ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಭಾಷೆಯ ನೈಜ ಅಳಲನ್ನು ಆಲಿಸುವವರು ಯಾರು?

Last Updated 23 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೆಚ್ಚ ಹದಿನೈದು ಕೋಟಿ ರೂಪಾಯಿ ತಲುಪಬಹುದೆಂದು ಅಂದಾಜಿಸಲಾಗಿದೆ. ಒಂದೆಡೆ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚುವೆಚ್ಚ ವರ್ಷದಿಂದ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತ ಹೋಗುತ್ತಿದೆ.

ರಾಜ್ಯ ಶಿಕ್ಷಣ ಇಲಾಖೆಯ ಅಂಕಿಅಂಶಗಳ ಪ್ರಕಾರ ಒಂದರಿಂದ ಹತ್ತನೆಯ ತರಗತಿವರೆಗೆ ಕಳೆದ ವರ್ಷ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ಮಕ್ಕಳ ಸಂಖ್ಯೆ 60.42 ಲಕ್ಷ ಇದ್ದರೆ, ಈ ವರ್ಷ ಅಂದರೆ 2018-19ನೇ ಸಾಲಿಗೆ ಅದು 57.28 ಲಕ್ಷಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ 35.44 ಲಕ್ಷದಿಂದ 39.83 ಲಕ್ಷಕ್ಕೆ ಏರಿದೆ. ಕಳೆದ ನಾಲ್ಕಾರು ವರ್ಷಗಳಿಂದ ಈ ಇಳಿಕೆ– ಏರಿಕೆ ಕ್ರಮ ಬಹಳ ತ್ವರಿತ ಗತಿಯಲ್ಲಿ ಆಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಪ್ರವೇಶವೇ ಕ್ಷೀಣಿಸಿದೆ. ಮಕ್ಕಳ ಕನಿಷ್ಠ ದಾಖಲಾತಿ ಇರದ ಸಾವಿರಾರು ಕನ್ನಡ ಮಾಧ್ಯಮ ಶಾಲೆಗಳನ್ನು ಒತ್ತಡಕ್ಕೆ ಮಣಿದು ಅಥವಾ ಆಪಾದನೆಗಳಿಗೆ ಅಂಜಿ ಸರ್ಕಾರ ಮುಚ್ಚುತ್ತಿಲ್ಲ ಅಷ್ಟೇ.

ಕನ್ನಡದ ಈ ತ್ವರಿತಗತಿಯ ಅವಸಾನವನ್ನು ನಾವು ಸಂಭ್ರಮಿಸುತ್ತಿದ್ದೇವೋ ಏನೋ ಅನ್ನುವಂತೆ ಅದ್ಧೂರಿಯಾಗಿ ಕನ್ನಡ ಸಭೆ, ಸಮ್ಮೇಳನ, ನುಡಿಹಬ್ಬ, ಉತ್ಸವಗಳು ಎಡೆಬಿಡದೇ ಎಲ್ಲೆಡೆ ನಡೆಯುತ್ತಿವೆ. ಕನ್ನಡ ಪುಸ್ತಕಗಳ ಬಿಡುಗಡೆ ಕುರಿತು ಕಾರ್ಯಕ್ರಮಗಳು, ಕನ್ನಡ ಲೇಖಕರ ಕುರಿತು ವಿಚಾರ ಸಂಕಿರಣಗಳು, ಚಿಂತನ ಮಂಥನ, ಸನ್ಮಾನಗಳು... ನಾಡ ತುಂಬೆಲ್ಲ ದಿನಾಲು ನಡೆಯುತ್ತಲೇ ಇವೆ, ಕನ್ನಡ ಜ್ಯೋತಿ ನಂದಿ ಹೋಗುವ ಮೊದಲು ಪ್ರಕಾಶಮಾನವಾಗಿ ಉರಿವಂತೆ. ಇಂತಹ ಯಾವುದಕ್ಕೂ ಹಣದ ಕೊರತೆ ಆಗುವುದಿಲ್ಲ.

ಇದು ಇನ್ನೂ ಕೆಲವು ವರ್ಷ ನಡೆಯಬಹುದು. ಕನ್ನಡ ಮಾಧ್ಯಮದಲ್ಲಿ ಕೊನೆಯ ಪೀಳಿಗೆ ಮಕ್ಕಳು ಓದುತ್ತಿದ್ದಾರೆ. ಕ್ಷಿಪ್ರ ಗತಿಯಲ್ಲಿ ಕನ್ನಡ ಮಾಧ್ಯಮ ಮಾಯವಾಗಿ, ಇಂಗ್ಲಿಷ್‌ ಮಾಧ್ಯಮ ಎಲ್ಲ ಕಡೆ ಆವರಿಸಿಕೊಂಡು, ಕನ್ನಡ ಸೃಜನಶೀಲತೆ ಕುಂಠಿತಗೊಂಡು, ಕನ್ನಡ ಓದುಗರಿಲ್ಲದೆ ಕನ್ನಡ ಸಾಹಿತ್ಯ ಮೂಲೆ ಸೇರುವ ಕಾಲ ದೂರವಿಲ್ಲ. ಕನ್ನಡ ಕಲಿಕೆ ನಶಿಸಿದರೂ ಆನಂತರ ಆಡು ಭಾಷೆಯಾಗಿ ಕನ್ನಡ ಮತ್ತಷ್ಟು ವರ್ಷ ಇರುತ್ತದೆ. ಆಗಲೂ ನಾವು ಆಡು ಭಾಷೆಯ ಸಮ್ಮೇಳನಗಳನ್ನು ಇಷ್ಟೇ ಅದ್ಧೂರಿಯಾಗಿ ಆಚರಿಸುತ್ತ ಇರಬಹುದು. ಸ್ವಲ್ಪ ನಿಧಾನವಾದರೂ ಸರಿ, ಈಗಿರುವ ಸ್ಥಿತಿಯಲ್ಲಿ ಇದೆಲ್ಲ ಆಗುವಂಥದ್ದೇ. ರಾಜಕಾರಣಿಗಳು ಸಾಹಿತ್ಯದಿಂದ ದೂರ ಸರಿದು, ಸಾಹಿತಿಗಳು ರಾಜಕಾರಣಕ್ಕೆ ಹತ್ತಿರವಾಗಿ ಅಧಿಕಾರ, ಮಾನ ಸನ್ಮಾನಗಳ ಬೆನ್ನು ಹತ್ತಿರುವಾಗ, ಶಿಕ್ಷಣ ಮಾರುಕಟ್ಟೆಯ ಸರಕಾಗಿರುವಾಗ, ನಾಡ ಭಾಷೆಯ ನೈಜ ಅಳಲನ್ನು ಆಲಿಸುವವರಾದರೂ ಯಾರು? ಅದರ ಅವಸಾನವನ್ನು ತಡೆಯುವವರಾದರೂ ಯಾರು?

ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT