ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌ಸಿಟಿ’ ಕಂಪನಿ ಏನು ಮಾಡುತ್ತಿದೆ?

ಬಡಜನರ ಮುನ್ನೋಟ ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರ ಪ್ರಶ್ನೆ
Last Updated 28 ಮೇ 2018, 8:49 IST
ಅಕ್ಷರ ಗಾತ್ರ

ತುಮಕೂರು: ‘ಸ್ಮಾರ್ಟ್ ಸಿಟಿ ಯೋಜನೆ ಪ್ರಗತಿ ಅಂಶಗಳನ್ನು ಸ್ಮಾರ್ಟಿ ಸಿಟಿ ಕಂಪನಿಯು ನಾಗರಿಕ ಸಮಿತಿ ಮತ್ತು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು’ ಎಂದು ಪಿಯುಸಿಎಲ್ ಸಂಘಟನೆ ಜಿಲ್ಲಾ ಸಂಚಾಲಕ ಕೆ.ದೊರೈರಾಜು ಒತ್ತಾಯಿಸಿದರು.

ತುಮಕೂರು ನಗರದ ಎನ್‌ಆರ್ ಕಾಲೋನಿಯ ಸಮುದಾಯ ಶೈಕ್ಷಣಿಕ ಭವನದಲ್ಲಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 'ಸ್ಮಾರ್ಟ್‌ಸಿಟಿಯಲ್ಲಿ ನಗರ ಬಡಜನರ ಮುನ್ನೋಟ ಸಮಾಲೋಚನಾ ಸಭೆ'ಯಲ್ಲಿ ಮಾತನಾಡಿದರು.

‘ಯೋಜನೆ ಜಾರಿಯಾಗಿ ವರ್ಷ ಕಳೆದಿದೆ. ಅದು ಕೈಗೊಂಡಿರುವ ಕಾರ್ಯ ಚಟುವಟಿಕೆಗಳೇನು? ಎಂಬುದು ಜನರಿಗೆ ತಿಳಿಸುವುದು ಸ್ಮಾರ್ಟ್ ಸಿಟಿ ಕಂಪನಿಯ ಜವಾಬ್ದಾರಿ. ಹೀಗಾಗಿ, ಪ್ರಗತಿ ಅಂಶಗಳನ್ನು ಬಹಿರಂಗಪಡಿಸಬೇಕು’ ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ ಕಂಪನಿಗಳು ಸರ್ಕಾರದ ನಿಯಂತ್ರಣದಲ್ಲಿ ಬರುವುದಿಲ್ಲ. ಹಾಗೇ ಸಲಹಾ ಸಮಿತಿಯ ಸಲಹೆಗಳನ್ನೂ ಅವುಗಳು ತೆಗೆದುಕೊಳ್ಳುವುದಿಲ್ಲ. ಇದಕ್ಕೆ ಯಾರು ಹೊಣೆ ಎಂಬುದನ್ನು ಪ್ರಶ್ನೆ ಮಾಡಬೇಕಿದೆ ಎಂದರು.

ಸಾಮಾಜಿಕ ಹೋರಾಟಗಾರ ಕುಂದರನಹಳ್ಳಿ ರಮೇಶ್ ಮಾತನಾಡಿ, ‘ಸ್ಮಾರ್ಟ್‌ಸಿಟಿ ಕಂಪನಿ ಸಲಹಾ ಸಮಿತಿ ಸದಸ್ಯರ ಸಮಿತಿಯನ್ನು ಇದುವರೆಗೂ ಕರೆದಿಲ್ಲ. ಕೇಳಿದರೆ ಸಲಹಾ ಸಮಿತಿ ಇದೆಯೇ ಎಂದು ಪ್ರಶ್ನಿಸುತ್ತಾರೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಏನು ಕೆಲಸ ಆಗುತ್ತಿದೆ ಎಂಬುದು ಶಾಸಕರು, ಸಂಸದರು, ಮೇಯರ್‌ ಮತ್ತು ಜಿಲ್ಲಾಧಿಕಾರಿಗಳಿಗೇ ತಿಳಿಯದೇ ಇರುವುದು ಶೋಚನೀಯ’ ಎಂದರು.

ಪರಿಸರ ಹೋರಾಟಗಾರ ಸಿ.ಯತಿರಾಜು ಮಾತನಾಡಿ, ‘ನಗರದಲ್ಲಿ ಪರಿಸರ ಹಾಳಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಗಿಡಮರಗಳಿಲ್ಲ. ಕೆಲವೊಂದು ರಸ್ತೆಗಳಲ್ಲಿ ಗಿಡಗಳನ್ನು ನೆಡಲು ಸ್ಥಳಾವಕಾಶವಿಲ್ಲ. ವಾಯು ಮಾಲಿನ್ಯ ಹೆಚ್ಚಾಗಿದೆ. ನಗರದಲ್ಲಿ ಸಸಿಗಳನ್ನು ನೆಡಲು ಯಾವ ಕಡೆ ಸ್ಥಳಾವಕಾಶವಿದೆ ಎಂಬುದನ್ನು ಸ್ಮಾರ್ಟ್‌ಸಿಟಿ ಕಂಪನಿಯವರು ಸ್ಪಷ್ಟಪಡಿಸಬೇಕು’ ಎಂದರು.

ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ‘ಸ್ಮಾರ್ಟ್‌ಸಿಟಿ ಯೋಜನೆಯಡಿ ತುಮಕೂರು ನಗರದ 11ರಷ್ಟು ಭಾಗ ಮಾತ್ರ ಬರುತ್ತದೆ' ಎಂದರು.

‘ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಬರುವ 4 ಕೊಳೆಗೇರಿಯ 353 ಮನೆಗಳನ್ನು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 3,802 ಮನೆಗಳನ್ನು ಅಭಿವೃದ್ಧಿ ಪಡಿಸಲು ₹ 68 ಕೋಟಿ ನಿಗದಪಡಿಸಲಾಗಿದೆ ಎಂದು ತಿಳಿದಿದೆ. ಕೇಂದ್ರ ಭಾಗದ 118 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗುತ್ತದೆಯಂತೆ. ಈ ಸ್ಮಾರ್ಟ್‌ಸಿಟಿ ಅಭಿವೃದ್ಧಿಯಾದ ಮೇಲೆ ನಗರದ ಎಲ್ಲಾ ವರ್ಗದ ಜನರೂ ಕೂಡ ತೆರಿಗೆ ಕಟ್ಟಬೇಕಾಗುತ್ತದೆ’ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ‘ಸ್ಮಾರ್ಟ್‌ಸಿಟಿ ಯೋಜನೆಯ ಕಲ್ಪನೆಯೇ ಜನವಿರೋಧಿಯಾಗಿದ್ದು, ಜನರ ಮೇಲೆ ತೆರಿಗೆಯನ್ನು ಹೇರುವ ಹುನ್ನಾರವಾಗಿದೆ’ ಎಂದು ಆರೋಪಿಸಿದರು.

‘ಕುಡಿಯುವ ನೀರು, ವಿದ್ಯುತ್ ಸೇರಿದಂತೆ ನಗರದ ಜನರು ಮೂಲ ಸೌಕರ್ಯಗಳಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಶ್ನೆ ಮಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಬೀದಿ ಬದಿ ವ್ಯಾಪಾರಿಗಳ ಪ್ರಶ್ನೆ, ಕೊಳೆಗೇರಿ ಜನರ ಸಮಸ್ಯೆಗಳ ಬಗ್ಗೆ ಸ್ಮಾರ್ಟ್ ಸಿಟಿ ಕಂಪನಿಯವರು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ, ನಿವೃತ್ತ ಎಂಜಿನಿಯರ್ ರಾಮಚಂದ್ರಯ್ಯ, ಸಮುದಾಯ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ತುಮಕೂರು ವಿವಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ರಮೇಶ್, ಎಸ್.ಎಫ್.ಐ ಜಿಲ್ಲಾ ಘಟಕದ ಅಧ್ಯಕ್ಷ ಈ.ಶಿವಣ್ಣ, ಡಾ.ನಾಗಭೂಷಣ್ ಬಗ್ಗನಡು, ಯುವಜನ ಮುಖಂಡ ಸುನಿಲ್, ಎಐಟಿಯುಸಿ ಮುಖಂಡ ಗಿರೀಶ್, ಪಂಡಿತ್ ಜವಾಹರ್, ಶೆಟ್ಟಾಳಯ್ಯ, ಅರುಣ್, ರಘು, ಕೆಂಪರಾಜು, ಕುಮಾರ್ ಮಾದರ್, ಟಿ.ಸಿ.ರಾಮಯ್ಯ, ಷಣ್ಮುಖಪ್ಪ, ರಂಗಧಾಮಯ್ಯ ಇದ್ದರು.

ಹೋರಾಟದ ಗುರಿ ಇರಲಿ

‘ಸ್ಮಾರ್ಟ್ ಸಿಟಿ ಕಂಪನಿಗಳ ಅಪ್ರಜಾತಾಂತ್ರಿಕ ವಿಷಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಜನರನ್ನು ಸಂಘಟಿಸಿ ಹೋರಾಟ ಮಾಡುವುದು ನಮ್ಮ ಮುಂದಿನ ಗುರಿಯಾಗಬೇಕು’ ಎಂದು ಕೆ.ದೊರೈರಾಜು ತಿಳಿಸಿದರು.

15 ದಿನಕ್ಕೊಮ್ಮೆ ಮಾಹಿತಿ ನೀಡಲಿ

‘ಕನಿಷ್ಠ 15 ದಿನಗಳಿಗೊಮ್ಮೆ ಸ್ಮಾರ್ಟ್ ಸಿಟಿ ಕಂಪನಿಯವರು, ಶಾಸಕರು, ಸಂಸದರನ್ನು ಕರೆದು ಸಭೆ ನಡೆಸಬೇಕು. ಅದರ ಮಾಹಿತಿಯನ್ನು, ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕು’ ಎಂದು ಕುಂದರನಹಳ್ಳಿ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT