ಎಡವಟ್ಟಾದ ಚಲೋ ಮುಹೂರ್ತ...!

7

ಎಡವಟ್ಟಾದ ಚಲೋ ಮುಹೂರ್ತ...!

Published:
Updated:

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರು ನಗರದಲ್ಲಿ ತಮ್ಮ ಕಚೇರಿಯನ್ನು ಉದ್ಘಾಟಿಸಬೇಕಿತ್ತು. ಈ ವಿಚಾರದಲ್ಲಿ ಜೆಡಿಎಸ್‌ನ ‘ಹಿರಿಯ ನೇತಾರ’ರ ಹಾದಿಯನ್ನೇ ಅನುಸರಿಸುವ ಮನಗೂಳಿ, ಕಚೇರಿಯ ಉದ್ಘಾಟನೆಗಾಗಿ ಚಲೋ ಮುಹೂರ್ತ ನಿಗದಿಪಡಿಸಿಕೊಂಡಿದ್ದರು.

ಹಿಂದೆ ನಾಗಠಾಣ ಕ್ಷೇತ್ರದ ಶಾಸಕರಾಗಿದ್ದ ಪ್ರೊ. ರಾಜು ಆಲಗೂರ ಅವರಿಗೆ ನೀಡಿದ್ದ ಕಚೇರಿಯನ್ನು ನವೀಕರಿಸಿ, ಉಸ್ತುವಾರಿ ಸಚಿವರ ಕಚೇರಿಯಾಗಿ ಮಾರ್ಪಡಿಸಲಾಗಿತ್ತು. ಗುರುವಾರ ಮಧ್ಯಾಹ್ನ 3.30ಕ್ಕೆ ಕಚೇರಿ ಉದ್ಘಾಟನೆಯೂ ನಿಗದಿಯಾಗಿತ್ತು. ಸುಣ್ಣ–ಬಣ್ಣ ಕೆಲಸ ಮುಗಿದು, ಮಾಧ್ಯಮದವರಿಗೆ ಆಹ್ವಾನವನ್ನೂ ಕೊಟ್ಟಾಗಿತ್ತು. ಆದರೆ ನೆಲಕ್ಕೆ ಹಾಕಿದ್ದ ಹಳೆಯ ಕಲ್ಲುಗಳನ್ನು ಕಿತ್ತು, ಹೊಸ ಮಾದರಿಯ ಟೈಲ್ಸ್‌ ಅಳವಡಿಸುವ ಕೆಲಸ ಮುಗಿದಿರಲಿಲ್ಲ. ಇದರಿಂದಾಗಿ ಜೆಡಿಎಸ್‌ ಮುಖಂಡಿಗೆ ಸ್ವಲ್ಪ ಅಳುಕು ಉಂಟಾಗಿತ್ತು.

‘ಮುಹೂರ್ತಕ್ಕೆ’ ಗಂಟುಬಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆ ನಡೆಸಿದ್ದಾರೆ ಎಂಬ ಸುದ್ದಿಯೇ ದೊಡ್ಡದಾಗಬಹುದೆಂಬ ಅಳುಕು ಅದು. ಇದರಿಂದ ಪಾರಾಗುವುದು ಹೇಗೆಂದು ಚಿಂತೆಗೆ ಬಿದ್ದಿದ್ದ ನಾಯಕರಿಗೆ ನೆನಪಾದದ್ದು ಅಟಲ್‌ ಬಿಹಾರಿ ವಾಜಪೇಯಿ!

‘ಮಾಜಿ ಪ್ರಧಾನಿಯ ನಿಧನದ ಕಾರಣಕ್ಕೆ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ’ ಎಂಬ ಸಂದೇಶವನ್ನು ತಕ್ಷಣವೇ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ರವಾನಿಸಲಾಯಿತು. ಪತ್ರಕರ್ತರಿಗೂ ಇದೇ ಮಾಹಿತಿ ನೀಡಲಾಯಿತು. ಈ ಸಂದೇಶ ಹೋದದ್ದು ಸಂಜೆ 4 ಗಂಟೆಗೆ. ಆದರೆ ಸರಿಯಾದ ಮುಹೂರ್ತಕ್ಕೆ ಸಚಿವರ ಕಚೇರಿ ಉದ್ಘಾಟನೆ ನೆರವೇರಿತ್ತು, ಮಾತ್ರವಲ್ಲ ಮಾಧ್ಯಮದ ಕೆಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೂ ಆಗಿತ್ತು.

ಇಷ್ಟೆಲ್ಲ ಆದ ಬಳಿಕ, ‘ವಾಜಪೇಯಿ ಸಾಯೋಕೆ ಮುಂಚೆಯೇ ಹೀಗೆ ಸಂದೇಶ ರವಾನಿಸಿದ್ದು ಸರಿಯೇ?

ಇದೆಂಥ ರಾಜಕಾರಣ?’ ಎಂದು ಜೆಡಿಎಸ್‌ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಜೋಲು ಮೋರೆಯೇ ಅವರ ಉತ್ತರವಾಗಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !