ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಏಕತೆ, ಸೌಹಾರ್ದತೆಗೆ ಶ್ರಮಿಸಿದ ಅಸ್ಗರ್ ಅಲಿ ಎಂಜಿನಿಯರ್‌

27ನೇ ವರ್ಷಕ್ಕೆ ಕಾಲಿರಿಸಿದ ಸಿಎಸ್ಎಸ್ಎಸ್ ಸಂಸ್ಥೆ
Last Updated 26 ಸೆಪ್ಟೆಂಬರ್ 2020, 7:41 IST
ಅಕ್ಷರ ಗಾತ್ರ

‘ಭಾರತ ಜಾತ್ಯಾತೀತ ರಾಷ್ಟ್ರ. ಸೌಹಾರ್ದ ಮತ್ತು ಸಹಬಾಳ್ವೆ ಎಂಬುದು ಇಲ್ಲಿ ಆಳವಾಗಿ ಬೇರೂರಿದೆ. ಕೋಮುವಾದವನ್ನು ಎಂದಿಗೂ ಮತ್ತು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದೇಶದಲ್ಲಿ ಕೋಮು ದ್ವೇಷ ಮೂಡಲು ಧರ್ಮದ ದುರ್ಬಳಕೆ ಮತ್ತು ರಾಜಕಾರಣ ಕಾರಣವೇ ಹೊರತು ನೇರವಾಗಿ ಧರ್ಮವಲ್ಲ’.

ಹೀಗೆ ಬಲವಾಗಿ ಪ್ರತಿಪಾದಿಸಿದವರು ಮತ್ತು ಅಷ್ಟೇ ದೃಢವಾಗಿ ನಂಬಿದವರು ಚಿಂತಕ ಅಸ್ಗರ್ ಅಲಿ ಎಂಜಿನಿಯರ್. ಬದುಕಿನ ಅಂತಿಮ ಕ್ಷಣಗಳವರೆಗೆ ದೇಶದ ಏಕತೆ ಮತ್ತು ಸೌಹಾರ್ದ ಪರಂಪರೆಯನ್ನು ಧ್ಯಾನಿಸಿದವರು. ಅದಕ್ಕಾಗಿ ಜೀವನ ಪರ್ಯಂತ ಶ್ರಮಿಸಿದವರು. ಬಹುತ್ವದಿಂದ ಕೂಡಿದ ಭಾರತದಲ್ಲಿ ಕೋಮು ಹೆಸರಿನಲ್ಲಿ ಗಲಭೆ ಆಗಬಾರದು ಎಂಬ ಆಶಯ ಹೊತ್ತವರು.

ಶಾಂತಿ ಮತ್ತು ಭಾತೃತ್ವಕ್ಕಾಗಿ 70ರ ಇಳಿವಯಸ್ಸಿನಲ್ಲೂ ದೇಶವ್ಯಾಪಿ ಸಂಚರಿಸಿದ ಅವರು, ‘ಎಲ್ಲರೂ ಜೊತೆಯಾಗಿ ಬಾಳಬೇಕು’ ಎಂಬ ಸಂದೇಶ ಬೋಧಿಸಿದರು. ‘ವೈವಿಧ್ಯಮಯ ಸಾಂಗತ್ಯದಲ್ಲಿ ಸಿಗುವ ಖುಷಿ ಮತ್ತು ಸಮಾಧಾನವು ಒಂದೇ ತೆರನಾದ ಬದುಕಿನಲ್ಲಿ ಸಿಗುವುದು ಕಡಿಮೆ’ ಎಂದು ತಿಳಿ ಹೇಳಿದರು.

ದಾವೂದಿ ಬೊಹ್ರಾ ಸಮುದಾಯದವರಾದ ಅವರು ಜೀವನ ಪೂರ್ತಿ ಇಸ್ಲಾಂ ಧರ್ಮದ ಕುರಿತು ಸಂಶೋಧನೆ ನಡೆಸಿದರು. ಇಸ್ಲಾಂ ತತ್ವ ಮತ್ತು ವಿಚಾರಗಳನ್ನು ಪಸರಿಸಿದರು. ‘ಭೂಮಿಯ ಮೇಲೆ ಶಾಂತಿ ಸ್ಥಾಪಿಸುವುದು ಪ್ರತಿಯೊಬ್ಬ ಮುಸ್ಲಿಂನ ಆದ್ಯ ಕರ್ತವ್ಯ. ಇದರ ಪರಿಪಾಲನೆ ಅವಶ್ಯ’ ಎಂದರು.

ಧಾರ್ಮಿಕ ಕಟ್ಟುಪಾಡುಗಳನ್ನು ಕಟುವಾಗಿ ವಿರೋಧಿಸಿದ ಅವರು ಬೊಹ್ರಾ ಸಮುದಾಯದ ಪ್ರಭಾವಿಗಳನ್ನೇ ಎದುರು ಹಾಕಿಕೊಂಡರು. ಈ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಯಿತು. ಅವರ ಕಚೇರಿಗೆ ಹಾನಿ ಮಾಡಲಾಯಿತು. ಆದರೆ, ಇದ್ಯಾವುದಕ್ಕೂ ಮಣಿಯದ ಅವರು, ‘ಮುಕ್ತ ಚಿಂತನೆಗಳನ್ನು ಬಂಧಿಸುವ ಸಂಪ್ರದಾಯ ಒಪ್ಪುವುದಿಲ್ಲ’ ಎಂದು ಬಲವಾಗಿ ಹೇಳಿದರು. ಅದರಂತೆಯೇ ನಡೆದುಕೊಂಡರು.

ಇಂದೋರ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದ ದಿನಗಳಲ್ಲೇ ಅವರಿಗೆ ಕೋಮು ಗಲಭೆಯಂತಹ ವಿಷಯಗಳು ತೀವ್ರವಾಗಿ ಕಾಡಿದವು. ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಹಿಂಸಾಚಾರದ ಸುದ್ದಿಗಳನ್ನು ಓದಿ ಆತಂಕಕ್ಕೆ ಒಳಗಾಗುತ್ತಿದ್ದ ಅವರು ಆ ದಿನಗಳಲ್ಲೇ ಧರ್ಮದ ಬಗ್ಗೆ ಅಧ್ಯಯನ ಮಾಡಲು ಆಸಕ್ತಿ ತೋರಿದರು. ಇತಿಹಾಸ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿ ಸಂಶೋಧನೆಗೆ ಮುಂದಾದರು.

ಸುದೀರ್ಘ ಮತ್ತು ಸೂಕ್ಷ್ಮ ಅಧ್ಯಯನದ ಬಳಿಕ ಅವರು ಕಂಡುಕೊಂಡ ಸತ್ಯ: ‘ದೇಶದ ಜಾತ್ಯಾತೀತ ವ್ಯವಸ್ಥೆ ಮತ್ತು ಧರ್ಮಗಳ ನಡುವೆ ಹೆಚ್ಚಿನ ವೈರುಧ್ಯಗಳಿಲ್ಲ. ಆದರೆ, ಧರ್ಮ ಎಂಬುದು ರಾಜಕೀಯ ದಾಳವಾಗಿ ಪಕ್ಷ ಅಥವಾ ಸಂಘಟನೆಯ ಸಿದ್ಧಾಂತವಾದಾಗ ಒಂದೊಂದಾಗಿ ಸಮಸ್ಯೆಗಳು ತಲೆದೋರುತ್ತವೆ’.

‘ಭಾರತವು ಸಾಂವಿಧಾನಿಕ ಮತ್ತು ರಾಜಕೀಯವಾಗಿ ಜಾತ್ಯಾತೀತ ರಾಷ್ಟ್ರ ಎಂಬುದು ನಿಸ್ಸಂಶಯ. ಸರ್ವಧರ್ಮ ಮತ್ತು ಸರ್ವಜಾತಿಗಳ ದೇಶವೂ ಹೌದು. ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯು ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ರೂಪುಗೊಂಡವೇ ಹೊರತು ಕೋಮುವಾದದಿಂದಲ್ಲ’ ಎಂಬುದನ್ನು ಅವರು ಸಾರಿ ಸಾರಿ ಹೇಳಿದರು.

ಕೋಮು ಸೌಹಾರ್ದತೆಗಾಗಿ ಶ್ರಮಿಸಿದ ಕಾರಣ 2004ರಲ್ಲಿ ಸ್ವಾಮಿ ಅಗ್ನಿವೇಶ್ ಅವರೊಂದಿಗೆ ಗೌರವಾರ್ಥವಾಗಿ ಪ್ರದಾನ ಮಾಡಲಾದ ‘ರೈಟ್‌ ಲೈವಲಿಹುಡ್ ಪ್ರಶಸ್ತಿ’ ಸ್ವೀಕರಿಸುವ ಸಂದರ್ಭದಲ್ಲಿ ಜಾತ್ಯಾತೀತತೆ ಮತ್ತು ಧರ್ಮದ ನಡುವಿನ ಸಂಬಂಧವನ್ನು ಅವರು ಇನ್ನೂ ಸರಳವಾಗಿ ಉದಾಹರಿಸಿದರು. ಅದೇ ಅವರಿಗೆ ಸ್ಫೂರ್ತಿಯಾಗಿದೆ ಎಂಬುದನ್ನು ನೆನಪಿಸಿಕೊಂಡರು.

‘ಸ್ವಾತಂತ್ರ್ಯ ಚಳವಳಿ ರೂಪಿಸಿದ ಮಹಾತ್ಮ ಗಾಂಧೀಜಿ ಧಾರ್ಮಿಕ ವ್ಯಕ್ತಿಯಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಇಸ್ಲಾಂ ವಿಚಾರಗಳ ಪರಿಪಾಲಕರಾಗಿದ್ದರು. ಆದರೆ, ಇಬ್ಬರೂ ಸಹ ಧರ್ಮವನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಬೆರೆಸಲು ಇಚ್ಛಿಸಲಿಲ್ಲ. ಕೋಮು ಸಾಮರಸ್ಯಕ್ಕೆ ಆದ್ಯತೆ ನೀಡಿದರು’ ಎಂದು ವಿವರಿಸಿದರು.

ಕೋಮುವಾದ ಮತ್ತು ಜಾತ್ಯಾತೀತವಾದ ಕುರಿತು ಸ್ಪಷ್ಟ ಅಭಿಪ್ರಾಯ ಹೊಂದಿದ್ದ ಅವರನ್ನು, ‘ದೇಶದಲ್ಲಿ ನಿಧಾನವಾಗಿ ವ್ಯಾಪಿಸುತ್ತಿದ್ದ ಅಸಹಿಷ್ಣುತೆ’ ಇನ್ನಷ್ಟು ಕಳವಳಕ್ಕೀಡು ಮಾಡಿತು. ಕೋಮುವಾದದ ವಿರುದ್ಧ ಹೋರಾಟವನ್ನು ಜೀವನದ ಗುರಿ ಆಗಿಸಿಕೊಂಡ ಅವರು ಅದಕ್ಕಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಜನನ, ಶಿಕ್ಷಣ

ರಾಜಸ್ತಾನದ ಸಾಲಂಬರ್‌ನಲ್ಲಿ 1939ರ ಮಾರ್ಚ್‌ 10ರಂದು ಜನಿಸಿದ ಅಸ್ಗರ್ ಅಲಿ ಅವರು ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದರು. ಬಾಂಬೆ ನಗರಸಭೆಯಲ್ಲಿ 20 ವರ್ಷ ಎಂಜಿನಿಯರ್‌ರಾಗಿದ್ದ ಅವರು 1973ರಲ್ಲಿ ಸ್ವಯಂ–ನಿವೃತ್ತಿ ಪಡೆದು ಬೊಹ್ರಾ ಸಮುದಾಯದ ಸುಧಾರಣಾ ಚಳವಳಿಯಲ್ಲಿ ಅರ್ಪಿಸಿಕೊಂಡರು.

ಕೋಮು ಗಲಭೆ ಮತ್ತು ಹಿಂದೂ–ಮುಸ್ಲಿಂ ಸೌಹಾರ್ದ ಸಂಬಂಧಗಳ ಬಗ್ಗೆ ನಿರಂತರವಾಗಿ ಲೇಖನಗಳನ್ನು ಬರೆದರು. ಅಲ್ಲದೇ 50ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದರು. ಕೋಮು ಗಲಭೆ, ದಂಗೆ ನಡೆದಿದ್ದು ಗೊತ್ತಾದ ಕೂಡಲೇ ಅಲ್ಲಿಗೆ ಹೊರಡುತ್ತಿದ್ದರು. ಅದರ ಸತ್ಯಾಸತ್ಯತೆ ಪರಿಶೀಲಿಸಲು ಮಾಹಿತಿ ಕಲೆ ಹಾಕುತ್ತಿದ್ದರು. ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ, ಶಾಂತಿ ಕಾಪಾಡಲು ಕೋರುತ್ತಿದ್ದರು.

ಆದರೆ, ಇದನ್ನು ಸಹಿಸದ ಕೆಲ ಮೂಲಭೂತವಾದಿಗಳು ಅವರಿಗೆ ಬೇರೆ ಬೇರೆ ಸ್ವರೂಪದಲ್ಲಿ ಕಿರುಕುಳ ನೀಡುತ್ತಿದ್ದರು. ಕೋಮು ವಿಷಯದಲ್ಲಿ ಮಧ್ಯೆಪ್ರವೇಶಿಸದಂತೆ ತಾಕೀತು ಮಾಡುತ್ತಿದ್ದರು. ಆದರೆ, ಧೈರ್ಯ ಕಳೆದುಕೊಳ್ಳದ ಅವರು ತಮ್ಮ ನಿಶ್ಚಿತ ಕಾರ್ಯ ಮಾಡದೇ ಅಲ್ಲಿಂದ ಕದಲುತ್ತಿರಲಿಲ್ಲ.

ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆ, ದೌರ್ಜನ್ಯದಿಂದಲೂ ಬೇಸರಗೊಂಡಿದ್ದ ಅವರು, ‘ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕುಗಳನ್ನು ನೀಡಬೇಕು. ಅವರನ್ನು ಗೌರವಯುತವಾಗಿ ಕಾಣಬೇಕು. ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಅವರಿಗೂ ಅವಕಾಶ ದೊರೆಯಬೇಕು. ಇದರ ಬಗ್ಗೆಯೂ ಅವರು ಹಲವು ಲೇಖನಗಳನ್ನು ಬರೆದರು.

ಸಂಸ್ಥೆ, ಪತ್ರಿಕೆ

1980ರಲ್ಲಿ ಮುಂಬೈಯಲ್ಲಿ ಭಾರತೀಯ ಇಸ್ಲಾಂ ಅಧ್ಯಯನ ಸಂಸ್ಥೆ (Indian Institute of Islamic Studies) ಸ್ಥಾಪಿಸಿದ ಅಸ್ಗರ್ ಅಲಿ ಎಂಜಿನಿಯರ್ ಅವರು ಪ್ರಗತಿಪರ ಮುಸ್ಲಿಂ ಚಿಂತಕರಿಗೆ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ಮಾಡಿಕೊಟ್ಟರು. 1993ರಲ್ಲಿ ‘ಸಾಮಾಜಿಕ ಮತ್ತು ಜಾತ್ಯಾತೀತ ಅಧ್ಯಯನ ಸಂಸ್ಥೆ’ (Centre for Study of Society and Secularism) ಅಸ್ವಿತ್ವಕ್ಕೆ ತಂದ ಅವರು ವಿವಿಧ ಧರ್ಮ–ಸಮುದಾಯಗಳ ಜನರ ಮಧ್ಯೆ ಬಾಂಧವ್ಯ ಬೆಸೆಯಲು ಯತ್ನಿಸಿದರು. ಜೊತೆಗೆ ಏಷಿಯನ್ ಮುಸ್ಲಿಂ ಆ್ಯಕ್ಷನ್ ನೆಟ್‌ವರ್ಕ್ ಸಂಸ್ಥೆ ಸ್ಥಾಪಿಸಿದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು 2004ರಲ್ಲಿ ಬೆಂಗಳೂರಿಗೆ ಬಂದಿದ್ದ ಅವರು ‘ಸೆಕ್ಯುಲರಿಸಂ ಆ್ಯಂಡ್ ಪ್ರೆಸ್‌’ ಎಂಬ ವಿಷಯದ ಕುರಿತು ನಾನು ಸಿದ್ಧಪಡಿಸಿದ್ದ ಡೆಸರ್ಟೇಷನ್ ಕಂಡು ಸಂತಸಪಟ್ಟಿದ್ದರು. ಪ್ರೀತಿಯಿಂದ ಹಸ್ತಾಕ್ಷರವನ್ನೂ ಹಾಕಿದ್ದರು.

ಪ್ರಚಲಿತ ವಿದ್ಯಮಾನ ಮತ್ತು ಸೌಹಾರ್ದ ತತ್ವಗಳನ್ನು ಆಧರಿಸಿದ ಪತ್ರಿಕೆಯನ್ನು ಹೊರತರುತ್ತಿದ್ದ ಅವರು 2012ರಲ್ಲಿ ‘ಎ ಲಿವಿಂಗ್ ಫೇಥ್’ ಎಂಬ ಆತ್ಮಕಥನ ಪ್ರಕಟಿಸಿದರು. 2013ರ ಮೇ 14ರಂದು ನಿಧನರಾದರು. ಪ್ರಗತಿಪರ ಚಿಂತಕರಾದ ಕೈಫಿ ಆಜ್ಮಿ, ಅಲಿ ಸರ್ದಾರ ಜಾಫ್ರಿ ಮುಂತಾದವರನ್ನು ವಿದಾಯ ಹೇಳಲಾದ ಸ್ಥಳದ ಬಳಿಯೇ ಅವರ ಇಚ್ಛೆಯಂತೆ ಅಂತ್ಯಕ್ರಿಯೆ ಮಾಡಲಾಯಿತು.

ಅಸ್ಗರ್ ಅಲಿ ಎಂಜಿನಿಯರ್ ಅವರ ಅನುಪಸ್ಥಿತಿ ಮಧ್ಯೆಯೂ ಸಿಎಸ್‌ಎಸ್‌ಎಸ್‌ ಸಂಸ್ಥೆಯನ್ನು ಅವರ ಆಪ್ತರು ಮತ್ತು ಸ್ನೇಹಿತರು ಮುನ್ನಡೆಸಿದ್ದಾರೆ. ಮುಂಬೈಯಲ್ಲಿ ಕಚೇರಿ ಹೊಂದಿದ್ದಾರೆ ಅಲ್ಲದೇ ದೇಶದ 8 ಕಡೆ ಶಾಖೆಗಳನ್ನು ಆರಂಭಿಸಿದ್ದಾರೆ. ಸಂಸ್ಥೆಯ ನಿರ್ದೇಶಕರಾಗಿರುವ ಅಸ್ಗರ್ ಅಲಿಯವರ ಪುತ್ರ ಇರ್ಫಾನ್ ಎಂಜಿನಿಯರ್ ಅವರು ವೆಬ್‌ಸೈಟ್‌ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಸ್ಥೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅಸ್ಗರ್ ಅಲಿ ಎಂಜಿನಿಯರ್ ಅವರ ಇ–ಪುಸ್ತಕಗಳನ್ನು ಲಭ್ಯವಾಗಿಸಿದ್ದಾರೆ.

‘ಸಿಎಸ್‌ಎಸ್‌ಎಸ್ ಸಂಸ್ಥೆಯು ದೇಶದ ಬಹುಸಂಸ್ಕೃತಿ ಮತ್ತು ಸೌಹಾರ್ದ ಪರಂಪರೆಯ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನಷ್ಟು ಬದ್ಧತೆ ಮತ್ತು ಜನಪರವಾಗಿ ಕಾರ್ಯನಿರ್ವಹಿಸಲು ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಇರ್ಫಾನ್ ಎಂಜಿನಿಯರ್ ಕೋರುತ್ತಾರೆ.

ಸಂಸ್ಥೆಯ ವೆಬ್‌ಸೈಟ್: https://csss-isla.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT