ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಸ್ಥರ ನಡೆ ಬದಲಾಗಿಲ್ಲ

Last Updated 16 ಅಕ್ಟೋಬರ್ 2019, 19:35 IST
ಅಕ್ಷರ ಗಾತ್ರ

ಸುಮಾರು ₹ 14 ಕೋಟಿ ಮೊತ್ತದ ಎರಡು ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ, ಬಿಜೆಪಿ ನಗರ ಫಟಕದ ವಕ್ತಾರ ಎನ್.ಆರ್. ರಮೇಶ್ ಅವರು ಸೂಚಿಸಿದ ಗುತ್ತಿಗೆದಾರರಿಗೆ ಕೊಡಿಸುವಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಚೌಕಾಸಿ ನಡೆಸಿದ್ದಾರೆಂದು ವರದಿಯಾಗಿದೆ (ಪ್ರ.ವಾ., ಅ.15).

ವಿಚಿತ್ರವೆಂದರೆ, ಇದೇ ರಮೇಶ್ ಅವರೇ ಹಿಂದೆ, ರಸ್ತೆ ಮತ್ತಿತರ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಲ್ಲಿ ರಾಜಕಾರಣಿ- ಅಧಿಕಾರಿಗಳ ನಡುವಿನ ಅಪವಿತ್ರ ಸಂಬಂಧದ ಬಗ್ಗೆ ಮಾಧ್ಯಮಗಳ ಮುಂದೆ ಗಟ್ಟಿಯಾಗಿ ಧ್ವನಿಎತ್ತಿದ್ದರು ಮತ್ತು ಬಿಬಿಎಂಪಿಯ ಅನೇಕ ಹಗರಣಗಳನ್ನು ಬಯಲಿಗೆ ಎಳೆದಿದ್ದರು. ಆಗ ರಾಜ್ಯದಲ್ಲಿ ಮತ್ತು ಬಿಬಿಎಂಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಅಧಿಕಾರದಲ್ಲಿತ್ತು. ಕಾಲಚಕ್ರ ಉರುಳಿ, ಈಗ ಈ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಅಧಿಕಾರಸ್ಥರ ನಡೆ ಮತ್ತು ಕಾರ್ಯವಿಧಾನದಲ್ಲಿ ಬದಲಾವಣೆಯೇನೂ ಆಗಿಲ್ಲ.

ವಿಷಾದದ ಸಂಗತಿಯೆಂದರೆ, ಅಧಿಕಾರಶಾಹಿಯ ಆಧಾರಸ್ತಂಭವಾಗಿರುವ ಮತ್ತು ಅದಕ್ಕೆ ಸದಾ ಮಾರ್ಗದರ್ಶಕರಾಗಿ ಇರಬೇಕಾಗಿರುವ ಮುಖ್ಯ ಕಾರ್ಯದರ್ಶಿಯವರೇ ರಾಜಕಾರಣಿಗಳ ಸೂಚನೆಗೆ ಗೋಣಾಡಿಸಿ ಅವರ ಒತ್ತಡಕ್ಕೆ ಮಣಿದಿರುವುದು. ಪರಿಸ್ಥಿತಿ ಹೀಗೇ ಮುಂದುವರಿದರೆ, ಅಧೀನ ಅಧಿಕಾರಿಗಳ ಮನಃಸ್ಥೈರ್ಯ ಕುಸಿಯುವುದಿಲ್ಲವೇ? ಕಾನೂನಿನ ಅನ್ವಯ ಕಾರ್ಯ ನಿರ್ವಹಿಸಲು ಅವರಿಗೆ ಧೈರ್ಯ ಎಲ್ಲಿಂದ ಬಂದೀತು? ಜನರ ಮನದಲ್ಲಿ ಸ್ವಾಭಾವಿಕವಾಗಿ ಮೂಡುವ ಸಂದೇಹವೆಂದರೆ, ಈ ಎರಡು ವೈಟ್ ಟಾಪಿಂಗ್ ಕಾಮಗಾರಿಗಳನ್ನು ಮಾತ್ರ ಟೆಂಡರ್ ಕರೆಯದೆ ಕೈಗೆತ್ತಿಕೊಳ್ಳಬೇಕಾಗಿದ್ದ ತುರ್ತು ಅವಶ್ಯಕತೆ ಏನಿತ್ತು ಮತ್ತು ಇದೇ ತೆರನಾದ ಬೇರೆಲ್ಲಾ ಕಾಮಗಾರಿಗಳಲ್ಲಿ ಅನುಸರಿಸಬೇಕಾದ ಮಾನದಂಡಗಳಿಂದ ಈ ಕಾಮಗಾರಿಗಳಿಗೆ ಮಾತ್ರ ವಿಶೇಷ ವಿನಾಯಿತಿ ಏಕೆ ಎಂಬುದು.

ಸ್ವಾತಿ ಪಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT