗಳನ್ನೂ ಓದುವೆನಾದರೂ ಪ್ರಜಾವಾಣಿ ಪತ್ರಿಕೆ ಓದದಿದ್ದರೆ ಸುದ್ದಿ ಓದಿದ ಸಮಾಧಾನ ಸಿಗುವುದೇ ಇಲ್ಲ. ಆದ್ದರಿಂದ ಪ್ರಜಾವಾಣಿ ನನಗೆ ನಿತ್ಯ ಮಿತ್ರ.
–ಮುರಲೀಧರ ಲೋಕಿಕೆರೆ.

*

ಕಳೆದ 40 ವರ್ಷಗಳಿಂದ ‘ಪ್ರಜಾವಾಣಿ’ ನಮ್ಮ ಮನೆಯಂಗಳಕ್ಕೆ ಪ್ರತಿದಿನ ಬರುವ ಆತ್ಮೀಯ ಅತಿಥಿಯಾಗಿದೆ. ತವರು ಮನೆಯಲ್ಲೆ ಈ ಪತ್ರಿಕೆ ಓದುವ ಚಟ ಏರಿತ್ತು. ಪತ್ರಿಕೆ ಮನೆಗೆ ಬಂದ ಕೂಡಲೆ ಅಪ್ಪನಿಗೆ ತಂದು ಕೊಡುತ್ತಿದ್ದೆವು. ಅಪ್ಪ ಓದಿ ಮುಗಿಸಿದ ಕೂಡಲೇ ನಾವು ಒಡಹುಟ್ಟಿದವರು ನಾಲ್ಕು ಜನ ನಾ ಮೊದಲು ತಾ ಮೊದಲು ಎಂದು ಪತ್ರಿಕೆಗಾಗಿ ಹಠಮಾಡಿದಾಗ, ಪತ್ರಿಕೆಯ ಪುಟಗಳನ್ನು ಬೇರ್ಪಡಿಸಿ ಕೊಡುತ್ತಿದ್ದರು. ಇಬ್ಬರಿಗೊಂದು ಪುಟದಂತೆ ಹಾಳೆಗಳನ್ನು ನೆಲದ ಮೇಲೆ ಹರಡಿ ಓದುತ್ತಿದ್ದೆವು.

ಪತ್ರಿಕೆಯ ಹಿಡಿದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ವಾರ್ತಾವಾಚಕರ ಅನುಕರಣಿಯ ಆಟ(ಪಾಠ)ವಂತೂ ಮನಸ್ಸಿಗೆ ಮುದನೀಡುತ್ತಿತ್ತು. ಈಗಲೂ ನೆನಸಿಕೊಂಡರೆ ರೋಮಾಂಚನವಾಗುತ್ತದೆ. ಮದುವೆಯಾಗಿ ಗಂಡನ ಮನೆಸೇರಿದಾಗ ಪತಿರಾಯರಿಗೆ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಸಿಂಹಪಾಲು ಬಾಡಿಗೆ, ದಿನಸಿ,ಹಾಲು, ಹೂವು ಮತ್ತು ತರಕಾರಿ ಇತ್ಯಾದಿ ಅನಿವಾರ್ಯ ಮತ್ತು ಅವಶ್ಶಕತೆ ಖರ್ಚುಗಳ ನಂತರದ ಸರತಿ ಪ್ರಜಾವಾಣಿ ಪತ್ರಿಕೆಯ ತಿಂಗಳ ಹಣ ಹೊಂದಿಸುವುದೇ ಆಗಿರುತ್ತಿತ್ತು. ಹೇಗಾದರೂ ಮಾಡಿ ಹಣವನ್ನು ಹೊಂದಿಸುತ್ತಿದ್ದವು. ಅದು ಆಗಿನ ಕಾಲಕ್ಕೆ ಸವಾಲಿಗಿಂತ ಕಡಿಮೆ ಇರಲಿಲ್ಲ.
ಸಮಯ ಕಳೆದಂತೆ ಕುಟುಂಬ ದೊಡ್ಡದಾದರೂ ಪ್ರಜಾವಾಣಿಯ ಜೊತೆಗೆ ಇನ್ನೊಂದೆರಡು ಆಂಗ್ಲಭಾಷೆಯ ಪತ್ರಿಕೆಗಳು ಸೇರಿಹೊದರೂ, ಮನೆಯಲ್ಲಿ ಎಲ್ಲರೂ ಮೊದಲು ಪ್ರಜಾವಾಣಿಯ ಮೇಲೆ ಕಣ್ಣಾಡಿಸಿಯೇ ದಿನಚರಿ ಆರಂಬಿಸುವುದಂತಾಗಿದೆ.
ಪತ್ರಿಕೆಯೊಂದು ಈ ರೀತಿಯಾಗಿ ಕುಟುಂಬಗಳಲ್ಲಿ ಬೆರೆತು, ಕರಗಿ, ಬಲಿತು ಬೇರೂರುವುದು ಹಗುರದ ಮಾತಲ್ಲ.

ಈ ಸಾಧನೆಗೆ ಪ್ರಜಾವಾಣಿ ಕುಟುಂಬದವರ ತ್ಯಾಗ ಮತ್ತು ವೃತ್ತಿಪರತೆ ಎದ್ದು ಕಾಣುತ್ತದೆ. ದೇಶ ಅಮೃತ ಮಹೊತ್ಸವ ಆಚರಿಸುತ್ತಿರುವ ಈ ಸುಸಮಯದಲ್ಲಿ, ನನ್ನ ಮಾತೃಭಾಷೆಯ ಬಹಳ ಆಪ್ಯಾಯಮಯವಾದ ನೆಚ್ಚಿನ ಪ್ರಜಾವಾಣಿಯ ಅಮೃತೋತ್ಸವದ ಹಬ್ಬ ನಿಜಕ್ಕೂ ಸಡಗರವನ್ನು ಹೆಚ್ಚಿಸಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಬೇಕಾದ ಸುದ್ದಿ, ಮನೋರಂಜನೆ, ಜ್ಞಾನ ಮತ್ತು ಆತ್ಮೀಯ ಭಾವನೆಯನ್ನು ಹಬ್ಬಿಸುವಲ್ಲಿ ಯಶಸ್ವಿಯಾಗಿದೆ.

ನಮ್ಮ ಹೆಮ್ಮಯ ‘ಪ್ರಜಾವಾಣಿ’ ಹೀಗೆಯೇ ನೂರು ಕಾಲ ಬಾಳಿ ಬೆಳಗಲಿ.
–ಆಶಾ ನಾಗರಾಜ್, ವಿದ್ಯಾರಣ್ಯಪುರ, ಬೆಂಗಳೂರು

*

ಜನಮಾನಸದ ಪತ್ರಿಕೆ...
ಪ್ರಜಾವಾಣಿಯು ಕನ್ನಡಿಗರ ಜನಪ್ರಿಯ ಮತ್ತು ವಿಶ್ವಾಸಾರ್ಹ ಪತ್ರಿಕೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನೆಚ್ಚಿನ ಪತ್ರಿಕೆಯಾಗಿದೆ. ವಸ್ತುನಿಷ್ಠ ವರದಿ, ಶೈಕ್ಷಣಿಕ ವಿಷಯ, ಕ್ರೀಡೆ, ವಾಣಿಜ್ಯ, ಕಥೆಗಳಿಗೆ ಆದ್ಯತೆ ನೀಡಿ ಜನಮಾನಸದ ಪತ್ರಿಕೆಯಾಗಿ ರೂಪುಗೊಂಡಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ, ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳಲ್ಲೊಂದಾದ ಪ್ರಜಾವಾಣಿ ಪತ್ರಿಕೆ ಮತ್ತು ತಂಡಕ್ಕೆ ಅಮೃತ ಮಹೋತ್ಸವದ ಶುಭಾಶಯಗಳು.
–ನಿಂಗಣ್ಣ ಎಸ್.ಮನಗೂಳಿ,ಕಾನೂನು ವಿದ್ಯಾರ್ಥಿ ವಿಜಯಪುರ

*

ಅಭಿನಂದನೆಗಳು....
ಪ್ರಜಾವಾಣಿ ಪತ್ರಿಕೆಯು ಈಗ 75ರ ಸಂಭ್ರಮ ಆಚರಣೆಯಲ್ಲಿದೆ. ಅನೇಕ ದಿನ ಪತ್ರಿಕೆಗಳ ನಡುವೆ ಇಂದಿಗೂ ತನ್ನ ಘನತೆಯನ್ನು ಉಳಿಸಿಕೊಂಡಿದೆ ಎಂದು ಅಭಿಮಾನದಿಂದ ಹೇಳುತ್ತೇನೆ. ಈ ದಿನ ಪತ್ರಿಕೆಯಲ್ಲಿ ಬರುವ ಭಾನುವಾರದ ಪುರವಣಿಯ ಬರಹಗಳನ್ನು ಓದಿಕೊಂಡು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂದಿದ್ದೇನೆ. ವಸ್ತುನಿಷ್ಠವಾಗಿ ವರದಿ ಮಾಡುವ ಪ್ರಜಾವಾಣಿ ಪತ್ರಿಕೆಯ 75ರ ಸಂಭ್ರಮಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ.
–ಕಲ್ಲಪ್ಪ ಎಂ.ಬಿ., ಸಂಶೋಧನಾರ್ಥಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

*

ಅಡಿಯಾಳಾಗದ ಪತ್ರಿಕೆ...
ನಾನು ಸುಮಾರು ಎಲ್ಲ ದಿನಪತ್ರಿಕೆಗಳನ್ನು ತರಿಸುತ್ತೇನೆ. ಆದರೆ ಮೊದಲು ಕೈಗೆತ್ತಿಕೊಳ್ಳುವದು ಪ್ರಜಾವಾಣಿ. ಅದರ ಜನಪರ ಕಾಳಜಿ, ನಿಷ್ಪಕ್ಷಪಾತ ವರದಿ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬೇಕಾದ ಮಾಹಿತಿ, ಮಾರ್ಗದರ್ಶನ ನಾವು ಪ್ರಜಾವಾಣಿಯಲ್ಲಿ ಮಾತ್ರ ಕಾಣಬಹುದು. ಪುಟಗಳ ವಿನ್ಯಾಸವೂ ಕೂಡ ಆಕರ್ಷಣೀಯ!

ಯಾವ ರಾಜಕಾರಣಿಗಳ, ಪಕ್ಷಗಳ ಅಡಿಯಾಳಾಗದೇ ಅವರ ಕೃಪಾಪೋಷಿತದಲ್ಲಿ ನಡೆಯದೇ, ಪತ್ರಿಕಾ ಧರ್ಮ ವನ್ನು ಎತ್ತಿ ಹಿಡಿಯುವ ಪತ್ರಿಕೆ ನಮ್ಮ ಪ್ರಜಾವಾಣಿ, ನಮ್ಮ ಹೆಮ್ಮೆ...
- ವಿರೇಶ ಬಂಗಾರಶೆಟ್ಟರ, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ. ಕುಷ್ಟಗಿ.

*

ಪ್ರೀತಿಯ ಪತ್ರಿಕೆ

ಪ್ರಜಾವಾಣಿ ನನ್ನ ಪ್ರೀತಿಯ ದಿನಪತ್ರಿಕೆ. ಇದು ಇಂದಿನದಲ್ಲ, 60 ವರ್ಷಗಳಿಂದಲೂ ಅದರೊಂದಿಗೆ ನಂಟು. ನನ್ನ ತಂದೆಯವರೂ ಪ್ರಜಾವಾಣಿಯನ್ನೇ ಓದುತ್ತಿದ್ದರು. ಅವರೊಂದಿಗೆ ನಾನೂ ಓದಲು ಆರಂಭಿಸಿದೆ. ಅದು ಇಂದಿಗೂ ಮುಂದುವರಿದಿದೆ.

ಎಷ್ಟೊ ಸಮಯ ಬೇರೆ ಪತ್ರಿಕೆಯವರು ಅವರ ಪತ್ರಿಕೆಯನ್ನು ಕೊಟ್ಟು ಪ್ರಜಾವಾಣಿ ಬಿಡಿ ಎಂದರು. ಆದರೆ ಅದನ್ನು ಬಹಳ ನಯವಾಗಿ ತಿರಸ್ಕರಿಸಿದೆ. ಪ್ರಜಾವಾಣಿಯ ಮುಖಪುಟ ಮತ್ತು ಮಧ್ಯದ ಪುಟಗಳು ನನಗೆ ನೆಚ್ಚಿನ ಪುಟಗಳು. ಭಾನುವಾರದ ಪುರವಣಿಯೂ ಇಷ್ಟ. ನಾನು ಬರೆದ ಕಥೆಗಳೂ ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಪತ್ರಿಕೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲಿ.
–ಡಾ। ಎಚ್‌.ಎಸ್‌.ರಾಘವೇಂದ್ರ ರಾವ್, ನಿವೃತ್ತ ಪ್ರಾಧ್ಯಾಪಕರು ಮೈಸೂರು.

*

ಪ್ರಜಾವಾಣಿ ಎಂಬುದೇ ಬೇರೆ!
ಬ್ಯಾಂಕ್ ನೌಕರಿ ನಿಮಿತ್ತ, ಹೆಸರೇ ಕೇಳಿರದ ಹೈ-ಕ ಭಾಗದ ಹಳ್ಳಿಯೊಂದಕ್ಕೆ ವರ್ಗವಾದಾಗ, ನನಗೆ ಪ್ರಜಾವಾಣಿ ದಕ್ಕುವುದೇ ಒಂದು 'ತೇನಸಿಂಗ ಸಾಹಸ'ವಾಗಿಬಿಟ್ಟಿತ್ತು. ಪಕ್ಕದೂರಿನ ಬೀಡಿ ಅಂಗಡಿಯೊಂದರಲ್ಲಿ ಮಾತ್ರವೇ ಲಭ್ಯವಾಗುತ್ತಿದ್ದ (ಅದೂ ಮಧ್ಯಾಹ್ನದ ಹೊತ್ತಿಗೆ!) ಪ್ರಜಾವಾಣಿ ಪಡೆಯಲು ಎರಡು-ಮೂರು ದಿನಕ್ಕೊಮ್ಮೆ 8-10 ಕಿ ಮಿ ನಡೆಯಬೇಕಾಗುತ್ತಿತ್ತು. ನನಗಾಗಿ ಪತ್ರಿಕೆ ತೆಗಿದಿರಿಸುವಂತೆ ಮುಂಗಡ ಹಣ ಕೊಟ್ಟಿರುತ್ತಿದ್ದೆ. ಈ ಪರಿಯ ಬಾಂಧವ್ಯ ನನ್ನದು.
ಹಲವು ವರ್ಷಗಳ ನಂತರ ಪಟ್ಟಣ ಪ್ರದೇಶವೊಂದಕ್ಕೆ ವರ್ಗವಾದಾಗ ನನ್ನ ಅನೇಕ ವೈಚಾರಿಕ-ಪತ್ರ, ಪ್ರತಿಕ್ರಿಯೆ, ಸಾಂದರ್ಭಿಕ ಲೇಖನ,ಕವನ...ಪ್ರಕಟಿಸಿ ನನ್ನಲ್ಲಿ ಆತ್ಮವಿಶ್ವಾಸ ಬಿತ್ತಿದ್ದು ಪ್ರಜಾವಾಣಿ.
ನಿರ್ಭೀತ, ನಿರ್ಬಿಡೆಯ, ನಿಷ್ಪಕ್ಷಪಾತದ ವರದಿ, ಸುದ್ದಿ-ವಿವರಗಳಿಗಾಗಿ ಪ್ರಜಾವಾಣಿಯನ್ನೇ ಆಶ್ರಯಿಸಬೇಕಷ್ಟೇ! ಕನ್ನಡ ನಾಡು, ನುಡಿ, ಜಲ, ಪರಿಸರ, ಸಂಸ್ಕೃತಿ ಉಳಿವಿಗಾಗಿ ಪ್ರಜಾವಾಣಿಯ ಬದ್ಧತೆ, ಸೇವೆ ಅನುಪಮ.ಜೊತೆಗೆ ನೇರ, ನಿಷ್ಠುರ ಧೋರಣೆಯೊಂದಿಗೆ ಸದಾ ವಿರೋಧ ಪಕ್ಷದಂತೆಯೇ ಕಾರ್ಯ ನಿರ್ವಹಿಸಿದ ಪ್ರಜಾವಾಣಿಯ ಪತ್ರಿಕಾ- ಧರ್ಮದ ಕರ್ತವ್ಯಪರತೆ ಅನನ್ಯ.
ಒಂದೇ ಅಸಮಾಧಾನ: ಭಾನುವಾರದ ಪುರವಣಿಯ ಕತೆ, ಕವನಗಳಿಗೆ 'ಕೋಡ್-ಸ್ಕ್ಯಾನ್' ಮಾಡಲು ತಡಕಾಡಬೇಕಾದ ಅನಿವಾರ್ಯತೆ. ಸ್ಮಾರ್ಟ್ ಫೋನ್ ಇಲ್ಲದ, ಇದ್ದರೂ ಉಪಯೋಗಿಸಲು ಬಾರದ ಓದುಗರಿಗೆ ಇದೊಂದು ಇತ್ತೀಚಿನ ಕೊರತೆ ಹಾಗೂ ನಿರಾಶೆ.
ಒಟ್ಟಾರೆ, ಪ್ರಜಾವಾಣಿ ಎಂಬುದೇ ಬೇರೆ! ಹೋಲಿಸಲು ಇನ್ನೊಂದಿಲ್ಲ! ಅಮೃತ ಮಹೋತ್ಸವದ ಶುಭಾಶಯಗಳು.
–ರಾಮಚಂದ್ರ ಎಸ್.ಕುಲಕರ್ಣಿ.ಧಾರವಾಡ

*

ಈ ಪತ್ರಿಕೆಯ ಓದುಗರ ಪೈಕಿ ನಾನೂ ಒಬ್ಬ. ಸುಮಾರು 40 ವರ್ಷಗಳಿಂದ ಬಿಡದೇ ಪತ್ರಿಕೆ ಓದುತ್ತಿರುವೆ. ಬಡತನ ಹಸಿವು ನಿರುದ್ಯೋಗ, ಅತ್ಯಚಾರ ದೌರ್ಜನ್ಯ, ಅಸ್ಪೃಶ್ಯತೆಯ ಸಮಸ್ಯೆಗಳಿಗೆ ಸುದ್ದಿ ಮಾಡುವುದರಲ್ಲಿ ಈ ಪತ್ರಿಕೆ ಅಗ್ರಗಣ್ಯ. ಇವುಗಳತ್ತ ಸರ್ಕಾರದ ಗಮನ ಸೆಳೆಯಲು ಯತ್ನಿಸುವ ಸುದ್ದಿಗಳು ಪ್ರಾಮಾಣಿಕತೆ ಯಿಂದ ಕೂಡಿವೆ. ಸಾಮಾಜಿಕ ಬದ್ಧತೆ ಇದರ ಸಿದ್ಧಾಂತ. ಪತ್ರಿಕೆ ಸಂಸ್ಥಾಪಕರಾದ ದಿ.ಕೆ.ಎನ್.ಗುರುಸ್ವಾಮಿಯವರಿಗೆ ನನ್ನ ನಮನ.
–ನಂಜನಹಳ್ಳಿ ನಾರಾಯಣ, ಸರ್ ಎಂ ವಿ ಬಡಾವಣೆ, ಬೆಂಗಳೂರು

*

ಪತ್ರಿಕಾ ಕ್ಷೇತ್ರದ ಆದರ್ಶ
ಹತ್ತಾರು ವರ್ಷಗಳಿಂದ ಪ್ರಜಾವಾಣಿಯ ನಿತ್ಯದ ಓದುಗನಾದ ನಾನು. ಪತ್ರಿಕೆಯು ಕಾಯ್ದುಕೊಂಡು ಬರುತ್ತಿರುವ ಮುದ್ರಣ ಶುದ್ಧತೆ, ಛಾಯಾಚಿತ್ರಗಳಲ್ಲಿ ಗುಣಮಟ್ಟ, ವಿನ್ಯಾಸದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ತೋರ್ಪಡಿಸುತ್ತಿರುವ ಕಾಳಜಿ ಪತ್ರಿಕಾ ಕ್ಷೇತ್ರಕ್ಕೆ ಆದರ್ಶವೆನಿಸಿದೆ. ಬರಹಗಾರರು, ಕಲಾವಿದ/ಕಲಾವಿದೆಯರ ಜೊತೆಗೆ ಗೌರವಪೂರ್ವಕವಾಗಿ ವ್ಯವಹರಿಸುವ ರೀತಿಯೂ ಆದರ್ಶವಾದುದು.

ನಾಡಿನ ಓದುಗರ ಹೃದಯ ಸಾಮ್ರಾಜ್ಯದಲ್ಲಿ ಸದಾ ವಿರಾಜಮಾನವಾಗಿರಲಿ ಎಂದು ಹಾರೈಕೆ.
–ದತ್ತಾತ್ರೇಯ ಎನ್. ಭಟ್ಟ, ಕಲಾವಿಮರ್ಶಕ, ದಾವಣಗೆರೆ

*

ಕಾವ್ಯ ಕಥೆ ಪತ್ರಿಕೆಯಲ್ಲಿ ಮೆರೆಯಲಿ
ನಮ್ಮ ಪ್ರಜಾವಾಣಿ 75ನೇ ವರ್ಷಕ್ಕೆ ಕಾಲಿಟ್ಟಿರುವುದು ಕನ್ನಡ ನಾಡಿನ ಸಮಸ್ತ ನಾಗರಿಕರಿಗೆ ಸಂತಸದ ವಿಷಯ. ಒಂದು ಪತ್ರಿಕೆ ಅನವರತ ಗುಣಮಟ್ಟ, ಅಭಿರುಚಿ, ಬೇಡಿಕೆ, ನಂಬಿಕೆ ಕಾಯ್ದುಕೊಂಡು ಸುದೀರ್ಘ ಕಾಲದವರೆಗೆ ಕಾಪಿಟ್ಟುಕೊಂಡು ಬರುವುದು ಅಷ್ಟು ಸಲೀಸಲ್ಲ.

ಪತ್ರಿಕೆ, ವಸ್ತು, ಬಣ್ಣ, ಅಕ್ಷರ, ಗಾತ್ರ, ವಿಷಯ ವ್ಯಾಪ್ತಿಗಳೆಲ್ಲವನ್ನೂ ಅನಾದಿಕಾಲದಿಂದಲೂ ಉಳಿಸಿಕೊಂಡು ಆಯಾಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅಬಾಲವೃದ್ಧರಾದಿಯಾಗಿ ಇಷ್ಟ ಪಡುವ ಪತ್ರಿಕೆಯಾಗಿ ಉಳಿದಿದೆ. ಪ್ರಜಾವಾಣಿಗೆ ಒಂದು ಸಣ್ಣ ಸಲಹೆ ಕೊಡಲು ಬಯಸುತ್ತೇನೆ. ಈ ಸಲಹೆ ನನ್ನೊಬ್ಬನದಲ್ಲ ಕನ್ನಡ ನಾಡಿನ ಬರಹಗಾರರೆಲ್ಲರ ಒಮ್ಮತದ ಹೆಬ್ಬಯಕೆ ಕೂಡ.

ಅದೇನೆಂದರೆ ಭಾನುವಾರದ ಸಾಪ್ತಾಹಿಕ ಪುರವಣಿ ಆರಂಭ ಕಾಲದಲ್ಲಿದ್ದಂತೆ, ಕೊರೊನಾಪೂರ್ವದಲ್ಲಿದ್ದಂತೆ ಪ್ರತ್ಯೇಕ ಪುರವಣಿಯಾಗಿ ಬರಲಿ. ಕತೆ, ಕವಿತೆ, ಮಕ್ಕಳ ಕತೆ, ಮಕ್ಕಳ ಕವಿತೆ, ಪುಸ್ತಕ ಪರಿಚಯ, ಪದಬಂಧ, ಕಾಮಿಕ್ಸ್ ಮುಂತಾದ ಮನಚೇತೋಹಾರಿ ವಿಷಯಗಳನ್ನು ಪತ್ರಿಕೆ ಸಮೇತ ಕೈಯಲ್ಲಿ ಹಿಡಿದು ಓದುವ ಅಂದಿನ ಖುಷಿ ಅನುಭವಿಸುವಂತಾಗಲಿ. ಹಳ್ಳಿ ಜನ ಮೊಬೈಲ್ ಇಲ್ಲದ, ಇದ್ದರೂ ಬಳಸಲು ಬಾರದ ಮಂದಿ ಕ್ಯೂಆರ್ ಕೋಡ್ ಬಳಸಿ ಕಣ್ಣು ಕಿರಿದಾಗಿಸಿ ಓದಲು ತ್ರಾಸು.

ಇದೊಂದು ಮನವಿಗೆ ಸ್ಪಂದಿಸಲು ಪ್ರಜಾವಾಣಿ ಬಳಗಕ್ಕೆ ಕೋರುವೆ.
–ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

*

ಇಸಮ್‌ಗೆ ಒಳಗಾಗದ ಪತ್ರಿಕೆ....
ಕಳೆದ 60 ವರ್ಷಗಳಿಂದಲೂ ನನ್ನ ನೆಚ್ಚಿನ ‘ಪ್ರಜಾವಾಣಿ’ ಓದುಗನಾಗಿರುವುದಕ್ಕೆ ನನಗೆ ಅತೀವ ಸಂತಸ ಹಾಗೂ ಅಭಿಮಾನವಿದೆ. ಯಾವುದೇ ಇಸಮ್‌, ಪಟ್ಟಭದ್ರ ಹಿತಾಸಕ್ತರ ಕೈಗೊಂಬೆಯಾಗದೇ ನಿರ್ಭೀತ ಹಾಗೂ ನಿಷ್ಪಕ್ಷಪಾತ ನಿಲುವಿನಿಂದ, ವೈಚಾರಿಕ ಲೇಖನಗಳಿಂದ, ಅಚ್ಚುಕಟ್ಟಾದ ಮುದ್ರಣದಿಂದ ಮೆಚ್ಚಿನದಾಗಿದೆ.
‘ಪ್ರಜಾವಾಣಿ’ಗೆ ಹೃದಯಪೂರ್ವಕ ಅಭಿನಂದನೆಗಳು. ಈ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಪತ್ರಿಕೆ ನೂರ್ಕಾಲ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತೇನೆ.
ಹಾರೈಸುತ್ತೇನೆ.
–ಎಸ್.ಪಿ.ಶಾನಭಾಗ, ಎಸಳೆ, ಚಿ‍‍ಪಗಿ ಪೋಸ್ಟ್‌, ಶಿರಸಿ ತಾ.

*

ಗುಣಮಟ್ಟದ ಪತ್ರಿಕೆ...
ಕನ್ನಡಿಗರ ಹೆಮ್ಮೆಯ ಪತ್ರಿಕೆ ಪ್ರಜಾವಾಣಿ ಕಾಲಕ್ಕೆ ತಕ್ಕಂತೆ ಚಂದದ ಪುರವಣಿಗಳನ್ನು ಒದಗಿಸುತ್ತ ಹೊಸ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವವುದರ ಜೊತೆಗೆ ಅನೇಕ ಬರಹಗಾರರನ್ನು ಶ್ರೇಷ್ಠ ಸಾಹಿತಿಗಳನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದೆ.

ಇಂಥ ಪತ್ರಿಕೆ ಅಮೃತ ಮಹೋತ್ಸವದ ಸವಿ ಸಂದರ್ಭದಲ್ಲಿರುವುದು ನಮ್ಮಂಥ ಹವ್ಯಾಸಿ ಬರಹಗಾರರಿಗೆ ಅತೀವ ಖುಷಿ ತಂದಿದೆ. ಕೊರೊನಾ ಕಾಲ ಘಟ್ಟದಿಂದ ಅನೇಕ ಪತ್ರಿಕೆಗಳು ತಮ್ಮ ವಿಶೇಷ ಪುರವಣಿಗಳನ್ನು ಮೊಟಕುಗೊಳಿಸಿದರೂ ಪ್ರಜಾವಾಣಿ ಶಿಕ್ಷಣ, ಕ್ಷೇಮ ಕುಶಲ, ತಂತ್ರಜ್ಞಾನ, ಸ್ಪರ್ಧಾವಾಣಿ, ಸಿನಿಮಾ, ಭೂಮಿಕಾ, ಭಾನುವಾರದ ಪುರವಣಿ ಹೀಗೆ ವಾರದ ಏಳೂ ದಿನಗಳಲ್ಲಿ ವೈವಿಧ್ಯಮಯ ಪುರವಣಿಗಳನ್ನು ನೀಡುತ್ತ ಬರುತ್ತಿದೆ. ಅದರಲ್ಲೂ ಭಾನುವಾರದ ಪುರವಣಿ ಎಂದಿನಂತೆ ಪುಟಗಳನ್ನು ಉಳಿಸಿಕೊಂಡು ಸಾಹಿತ್ಯ ಪ್ರಿಯರ ಮತ್ತು ಓದುಗ ಅಭಿಮಾನಿಗಳ ಮನ ತಣಿಸುತ್ತಿರುವುದು ಸಂತಸದಾಯಕ. ಪ್ರಜಾವಾಣಿ ಇದೇ ಗತ್ತನ್ನು ಉಳಿಸಿಕೊಳ್ಳಬೇಕೆಂಬುದೇ ನಮ್ಮ ಹೆಬ್ಬಯಕೆ.
–ಸೋಮಲಿಂಗ ಬೇಡರ ಆಳೂರ, ಶಿಕ್ಷಕರು, ಹವ್ಯಾಸಿ ಬರಹಗಾರರು

*

ಯಶಸ್ಸಿಗೆ ಕಾರಣ....
ಆತ್ಮೀಯ ಪ್ರಜಾವಾಣಿಗೆ ಹೃದಯಪೂರ್ವಕ ಅಭಿನಂದನೆಗಳು. ಇಪ್ಪತ್ತು ವರ್ಷಗಳಿಂದ ಪ್ರಜಾವಾಣಿಯ ಓದುಗನಾಗಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುವ ಹವ್ಯಾಸ ಬೆಳೆಸಿಕೊಂಡ 'ಪ್ರಜಾವಾಣಿ' ಇಂದು ನಮ್ಮ ಮನೆಯ ಸದಸ್ಯನಾಗಿದೆ. ಬೆಳಿಗ್ಗೆ ಎದ್ದು ಚಹಾ ಕುಡಿಯೊದರೊಂದಿಗೆ 'ಪ್ರಜಾವಾಣಿ' ಇರಲಿಲ್ಲವೆಂದರೆ ಏನೋ ಕಳೆದುಕೊಂಡೆಂಬ ಭಾವ ಮೂಡುತ್ತದೆ.' ಫೋಬಿಯಾ' ರೀತಿಯಲ್ಲಿ 'ಪ್ರಜಾವಾಣಿಗೆ 'ದಾಸನಾಗಿದ್ದೇನೆ.

ನಿಖರತೆಗೆ ಸರಿಸಾಟಿ ಇಲ್ಲದ ಪತ್ರಿಕೆ ಇದಾಗಿದ್ದು, ಈ ಪತ್ರಿಕೆ ನನ್ನನ್ನು ಓದುಗನನ್ನಾಗಿ ನಿರ್ಮಿಸಿರುವುದಲ್ಲದೇ, ಉತ್ತಮ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿದೆ. ಇಂದು ನಾನು ಹವ್ಯಾಸಿ ಬರಹಗಾರನನ್ನಾಗಿ ರೂ‍ಪುಗೊಂಡಿದ್ದೇನೆ ಎಂದರೆ ಅದಕ್ಕೆ ಸಂಪೂರ್ಣ ಕಾರಣ 'ಪ್ರಜಾವಾಣಿ'. ಪತ್ರಿಕೆ ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆದು ಶತಮಾನೋತ್ಸವವನ್ನು ಆಚರಿಸಲಿ ಎಂದು ತುಂಬುಹೃದಯದಿಂದ ಹಾರೈಸುತ್ತೇನೆ.
–ಪ್ರಶಾಂತ ಹೊಸಮನಿ, ನಾಗಠಾಣ ತಾ.ಜಿ.ವಿಜಯಪುರ

*

ಕನ್ನಡಿಗರ ಏಕೈಕ ಅಸ್ಮಿತೆ..
ಯಾವುದೇ 'ಪಕ್ಷ'ಪಾತವಿಲ್ಲದ 'ಪ್ರಜೆ'ಗಳ 'ವಾಣಿ' 75 ವರ್ಷಕ್ಕೆ ಕಾಲಿಟ್ಟಿರುವುದು ಪ್ರ‌ಬುದ್ಧತೆಯ ಸಂಕೇತ. ಎಲ್ಲ ವರ್ಗದ ಜನರ ಅಸ್ಮಿತೆಯಾದ ಪ್ರಜಾವಾಣಿಯನ್ನು ನಾನು ಸುಮಾರು 40 ವರ್ಷಗಳಿಂದ ನಿರಂತರವಾಗಿ ಬೆಳಗ್ಗಿನ ಕಾಫಿ ಜತೆ ಸವಿಯುತ್ತಾ ಬಂದಿದ್ದೇನೆ. ನನ್ನಲ್ಲೊಂದು ಮನುಷ್ಯಪರ ಆಲೋಚನೆಯನ್ನು ರೂಪಿಸುವಲ್ಲಿ ಪ್ರಜಾವಾಣಿ ಪಾತ್ರ ಮಹತ್ವದ್ದು. ಇವತ್ತು ಕನ್ನಡದಲ್ಲಿ ಅಧಿಕೃತವಾದ, ನಿಷ್ಪಕ್ಷಪಾತವಾದ ಪತ್ರಿಕೆಯೊಂದನ್ನು ಓದಬೇಕೆನ್ನುವವರಿಗೆ ಇರುವ ಏಕೈಕ ಆಯ್ಕೆ ಪ್ರಜಾವಾಣಿ ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಬಹುಮಾನ ಪಡೆದು ಪ್ರಕಟವಾಗಬೇಕೆಂಬ ಉತ್ಕಟಾಕಾಂಕ್ಷೆಯಿಂದಲೇ ಹತ್ತಾರು ಕಥೆಗಳನ್ನು ಬರೆದ ಕಾರಣ ನಾನೂ ಲೇಖಕನೆಂದು ಗುರುತಿಸಿಕೊಂಡಿದ್ದೇನೆ. ಎರಡು ಬಾರಿ ಆ ಆಸೆ ಈಡೇರಿದ್ದರೂ, ಸುಧಾ-ಮಯೂರಗಳಲ್ಲೆಲ್ಲ ನನ್ನ ಕಥೆಗಳು ಪ್ರಕಟವಾಗಿದ್ದರೂ ಮತ್ತೆ ಮತ್ತೆ ಬರೆಯಬೇಕೆನ್ನುವ ತುಡಿತವನ್ನು ಹುಟ್ಟುಹಾಕುತ್ತಿದೆ. ಎರಡು ದಶಕಗಳಿಂದೀಚೆಗೆ ಪ್ರಜಾವಾಣಿ ಗ್ರೂಪ್ ಬಿಟ್ಟು ಬೇರೆ ನಾನು ಕಡೆ ಬರೆದದ್ದೇ ಇಲ್ಲ. ಅಂಥ ಒಂದು ಅಂತಃಸತ್ವವನ್ನು ಪ್ರಜಾವಾಣಿ ನನ್ನಲ್ಲಿ ಕಾಪಾಡಿಕೊಂಡು ಬಂದಿದೆ.

ಇಂಥ ಪ್ರಜಾವಾಣಿ ಬಳಗದ ಎಲ್ಲ ಪತ್ರಿಕೆಗಳೂ ಇನ್ನೂ ನೂರಾರು ವರ್ಷ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಬೇಕೆಂಬುದು ನನ್ನಾಸೆ..
- ಕಂನಾಡಿಗಾ ನಾರಾಯಣ

*

ಸ್ಪಂದಿಸಿದ ಪ್ರಜಾವಾಣಿ...
ಸುದೀರ್ಘ ಕಾಲ ಕನ್ನಡ ಪತ್ರಿಕಾರಂಗದಲ್ಲಿ ತನ್ನದೇ ಘನತೆ ಗಾಂಭೀರ್ಯ ನಡೆಯಿಂದ ನೆಡೆಯುತ್ತಾ ಜನಮನದ ಧ್ವನಿಯಾಗಿ ಎಷ್ಟೊ ಜನರ ಭಾವಕ್ಕೆ, ನೋವಿಗೆ ಪ್ರಜಾವಾಣಿ ಸ್ಪಂದಿಸಿದೆ. ನೊಂದವರಿಗೆ ನೆರಳಾಗಿ ˌಸಾರ್ವಜನಿಕ ಸಮಸ್ಯೆಗಳಿಗೆ ಬಂಡೆಯಂತೆ ಗಟ್ಟಿಯಾಗಿ ನಿಂತು ಸರ್ಕಾರವನ್ನು ಎಚ್ಚರಿಸಿದ ಸಾಕಷ್ಟು ಉದಾಹರಣೆಗಳು ಇವೆ.

ಕಪ್ಪು ಬಿಳುಪಿದ್ದಾಗ ಸಹಿತ ಅದೆಷ್ಟ ಚಂದ ಪೋಟೊಗಳು.! ಅಂದ ಚಂದದ ಅಕ್ಷರಗಳು ಆಹಾ..! ಈಗಂತೂ ಕಲರ್‌ಫುಲ್. ಬಾಳ ಸೊಗಸುತನದಿಂದ ಕೂಡಿರುತ್ತೆ. ಒಂದೊಂದು ಪುರವಣಿನೂ ವಿಶಿಷ್ಟವಾಗಿರ್ತಿದ್ವು.
ಸಾಹಿತ್ಯ..ಸಂಗೀತ..ರಂಗಭೂಮಿ..ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ತಜ್ಞರಿಂದ ಚರ್ಚೆ, ದೇಶ ವಿದೇಶಗಳ ರಾಜಕೀಯ ˌ ಧಾರ್ಮಿಕ,ˌಆರ್ಥಿಕ ವಿಷಯಗಳ ತೌಲನಿಕ ಚರ್ಚೆ....ಹೀಗೆ ತರಹೆವಾರಿ ಸಮಗ್ರ ಮಾಹಿತಿಯನ್ನು ಹೊತ್ತುತಂದು ಜನತೆಗೆ ಉಣಬಡಿಸಿದೆ.
ಪ್ರಜಾವಾಣಿಯೊಂದಿಗೆ ನನ್ನದು 27 ವರ್ಷಗಳ ಸಂಬಂಧ. ಪತ್ರಿಕೆ ಓದಲು ಬೇರೆಯವರ ಮನೆಗೆ ಹೋಗಿ ಅವರು ಓದಿದ ನಂತರ ಕೇಳಿ ಓದಿ ಬರ್ತಿದ್ದೆ. ಯಾವಾಗ ನನಗೊಂದು ನೌಕರಿಯಾತೋ..ಅಲ್ಲಿಂದ ಇಲ್ಲಿತನಕ ನನ್ನ ಮನೇಲಿ ಮನದಲ್ಲಿ ಪ್ರಜಾವಾಣಿ ಇದೆ. ನನ್ನ ಬದುಕು ಕಟ್ಟಿಕೊಳ್ಳುವಲ್ಲಿ ಪ್ರಜಾವಾಣಿ ನನಗೆ ಗುರುವಾಗಿದೆ.ನೂರ್ಕಾಲ ಈ ನಾಡಿನ ಹೃದಯ ಸಿಂಹಾಸನದಲ್ಲಿ ಪ್ರಜಾವಾಣಿ ರಾರಾಜಿಸಲಿ.
–ಪ್ರಾಣೇಶ ಪೂಜಾರ್ ಗಿಣಗೇರಾ,9902893671

ಪತ್ರಿಕೆಯೊಡನೆ ಬೆಳೆದೆ....
ನನಗೀಗ ಐವತ್ತಮೂರು. ಕನಿಷ್ಟ ನಲವತ್ತು ವರ್ಷಗಳಷ್ಟು ಕಾಲದ ಪ್ರಜಾವಾಣಿ ಪತ್ರಿಕೆ ಓದಿಯೇ ದೊಡ್ಡವನಾಗಿದ್ದೇನೆ ಎಂಬುದು ನನಗೆ ಖರೆ ಹೆಮ್ಮೆ.

ನಾನೊಬ್ಬ ಬರಹಗಾರನಾಗಿ ಉಳಿಯಲು, ಜೀವಪರ ವ್ಯಕ್ತಿಯಾಗಿರಲು ಸಾಧ್ಯವಾಗಿರುವುದು ಪ್ರಜಾವಾಣಿ ಮತ್ತದರ ಬಳಗದ ಸುಧಾ, ಮಯೂರಗಳಿಂದ.. ಪ್ರಜಾವಾಣಿ ಒಂದಿಲ್ಲದಿದ್ದರೆ, ಅದರ ಓದಿನಿಂದ ನಾನು ವಂಚಿತನಾಗಿದ್ದರೆ... ಬಹುತೇಕ ನಾನು ನನ್ನಂಥವರು ನಿಜದ ಬದುಕಿನಲ್ಲಿ ದೃಢ ಹೆಜ್ಜೆಗಳನ್ನು ಇಡಲಾಗುತ್ತಲೇ ಇರಲಿಲ್ಲವೇನೋ. ಇಂಥ ನನ್ನ ನಿತ್ಯ ಸಂಗಾತಿ ಎಪ್ಪತ್ತೈದಕ್ಕೆ ಅಡಿಯಿರಿಸಿದ್ದು ಬಹಳ ಖುಷಿ ನೀಡಿದೆ. ಕನ್ನಡದ ಸೊಲ್ಲು ಇರುವವರೆಗೂ ಈ ಪತ್ರಿಕೆ ಇರಬೇಕು. ಕನ್ನಡ ಜಗತ್ತಿನ ಕಣ್ಣಾಗಿರಬೇಕು. ಇದ್ದೇ ಇರುತ್ತದೆ ಅಂಬುವ ನಂಬಿಕೆಯೂ ನನಗಿದೆ.ಈ ಹೊತ್ತಲ್ಲಿ ಪ್ರಜಾವಾಣಿಗೆ ನನ್ನ ಎಪ್ಪತ್ತೈದು ಸಹಸ್ರ ಶುಭಕಾಮನೆಗಳು..
–ವಿಜಯಕಾಂತ ಪಾಟೀಲ, ನ್ಯಾಯವಾದಿ/ ಬರಹಗಾರ- ಹಾನಗಲ್ಲ

*

ಜನಮಾನಸದ ಪತ್ರಿಕೆ...
ಪ್ರಜಾವಾಣಿ ದಿನಪತ್ರಿಕೆ ಸಮಾಜದ ಒಳಿತಿಗಾಗಿ ಹೋರಾಡುವ ಸಮಾಜದ ಏಕೈಕ ದಿನಪತ್ರಿಕೆಯಾಗಿದೆ. ಹೊಸ ಬದುಕನ್ನು ಕಟ್ಟಿಕೊಳ್ಳುವ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಕನ್ನಡ ಕಲಾ ಪ್ರಪಂಚದಲ್ಲಿ ಹೆಸರು ಮಾಡುವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ ಮಹಾನ್ ದಿನಪತ್ರಿಕೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೈಜ ಸುದ್ದಿಯನ್ನು ತಲುಪಿಸುವ ಏಕೈಕ ವಾಹಿನಿಯಾಗಿದೆ. ನಿಖರ ಸುದ್ದಿಯನ್ನು ಬಿತ್ತರಿಸುವ, ಜಾತ್ಯತೀತ ನಿಲುವಿನ ಸಮದರ್ಶಿ ದಿನಪತ್ರಿಕೆ. ಜನಪರ ಹೋರಾಟಕ್ಕೆ ಬೆಂಬಲ ನೀಡುವ ಪತ್ರಿಕೆಯಾಗಿದೆ.
–ಗುಡುಸಾಬ್‌ ನಡಾಫ್, ಪ್ರಾಥಮಿಕ ಶಾಲಾ ಶಿಕ್ಷಕ, ಅಮ್ಮಿನಭಾವಿ ತಾ. ಜಿಲ್ಲಾ ಧಾರವಾಡ

*

ಪತ್ರಿಕೆ ತಪ್ಪಿಸಿದರೆ ಕೋಪ...
ಸುಮಾರು ಐವತ್ತು ವರ್ಷಗಳಿಂದ ಪ್ರಜಾವಾಣಿ ಓದುಗನಾಗಿದ್ದೇನೆ. ಬೆಳಿಗ್ಗೆ 7ಗಂಟೆಗೆ ಕೈ ಸೇರುತ್ತಿದ್ದ ಪತ್ರಿಕೆ ಓದುವವರೆಗೆ ನೆಮ್ಮದಿ ಇರುತ್ತಿರಲಿಲ್ಲ. ಪತ್ರಿಕೆ ಹಾಕುವ ಹುಡುಗ ಅಕಸ್ಮಾತ್ ರಜೆ ಮಾಡಿದರೆ ಕೋಪ ಬರುತ್ತಿತ್ತು. ಅಂತಹ ದಿನ ಪೇಟೆಗೆ ಯಾವ ಕಾರಣ ಇಲ್ಲದಿದ್ದರೂ ಪ್ರಜಾವಾಣಿ ತರಲಾದರೂ ಹೋಗಿ ಕೊಂಡು ತಂದು ಓದುತ್ತಿದ್ದೆ. ನನ್ನ ಸಾಕಷ್ಟು ಚುಟುಕು ಪತ್ರಗಳು ವಾಚಕರ ವಾಣಿಯಲ್ಲಿ ಪ್ರಕಟಗೊಂಡಿರುವುದು ನನಗೆ ಖುಷಿ ಕೊಟ್ಟಿದೆ.
ಪ್ರಜಾವಾಣಿಗೆ ಅಮೃತ ಮಹೋತ್ಸವ ಸಂದರ್ಭದಲ್ಲಿ ಹೃದಯಪೂರ್ವಕ ಅಭಿನಂದನೆಗಳು.
–ಶಾಂತಿನಾಥ ಕೆ ಹೋತಪೇಟಿ, ಸನ್ಮತಿ, 6, ಬೊಮ್ಮಾಪುರ ರಸ್ತೆ ಹುಬ್ಬಳ್ಳಿ 28

*

ಕಥೆ, ಕವನ ಪ್ರಕಟವಾಗಲಿ...
ಪ್ರಜಾವಾಣಿ ಅಮೃತ ಮಹೋತ್ಸವ ಸಂಭ್ರಮಕ್ಕೆ ಶುಭಾಶಯಗಳು. ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ. ನನ್ನ ಕೋರಿಕೆ ಭಾನುವಾರದ ಪುರವಣಿಯಲ್ಲಿ ಕಥೆ ಮತ್ತು ಕವನ ಮುದ್ರಣಗೊಂಡರೆ ಚೆನ್ನ. ಪತ್ರಿಕಾ ತಂಡದ ಶ್ರಮಕ್ಕೆ ಧನ್ಯವಾದಗಳು.
–ನಾಗಭೂಷಣ ಹೆಚ್.ಬಿ., ಹುಲಿಕುಂಟೆ.

*

ವಿನ್ಯಾಸ, ಮುದ್ರಣ ಚೆನ್ನ
ನಾನು 80ರ ದಶಕದಿಂದ ಪ್ರಜಾವಾಣಿ ತಪ್ಪದೆ ಓದುತ್ತಿರುವೆ. ನನ್ನ ನೆಚ್ಚಿನ ಪುಟಗಳು ಕ್ರೀಡೆ ಹಾಗೂ ಕೃಷಿ ಸಂಬಂಧಪಟ್ಟ ವಿಷಯಗಳು. ಇದರ ಜೊತೆಗೆ ಪುರವಣಿಯಲ್ಲಿ ಬರುವ ಪುಸ್ತಕ ಪರಿಚಯ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಪ್ರಜಾವಾಣಿಯ ವಿಶೇಷ ಅಂದರೆ ವಿನ್ಯಾಸ ಹಾಗೂ ಅಚ್ಚುಕಟ್ಟಾದ ಮುದ್ರಣ.

ನನ್ನ ತಾಯಿಗೆ ಸಹ ಇದು ನೆಚ್ಚಿನ ಪತ್ರಿಕೆ. ಅವರಿಗೆ ಪದಬಂಧ ಬಹಳ ಇಷ್ಟ ಪ್ರತಿ ಭಾನುವಾರ ಬಹಳ ಕುತೂಹಲದಿಂದ ಕಾಯುತ್ತಾರೆ. ಹಾಗೆಯೇ ನನ್ನ ದೊಡ್ಡಪ್ಪ ಮೈಸೂರಿನಿಂದ ಪದಬಂಧ ಬಗ್ಗೆ ಚರ್ಚೆ. ಕಾಲ ಹೋದಂತೆ ಈ ಪತ್ರಿಕೆ ಸಹ ಈಗಿನ ಸಾಮಾಜಿಕ ತಾಣದಲ್ಲಿ ಸಹ ಒಂದು ಹೆಜ್ಜೆ ಮುಂದೆ. ಈ ಪತ್ರಿಕೆ ಎಲ್ಲಾ ಓದುಗರಿಗೆ ಒಳ್ಳೆಯ ಛಾಪನ್ನು ಮೂಡಿಸಿದೆ.
–ಕೆ.ಜಿ. ಸುಧೀಂದ್ರ, ಗಾನ ರೀಜೆನ್ಸಿ, ಯಳಚೇನಹಳ್ಳಿ, ಕನಕಪುರ ರಸ್ತೆ, ಬೆಂಗಳೂರು

*

ಶುಭಹಾರೈಕೆಗಳು...
ಶಾಲಾ ದಿನಗಳಿಂದಲೇ ಪ್ರಜಾವಾಣಿ ಓದುಗನಾಗಿ ನನ್ನ ಪ್ರಥಮ ಲೇಖನವನ್ನು ಪತ್ರಿಕೆಯ ವಾಚಕರ ವಾಣಿಗೆ ಬರೆದಿದ್ದೆ. ಅದು ಪ್ರಕಟಗೊಂಡ ಹೆಮ್ಮೆಯಲ್ಲಿ ಬೀಗುವ ಅವಕಾಶ ನೀಡಿದ ನಮ್ಮ ಪ್ರಜಾವಾಣಿ ಪತ್ರಿಕೆಗೆ 75 ವರ್ಷ ಪೂರೈಸಿದ ಸಂದರ್ಭದಲ್ಲಿ ಶುಭಾಶಯಗಳು.

ನನ್ನ ಅಜ್ಜನ ನೆಚ್ಚಿನ ಪತ್ರಿಕೆ ಆಗಿದ್ದ ಪ್ರಜಾವಾಣಿ ಪತ್ರಿಕೆಯನ್ನು ಅದರ ಆರಂಭದ ದಿನಗಳಿಂದಲೂ ಮಂಗಳೂರು ಸಮೀಪದ ಕುಗ್ರಾಮಕ್ಕೆ ಕಷ್ಟ ಪಟ್ಟು ತರಿಸುತ್ತಿದ್ದ ಅವರು ಸಮಾಜಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದರು. ತದನಂತರ ಮಂಗಳೂರು ವಲಯದಲ್ಲಿ ವಿವಿಧ ಪತ್ರಿಕೆಗಳು ಹುಟ್ಟಿಕೊಂಡಿದ್ದು ಅದಕ್ಕೆ ಪ್ರಜಾವಾಣಿ ಪತ್ರಿಕೆ ಸ್ಫೂರ್ತಿಯಾಗಿದೆ ಎಂದರೆ ಸುಳ್ಳಲ್ಲ ಎನಿಸುತ್ತದೆ.
–ಕೊಡಕ್ಕಲ್ ಶಿವಪ್ರಸಾದ್, ಸಂಸ್ಥಾಪಕ ಅಧ್ಯಕ್ಷ, ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ, ಶಿವಮೊಗ್ಗ.

*

ಶ್ಲಾಘನೀಯ...
ಕಳೆದ 42 ವರ್ಷಗಳಿಂದ ನಾನು ಪ್ರಜಾವಾಣಿಯ ಓದುಗನಾಗಿ ಪ್ರಚಲಿತ ಸಾಮಾಜಿಕ, ರಾಜಕೀಯ, ಮತ್ತು ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ, ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುತ್ತಿರುವುದು ಶ್ಲಾಘನೀಯ.
–ಹನುಮಂತರಾಜು

*

ಜನ ಮನ ಗೆದ್ದ ಪ್ರಜಾವಾಣಿ
ಹೊಸದೊಂದನ್ನು ಪ್ರಾರಂಭ ಮಾಡಬೇಕಾದರೆ ಯಾರು ಬೇಕಾದರೂ ಮಾಡಬಹುದು. ಆದರೆ, ಅದನ್ನು ಬಹುಕಾಲದವರೆಗೆ ಜನಮನದಲ್ಲಿ ಉಳಿಯುಂವತೆ ನೋಡಿಕೊಳ್ಳಬೇಕಂದರೆ ಬದ್ಧತೆ ತುಂಬಾ ಮುಖ್ಯವಾಗುತ್ತದೆ. ಅಂತಹ ಬದ್ಧತೆಯನ್ನು ಕಾಯ್ದುಕೊಂಡು ಪ್ರಜಾವಾಣಿಗೆ ದೊಡ್ಡ ನಮನಗಳು..

ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವರ್ಗದ ಓದುಗರಿಗೂ ಮೆಚ್ಚುಗೆಯಾಗುವಂತೆ ಸ್ಥಿರತೆ ಕಾಯ್ದುಕೊಂಡು ಬರಹಗಾರನ ಬರವಣಿಗೆಗೆ ಮಾತ್ರ ಸೀಮಿತವಾಗದೆ ಪ್ರಜೆಗಳ ವಾಣಿಯಾಗಿ 75 ವರ್ಷದಿಂದ ಕನ್ನಡ ನೆಲದಲ್ಲಿ ಸೇವೆ ಮಾಡುತ್ತಿರುವ ಪ್ರಜಾವಾಣಿ ಹೀಗೆ ಶತಮಾನೋತ್ಸವ ಆಚರಿಸಲಿ...
–ಮನು ಕೈಲಾಶ್, ಬೆಂಗಳೂರು

*

ಕನ್ನಡಿಗರ ಅಸ್ಮಿತೆ
ಪ್ರಜಾವಾಣಿ ಪತ್ರಿಕೆಯನ್ನು ನಾಲ್ಕನೇ ತರಗತಿಯಿಂದ ನಾನು ಓದುತ್ತಿದ್ದೇನೆ. ನಮ್ಮೂರು ಒಂದು ಕುಗ್ರಾಮ. ಊರಿಗೆ ಬರುತ್ತಿದ್ದ ಬೆಳಗಿನ ಎಂಟು ಗಂಟೆಯ ಬಸ್ಸಿನಲ್ಲಿ ಪೇಪರ್ ಬರುತಿತ್ತು. ನಮ್ಮೂರ ಗವಾಯಿಗಳಾದ ಬಸವರಾಜ ಗುರುಗಳು ತಮ್ಮ ಮನೆಗೆ ಪೇಪರ್ ತರಿಸುತ್ತಿದ್ದರು. ಪತ್ರಿಕೆಯನ್ನು ಓದಲು ಹಿರಿಯರ ದಂಡೇ ಬೆಳಿಗ್ಗೆ ಅವರ ಮನೆಯೆದುರು ಸೇರಿರುತಿತ್ತು. ಹಿರಿಯರೆಲ್ಲ ಪತ್ರಿಕೆಯ ಪುಟಗಳನ್ನು ವಿಭಾಗಿಸಿಕೊಂಡು ಓದುತ್ತಿದ್ದರು.

ನನಗೂ ಪತ್ರಿಕೆಯನ್ನು ಓದುವ ತವಕ ಮತ್ತು ಕುತೂಹಲ ಇರುತ್ತಿತ್ತು .ಆದರೆ ಅಷ್ಟು ಬೇಗ ನನ್ನ ಕೈಗೆ ಪತ್ರಿಕೆ ಬರುತ್ತಿರಲಿಲ್ಲ. ಏಕೆಂದರೆ, ಪ್ರತಿ ಪುಟದ ಒಂದು ಸುದ್ದಿಯನ್ನು ಬಿಡದೇ ಅವರೆಲ್ಲ ಓದುತ್ತಿದ್ದರು. ಅವರು ಕಟ್ಟೆ (ಕುಳಿತುಕೊಳ್ಳಲು ಮಾಡಿದ ಜಾಗ) ಮೇಲೆ ಓದುತ್ತಿದ್ದ ಸಂದರ್ಭದಲ್ಲಿ ನಾನು ಬಗ್ಗಿ ಪೇಪರ್‌ಅನ್ನು ಓದುತ್ತಿದ್ದೆ. ಕೆಲವೊಮ್ಮೆ ಅವರ ಪಕ್ಕಕ್ಕೆ ಹೋಗಿ ಪತ್ರಿಕೆಯನ್ನು ಓದುತ್ತಿದ್ದೆ. ಇದನ್ನೆಲ್ಹ ಗಮನಿಸುತ್ತಿದ್ದ ಗವಾಯಿಗಳು 'ಬಾ ನನ್ನ ತಲೆಯ ಮೇಲೆ ಕುಳಿತು ಕೊಂಡು ಓದು' ಎನ್ನುತ್ತಿದ್ದರು. ಅವರ ಮಾತಿಗೆ ಬೇಸರ ಮಾಡಿಕೊಳ್ಳದೇ ನಾನು ಪತ್ರಿಕೆಯನ್ನು ಓದುತ್ತಿದ್ದೆ. ಹಾಗೆ ರೂಢಿಸಿಕೊಂಡ ನನ್ನ ಹವ್ಯಾಸ ಇಂದಿಗೂ ಮುಂದುವರೆದಿದೆ.

ಪ್ರಜಾವಾಣಿ ಪತ್ರಿಕೆಯನ್ನು ಓದದೇ ನನ್ನ ದಿನವೂ ಪ್ರಾರಂಭವಾಗುವುದಿಲ್ಲ. ನಾನು ಅನೇಕ ಸಲ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುವೆ. ಅದರಲ್ಲಿ ಪ್ರಜಾವಾಣಿ ಪಾಲು ಬಹುದೊಡ್ಡದು ಎಂದೇ ಹೇಳಬಹುದು. ನನಗೆ ನಲವತ್ತು ವರ್ಷಗಳು ನಡೆಯುತ್ತಿವೆ. ಅದರಲ್ಲಿ ಮೂವತ್ತು ವರ್ಷಗಳಿಂದ ಪತ್ರಿಕೆಯು ನನ್ನ ಜೀವನದ ಭಾಗವಾಗಿದೆ. ಬಾಲ್ಯದ ಸಂದರ್ಭದಲ್ಲಿ ವಿಶೇಷವಾಗಿ ಕ್ರಿಕೆಟ್ ಸುದ್ದಿಗಳನ್ನು ಅತೀವ ಆಸಕ್ತಿಯಿಂದ ಓದುತ್ತಿದ್ದೇನು. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕ್ರಿಕೆಟ್ ಗೆ ಸಂಬಂಧಿಸಿದಂತೆ ಎರಡೂ ನೂರಕ್ಕೂ ಹೆಚ್ಚು ಪೋಟೋಗಳನ್ನು ಕಟ್ ಮಾಡಿಕೊಂಡು ಆಲ್ಬಮ್ ತಯಾರಿಸಿದ ನೆನಪು ನನ್ನ ಸ್ಮೃತಿ ಪಟಲದಲ್ಲಿ ಇನ್ನೂ ಇದೆ. ಪತ್ರಿಕೆಯಲ್ಲಿ ಪ್ರಕಟವಾಗುವ ವಾಚಕರ ವಾಣಿ, ನುಡಿಬರಹ ಗಳಲ್ಲಿ ಮತ್ತು ಭಾನುವಾರ ಪುರವಣಿಯಲ್ಲಿ ನನ್ನ ಕತೆ ಪ್ರಕಟಗೊಂಡಿರುವುದು ನನ್ನ ಬರವಣಿಗೆಯ ಬಗ್ಗೆ ಸ್ಪೂರ್ತಿ ತುಂಬಿದ ಹೆಗ್ಗಳಿಕೆ ಪತ್ರಿಕೆಗೆ ಇದೆ. ಕಳೆದ ಹದಿನೆಂಟು ವರ್ಷಗಳಿಂದ ಶಿಕ್ಷಕನಾಗಿರುವ ನಾನು ನಮ್ಮ ಮನೆಗೆ ಬರುವ ಪತ್ರಿಕೆಯನ್ನು ತೆಗೆದುಕೊಂಡು ಹೋಗಿ ಶಾಲೆಯ ಪ್ರಾರ್ಥನಾ ಸಮಯದಲ್ಲಿ ಮಕ್ಕಳ ಕಡೆಯಿಂದ ಓದಿಸುತ್ತಿರುವೆ. ಆ ಮೂಲಕ ಮಕ್ಕಳಲ್ಲಿ ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸುತ್ತಿರುವೆ. ವಿಶೇಷವಾಗಿ ಭಾನುವಾರ ಪುರವಣಿಯನ್ನು ಆಸೆಗಣ್ಣುಗಳಿಂದ ನೋಡುತ್ತೇನೆ. ಪ್ರತಿವಾರದ ಪುರವಣಿ ಪುಟಗಳು ನನ್ನ ಖಜಾನೆಯಲ್ಲಿ ತುಂಬಿವೆ. ಭಾನುವಾರ ಪುರವಣಿ ಪುಟಗಳನ್ನು ನಮ್ಮ ಶಾಲೆಯ ಮಕ್ಕಳಿಗೆ ನೀಡಿ ಓದಲು ಪ್ರೇರಣೆ ನೀಡುತ್ತಿರುವೆ.

ಕನ್ನಡದ ಬಹುತೇಕ ಸಾಹಿತಿಗಳು ಪ್ರಜಾವಾಣಿಯೂ ಕೊಟ್ಟ ಅವಕಾಶಗಳನ್ನು ಬಳಸಿಕೊಂಡು ದೊಡ್ಡ ದೊಡ್ಡ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಪತ್ರಿಕೆಯು ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ ಯಾವುದೇ ಜಾತಿ ಮತ ಪಂಥಗಳಿಗೆ ತನ್ನನ್ನು ನಿಯಂತ್ರಿಸಿಕೊಳ್ಳದೇ ನಡೆಯುತ್ತಾ 75 ವರ್ಷಗಳ ಸುದೀರ್ಘ ಪ್ರಯಣ ನಮಗೆಲ್ಲ ಹೆಮ್ಮೆ ತಂದಿದೆ...
– ಮಲ್ಲಪ್ಪ ಫ ಕರೇಣ್ಣನವರ, ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು, ಮೋಟೆಬೆನ್ನೂರು, ಬ್ಯಾಡಗಿ ತಾ.

*

ಕೊಡುಗೆ ಆದೀತು....
ನಾನು ಹಿರಿಯ ನಾಗರಿಕ ವಯಸ್ಸು 80+. ಕಳೆದ 60ಗಳಿಂದ ಪ್ರಜಾವಾಣಿ ಓದುತ್ತಾ ಬಂದಿರುವ ವ್ಯಕ್ತಿ. ಮುಖ್ಯವಾಗಿ ಮುಂದಿನ ದಿನಗಳಲ್ಲಿ ಪ್ರಜಾವಾಣಿ ಓದುಗರ ವೇದಿಕೆ ಆಗಬೇಕು. ಸರ್ಕಾರ, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪತ್ರಿಕೆಯಲ್ಲಿ ಬರುವ ಸಂಪಾದಕೀಯ ಹಾಗೂ ಉತ್ತಮ ಲೇಖನಗಳನ್ನು ಓದಿ ಸೂಕ್ತ ಕ್ರಮ ಕೈಗೊಳ್ಳುವುದಾದರೆ ಅದೇ ಒಂದು ಒಳ್ಳೆಯ ಕೆಲಸವಾಗಿ ಬೇಸತ್ತಿರುವ ರಾಜ್ಯದ ಜನತೆಗೆ ಒಂದು ಕೊಡುಗೆಯೇ ಆದೀತು.

ಮುಂದಿನ ದಿನಗಳಲ್ಲಿ ಮುಂದಿನ ಪೀಳಿಗಿಗೆ ಪ್ರಜಾವಾಣಿ ದಾರಿದೀಪವಾಗಲಿ ಎಂದು ಆಶಿಸುತ್ತೇನೆ. ಪತ್ರಿಕೆಗೆ ರಾಜ್ಯದಲ್ಲಿ ಅಗ್ರ ಸ್ಥಾನ ಸಿಗಲಿ, ಪತ್ರಿಕೆಯ ಜವಾಬ್ದಾರಿ ಸ್ಥಾನದಲ್ಲಿರುವ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು.
–ಎ.ವಿ ಶಾಮರಾವ್. ಫೌಂಡರ್‌, ರೆಸಿಡೆಂಟ್ಸ್‌ ವೆಲ್‌ಫೇರ್ ಟ್ರಸ್ಟ್‌, ರಾಮಮೂರ್ತಿ ನಗರ.

*

ಜನರ ಧ್ವನಿ...
ನಾನು 52 ವರ್ಷಗಳಿಂದ ಈ ಪತ್ರಿಕೆಯ ಓದುಗ. ನಾಗರಿಕರ ಧ್ವನಿಯಾಗಿರವ ಮತ್ತು ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ವನ್ನು ನಿರ್ಭಯವಾಗಿ ಹೇಳಿ ಜನರಿಗೆ ಧ್ವನಿಯಾಗಿರವ ಪ್ರಜಾವಾಣಿ ನನಗೆ ಅಚ್ಚುಮೆಚ್ಚಿನ ಪತ್ರಿಕೆ. ಇದು ನೂರನೇ ವರ್ಷ ಆಚರಿಸಲಿ...
–ಮಹಬೂಬ್ ಸಾಹಿಬ್ ಸಿ. ಹೂವಿನಹಡಗಲಿ. ವಿಜಯನಗರ ಜಿ.

*

ಕನ್ನಡಿಗರ ಧ್ವನಿ...
ಸ್ವತಂತ್ರ ಆದಾಗಿನಿಂದಲೂ, ಪ್ರಜಾವಾಣಿ.
ಎಂದೆಂದಿಗೂ, ಕನ್ನಡಿಗರ ಧ್ವನಿ.
ಪ್ರತಿ ಮುಂಜಾನೆಯ ಸಮಗ್ರ ಸುದ್ದಿಯ ವಾಣಿ.
ಸಮಾಜದ ಕನ್ನಡಿ ಮೆಚ್ಚಿನ ಮುಖವಾಣಿ.
ಚಿನ ಕುರಳಿ, ಸುಭಾಷಿತ ಸನ್ಮಾರ್ಗದ ಗಣಿ.
ಒಂದಿಲ್ಲ ಅನ್ನೋ ಹಂಗಿಲ್ಲ ಪ್ರತಿ ಪುರವಣಿ.
ಕನ್ನಡಿಗರ ವಿಶ್ವಾಸನೀಯ ಮನ ಧಣಿ.
ನಾಡುನುಡಿಯ ಜನ ನಾಡಿ ನಿಜಗುಣಿ.

ಹಿಂದಿಗೂ, ಮುಂದಿಗೂ, ಎಂದೆಂದಿಗೂ,
ಅಮರ ವಾಣಿ... ನಮ್ಮೆಲ್ಲರ ಪ್ರಜಾವಾಣಿ..
–ಬಿ. ಮೊಹಿದ್ದೀನ್ ಖಾನ್. ಬುದ್ಧನಗರ. ಸ್ಟೇಡಿಯಂ ಮುಂಭಾಗ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT