ಗಾಯಕಿ ಅರೆಥಾ ಫ್ರಾಂಕ್ಲಿನ್: ನೋವಿನ ಸಸಿಯ ಗಾನಕುಸುಮ!

7

ಗಾಯಕಿ ಅರೆಥಾ ಫ್ರಾಂಕ್ಲಿನ್: ನೋವಿನ ಸಸಿಯ ಗಾನಕುಸುಮ!

Published:
Updated:

ಆರು ವರ್ಷ ತುಂಬಿತ್ತಷ್ಟೆ; ಅಪ್ಪ–ಅಮ್ಮ ಬೇರೆಯಾದರು. ಅಪ್ಪನ ಬಳಿಯೇ ಅಮ್ಮ ಬಿಟ್ಟುಹೋದಳು. ನಾಲ್ಕೇ ವರ್ಷದ ನಂತರ ಆ ತಾಯಿ ಹೃದಯಾಘಾತದಿಂದ ತೀರಿಹೋದಳು.

ಇದೇ ಮಗಳು ಗರ್ಭಿಣಿಯಾಗಿದ್ದಾಳೆಂದು ಶಾಲಾ ಶಿಕ್ಷಕಿಗೆ ಗೊತ್ತಾದದ್ದೇ ಹೊರಹಾಕಿದರು. ಮೊದಲ ಮಗುವಿಗೆ ಜನ್ಮವಿತ್ತಾಗ ಹದಿಮೂರನೇ ಹುಟ್ಟುಹಬ್ಬಕ್ಕಿನ್ನೂ ಎರಡು ತಿಂಗಳು ಬಾಕಿ. ಇನ್ನೆರಡೇ ವರ್ಷ, ಎರಡನೇ ಸಲ ತಾಯಿಯಾಗುವ ಸಂಭ್ರಮ; ಈ ಬಾರಿ ತಂದೆ ಬೇರೆ. ಹೀಗೆ ಘಾಟ್ ರಸ್ತೆಯಂಥ ತಿರುವುಗಳಿರುವ ಬದುಕಿನ ಗಾಯಕಿ ಅರೆಥಾ ಫ್ರಾಂಕ್ಲಿನ್. ಕಳೆದ ಗುರುವಾರ (ಆಗಸ್ಟ್ 16) ಅಮೆರಿಕದ ಡೆಟ್ರಾಯಿಟ್‌ನಲ್ಲಿ ಕಣ್ಮುಚ್ಚಿದಾಗ ಈ ಮಹಾನ್ ಗಾಯಕಿಗೆ 76 ವರ್ಷ. ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಅವರನ್ನು ತೆಗೆದುಕೊಂಡು ಹೋಯಿತು.

ಹದಿನೆಂಟು ಗ್ರ್ಯಾಮಿ ಪ್ರಶಸ್ತಿಗಳು, ಹದಿನೇಳು ಟಾಪ್ ಟೆನ್ ಪಾಪ್ ಸಿಂಗಲ್ಸ್ (ಏಕಗೀತೆಗಳು), 100 ರಿದಮ್ ಅಂಡ್ ಬ್ಲೂ (ಆರ್ ಅಂಡ್ ಬಿ) ಪ್ರವೇಶಿಕೆ-–ಇವಿಷ್ಟೂ ಪಾಶ್ಚಾತ್ಯ ಸಂಗೀತದ ಜನಪ್ರಿಯ ಹಾಗೂ ದಿಗ್ಗಜರ ಸಾಲಿನಲ್ಲಿ ಎದ್ದುಕಾಣುವ ವನಿತೆ ಎಂಬ ಗೌರವವನ್ನು ಅರೆಥಾ ಅವರಿಗೆ ದಕ್ಕಿಸಿಕೊಟ್ಟವು. ಅವರಷ್ಟು ದೀರ್ಘಾವಧಿ ವಿಶ್ವ ಸಂಗೀತ ಕ್ಷೇತ್ರದಲ್ಲಿ ಮೆರೆದ ಹೆಣ್ಣುಮಕ್ಕಳು ಅತಿ ವಿರಳ ಎನ್ನಬೇಕು.

ಹುಟ್ಟಿದ್ದು 1942ರಲ್ಲಿ. ಅಮ್ಮ ಬಾರ್ಬರಾ ಸಿಗ್ಗರ್ಸ್ ಫ್ರಾಂಕ್ಲಿನ್ ಗಾಸ್ಪಲ್ (ಏಸು ಕ್ರಿಸ್ತನಿಗೆ ಸಂಬಂಧಿಸಿದ ಗೀತಗಾಯನ) ಗಾಯಕಿ. ಪಿಯಾನೊ ವಾದಕಿಯೂ ಆಗಿದ್ದವರು. ತಂದೆ ಸಿ.ಎಲ್. ಫ್ರಾಂಕ್ಲಿನ್ ಚರ್ಚ್‌ನಲ್ಲಿ ಧರ್ಮಗುರು. ಅದಕ್ಕೇ ಮೆಂಫಿಸ್‌ನಿಂದ ನ್ಯೂಯಾರ್ಕ್ ಹಾಗೂ ಅಲ್ಲಿಂದ ಡೆಟ್ರಾಯಿಟ್‌ಗೆ ಸ್ಥಳಾಂತರಗೊಂಡದ್ದು. 1946ರಲ್ಲಿ ಸಿ.ಎಲ್. ಫ್ರಾಂಕ್ಲಿನ್ ನ್ಯೂ ಬೆಥೆಲ್ ಬ್ಯಾಪ್ಟಿಸ್ಟ್ ಚರ್ಚ್ ಸೇರಿಕೊಂಡರು. ಅಪ್ಪನೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಗಾಯಕ. ಹೀಗಾಗಿ ಅರೆಥಾ ರಕ್ತದಲ್ಲೇ ಸಂಗೀತ ಬೆರೆತುಹೋಯಿತು. ಚರ್ಚ್‌ನ ಸಮೂಹ ಗಾಯನದಲ್ಲಿ (ಕಾಯರ್) ಕಂಠ ಪಳಗಿಸಿಕೊಂಡ ಅವರು ಅತಿ ಚಿಕ್ಕ ವಯಸ್ಸಿನಲ್ಲೇ ಬಹುಕಂಠಗಳ ನಡುವೆಯೇ ತಮ್ಮ ಛಾಪನ್ನು ಎದ್ದುಕೇಳುವಂತೆ ಮಾಡಿದರು. ಹನ್ನೆರಡನೇ ವಯಸ್ಸಿನಲ್ಲೇ ಅಪ್ಪನ ಜತೆ ಸಂಗೀತಕ್ಕಾಗಿ ಟೂರ್ ಹೊಡೆದುದರಿಂದ ಸಿಕ್ಕ ಫಲವಿದು.

‘ಸೆಕ್ಯುಲರ್ ಮ್ಯೂಸಿಕ್’ನಲ್ಲಿ ವೃತ್ತಿಬದುಕು ರೂಪಿಸಿಕೊಳ್ಳಬೇಕೆಂದು ಅರೆಥಾ ಸಂಕಲ್ಪ ಮಾಡಿದ್ದು 1950ರ ದಶಕದ ಕೊನೆಯಲ್ಲಿ. ಆಗ ತಮ್ಮ ಮಕ್ಕಳನ್ನು ಡೆಟ್ರಾಯಿಟ್‌ನಲ್ಲೇ ಬಿಟ್ಟು ನ್ಯೂಯಾರ್ಕ್‌ಗೆ ಹೊರಟುಬಿಟ್ಟರು. ಕೊಲಂಬಿಯಾ ರೆಕಾರ್ಡ್ಸ್ ಕಂಪನಿಯ ಕಾರ್ಯನಿರ್ವಾಹಕ ಜಾನ್ ಹ್ಯಾಮಂಡ್ 1960ರಲ್ಲಿ ಸಹಿ ಹಾಕುವಂತೆ ಒಪ್ಪಂದ ಪತ್ರವನ್ನು ಮುಂದಿಟ್ಟಾಗ ಅರೆಥಾ ಅವರಿಗಿನ್ನೂ ಹದಿನೆಂಟರ ಪ್ರಾಯ. ಜಾಸ್ ಗಾಯಕಿಯ ಲಕ್ಷಣವನ್ನು ಅವರಲ್ಲಿ ಗುರುತಿಸಿದವರು ಹ್ಯಾಮಂಡ್. ಪಿಯಾನಿಸ್ಟ್ ರೇ ಬ್ರಯಾಂಟ್ ಅವರ ಸಣ್ಣ ತಂಡದ ವಾದ್ಯದೊಂದಿಗೆ ಬೆಸೆದ ಸ್ವರ ಸಂಯೋಜನೆಗೆ ಮೊದಲು ಅವರು ಅರೆಥಾ ಅವರಿಂದ ಹಾಡಿಸಿದರು. ಒಂದೇ ವರ್ಷದಲ್ಲಿ ‘ಟುಡೇ ಐ ಸಿಂಗ್ ದ ಬ್ಲೂಸ್’ ಹಾಗೂ ‘ವೋಂಟ್ ಬಿ ಲಾಂಗ್’ ಹಾಡುಗಳು ಆರ್ ಅಂಡ್ ಬಿ ಟಾಪ್ ಟೆನ್ ಹಾಡುಗಳಲ್ಲಿ ಪಟ್ಟಿಗಳನ್ನು ಸೇರಿದವು. ‘ದಿ ಎಲೆಕ್ಟ್ರಿಫಯಿಂಗ್ ಅರೆಥಾ ಫ್ರಾಂಕ್ಲಿನ್’ ಅವರ ಎರಡನೇ ಆಲ್ಬಂ. ಅದರಲ್ಲಿನ ಜಾಸ್ ಗುಣ ವಿಶ್ವದರ್ಜೆಯದ್ದಾಗಿತ್ತಲ್ಲದೆ ದೊಡ್ಡ ದೊಡ್ಡ ಬ್ಯಾಂಡ್‌ಗಳ ವಾದ್ಯ ಸಂಯೋಜನೆಯೂ ಇತ್ತು.

ನೆತಾಲಿ ಕೋಲ್, ವಿಟ್ನಿ ಹೌಸ್ಟನ್‌, ಮರಿಯಾ ಕ್ಯಾರೆ, ಅಲಿಸಿಕಾ ಕೀಸ್ ಈ ಗಾಯಕಿಯನ್ನೇ ಅನುಕರಿಸಿ ಹಾಡುತ್ತಲೇ ತಮ್ಮ ವೃತ್ತಿಬದುಕು ರೂಪಿಸಿಕೊಂಡವರು. ‘ಸಾರ್ವಕಾಲಿಕ ಶ್ರೇಷ್ಠ 100 ಸಂಗೀತಗಾರರು’ ಎಂದು ‘ರೋಲಿಂಗ್‌ ಸ್ಟೋನ್’ ನಿಯತಕಾಲಿಕವು 2010ರಲ್ಲಿ ಪ್ರಕಟಿಸಿದ ಪಟ್ಟಿಯಲ್ಲಿನ ಮೊದಲ ಹೆಸರು ಅರೆಥಾ.

‘ಅರೆಥಾ ದೇವರೇ ಕೊಟ್ಟ ಉಡುಗೊರೆ. ಹಾಡಿನ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುವುದು ಎನ್ನುತ್ತೇವಲ್ಲ, ಈ ವಿಷಯದಲ್ಲಿ ಅವರ ಹತ್ತಿರಕ್ಕೂ ಯಾರೂ ಸುಳಿಯಲಾರರು. ಮಹಿಳೆಯರು ಯಾಕೆ ಸಂಗೀತ ಕಲಿಯಬೇಕು ಎನ್ನುವುದಕ್ಕೆ ಅರ್ಥರೂಪವಾಗಿ ಬದುಕಿದವರು ಅವರು’ ಎಂದು ಅಮೆರಿಕದ ಇನ್ನೊಬ್ಬ ಜನಪ್ರಿಯ ಗಾಯಕಿ ಮೇರಿ ಜೆ. ಬ್ಲಾಯಿಜ್ ಹೊಗಳಿಕೆಯ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ನುಡಿಯೇ ಅರೆಥಾ ಸಂಗೀತ ಶಕ್ತಿಗೆ ಕನ್ನಡಿ ಹಿಡಿಯುತ್ತದೆ.

‘ಕ್ವೀನ್ ಆಫ್ ಸೋಲ್’ (ಆತ್ಮದ ರಾಣಿ) ಎನ್ನುವುದು ಅವರಿಗೆ ಸಂಗೀತ ತಂದುಕೊಟ್ಟ ಬಿರುದು. ವೈಯಕ್ತಿಕ ಬದುಕಿನಲ್ಲಿ ಪದೇ ಪದೇ ಮಡುಗಟ್ಟುತ್ತಿದ್ದ ನೋವೇ ಅವರೊಳಗಿನ ನಾದದಲೆಗಳನ್ನು ಎಬ್ಬಿಸಿತೆನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ. ಅಮ್ಮನ ಪ್ರೀತಿಯೇ ಇಲ್ಲದೆ ಬೆಳೆದ ಅವರು ಮೊದ ಮೊದಲು ಮಮಕಾರ ಹುಡುಕುವ ದನಿಯನ್ನು ಹಾಡುಗಳಲ್ಲಿ ಹೊಮ್ಮಿಸಿದರು. ಎರಡು ಬಾರಿ ವಿವಾಹ ವಿಚ್ಛೇದನ. ಕಾನೂನಿನ ಹೋರಾಟಗಳ ಸುಳಿಗೂ ಸಿಲುಕಿ ಆಗೀಗ ನಲುಗಿದ್ದೂ ಉಂಟು. 1979ರಲ್ಲಿ ದರೋಡೆಕೋರರು ಅಪ್ಪನಿಗೆ ಗುಂಡಿಕ್ಕಿದರು. ಐದು ವರ್ಷ ಅವರು ಅರೆಪ್ರಜ್ಞಾವಸ್ಥೆಯಲ್ಲಿ ನರಳಿ ಅಸುನೀಗಿದರು. ‘ಎಬೊನಿ’ ನಿಯತಕಾಲಿಕೆಯ ಪ್ರಕಾರ ಅರೆಥಾಗೆ ನಾಲ್ವರು ಗಂಡುಮಕ್ಕಳು. ಆಡುತ್ತಿದ್ದುದು ಬಿಂದಾಸ್ ಮಾತು. ಒಮ್ಮೆ ಯಾರೋ ಪತ್ರಕರ್ತರು, ‘ನಿಮ್ಮ ಡಯೆಟ್‌ ಏನು’ ಎಂಬ ಪ್ರಶ್ನೆ ಹಾಕಿದಾಗ, ‘ಸಣ್ಣಗಿರುವ, ಚುರುಕು ಕಂಗಳ ಯುವಕರು’ ಎಂದು ಕಣ್ಣುಮಿಟುಕಿಸಿದ್ದರು.


ಅರೆಥಾ ಫ್ರಾಂಕ್ಲಿನ್

‘ಅಮೆರಿಕನ್ ಅನುಭವ ಎಂಬ ಹೊಸ ಬಗೆಯನ್ನು ಕಟ್ಟಿದ ಗಟ್ಟಿಗಿತ್ತಿ ಅರೆಥಾ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೊಗಳಿದ್ದರು. ಅವರು ಗಟ್ಟಿಗಿತ್ತಿ ಎನ್ನಲು ಕಾರಣಗಳು ದಂಡಿಯಾಗಿ ಸಿಗುತ್ತವೆ. ಡಿಸ್ಕೊ ಸಂಗೀತದ ಹೊಸ ಅಲೆ ಎದ್ದಾಗ 1960ರ ದಶಕದ ಅರೆಥಾ ಖದರು 1970ರ ಕೊನೆಯಲ್ಲಿ ತಗ್ಗುತ್ತಾ ಹೋಯಿತು. 1980ರ ದಶಕದಲ್ಲಿ ತಮ್ಮದೇ ಸಂಗೀತದ ಪುನರುತ್ಥಾನ ಎನ್ನುವಂತೆ ಅವರು ಪುಟಿದೆದ್ದರು. ಕುಸಿದಂತೆ ಭಾಸವಾದಾಗಲೆಲ್ಲ ಅವರ ನೆರವಿಗೆ ಬಂದದ್ದೇ ‘ಗಾಸ್ಪಲ್’ ಬೇರುಗಳು. ಪಾಪ್, ಜಾಸ್, ಆರ್‌ ಅಂಡ್‌ ಬಿ ಸಂಗೀತದ ಗಾಳಗಳ ಹೊರತಾಗಿಯೂ ‘ಅಮೇಜಿಂಗ್ ಗ್ರೇಸ್’ (1972), ‘ಒನ್‌ ಲಾರ್ಡ್, ಒನ್‌ ಫೇತ್‌, ಒನ್‌ ಬ್ಯಾಪ್ಟಿಸಂ’ (1987) ಆಲ್ಬಂಗಳನ್ನು ನ್ಯೂ ಬೆಥೆಲ್ ಚರ್ಚ್‌ನಲ್ಲೇ ರೆಕಾರ್ಡ್‌ ಮಾಡಿದರು. ತಮ್ಮನ್ನು ತಾವು ಚಾರ್ಜ್‌ ಮಾಡಿಕೊಳ್ಳುವ ದಾರಿ ಅದು ಎಂದು ಅವರೇ ಹೇಳಿಕೊಂಡಿದ್ದರು.

‘ಹೂ ಈಸ್‌ ಝೂಮಿನ್ ಹೂ’ 1980ರ ದಶಕದಲ್ಲಿ ಅವರಿಗೆ ಮರುಜೀವ ನೀಡಿದ ಆಲ್ಬಂ. ‘ಫ್ರೀ ವೇ ಆಫ್ ಲವ್’ ಅವರಿಗೆ ಮಗದೊಂದು ಗ್ರ್ಯಾಮಿ ಒಲಿಯುವಂತೆ ಮಾಡಿದ ಗೀತೆ. ಅಲ್ಲಿಂದ ಇನ್ನೊಂದು ದಶಕ ಅವರ ಆತ್ಮಸುಖದ ಗಾನಸುಧೆಯಲ್ಲಿ ಮಿಂದ ರಸಿಕರಿಗೆ ಲೆಕ್ಕವಿಲ್ಲ.

ನೋವನ್ನೇ ಬಸಿದು ಹಾಡುತ್ತಿದ್ದ ಅರೆಥಾ 2010ರಲ್ಲಿ ಎರಡು ಕಛೇರಿಗಳನ್ನು ರದ್ದುಪಡಿಸಿದರು. ದೇಹ ವಿಪರೀತ ಸ್ಥೂಲವಾಗಿತ್ತು. ಹೊಟ್ಟೆಯಲ್ಲಿ ಪದೇ ಪದೇ ನೋವು. ಒಂದು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಅವರು ತಮ್ಮ ಗೀತೆಗಳಿಗೆ ಉಸಿರು ಕೊಟ್ಟರು. 2014ರಲ್ಲಿ ನ್ಯೂಯಾರ್ಕ್‌ನಲ್ಲಿ ಭರ್ಜರಿ ಕಛೇರಿ ನಡೆಸಿಕೊಟ್ಟರು.

‘ಎ ಬ್ರ್ಯಾಂಡ್‌ ನ್ಯೂ ಮಿ’ ಎನ್ನುವುದು ಅವರ ಕೊನೆಯ ಆಲ್ಬಂ. ವಿಪರೀತ ದಪ್ಪ ಆದಮೇಲೆ ಅವರು ತಮ್ಮ ವಾರ್ಡ್‌ರೋಬಿನ ಬಟ್ಟೆಗಳನ್ನೆಲ್ಲ ಒಮ್ಮೆ ಹೊರಹಾಕಿದರು. ಹೊಸ ಬಟ್ಟೆ ಖರೀದಿಸಿ, ಅವನ್ನು ಧರಿಸಿ, ಕನ್ನಡಿ ಮುಂದೆ ಬಗೆ ಬಗೆಯ ಕೋನಗಳಲ್ಲಿ ನೋಡಿಕೊಂಡು, ‘ನಾನೀಗ ಸಹಜ ಪುಷ್ಕಳ ಸುಂದರಿ’ ಎಂದು ನೋವು ನುಂಗಿಕೊಂಡಿದ್ದರಂತೆ. ಅದರ ವ್ಯಕ್ತಭಾವವೇ ‘ಎ ಬ್ರ್ಯಾಂಡ್‌ ನ್ಯೂ ಮಿ’.

‘ಐ ನ್ಯೂ ಯು ವರ್ ವೇಟಿಂಗ್’–ಇದು ಅವರು ಜಾರ್ಜ್‌ ಮೈಕಲ್ ಜೊತೆ ಹಾಡಿದ ‘ಕೊನೆಯ ನಂಬರ್‌ ಒನ್’ ಯುಗಳಗೀತೆ. ಈಗಲೂ ಅದನ್ನು ಕೇಳುವ ವರ್ಗವಿದೆ. ಶಾರೀರದ ಮೂಲಕ ಅವರಿನ್ನೂ ಬದುಕಿರುವುದಕ್ಕೆ ಹೀಗೆ ಅನೇಕ ಉದಾಹರಣೆಗಳು ಸಿಗುತ್ತಲೇ ಹೋಗುತ್ತವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !