ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಮೈತ್ರಿ ಸ್ಥಿತಿ ಇಲ್ಲ: ಸೀತಾರಾಂ ಯೆಚೂರಿ

Last Updated 25 ಏಪ್ರಿಲ್ 2019, 6:31 IST
ಅಕ್ಷರ ಗಾತ್ರ

ಸಮಕಾಲೀನ ರಾಜಕಾರಣವನ್ನು ಎಡಪಂಥೀಯ ನೋಟದಲ್ಲಿ ಮನಮುಟ್ಟುವಂತೆ ಕಟ್ಟಿಕೊಡಬಲ್ಲ ನಿರರ್ಗಳ ಮಾತುಗಾರ ಮತ್ತು ಸಂಸದೀಯ ಪಟು ಸೀತಾರಾಂ ಯೆಚೂರಿ. ಸಿಪಿಎಂನ ಪ್ರಧಾನ ಕಾರ್ಯದರ್ಶಿ. ಮೈತ್ರಿ ರಾಜಕಾರಣ ಕುರಿತ ಒಲವುಳ್ಳ ವರ್ಚಸ್ವಿ ನಾಯಕ. ತಮ್ಮ ಪಕ್ಷದ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ ನಿಯತಕಾಲಿಕದ ಸಂಪಾದಕ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರ ಸಂದರ್ಶನ.

* ಚುನಾವಣಾಪೂರ್ವ ಮೈತ್ರಿಗೆ ಮನಸ್ಸು ಮಾಡದ ಕಾಂಗ್ರೆಸ್‌ ಪಕ್ಷಕ್ಕೆ ನಿಮ್ಮ ಸಂದೇಶವೇನು?

ಬಿಜೆಪಿ ನೇತೃತ್ವದ ಎನ್‌ಡಿಎ ಅನ್ನು ದೇಶದ ಒಳಿತಿಗಾಗಿ ಅಧಿಕಾರದಿಂದ ದೂರ ಇಡಬೇಕು ಎಂಬುದು ನಮ್ಮ ಆದ್ಯತೆ. ತನ್ನ ಆದ್ಯತೆ ಏನು ಎಂಬುದನ್ನು ಕಾಂಗ್ರೆಸ್ ಈಗಲೇ ನಿರ್ಧರಿಸಬೇಕು.

ದೇಶದಲ್ಲಿ ಈಗ ಚುನಾವಣಾಪೂರ್ವ ಮೈತ್ರಿಯ ಸ್ಥಿತಿ ಇಲ್ಲ. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಅವರನ್ನು ಸೋಲಿಸಿದ್ದು ಚುನಾವಣಾಪೂರ್ವ ಮೈತ್ರಿ ಅಲ್ಲ. 1996, 1998, 2004ರಲ್ಲೂ ಅಧಿಕಾರ ಹಿಡಿದದ್ದು ಚುನಾವಣೋತ್ತರ ಮೈತ್ರಿಯೇ.

* ಈಗ ಮತದಾರರು ಬದಲಾಗಿದ್ದು, ವಿರೋಧಿ ಬಣದ ಪ್ರಧಾನಿ ಅಭ್ಯರ್ಥಿ ಯಾರೆಂದು ತಿಳಿಯಲು ಬಯಸುವುದಿಲ್ಲವೇ?

ಸಂಸದೀಯ ಚುನಾವಣೆಯನ್ನು ಅಧ್ಯಕ್ಷೀಯ ಚುನಾವಣೆ ಮಾದರಿಗೆ ತಂದಿರಿಸಿದ್ದು ಬಿಜೆಪಿ. ಈ ಹಿಂದೆ ವಾಜಪೇಯಿ ಅವರಿಗೆ ಪರ್ಯಾಯವಾಗಿ ಯಾರಿದ್ದಾರೆ ಎಂಬ ಪ್ರಶ್ನೆಯನ್ನೂ ಅವರೇ ಕೇಳಿದ್ದರು. ಆದರೆ, 10 ವರ್ಷಗಳ ಕಾಲ ದೇಶ ಮನಮೋಹನ ಸಿಂಗ್‌ ಅವರನ್ನು ಪ್ರಧಾನಿಯಾಗಿ ನೋಡಿತಲ್ಲ?

* ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ಸಮಸ್ಯೆ ಯಾವುದು? ಶೈಲಿಯೋ ಅಥವಾ ವಸ್ತುಸ್ಥಿತಿಯೋ?

ಒಂದರ್ಥದಲ್ಲಿ ಎರಡೂ ಹೌದು. ಮನಮೋಹನ್ ಸಿಂಗ್ ಅವರ ನೀತಿಯನ್ನು ವಿರೋಧಿಸುತ್ತಲೇ ಅಧಿಕಾರ ಹಿಡಿದವರೂ ಸಿಂಗ್‌ ಹಾದಿಯಲ್ಲೇ ನಡೆದರು. ತೀವ್ರ ಕೋಮುವಾದ ಪಸರಿಸಿದರು. ಇವರ ವಿದೇಶ ನೀತಿಯೂ ಸರಿಯಿಲ್ಲ, ಉಗ್ರರ ದಾಳಿಯನ್ನು ನಿರ್ವಹಿಸಿದ ರೀತಿಯೂ ಸರಿಯಿಲ್ಲ.

* ಪುಲ್ವಾಮಾ ಉಗ್ರರ ದಾಳಿ ನಂತರದ ಬಾಲಾಕೋಟ್ ಮೇಲಿನ ವಾಯುದಾಳಿ ವಿರೋಧಿಗಳ ಪ್ರಚಾರ ವೈಖರಿಗೆ ಅಡ್ಡಿಯಾಗಿವೆ. ಇದನ್ನು ಹೇಗೆ ಸಂಭಾಳಿಸುತ್ತೀರಿ?

ಉಗ್ರರ ವಿರುದ್ಧದ ಹೋರಾಟ ಸಮಗ್ರ ಭಾರತದ ಹೋರಾಟ. ಭಯೋತ್ಪಾದನೆಗೆ ಯಾವುದೇ ಸೀಮೆ ಇಲ್ಲ.
ಅದರ ಪಥವೇ ಬೇರೆ. ಹಿಂದೂ, ಸಿಖ್, ತಮಿಳು ಮತಾಂಧರಿಂದಲೂ ನಾವು ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಅವರನ್ನು ಕಳೆದುಕೊಂಡಿದ್ದೇವೆ.

ಪುಲ್ವಾಮಾ ದಾಳಿ ಖಂಡಿಸಿದ್ದ ನಾವು ಬಾಲಾಕೋಟ್‌ ದಾಳಿಯ ಬಗ್ಗೆ ಚಕಾರ ಎತ್ತಿರಲಿಲ್ಲ. 250 ಉಗ್ರರನ್ನು ಸದೆಬಡಿದಿದ್ದೇವೆ ಎಂದು ಹೇಳಿದ ಬಿಜೆಪಿ ಅಧ್ಯಕ್ಷರೇ ರಾಜಕೀಯಗೊಳಿಸಿದರು.

* ಲೋಕಸಭೆಯಲ್ಲಿ ಕೇವಲ 9 ಸ್ಥಾನಗಳಿಗೆ ಕುಸಿದಿರುವ ನಿಮ್ಮ ಪಕ್ಷದ ಬಲವರ್ಧನೆ ಹೇಗೆ?

ಸರ್ಕಾರದ ನೀತಿ ನಿಲುವುಗಳನ್ನು ಟೀಕಿಸಿ ಜನಪರ ಆಡಳಿತ ನೀಡುವಂತೆ ಒತ್ತಡ ಹೇರುವಲ್ಲಿ ಸಂಸತ್‌ನಲ್ಲಿ ಎಡ ಪಕ್ಷಗಳ ಉಪಸ್ಥಿತಿ ಅತಿ ಮುಖ್ಯ. 2004ರಿಂದ 2014ರವರೆಗೆ ನಾವು ಮಾಡಿದ ಈ ಕೆಲಸವನ್ನು ಜನ ಅವಲೋಕಿಸಿದ್ದಾರೆ. ಜನಪರ ಕಾಯ್ದೆಗಳೂ ಯುಪಿಎ– 1ರ ಅವಧಿಯಲ್ಲೇ ಜಾರಿಯಾಗಿವೆ. ಈ ಕುರಿತು ಜನತೆಗೆ ಮನದಟ್ಟು ಮಾಡಲಿದ್ದೇವೆ.

*ನಿಮ್ಮ ಸಂದೇಶಗಳು ಜನರನ್ನು ತಲುಪುತ್ತಿಲ್ಲವಲ್ಲ?

ನಮ್ಮ ಪಕ್ಷದ ಸದಸ್ಯತ್ವ ಹೆಚ್ಚುತ್ತಿದೆ. ಆದರೆ, ಮತವಾಗಿ ಪರಿವರ್ತನೆ ಆಗುತ್ತಿಲ್ಲ. ಬಲವಾದ ಶಕ್ತಿಗಳು ಮತದಾರರನ್ನು ತಡೆಯುತ್ತಿರುವುದೇ ಇದಕ್ಕೆ ಕಾರಣ.

ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ನಮ್ಮ ಬೆಂಬಲಿಗರನ್ನು ತಡೆದಿದ್ದಕ್ಕೇ ಹಿಂಸಾಚಾರದಂತಹ ಘಟನೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT