ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯಿಂದ ಹೊರಗಿರುವನರನಾರು ಸೃಷ್ಟಿಯಲಿ...

Last Updated 13 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಡಿ.ವಿ.ಗುಂಡಪ್ಪನವರ ಬದುಕು ಮತ್ತು ಬರವಣಿಗೆ ವೈವಿಧ್ಯಮಯ. ಇವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಬಾಳಿಗೊಂದು ನಂಬಿಕೆ, ಜ್ಞಾಪಕ ಚಿತ್ರಶಾಲೆ, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಂಸ್ಕೃತಿ ಮುಂತಾದ ಅನೇಕ ವಿಶಿಷ್ಟ ಕೃತಿಗಳು ಈ ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾಕಷ್ಟು ವಿಸ್ತರಿಸಿವೆ. ಗಾಂಧಿವಾದವನ್ನು ಮೈಗೂಡಿಸಿಕೊಂಡಿದ್ದ ಡಿವಿಜಿ ಪತ್ರಕರ್ತರಾಗಿಯೂ ಯಶಸ್ವಿಯಾದವರು. ವಿವಿಧ ಸಂಘ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಸಮಾಜಮುಖಿಯಾಗಿದ್ದವರು.

ಸಮಾಜದ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಚಿಂತನೆಗಳನ್ನೂ ಹೊಂದಿದ್ದವರು. ಪ್ರಾಯಶಃ ಈ ಗುಣವೇ ಬಿ.ಜಿ.ಎಲ್. ಸ್ವಾಮಿಯವರಂತಹ ಒಬ್ಬ ಸಮರ್ಥ ಪರಿಸರ, ವಿಜ್ಞಾನ ಸಾಹಿತಿಯನ್ನು ಸೃಷ್ಟಿಸಿರಲಿಕ್ಕೂ ಸಾಧ್ಯವಾಗಿದೆ. ಆದರೂ ಡಿವಿಜಿ ಅವರನ್ನು ಸಾಮಾನ್ಯ ದೃಷ್ಟಿಯಲ್ಲಿ ಜೀವನ ಧರ್ಮಯೋಗದ ಪ್ರತಿಪಾದಕರೆಂದಷ್ಟೇ ಬಿಂಬಿಸಲಾಗುತ್ತಿದೆ. ಅವರಲ್ಲಿನ ವೈಜ್ಞಾನಿಕ ಮನೋಭಾವ, ಸಾಮಾಜಿಕ ಪ್ರಜ್ಞೆ, ದೂರದೃಷ್ಟಿ ಕುರಿತಂತೆ ಅಗತ್ಯವಾದ ಚರ್ಚೆ ಆಗಿಲ್ಲವೆಂದೇ ಹೇಳಬಹುದು.

ನಾಡಿನ ಅನೇಕ ಕವಿಗಳು ಅನುಭವಿಸಿದಂತೆ ಡಿವಿಜಿ ಸಹ ಪ್ರಕೃತಿ ಸೌಂದರ್ಯವನ್ನು ಅನುಭವಿಸಿದ್ದಾರೆ. ವಿಜ್ಞಾನ, ಪ್ರಕೃತಿ, ಬದುಕು ಕುರಿತಂತೆ ಅವರ ಆಲೋಚನೆಗಳು ಗಂಭೀರವಾಗಿವೆ. ಆದರೆ ಈ ಅಂಶಗಳನ್ನು ಸೂಕ್ಷ್ಮವಾಗಿ ಗುರುತಿಸುವ ಅಗತ್ಯವಿದೆ. ಪ್ರಕೃತಿಯೇ ಸೌಂದರ್ಯದ ಗುರು ಎನ್ನುವ ಡಿವಿಜಿ ‘ಪ್ರಕೃತಿಯಿಂದ ಹೊರಗಿರುವ ನರನಾರು ಸೃಷ್ಟಿಯಲಿ’ ಎಂದು ಪ್ರಶ್ನಿಸುತ್ತಲೇ ಮನುಷ್ಯ ಈ ವಿಶ್ವ ವೃಕ್ಷವೊಂದರ ರೆಂಬೆ ಮಾತ್ರ ಎಂದು ಸ್ಪಷ್ಟಪಡಿಸುತ್ತಾರೆ. ಈ ಜಗತ್ತನ್ನೇ ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವ ಹುಂಬತನ ಮತ್ತು ಸ್ವಾರ್ಥದಿಂದ ಮೆರೆಯುತ್ತಿರುವ ಮನುಷ್ಯನಿಗೆ ಈ ಮೂಲಕ ಮನುಷ್ಯ ಮತ್ತು ಪರಿಸರದ ನಡುವೆ ಇರುವ ಸಂಬಂಧ, ಪರಿಸರ ಕುರಿತಂತೆ ಮನುಷ್ಯನಿಗೆ ಇರಬೇಕಾದ ಜವಾಬ್ದಾರಿಯ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸುತ್ತಾರೆ.

‘ಪ್ರಕೃತಿಯನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು’ ಎಂಬ ಮಾತಿನ ಮೂಲಕ ತಮ್ಮ ಪರಿಸರ ಪ್ರಜ್ಞೆಯನ್ನು ಮೆರೆಯುತ್ತಾರೆ. ‘ಈ ಸೃಷ್ಟಿ ವ್ಯವಸ್ಥೆಯೊಳ್ ವ್ಯರ್ಥಮಾವುದುಮಿರದು, ಬೆಟ್ಟ ನದಿ ಮರುಭೂಮಿ ಕಾಡು ಕಣಿವೆ, ವೃಷ್ಟಿಕಾರಕಗಳವು ವಾಯುಶೋಧಕಗಳವು ದಿಟ್ಟಿಸಾಳದಿ ನಿಜವ ಮರುಳ ಮುನಿಯ’ ಎನ್ನುವ ಮಾತಿನಲ್ಲಿ ಪ್ರಕೃತಿಯ ನಿಜ ತತ್ವವನ್ನು ಮುಂದಿಡುತ್ತಾರೆ. ಮತ್ತೊಂದು ಪದ್ಯದಲ್ಲಿ ಇವುಗಳನ್ನು ‘ಒಟ್ಟಿನಿಂ ನೋಡದನು’ ಎಂಬ ಮಾತಿನ ಮೂಲಕ ಪ್ರಕೃತಿಯನ್ನು ಸಮಗ್ರವಾಗಿ ನೋಡಿ ಅರಿಯುವ ದಾರಿಯನ್ನೂ ಕಾಣಿಸುತ್ತಾರೆ. ನಿಸರ್ಗದಲ್ಲಿ ವ್ಯರ್ಥ ಎಂಬ ಪದಕ್ಕೆ ಸ್ಥಳವೇ ಇಲ್ಲ. ಈ ಜೈವಿಕ ವ್ಯವಸ್ಥೆಯ ಪ್ರತಿಯೊಂದು ಘಟಕವೂ ಒಂದಕ್ಕೊಂದು ಪೂರಕ, ಎಲ್ಲವೂ ಚಕ್ರೀಯ ಚಲನೆಗೆ ಒಳಪಟ್ಟಿವೆ ಎಂಬ ಅಂಶವನ್ನು ಈ ಮಾತುಗಳು ಪ್ರತಿಪಾದಿಸುತ್ತವೆ.

ಈ ಜೀವಗೋಳದಲ್ಲಿ ಜೀವಿಗಳ ಹುಟ್ಟು, ಸಾವು ಸಹಜ ಪ್ರಕ್ರಿಯೆ; ನಿಸರ್ಗ ಚಕ್ರದ ಸಾಮಾನ್ಯ ವಿದ್ಯಮಾನ. ಖಗೋಳೀಯ ವಿದ್ಯಮಾನಗಳು, ಭೂ ಚಲನೆಯ ಪರಿಣಾಮಗಳ ನಡುವೆಯೇ ಬಾಳಬೇಕಾದ ನಮ್ಮಲ್ಲಿ ಸಹಜವಾದ ನೈಸರ್ಗಿಕ ಘಟನೆಗಳಿಗೂ ಇಲ್ಲಸಲ್ಲದ ಅರ್ಥ ಕಲ್ಪಿಸಲಾಗುತ್ತಿದೆ. ಈ ಘಟನೆಗಳ ಮೂಲಕವೇ ಜನರನ್ನು ದಿಕ್ಕುತಪ್ಪಿಸುವ ಮಹಾತ್ಮರ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ. ಪ್ರಳಯದ ಬಗ್ಗೆ ಪುಸ್ತಕ ಮಾರಿದವರು ಹಣ ಮಾಡಿಕೊಂಡರು, ಕೊಂಡವರು ಹೆದರಿ ಜೀವ ಉಳಿಸಿಕೊಳ್ಳಲು ಪೂಜೆ ಪುನಸ್ಕಾರಗಳಿಗಾಗಿ ಹಣ ಕಳೆದುಕೊಂಡರು. ಆದರೆ ಈ ಜೀವಜಾಲದಲ್ಲಿ ನಿಸರ್ಗ ಯಾವುದೇ ಸಂದರ್ಭಗಳಲ್ಲಿ ತನ್ನನ್ನು ತಾನೇ ಸರಿಪಡಿಸಿಕೊಳ್ಳಬಲ್ಲುದು, ಈ ನಿಸರ್ಗದ ವ್ಯಾಪಾರದಲ್ಲಿ ಒಂದೆಡೆ ನಾಶವಿದ್ದಲ್ಲಿ ಮತ್ತೊಂದೆಡೆ ಸೃಷ್ಟಿ ಇದ್ದೇ ಇರುತ್ತದೆ ಎಂಬ ಸಮತೋಲನದ ಮಾತುಗಳನ್ನು ಡಿವಿಜಿ ಒಂದು ಪದ್ಯದ ಮೂಲಕ ಮಾರ್ಮಿಕವಾಗಿ ತಿಳಿಸುತ್ತಾರೆ. ‘ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ, ಕಡಲೊಳೆತ್ತಲೊ ಹೊಸ ದ್ವೀಪವೇಳುವುದು; ಕಳೆಯಿತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ, ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ’.

ಡಿವಿಜಿ ಕಗ್ಗದ ಬಹುತೇಕ ಪದ್ಯಗಳಲ್ಲಿ ಪ್ರಶ್ನೆಗಳ ಮೂಲಕವೇ ನಮ್ಮನ್ನು ಚಿಂತನೆಗೆ ಒಡ್ಡುತ್ತಾರೆ. ಕಗ್ಗಕ್ಕೆ ವಿವಿಧ ಬಗೆಯಲ್ಲಿ ಸಂವಹಿಸಬಲ್ಲ ಸಾಮರ್ಥ್ಯವಿದೆ. ಮಂಕುತಿಮ್ಮನ ಕಗ್ಗದಲ್ಲಿನ ‘ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ’ ಎಂಬ ಪದ್ಯದಲ್ಲಿ ಹಸಿವು ಪದಕ್ಕೆ ಅನೇಕ ಕಡೆ ಮನುಷ್ಯನ ದುರಾಸೆ ಎಂಬುದಾಗಿ ಅರ್ಥೈಸಲಾಗಿದೆ. ಆದರೆ ಇದನ್ನು ಜ್ಞಾನದಾಹ ಎಂಬುದಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಅಂದರೆ ಈ ದಾಹವೇ ಹೊಸಹೊಸ ಆವಿಷ್ಕಾರಗಳಿಗೆ ನಾಂದಿಹಾಡಿದೆ. ಒಂದು ಅರ್ಥದಲ್ಲಿ ಈ ಜ್ಞಾನ ವಿಸ್ತರಣೆಯೇ ವಿಜ್ಞಾನದ ಉಗಮ, ಬೆಳವಣಿಗೆಗೆ ಮೂಲವಲ್ಲವೇ? ವಿಜ್ಞಾನ, ಬದುಕು ಇವುಗಳ ನಡುವೆ ಡಿವಿಜಿಯವರು ಸಮರಸದ ಕೊಂಡಿಯನ್ನು ಬೆಸೆಯುತ್ತಲೇ ಹೋಗುತ್ತಾರೆ. ನೆಮ್ಮದಿಯ ಬಾಳಿಗೆ ದಾರಿ ತೋರುತ್ತಾರೆ. ಋಷಿ ವಾಕ್ಯ (ಅಧ್ಯಾತ್ಮ), ವಿಜ್ಞಾನ, ಕಲೆಗಳೆಲ್ಲವೂ (ಸಂಸ್ಕೃತಿ) ಸುಗಮ ಜೀವನಕ್ಕೆ ಅಗತ್ಯವಾದ ಅಂಶಗಳು ಎನ್ನುತ್ತಾರೆ. ‘ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು’ ಬಾಳಿನ ಧರ್ಮವಾಗಬೇಕು ಎಂದು ಆಶಿಸುತ್ತಾರೆ. ಈ ಮೂಲಕ ಆರೋಗ್ಯಕರ ಸಮಾಜದ ಅಗತ್ಯತೆಯನ್ನು ಪ್ರತಿಪಾದಿಸುತ್ತಾರೆ.

ವಿಜ್ಞಾನ ಕುರಿತಂತೆ ಡಿವಿಜಿ ಸಾಕಷ್ಟು ಚಿಂತನೆ ನಡೆಸಿದ್ದಾರೆ. ‘ಗಿಣಿಯೋದು ಪುಸ್ತಕ ಜ್ಞಾನ; ನಿನ್ನನುಭವವೇ ನಿನಗೆ ಧರುಮದ ದೀಪ’ ಎನ್ನುತ್ತಲೇ ಇಂದ್ರಿಯ ಅನುಭವಕ್ಕೆ ದಕ್ಕುವುದೇ ಸತ್ಯ, ಮಿಕ್ಕೆಲ್ಲವುಗಳು ನಂಬಿಕೆಗೆ ಅನರ್ಹವೆಂಬ ವಿಜ್ಞಾನದ ಮೂಲ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ವಿಜ್ಞಾನದ ಕಾರ್ಯವೆಂದರೆ ಈ ಪ್ರಪಂಚವನ್ನು ಕುರಿತ ಪ್ರಶ್ನೆ, ಪರೀಕ್ಷೆ, ಶೋಧನೆ; ಅಂದರೆ ಏಕೆ ಹೇಗೆ ಎಂಬ ಹುಡುಕಾಟ. ಈ ಹುಡುಕುವ ಫಲವಾಗಿ ದೊರೆತ ಜ್ಞಾನವೇ ವಿಜ್ಞಾನ. ಕುರುಡು ನಂಬಿಕೆಯಾಗದೆ ಸ್ವತಂತ್ರ ವಿಚಾರ ವಿಮರ್ಶೆಗಳಿಂದ ಬಂದ ಜ್ಞಾನವೇ ವಿಜ್ಞಾನ ಎನ್ನುತ್ತಾರೆ. ವಿಜ್ಞಾನ ಶಾಸ್ತ್ರ ಬಹು ವಿಸ್ತಾರವಾದದ್ದು, ಇದು ನಿರ್ಭಯವೂ ನಿಷ್ಪಕ್ಷಪಾತವೂ ಆಗಿರಬೇಕಲ್ಲದೆ ಸತ್ಯಾನ್ವೇಷಣೆಯೇ ಇದರ ಅಂತಿಮ ಗುರಿಯಾಗಬೇಕು ಎನ್ನುತ್ತಾರೆ. ಪ್ರಕೃತಿ ವಿಜ್ಞಾನ, ಸಮಾಜ ವಿಜ್ಞಾನಗಳ ನಡುವೆ ಸ್ಪಷ್ಟ ವ್ಯತ್ಯಾಸಗಳನ್ನು ಗುರುತಿಸುವ ಡಿವಿಜಿಯವರು ವಿಜ್ಞಾನದ ಪರಿಭಾಷೆಯನ್ನು ಆಧ್ಯಾತ್ಮಿಕ ಪರಿಭಾಷೆಗೆ ಅನ್ವಯಿಸುವ ಪ್ರಯತ್ನ ಮಾಡುತ್ತಾರೆ. ವಿಜ್ಞಾನ, ಅಧ್ಯಾತ್ಮ, ತತ್ವಶಾಸ್ತ್ರ ಈ ಮೂರರ ಗುರಿಯೂ ಅಂತಿಮವಾಗಿ ಸತ್ಯಾನ್ವೇಷಣೆಯೇ ಆಗಿದೆ ಎಂಬ ಅಂಶವನ್ನು ಒತ್ತಿ ಹೇಳುತ್ತಾರೆ.

‘ಜೀವನ ಸೌಂದರ್ಯ ಮತ್ತು ಸಾಹಿತ್ಯ’ ಕೃತಿಯಲ್ಲಿ ವಿಜ್ಞಾನದ ಧರ್ಮ ಕುರಿತು ವಿಶ್ಲೇಷಿಸುತ್ತಾರೆ. ವಿಜ್ಞಾನ ನೀಡುವ ಯಾವುದೇ ತೀರ್ಮಾನಗಳನ್ನು ‘ಮಾನವ ಪ್ರಯತ್ನವಾದ’ ಎನ್ನುವ ಗುಂಡಪ್ಪನವರು ಇದರಿಂದ ಲಭಿಸುವ ಅನುಕೂಲಗಳೇ ಸರ್ವಸ್ವವಲ್ಲ, ಇವು ಕೇವಲ ಯಂತ್ರ ಸಂಧಾನಗಳ ನಿರ್ಮಾಣ. ವಾಸ್ತವವಾಗಿ ಪರೀಕ್ಷೆ, ಸಂಶೋಧನೆ, ಸ್ವತಂತ್ರ ಆಲೋಚನೆ, ವಿಚಾರವಾದ, ವಿಮರ್ಶನ ಪದ್ಧತಿ, ಶೋಧನಬುದ್ಧಿಗಳೇ ವಿಜ್ಞಾನದ ಜೀವಾಳ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಇದೇ ಪ್ರಜಾರಾಜ್ಯ ಯಂತ್ರದ ಚಾಲಕ ಶಕ್ತಿ ಎಂತಲೂ ಅಭಿಪ್ರಾಯಪಡುತ್ತಾರೆ. ದೈವಸಹಾಯಕ್ಕಿಂತಲೂ ಮಾನವ ಪ್ರಯತ್ನವೇ ಬಹು ಮುಖ್ಯ ಎಂಬ ಅಂಶವನ್ನು ಅವರು ಒಂದು ಸಣ್ಣ ಕಥೆಯ ಮೂಲಕ ಮಾರ್ಮಿಕವಾಗಿ ವಿವರಿಸುತ್ತಾರೆ.

ಜನರನ್ನು ಸಾಗಿಸುತ್ತಿದ್ದ ದೋಣಿಯೊಂದರಲ್ಲಿ ಬಿರುಕುಬಿಟ್ಟು ನೀರು ತುಂಬಿಕೊಳ್ಳಲಾರಂಭಿಸಿದಾಗ ದೋಣಿಯಲ್ಲಿದ್ದ ಜನ ಆತಂಕಗೊಂಡು ಜತೆಯಲ್ಲಿದ್ದ ಪಾದ್ರಿಯನ್ನು ಕುರಿತು ದೇವರನ್ನು ಪ್ರಾರ್ಥಿಸುವುದರ ಮೂಲಕ ನಮ್ಮನ್ನು ಈ ಸಂಕಷ್ಟದಿಂದ ಕಾಪಾಡಿ ಎಂದು ಬೇಡಿಕೊಳ್ಳುತ್ತಾರೆ. ಇದಕ್ಕೆ ವಾಸ್ತವತೆಯ ಅರಿವಿದ್ದ ಪಾದ್ರಿ ಅನುಸರಿಸುವ ಉಪಾಯ ಸ್ವಾರಸ್ಯವಾಗಿದೆ. ಪಾದ್ರಿ ಜನರಿಗೆ ಸಾಂತ್ವನ ಹೇಳುತ್ತ ‘ಒಂದು ಕೆಲಸ ಮಾಡಿ, ಕೆಲವರು ದೋಣಿಯಿಂದ ನೀರನ್ನು ಹೊರಕ್ಕೆ ಪಂಪ್ ಮಾಡುತ್ತಿರಲಿ, ಮತ್ತೆ ಕೆಲವರು ದೇವರನ್ನು ಕುರಿತು ನನ್ನೊಂದಿಗೆ ಪ್ರಾರ್ಥಿಸಿ’ ಎಂದು ಹೇಳುತ್ತಾರೆ. ಅದಕ್ಕೆ ಅವರು ನೀಡುವ ಸಂದೇಶ ‘ಪಂಪಿಸಿ; ಪ್ರಾರ್ಥಿಸಿ’. ಇವೆರಡೂ ಒಟ್ಟಿಗೆ ಆದಲ್ಲಿ ಮಾತ್ರ ಜೀವ ಉಳಿಸಿಕೊಳ್ಳಬಹುದು ಎಂಬ ಮಾತಿನಲ್ಲಿ ಸ್ವಪ್ರಯತ್ನಕ್ಕೆ ನೀಡಬೇಕಾದ ಆದ್ಯತೆ ವ್ಯಕ್ತವಾಗುತ್ತದೆ. ಇಲ್ಲಿ ಒಂದು ನಂಬಿಕೆಯಾದರೆ ಮತ್ತೊಂದು ವಾಸ್ತವ ಎನಿಸಿಕೊಳ್ಳುತ್ತದೆ.

ಇದೇ ಕೃತಿಯಲ್ಲಿ ಡಿವಿಜಿ ಇನ್ನೂ ಅನೇಕ ವಿಚಾರಗಳ ಕುರಿತು ಮಾತಾಡುತ್ತಾರೆ. ನಮ್ಮ ಸಮಾಜದಲ್ಲಿನ ಅನೇಕ ಅನಿಷ್ಟ ಪದ್ಧತಿಗಳ ಕುರಿತು ಪಾಶ್ಚಾತ್ಯರಂತೆ ನಾವು ಮುಕ್ತ ವಿಮರ್ಶೆ, ಚರ್ಚೆಯನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಹಿಂದಿನಿಂದ ಬಂದ ಅನೇಕ ಶಕ್ತಿಗಳು ಈ ಆಲೋಚನೆಗಳಿಂದ ನಮ್ಮನ್ನು ಹಿಂದಕ್ಕೆ ಎಳೆಯುತ್ತವೆ. ನಮ್ಮ ಧರ್ಮದಲ್ಲಿ ಎಷ್ಟೋ ಪ್ರಭೇದ, ವಿಭೇದಗಳಿವೆ. ಇವುಗಳಲ್ಲಿ ಜಳ್ಳು, ಗಟ್ಟಿ ಭಾಗಗಳನ್ನು ನಿರ್ಧರಿಸಬೇಕಾದ ಅಗತ್ಯತೆ ಇದೆ. ನಾವು ಇಂತಹ ವಿವೇಚನೆಗಳನ್ನು ನಿರ್ಭಯವಾಗಿ ಮಾಡುವಂತಾಗಬೇಕೆಂದು ಕರೆ ನೀಡುತ್ತಾರೆ. ಆದರೆ ನಾವು ಈ ನಿಟ್ಟಿನಲ್ಲಿ ನಮ್ಮ ಹೇಡಿತನವನ್ನು ಪ್ರದರ್ಶಿಸುತ್ತಿದ್ದೇವೆ; ಇದು ನಮ್ಮ ಬುದ್ಧಿಭೀರುತನ (ಇಂಟಲೆಕ್ಚುಯಲ್ ಕವರ್ಡೈಸ್) ಎಂದೇ ಜರಿಯುತ್ತಾರೆ. ಹಾಗೂ ಇಂತಹ ಮನೋಭಾವವನ್ನು ವಿಜ್ಞಾನದಿಂದಲೇ ತೊಲಗಿಸಬಹುದಾಗಿದೆಯೆಂದು ಸ್ಪಷ್ಟವಾಗಿ ಅಭಿಪ್ರಾಯಿಸುತ್ತಾರೆ. ಗೀತೋಪದೇಶದಲ್ಲಿ ಕೃಷ್ಣ ಅರ್ಜುನನಿಗೆ ಇಂತಹುದೇ ಸಂದರ್ಭವೊಂದರ ಪ್ರಶ್ನೆಗೆ ಉತ್ತರಿಸುತ್ತ ಕಾಲಕಾಲಕ್ಕೆ ನಮ್ಮ ಆಚಾರ, ಸಂಪ್ರದಾಯಗಳನ್ನು ಸ್ವತಂತ್ರ ವಿಮರ್ಶೆಗೆ ಒಳಗಾಗಿಸಬೇಕು ಎನ್ನುವ ಮಾತುಗಳನ್ನು ಒತ್ತಿ ಹೇಳುತ್ತಾರೆ.

ತದ್ವಿದ್ದಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ||

ವಿಮೃಶ್ಯೈತದಷೇಣ ಯಥೇಚೃಸಿ ತಥಾ ಕುರು||

ನಾವು ವಿಜ್ಞಾನವನ್ನು ನಮ್ಮ ಸದ್ಯದ ಅನುಕೂಲಗಳಿಗಾಗಿ ಮಾತ್ರ ಅನ್ವಯಿಸುತ್ತಿದ್ದು ವೈಜ್ಞಾನಿಕ ಮನೋಭಾವವಿಲ್ಲದ ಅದು ಕೇವಲ ‘ಅರ್ಧವಿಜ್ಞಾನ’ ಎಂದೇ ಕರೆಯುವ ಡಿವಿಜಿ ಇದು ಉತ್ತಮ ಸಮಾಜದ ಬೆಳವಣಿಗೆಗೆ ಎಂದೂ ಮಾರಕ ಎನ್ನುತ್ತಾರೆ. ‘ಏನೇನೊ ನಡೆದಿಹುದು ವಿಜ್ಞಾನ ಸಂಧಾನ; ಮನುಷ್ಯ ಬಾಂಧವ್ಯವೊಂದು ಮುರಿದಿಹುದು’ ಎನ್ನುತ್ತಲೇ ಇಂತಹ ವಿಜ್ಞಾನ ಸಂಧಾನಗಳಿಂದ ಬದುಕಿನ ಮೂಲಭೂತ ಅಗತ್ಯವಾದ ಮಾನವ ಸಂಬಂಧಗಳೇ ಮುರಿದುಬೀಳುತ್ತವೆ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ. ಮಂಕುತಿಮ್ಮನ ಕಗ್ಗದಲ್ಲಿ ಮರವೊಂದನ್ನು ಅರ್ಥ ಮಾಡಿಕೊಳ್ಳಲು ಅದರ ಬುಡವನ್ನೇ ಕೀಳುವ ನಮ್ಮ ಬೋಧನಾ ವಿಧಾನವು ನಮ್ಮ ಬದುಕಿನ ತಳಹದಿಯನ್ನೇ ನಾಶಪಡಿಸುವುದೆಂದು ಅರ್ಥೈಸುವ ಅವರು ನಮ್ಮ ಮುಂದಿನ ಬದುಕಿನ ಹಾದಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಇಷ್ಟೆಲ್ಲವನ್ನೂ ಹೇಳುತ್ತಲೇ ತಾವು ಕವಿಯೂ ಅಲ್ಲ, ವಿಜ್ಞಾನಿಯೂ ಅಲ್ಲ, ಆದರೆ ಕೇವಲ ಒಬ್ಬ ಹುಡುಕಾಟದ ವ್ಯಕ್ತಿ (ತಾರಾಡಿ) ಎಂದು ಹೇಳಿಕೊಳ್ಳುವ ಮೂಲಕ ತಾವೂ ವೈಜ್ಞಾನಿಕ ಸತ್ಯಾನ್ವೇಷಣೆಯ ಪ್ರತಿಪಾದಕರೆಂಬುದನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಡಿವಿಜಿಯವರ ಇಂತಹ ಅನೇಕ ಖಚಿತ ಮಾತುಗಳು ಅವರ ವೈಚಾರಿಕ ಪ್ರಜ್ಞೆಯನ್ನು ಸಮರ್ಥವಾಗಿ ಬಿಂಬಿಸುತ್ತವೆ ಹಾಗೂ ಅವರನ್ನು ಕುರಿತು ಇನ್ನೂ ವಿಭಿನ್ನವಾಗಿ ಆಲೋಚಿಸಲು ಪ್ರೇರೇಪಿಸುತ್ತವೆ.

ಪ್ರಸ್ತುತ ವೈಯಕ್ತಿಕ ಮನೋಧರ್ಮಕ್ಕೆ ಅನುಗುಣವಾಗಿಯೇ ವ್ಯಕ್ತವಾಗುವ ಅನೇಕ ಸಾಹಿತ್ಯಕ ಮೌಲ್ಯನಿರ್ಧಾರಗಳು, ಮಾನದಂಡಗಳು, ಹೊಸದರಲ್ಲಿ ಹೊಸದನ್ನು ಹುಡುಕುವ ಧೋರಣೆಗಳು ಅನೇಕ ವೇಳೆ ಇಂತಹ ಕೆಲವು ಶ್ರೇಷ್ಠ ಚಿಂತನೆಗಳನ್ನೂ ಅನಾದರಕ್ಕೆ ಎಡೆಮಾಡಿರುವ ಸಂದರ್ಭಗಳನ್ನು ನಾವು ಇಂದು ಕಾಣುತ್ತಿದ್ದೇವೆ. ಡಿವಿಜಿ ಅವರನ್ನು ನಾವು ಇಂದು ಸಮಗ್ರವಾಗಿ ಚರ್ಚಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಇಂತಹ ಸಮಷ್ಟಿ ಪ್ರಜ್ಞೆಯುಳ್ಳ ಚಿಂತನೆಗಳನ್ನು ಮರೆಮಾಚಿ ಅವರನ್ನು ಕೇವಲ ಆಧ್ಯಾತ್ಮಿಕ ಬದುಕಿನ ವಕ್ತಾರರನ್ನಾಗಿಸಿಬಿಡುವ ಅಪಾಯವಿದೆ. ಈ ಸಾಂಸ್ಕೃತಿಕ ಅನಾದರ ಮುಂದೊಮ್ಮೆ ಅವರನ್ನು ಹರಿಕಥೆ, ಪ್ರವಚನ ಮಂದಿರಗಳಿಗೆ ಸೀಮಿತಗೊಳಿಸಿಬಿಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT