ಪೋಗಟ್ ಕುಟುಂಬದ ‘ಚಿನ್ನ’ದ ಹುಡುಗಿ

4

ಪೋಗಟ್ ಕುಟುಂಬದ ‘ಚಿನ್ನ’ದ ಹುಡುಗಿ

Published:
Updated:
Deccan Herald

‘ಭಾರತ ದೇಶಕ್ಕಾಗಿ ಒಂದು ಚಿನ್ನದ ಪದಕ ಗೆದ್ದುಕೊಡಬೇಕು ಎಂಬ ನನ್ನ ಕನಸು ಈಡೇರಿಲ್ಲ. ನಮಗೊಬ್ಬ ಮಗ ಹುಟ್ಟಿದರೆ, ಅವನು ಆ ಕನಸನ್ನು ಈಡೇರಿಸುತ್ತಾನೆ’–

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ‘ದಂಗಲ್’ ಸಿನಿಮಾದಲ್ಲಿಮಹಾವೀರ್ ಪೋಗಟ್ ಪಾತ್ರಧಾರಿ ಅಮೀರ್ ಖಾನ್  ಈ ಮಾತುಗಳನ್ನು ಹೇಳುವ ದೃಶ್ಯವಿದೆ. ಮಹಾವೀರ್ ದಂಪತಿಗೆ ಗಂಡುಮಕ್ಕಳು ಹುಟ್ಟಲಿಲ್ಲ. ಆದರೆ ಅವರ ಹೆಣ್ಣುಮಕ್ಕಳು ಅಂತರರಾಷ್ಟ್ರೀಯಪದಕಗಳನ್ನು ಗೆದ್ದು ತಂದಿದ್ದಾರೆ. ಈಗ ಆ ಗೋಡೆಯ ಮೇಲೆ ಒಲಿಂಪಿಕ್ಸ್‌ ಪದಕವೊಂದನ್ನು ಬಿಟ್ಟು ಉಳಿದೆಲ್ಲ ಮಹತ್ವದ ಅಂತರರಾಷ್ಟ್ರೀಯಟೂರ್ನಿಗಳ ಪದಕಗಳು ರಾರಾಜಿಸುತ್ತಿವೆ. ಇದೀಗ ಆ ಸಂಗ್ರಹಕ್ಕೆ ಇನ್ನೊಂದು ಐತಿಹಾಸಿಕ ಪದಕ ಸೇರಿಕೊಂಡಿದೆ. ವಿನೇಶಾ ಪೋಗಟ್ ಈಚೆಗೆ ಜಕಾರ್ತದ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಚಿನ್ನದ ಪದಕ ಅದು.

ಮಹಾವೀರ್ ಅವರ ತಮ್ಮ, ರಾಜಪಾಲ್ ಪೋಗಟ್ ಅವರ ಮಗಳು ವಿನೇಶಾ. ಏಷ್ಯನ್ ಗೇಮ್ಸ್‌ಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸತತ ಎರಡು ಪದಕ ಗೆದ್ದ ಏಕೈಕ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಅವರು ಕಂಚು ಗೆದ್ದಿದ್ದರು.

ಗೀತಾ ಪೋಗಟ್, ಬಬಿತಾಕುಮಾರಿ ಅವರಿಲ್ಲದ ಭಾರತ ತಂಡದಲ್ಲಿ ವಿನೇಶಾ ಸ್ಥಾನ ಪಡೆದಿದ್ದರು. ಅವರು ಪದಕ ಜಯಿಸುವ ಅಪಾರ ನಿರೀಕ್ಷೆಯೂ ಕ್ರೀಡಾ ಅಭಿಮಾನಿಗಳಲ್ಲಿ ಇತ್ತು. ಅದನ್ನು ಅವರು ಹುಸಿಗೊಳಿಸಲಿಲ್ಲ. 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿಯ ಪ್ರತಿ ಹಂತದಲ್ಲಿಯೂ ಪಾರಮ್ಯ ಮೆರೆದರು. ಫೈನಲ್‌ನಲ್ಲಿ ಅವರು ಜಪಾನ್‌ನ ಯೂಕಿ ಐರಿ ಅವರ ವಿರುದ್ಧ ಆಡಿದ ರೀತಿಯು ಸೊಗಸಾಗಿತ್ತು. ಉತ್ಕೃಷ್ಠವಾದ ಕೌಶಲಗಳನ್ನು ಅವರು ಪ್ರದರ್ಶಿಸಿದ್ದರು. ಎದುರಾಳಿಯನ್ನು ಮಣಿಸಲು ಅವರು ಹಾಕಿದ ಪಟ್ಟುಗಳು ನಿಖರವಾಗಿದ್ದವು.ಅದರಲ್ಲೂ ಲೆಗ್‌ ಕಟ್ ಮಾಡಿದ ರೀತಿಯು ಪರಿಪಕ್ವತೆಯನ್ನು ಬಿಂಬಿಸಿತ್ತು. 2016ರ ರಿಯೊ ಒಲಿಂಪಿಕ್ಸ್‌ನ ‘ಗಾಯ’ದ ನೋವನ್ನು ಸಂಪೂರ್ಣ ಮರೆತ ಭಾವವೂ ಅವರ ಮುಖದಲ್ಲಿತ್ತು.

ರಿಯೊದಲ್ಲಿ ಆ ದಿನ..

ರಿಯೊ ಒಲಿಂಪಿಕ್ಸ್‌ನ ಆ ಸಂಜೆಯನ್ನು ನೆನಪಿಸಿಕೊಳ್ಳಿ. ಅವತ್ತು ಮಹಿಳೆಯರ ಕುಸ್ತಿ ಮ್ಯಾಟ್‌ ಮೇಲೆ ಕಾಲುನೋವಿನಿಂದ ನರಳಿ ಕಣ್ಣೀರು ಸುರಿಸುತ್ತ ಆಸ್ಪತ್ರೆಗೆ ತೆರಳಿದ್ದರು ವಿನೇಶಾ.

ಸುಮಾರು ಎಂಟು ತಿಂಗಳ ಚಿಕಿತ್ಸೆ ಮತ್ತು ಆರೈಕೆಯ ನಂತರಅಖಾಡಕ್ಕೆ ಮರಳಿದರು. ಫಿಟ್‌ನೆಸ್‌ ಉಳಿಸಿಕೊಳ್ಳುವುದುಅವರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅದನ್ನು ನಿಭಾಯಿಸುವಲ್ಲಿ ಅವರು ಯಶಸ್ವಿಯಾದರು.

ಹೋದ ವರ್ಷ ದೆಹಲಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕಂಚಿನ ಪದಕ ಪಡೆದರು. 2018ರ ಆರಂಭದಲ್ಲಿ ಕಿರ್ಗಿಸ್ತಾನದಲ್ಲಿ ನಡೆದಿದ್ದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 50 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದರು. ಇಡೀ ಟೂರ್ನಿಯಲ್ಲಿ ಕಠಿಣ ಎದುರಾಳಿಗಳನ್ನು ಮಣಿಸಲು ಅವರು ಹರಸಾಹಸ ಪಟ್ಟಿದ್ದರು. ಆದರೆ ಬೌಟ್‌ನಿಂದ ಬೌಟ್‌ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತ ಸಾಗಿದರು. ಫೈನಲ್‌ನಲ್ಲಿ ಚೆನ್ನಾಗಿ ಆಡಿದರೂ ಚಿನ್ನ ಒಲಿದಿರಲಿಲ್ಲ. ಚೀನಾದ ಚನ್ ಲೀ ಅವರು 3–2ರಿಂದ ವಿನೇಶ್ ವಿರುದ್ಧ ಪ್ರಯಾಸದ ಜಯ ಗಳಿಸಿದ್ದರು.

ಹೋದ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿಯೂ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಫೈನಲ್‌ನಲ್ಲಿ ಕೆನಡಾದ ಜೆಸ್ಸಿಕಾ ಮ್ಯಾಕ್‌ಡೊನಾಲ್ಡ್‌ ಅವರನ್ನು ಮಣಿಸಿದ್ದರು. ಆದರೆ ‘ಅವರ ವಿಭಾಗದಲ್ಲಿ ಕೇವಲ ನಾಲ್ವರು ಸ್ಪರ್ಧಿಗಳು ಮಾತ್ರ ಇದ್ದರು. ಹಾಗಾಗಿ ಚಿನ್ನ ಲಭಿಸಿತು’ ಎಂಬ ವ್ಯಂಗ್ಯಗಳೂ ಕೇಳಿಬಂದಿದ್ದವು.

ಆದರೆ ಅವರ ಅಕ್ಕ ಬಬಿತಾಕುಮಾರಿ ಅವರು 53 ಕೆ.ಜಿ.ವಿಭಾಗದಲ್ಲಿ ಬೆಳ್ಳಿ, ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ 62 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು.

ಆಕ್ಕಂದಿರೇ ಸ್ಫೂರ್ತಿ

‘ಗೀತಾ ಮತ್ತು ಬಬಿತಾ ಅವರು 2010ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವವರೆಗೂ ನಮ್ಮ ಮೇಲೆ ಬಹಳಒತ್ತಡವಿತ್ತು. ಊರಿನ ಜನರು, ನಮ್ಮ ಅಜ್ಜಿ ಮತ್ತಿತರರು ಯಾವಾಗಲೂ ಟೀಕೆ ಮಾಡುತ್ತಿದ್ದರು. ಹೆಣ್ಣಮಕ್ಕಳಿಗೆ ಕುಸ್ತಿ ಏಕೆ ಬೇಕು ಎಂಬ ‘ಬುದ್ಧಿಮಾತು’ಗಳು ಸಾಮಾನ್ಯವಾಗಿದ್ದವು. ಆದರೆ ಗೀತಾ ಮತ್ತು ಬಬಿತಾ ಪದಕ ಗೆದ್ದಿದ್ದೇ ತಡ, ಇಡೀ ಹರಿಯಾಣದ ಚಿತ್ರಣವೇ ಬದಲಾಯಿತು. ಕುಸ್ತಿಪ್ರೇಮಿಗಳ ಕಣ್ಣಲ್ಲಿ ನಾವು ಹೀರೊ ಆದೆವು. ನಮ್ಮ ಕುಟುಂಬವು ವಿಶ್ವದ ಗಮನ ಸೆಳೆಯಿತು. ಸಹೋದರಿಯರ ಸಾಧನೆ ನನಗೂ ಸ್ಫೂರ್ತಿಯಾಯಿತು’ ಎಂದು ವಿನೇಶಾ ತಾವು ಕುಸ್ತಿ ಅಖಾಡಕ್ಕೆ ಧುಮುಕಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಅಪ್ಪ ರಾಜಪಾಲ್ ಸಿಂಗ್ ಅವರು ತೀರಿ ಹೋದ ಮೇಲೆ ವಿನೇಶಾ ಮತ್ತು ಅವರ ತಂಗಿ ಪ್ರಿಯಾಂಕಾ ಅವರನ್ನು ಬೆಳೆಸಿದವರು ಮಹಾವೀರ್‌ ಪೋಗಟ್. ‘ನನಗೆ ಆರು ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲೂ ಅಂತರರಾಷ್ಟ್ರೀಯ ಕುಸ್ತಿಪಟುಗಳು’ ಎಂದು ಎದೆ ತಟ್ಟಿ ಹೇಳುತ್ತಾರೆ ಅವರು.

2012ರ ಒಲಿಂಪಿಕ್ಸ್‌ನಲ್ಲಿ ಗೀತಾ ಸ್ಪರ್ಧಿಸಿದ್ದು ಇಡೀ ಹರಿಯಾಣದ ಮಹಿಳಾ ಕುಸ್ತಿಪಟುಗಳಿಗೆ ಸ್ಫೂರ್ತಿಯಾಗಿತ್ತು. ಅವರ ಎರಡನೇ ತಂಗಿ ರಿತು ಪೋಗಟ್ ಹೋದ ಡಿಸೆಂಬರ್‌ನಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಮೂರನೇ ತಂಗಿ ಸಂಗೀತಾ ಕೂಡ ಭರವಸೆಯ ಕುಸ್ತಿಪಟುವಾಗಿದ್ದಾರೆ. ಇದೀಗ ಈ ಸಹೋದರಿಯರಲ್ಲಿಯೇ ಪೈಪೋಟಿ ಆರಂಭವಾಗಿದೆ. ಇದರಿಂದ ದೇಶಕ್ಕೆ ಪದಕ ಒಲಿಯುವ ಅವಕಾಶಗಳು ಹೆಚ್ಚಾಗಿವೆ.

2020ರ ಒಲಿಂಪಿಕ್ಸ್‌ ಸಮೀಪಿಸುತ್ತಿದೆ. ಹೋದ ಸಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ತಮ್ಮ ಎಂದಿನ ಲಯದಲ್ಲಿ ಇಲ್ಲ. ಗೀತಾ ಕೂಡ ಅರ್ಹತೆ ಪಡೆಯುವುದು ಖಚಿತವಿಲ್ಲ. ಆದ್ದರಿಂದ ವಿನೇಶಾ ಮೇಲೆ ಹೆಚ್ಚಿನ ನಿರೀಕ್ಷೆಗಳು ಇವೆ.

ಅಂತರರಾಷ್ಟ್ರೀಯ ಕುಸ್ತಿಪಟು ಸೋಮವೀರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿನೇಶಾ ಅವರ ಮದುವೆಯೂ ಶೀಘ್ರದಲ್ಲಿ ಆಗಲಿದೆ. ದಾಂಪತ್ಯ ಜೀವನ ಮತ್ತು ಕ್ರೀಡಾ ಸಾಧನೆಯನ್ನು ಜೊತೆಜೊತೆಯಾಗಿ ನಿಭಾಯಿಸುವ ಆತ್ಮವಿಶ್ವಾಸದಲ್ಲಿ ಅವರಿದ್ದಾರೆ.

ವಿನೇಶಾ ಅವರು ಈಗಿರುವ ಲಯವನ್ನು ಕಾಪಾಡಿಕೊಂಡರೆ ಟೊಕಿಯೊ ಒಲಿಂಪಿಕ್ಸ್‌ನ ಒಂದು ಪದಕ ಪೋಗಟ್ ಕುಟುಂಬದ ಸಂಗ್ರಹಕ್ಕೆ ಸೇರಬಹುದು.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !