ಬೇಸಿಗೆ: ಬಟ್ಟೆ, ಮೇಕಪ್‌ ಆಯ್ಕೆ ಹೇಗೆ?

ಬುಧವಾರ, ಏಪ್ರಿಲ್ 24, 2019
22 °C

ಬೇಸಿಗೆ: ಬಟ್ಟೆ, ಮೇಕಪ್‌ ಆಯ್ಕೆ ಹೇಗೆ?

Published:
Updated:
Prajavani

ಬಿ ಸಿಲು ಹೆಚ್ಚಾದಂತೆಲ್ಲಾ ಬಟ್ಟೆಗಳ ಆಯ್ಕೆ ದೊಡ್ಡ ಸಮಸ್ಯೆಯಾಗುತ್ತದೆ. ಸಿಂಥಟಿಕ್‌ ಬಟ್ಟೆಗಳನ್ನು ಹಾಕಿದರೆ ಅವು ಮೈಗೆ ಅಂಟಿಕೊಳ್ಳುತ್ತವೆ. ಸರಿಯಾದ ಸನ್‌ಸ್ಕ್ರೀನ್‌ ಹಚ್ಚದಿದ್ದರೆ ಚರ್ಮ ಕಪ್ಪಾಗುತ್ತದೆ...

ಈ ಕಾಲಕ್ಕೆ ಮೆದುವಾದ ಕಾಟನ್‌ ಬಟ್ಟೆಗಳಿದ್ದರೆ ದೇಹಕ್ಕೆ ಹಿತವಾಗಿರುತ್ತದೆ. ಚರ್ಮವನ್ನೂ ಕಾಪಾಡಿಕೊಳ್ಳಬಹುದು. ಆದರೆ ಈ ಎಲ್ಲಾ ವಸ್ತುಗಳನ್ನು ಎಲ್ಲಿ ಹುಡುಕುವುದು? ಹೇಗೆ ಇವುಗಳನ್ನು ಆಯ್ಕೆ ಮಾಡುವುದು? ಎಂಬ ಪ್ರಶ್ನೆ ಎದುರಾಗುತ್ತದೆ.

ನಗರದ ಮಾರುಕಟ್ಟೆ ಈಗ ಬೇಸಿಗೆಯನ್ನು ಕೇಂದ್ರೀಕರಿಸಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಿಕೊಳ್ಳುತ್ತಿದೆ. ಎಲ್ಲಾ ಮಳಿಗೆಗಳಲ್ಲೂ ಬೇಸಿಗೆಗಾಗಿಯೇ ವಿಭಿನ್ನವಾದ ಸಂಗ್ರಹಗಳನ್ನು ಕೂಡಿಸಲಾಗಿದೆ. 

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಒಂದು ಸುತ್ತು ಹಾಕಿದರೆ, ಮೊದಲಿಗೆ ‘ಫ್ಯಾಷನ್‌ ಎಟ್‌ ಬಿಗ್‌ ಬಜಾರ್‌ (ಎಫ್‌ಬಿಬಿ)’ ಸಿಗುತ್ತದೆ. ಇಲ್ಲಿ ‘ಸಮ್ಮರ್‌ ಕಲರ್ಸ್‌’ ನಲ್ಲಿ ತಿಳಿಯಾದ ಬಣ್ಣಗಳ ಬಟ್ಟೆಗಳನ್ನೇ ಒಂದು ಕಡೆ ಒಪ್ಪವಾಗಿ ಜೋಡಿಸಿಡಲಾಗಿದೆ. ಗ್ರಾಹಕರು ಒಳಗೆ ಹೋಗುತ್ತಿದ್ದಂತಯೇ ಬೇಸಿಗೆಯ ಸಂಗ್ರಹಗಳ ಕಡೆ ಕೈ ತೋರಿಸಿ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ. 

ಅಷ್ಟೇ ಅಲ್ಲ ಅಲ್ಲಿ ಕೆಲಸ ಮಾಡುವವರು ತಿಳಿಯಾದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತಾರೆ.

ಸ್ವಲ್ಪ ಮುಂದೆ ಹೋದರೆ ಸೋಚ್‌ ಮಳಿಗೆ ಸಿಗುತ್ತದೆ. ಬೇಸಿಗೆಗೆ ಒಪ್ಪುವ ಕಾಟನ್‌ ಕುರ್ತಾಗಳನ್ನು ಒಂದೆಡೆ ಜೋಡಿಸಿಟ್ಟಿರುವುದು ಕಣ್ಣಿಗೆ ಬೀಳುತ್ತದೆ. ಇಲ್ಲಿನ ಕೆಲವು ಕಾಟನ್‌ ಕುರ್ತಾಗಳಿಗೆ ಕೋಟ್‌ಗಳನ್ನು ಆಯ್ಕೆಯಾಗಿ ಕೊಡಲಾಗಿದೆ. ಬೇಸಿಗೆ ಸೇರಿದಂತೆ ಎಲ್ಲಾ ಕಾಲದಲ್ಲೂ ಇವುಗಳನ್ನು ಹಾಕಿಕೊಳ್ಳಬಹುದು. ಕೋಟ್ ಇಲ್ಲದೆ ಹಾಕಿದರೂ ಡ್ರೆಸ್‌ನ ಅಂದ ಹಾಳಾಗದಂತೆ ಅವಕ್ಕೆ ವಿನ್ಯಾಸ ಮಾಡಲಾಗಿದೆ. 

ಫೇವರೇಟ್‌ ಮಳಿಗೆಯಲ್ಲಿ ಮಕ್ಕಳು, ಪುರುಷ ಹಾಗೂ ಮಹಿಳೆಯರು ಎಲ್ಲಾ ವಿಭಾಗದಲ್ಲೂ ಬೇಸಿಗೆಯ ಟ್ರೆಂಡಿ ಸಂಗ್ರಹಗಳು ಸಿಗಲಿವೆ. 

ಪಕ್ಕದಲ್ಲೇ ಇರುವ ಜಾಕಿ ಶಾಪ್‌ನಲ್ಲಿ ಕಾಟನ್‌ ಒಳ ಉಡುಪುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಕ್ಕಳು ಮನೆಯಲ್ಲಿ ಹಾಕುವ ಉಡುಪುಗಳನ್ನು ಹೆಚ್ಚು ಕೇಂದ್ರೀಕರಿಸಲಾಗಿದೆ.

ಶಿವಾಜಿನಗರ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಗರುಡಾ ಮಾಲ್‌, ಸೆಂಟ್ರಲ್‌ನಲ್ಲಿ ಎಡತಾಕಿದರೆ ಕಾಲಕ್ಕೆ ತಕ್ಕ ಉಡುಪು, ಮೇಕಪ್‌, ಹೊಸ ಟ್ರೆಂಡಿ ವಸ್ತುಗಳು ನಮ್ಮನ್ನು ಎದುರುಗೊಳ್ಳುತ್ತವೆ.

ಎಂ.ಜಿ ರಸ್ತೆಯಲ್ಲಿರುವ ಪ್ಯಾಂಥಲೂನ್ಸ್‌ನಲ್ಲಿಯೂ ಮಹಿಳೆಯರ ಕುರ್ತಾಗಳಲ್ಲಿ ಕಾಟನ್‌ ಸಂಗ್ರಹ ಹೆಚ್ಚಾಗಿದೆ. ವೆಸ್ಟರ್ನ್‌ ಉಡುಪುಗಳನ್ನೂ ಬೇಸಿಯನ್ನು ಕೇಂದ್ರೀಕರಿಸಿದ ಕೆಲವು ಪ್ಯಾಂಟ್‌ ಹಾಗೂ ಶಾರ್ಟ್‌ ಟಾಪ್‌ಗಳು ಸಿಗುತ್ತವೆ.

ಗರುಡಾ ಮಾಲ್‌ ಒಳಹೊಕ್ಕರೆ ಮೊದಲಿಗೆ ಇಂಗ್ಲೋಟ್ ಬ್ಯೂಟಿ ಪ್ರಾಡಕ್ಟ್ಸ್‌ ಮಳಿಗೆ ಸಿಗುತ್ತದೆ. ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿರುವ ಇಂಗ್ಲೋಟ್ ಸನ್‌ಸ್ಕ್ರೀನ್‌ ಹಾಗೂ ಮೇಕಪ್‌, ಲಿಪ್‌ ಪ್ರೈಮರ್‌ಗಳನ್ನು ಕೊಳ್ಳಬಹುದು. 

ಎದುರಿಗಿರುವ ಕಲರ್‌ಬಾರ್‌ ಮಳಿಗೆಯಲ್ಲಿಯೂ ಕಾಜಲ್‌, ಲಿಪ್‌ಗ್ಲೋಸ್‌, ಲಿಪ್‌ಸ್ಟಿಕ್‌, ಸನ್‌ಸ್ಕ್ರೀನ್‌ ಲೋಷನ್‌ಗಳನ್ನು ವಿಶೇಷವಾಗಿ ಬೇಸಿಗೆ ಸಂಗ್ರಹದಲ್ಲಿ ನೋಡಬಹುದು. 

ಮೂರನೇ ಮಹಡಿಯಲ್ಲಿರುವ ಫುಡ್‌ ಕೋರ್ಟ್‌ನಲ್ಲಿ ಐಸ್‌ಕ್ರೀಂ ಶಾಪ್‌ಗಳು ನಮ್ಮನ್ನು ಸ್ವಾಗತಿಸುತ್ತವೆ. ಬಿಸಿಯಾದ ಚಾಟ್‌, ದಕ್ಷಿಣ ಭಾರತದ ತಿಂಡಿ ಮಳಿಗೆಗಳಿಗಿಂತ ‘ಸೂಜ್‌’ ಐಸ್‌ಕ್ರೀಂ ಮಳಿಗೆಯಲ್ಲಿ ಹೆಚ್ಚು ಜನಾಕರ್ಷಣೆ ಇತ್ತು. ತಂಪಾದ ಪಾನೀಯಗಳು ಹಾಗೂ ವಿಭಿನ್ನವಾದ ಐಸ್‌ಕ್ರೀಂ ಇಲ್ಲಿ ದೊರೆಯುತ್ತವೆ. 

ಕುಲ್ಫಿ, ಲಸ್ಸಿ, ಮಿಲ್ಕ್‌ಶೇಕ್‌, ಹಾಡ್‌ ಫಡ್ಜ್‌ ಐಸ್‌ಕ್ರೀಂಗಳ ಮಜಾ ಸವಿಯಬಹುದು. ಬಟರ್‌ಸ್ಕಾಚ್‌ ಸನ್‌ರೈಸ್‌, ಕಿಡ್ಸ್‌ ಸ್ಪೆಶಲ್‌, ನಟ್ಟಿ ಮಾನಿಯಾ, ಡೆತ್‌ ಬೈ ಚಾಕೊಲೇಟ್‌, ಬನಾನ ಸ್ಪಿಟ್‌ಗಳನ್ನು ಸವಿಯುವ ಮಜವೇ ಬೇರೆ.

ಗ್ರಾಹಕರು ಏನಂತಾರೆ?

‘ಬಿಸಿಲಿನಲ್ಲಿ ಓಡಾಡಿ ಶಾಪಿಂಗ್ ಮಾಡುವುದು ಕಷ್ಟ. ಸಂಜೆಯ ಸಮಯ ಹೋದರೆ ಹೆಚ್ಚು ವಸ್ತುಗಳನ್ನು ಕೊಳ್ಳಬಹುದು. ಮಾರ್ಚ್‌ನಿಂದ ಮೇ ವರೆಗೆ ಮನೆಯಿಂದ ಹೊರಗೆ ಹೋಗುವುದೇ ಕಡಿಮೆ. ಹೋದರೂ ಐಸ್‌ಕ್ರೀಂ, ಜ್ಯೂಸ್ ಇಂತದ್ದೇ ಹೆಚ್ಚು ಕುಡಿಯುತ್ತೇವೆ’

ಅಕ್ಷತಾ ರಾಜಾಜಿನಗರ

***

ಬಿಸಿಲಿನಲ್ಲಿ ವ್ಯಾಪಾರ ಕಡಿಮೆ

‘ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವ ಸಮಯ. ಆದ್ದರಿಂದ ಬಿಸಿನೆಸ್‌ ಇಲ್ಲವೇ ಇಲ್ಲ. ಬೆಳಿಗ್ಗೆ 11 ಗಂಟೆಗೆ ಅಂಗಡಿ ಬಾಗಿಲು ತೆರೆದರೆ ಸಂಜೆ ಒಳಗೆ ಐದಾರು ಗ್ರಾಹಕರು ಬಂದರೆ ಹೆಚ್ಚು. 6 ಗಂಟೆ ನಂತರ ಸ್ವಲ್ಪ ಪರವಾಗಿಲ್ಲ. ಎಲ್ಲಾ ಮಳಿಗೆಯಲ್ಲೂ ಹೀಗೇ ಆಗುತ್ತಿದೆ. ಮೇ ತಿಂಗಳಲ್ಲಿ ಮತ್ತೆ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ವರ್ಷಾಂತ್ಯದಲ್ಲಿ ನಮಗೆ ವ್ಯಾಪಾರ ಕಡಿಮೆ‘

ಶ್ರೀನಿವಾಸ್‌, ರಾಜ್‌ಸನ್ಸ್‌ ಅಂಗಡಿ ಮಾಲೀಕ

 

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !