ಮಂಗಳವಾರ, ಆಗಸ್ಟ್ 11, 2020
27 °C

ಅಧಿಕಾರಿಯ ಕನಸು, ಅಭಿನಯದ ಮನಸು

ರಾಘವೇಂದ್ರ ಕೆ. Updated:

ಅಕ್ಷರ ಗಾತ್ರ : | |

Prajavani

ಸ್ಟಾರ್‌ ಸುವರ್ಣದ ‘ಅಮೃತ ವರ್ಷಣಿ’ಯ ರಾಘವ ಪ್ರಧಾನ್‌ ಅವರ ನಿಜವಾದ ಹೆಸರು ಪ್ರಜ್ವಲ್‌ ರವಿ. ಕಿರುತೆರೆಯಲ್ಲಿನ ಅವರ ಬಣ್ಣದ ಬದುಕಿನ ಬಗ್ಗೆ ಇಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. 

ಆಡಿಷನ್‌ ಕಥೆಗಳನ್ನು ಹೇಳಬಹುದಾ?

ಕಂಪನಿಯೊಂದರಲ್ಲಿ ತೆರಿಗೆ ಸಲಹೆಗಾರನಾಗಿ ಕೆಲಸಮಾಡುತ್ತಿದ್ದೆ. ನನ್ನದು ಅಮೆರಿಕದ ಗ್ರಾಹಕರಿಗೆ ಸಲಹೆ ನೀಡುವ ಕೆಲಸ ಆಗಿತ್ತು. ಕೆಲಸದಲ್ಲಿ ನೆಮ್ಮದಿ ಅನ್ನುವುದೇ ಇರಲಿಲ್ಲ. ನನ್ನ ಬಯಕೆ ಬೇರೆ ಇನ್ನೇನೋ ಇದೆ ಎನಿಸುತ್ತಿತ್ತು. ಪ್ರತಿ ಸಂಜೆ ಮನೆಗೆ ಹೋಗುವಾಗ ಭಾರವಾದ ಮನಸ್ಸಿನಲ್ಲಿಯೇ ಹೋಗುತ್ತಿದ್ದೆ. ನಮ್ಮ ತಂದೆ– ತಾಯಿಗೆ ನನ್ನ ಪರಿಸ್ಥಿತಿ ಹೇಳಿದ ಮೇಲೆ ಅವರು ನಿನ್ನಿಷ್ಟದಂತೆ ಮಾಡು ಎಂದು ಸಲಹೆ ನೀಡಿದ್ದರಿಂದ ನಟನೆಯತ್ತ ಗಮನ ಹರಿಸಿದೆ. 

ನನಗೆ ಯಾರೂ ಪರಿಚಯ ಇರಲಿಲ್ಲ ವ್ಯಾಟ್ಸ್‌ ಆ್ಯಪ್‌ನಲ್ಲಿ ಕಲಾವಿದರ ಗ್ರೂಪ್‌ ಒಂದರಲ್ಲಿ ನನ್ನ ನಂಬರ್‌ ಯಾರೋ ಸೇರಿಸಿದ್ದರು. ಅದರಲ್ಲಿ ಆಡಿಷನ್‌ ಎಲ್ಲಿದೆ ಎನ್ನುವುದು ಗೊತ್ತಾಗುತ್ತಿತ್ತು. ಆ ವಿಳಾಸವನ್ನು ಹಿಡಿದು ಹೋಗುತ್ತಿದ್ದೆ. ಒಮ್ಮೊಮ್ಮೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಆಡಿಷನ್ನಿಗೆ ನಿಂತ ನಿದರ್ಶನಗಳು ಇವೆ. ಮತ್ತೆ ಸೆಲೆಕ್ಟ್‌ ಆಗಿದ್ದೀಯಾ ಎಂದು ಹೇಳಿ ಆಶೆ ಹುಟ್ಟಿಸಿ ಪಾತ್ರವನ್ನೇ ನೀಡದ ನಿದರ್ಶನಗಳೂ ಇವೆ. ಎಲ್ಲದಕ್ಕಿಂತ ತುಂಬಾ ಕಹಿಯ ಸಂಗತಿ ಎಂದರೆ, ಪಾತ್ರಕ್ಕಾಗಿ ದುಡ್ಡು ಕೇಳಿದ ವ್ಯಕ್ತಿಗಳೂ ಇದ್ದಾರೆ. ಅದು ವಂಚನೆ ಎನ್ನುವ ತಿಳಿವಳಿಕೆ ಇದ್ದಿದ್ದರಿಂದ ನಾನು ಹಣ ನೀಡಿಲ್ಲ. ಮೋಸಕ್ಕೆ ಒಳಗಾಗುವವರು ಇದ್ದರೆ ಮೋಸ ಮಾಡುವರು ಇರುತ್ತಾರೆ ಎನ್ನುವುದು ನನ್ನ ನಂಬಿಕೆ. 

ನಟರಾಗಿದ್ದು ಹೇಗೆ?

‌ಸಂಗೀತದ ಒಲವು ಮೊದಲಿನಿಂದ ಇತ್ತು. ಬಿಡುವಿನ ವೇಳೆಯಲ್ಲಿ ಸಂಗೀತದಲ್ಲೇ ತಲ್ಲೀನನಾಗುತ್ತಿದ್ದೆ. ಹೀಗಿರುವಾಗಲೇ ನಮ್ಮ ಪೋಷಕರಿಗಿಂತ ಸಂಬಂಧಿಕರ ಒತ್ತಡ ಜಾಸ್ತಿಯಾಯ್ತು. ಏನುಮಾಡ್ತಿದ್ದೀಯಾ? ಏನು ಮಾಡುತ್ತಿಲ್ವಾ? ಇಂತಹ ಅವರ ಪ್ರಶ್ನೆಗಳಿಗೆ ಉತ್ತರಿಸಲು ಏನಾದರೂ ಮಾಡಲೇಬೇಕು ಎನ್ನುವುದಕ್ಕೆ ಅದು ಮೂಲವಾಯ್ತು. ಕೆಲಸಕ್ಕಿಂತ ದೊಡ್ಡದಾಗಿ ಏನಾದರೂ ಮಾಡಬೇಕು ಎನ್ನುತ್ತಿದ್ದವನಿಗೆ ಅಭಿನಯದ ಮೇಲೆ ಒಲವು ಬಂತು. ಅದಕ್ಕೆ ನಿತ್ಯ ಸೈಕಲ್‌ ಹೊಡೆಯುವ ಸರದಿ ಆರಂಭವಾಯಿತು. ‘ರಣತಂತ್ರ’ ಸಿನಿಮಾದಲ್ಲಿ ಚಿಕ್ಕ ಪಾತ್ರಕ್ಕೆ ಅವಕಾಶ ಸಿಕ್ಕಿತು. ಅದಾದ ಮೇಲೆ ‘ಶಾಂತಂ ಪಾಪಂ’ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸಿದೆ. ಅಷ್ಟರಲ್ಲಿ ‘ಅಪರಂಜಿ’ಯಲ್ಲಿ ನಾಯಕನ ತಮ್ಮನ ಪಾತ್ರ, ’ಅಮೃತ ವರ್ಷಿಣಿ’ಯಲ್ಲಿ ನಾಯಕ ಪಾತ್ರ ಏಕಕಾದಲ್ಲಿ ಸಿಕ್ಕವು. ‘ಅಮೃತವರ್ಷಿಣಿ’ಯನ್ನು ಒಪ್ಪಿಕೊಂಡೆ.

ಐಎಎಸ್‌ ಅಧಿಕಾರಿಯ ಕನಸು ಕಮರಿತಾ ಹೇಗೆ? ಆ ಸಿದ್ಧತೆ ಬಗ್ಗೆ ಹೇಳಿ?

ನಟನೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತೇನೆ. ಯುಪಿಎಸ್ಸಿಯ ಪ್ರಿಲಿಮ್ಸ್‌ ಆಯ್ತು. ಮುಖ್ಯ ಪರೀಕ್ಷೆ ಪಾಸ್‌ ಮಾಡಲು ಆಗಲಿಲ್ಲ. ದೆಹಲಿಯಲ್ಲಿ ತರಬೇತಿಗೆ ಹೋಗಿದ್ದೆ. ಅಲ್ಲಿನ ಖರ್ಚು ಕೂಡ ಹೆಚ್ಚಿತ್ತು. ಹಾಗಾಗಿ ಹಿಂದಕ್ಕೆ ಮರಳಿದೆ. ಸಾಧ್ಯವಾದರೆ ಕೆಎಸ್ಎಸ್‌ ಮಾಡುತ್ತೇನೆ. ಎಎಎಸ್‌ಗೆ ತುಂಬಾ ಕಠಿಣವಾದ ಅಭ್ಯಾಸ ಮಾಡುತ್ತಿದ್ದೆ. ಬೆಳಿಗ್ಗೆ 6ರಿಂದ 12 ಗಂಟೆ ತನಕ ತರಗತಿಗಳು ನಡೀತಾ ಇದ್ವು. ಕ್ಲಾಸ್‌ ಮುಗಿಸಿಕೊಂಡು 1 ಗಂಟೆಗೆ ಓದಲು ಕುಳಿತರೆ ರಾತ್ರಿ 11ರ ತನಕ ಓದುತ್ತಿದ್ದೆ. ಕೇವಲ 15 ಅಂಕಗಳಲ್ಲಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ಹಾರ್ಡ್‌ ವರ್ಕ್‌ಗಿಂತ ಸ್ಮಾರ್ಟ್‌ ವರ್ಕ್‌ ಗಮನ ಸೆಳೆಯುತ್ತದೆ ಎಂದು ನಟನಾಗಿದ್ದೇನೆ.

ಕುಟುಂಬದ ಹಿನ್ನೆಲೆ ಹೇಳಬಹುದಾ...

ನನ್ನ ತಂದೆ ರವಿ. ಅವರ ಮೂಲ ಇಂದಿನ ವಿಜಯಪುರ. ಮೂಲತಃ ಅವರು ರಂಗಭೂಮಿ ಕಲಾವಿದರು. ಮನೆಗೆ ಹಿರಿಯ ಮಗ. ಜವಾಬ್ದಾರಿ ಹೆಚ್ಚು ಇತ್ತು. ಆಗ ಗೋವಾಕ್ಕೆ ಕೆಲಸಕ್ಕೆ ಹೋಗುತ್ತಾರೆ. ಅಲ್ಲಿಂದ ಬೆಂಗಳೂರಿಗೆ ಬಂದು ರಂಗಭೂಮಿಯಲ್ಲಿ ನಟನೆಯನ್ನು ಆರಂಭಿಸುತ್ತಾರೆ. ಅನಿಯಮಿತ ಆದಾಯ ಅವರಿಗೆ ಕಷ್ಟ ಆಯ್ತು ಎಂದು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರಂತೆ. ಅಮ್ಮ ಯಶೋದ ಕೆಇಎಸ್‌ ಮಾಡಿ ಕೊಡಗಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿ ಆಗಿದ್ದಾರೆ. ಅಣ್ಣ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾನೆ. ನಾನು ಬಿಕಾಂ ಓದಿದ್ದೇನೆ. ವಾಣಿಜ್ಯಶಾಸ್ತ್ರದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗುತ್ತಿದ್ದೇನೆ.

ಅಧಿಕಾರಿಯಾದರೆ ನಿಮ್ಮ ಆದ್ಯತೆಗಳು ಏನು?

ಎಲ್ಲಾ ರೀತಿಯ ಸ್ವಚ್ಛತೆಗೆ ಆಧ್ಯತೆ ಕೊಡುತ್ತೇನೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಪರಿಣಾಮಕಾರಿಯಾದ ಶಿಕ್ಷಣ ಅಗತ್ಯ ಇದೆ. ಇದರ ಜೊತೆಗೆ ತೃತೀಯಲಿಂಗಿಗಳ ಸ್ವಾಭಿಮಾನ ಬದುಕಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ನನಗೆ ಒಮ್ಮೆ ಎದುರಾದ ತೃತೀಯಲಿಂಗಿ ಒಬ್ಬರು ಭಿಕ್ಷೆ ಬೇಡಿದರು. ಅಕ್ಕ ಕೆಲಸ ಮಾಡಲು ಏನಾಗಿದೆ ನಿಮಗೆ ಎಂದು ನಾನೇ ಜೋರು ಮಾಡಿದೆ. ಅದಕ್ಕೆ ಅವರು ನಮಗೆ ಯಾರು ಕೆಲಸ ಕೊಡುತ್ತಾರೆ ಎಂದು ಮರು ಪ್ರಶ್ನಿಸಿದರು. ಅದು ಪರಿಣಾಮಕಾರಿಯಾಗಿ ನನ್ನ ಮನಸ್ಸಿಗೆ ನಾಟಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು