ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಗದ್ದೆ ರಾಮಾ ಜೋಯಿಸ್: ನ್ಯಾಯಾಂಗ, ಶಾಸಕಾಂಗದಲ್ಲಿ ಛಾಪೊತ್ತಿದ ಕರ್ನಾಟಕದ ಹೆಸರು

Last Updated 16 ಫೆಬ್ರುವರಿ 2021, 12:16 IST
ಅಕ್ಷರ ಗಾತ್ರ

ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಎಂ. ರಾಮಾ ಜೋಯಿಸ್ (89) ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ದೇಶದ ನ್ಯಾಯಾಂಗ, ಶಾಸಕಾಂಗದಲ್ಲಿ ಸಕ್ರಿಯವಾಗಿದ್ದ ಜೋಯಿಸ್ ಅವರು ರಾಜ್ಯದ ಶಿವಮೊಗ್ಗ ಜಿಲ್ಲೆಯವರು.

1931ರ ಜುಲೈ 27ರಂದು ಶಿವಮೊಗ್ಗದ ಅರಗ ಗ್ರಾಮದಲ್ಲಿ ಜನಿಸಿದ ಅವರ ಪೂರ್ಣ ಹೆಸರು ಮಂಡಗದ್ದೆ ರಾಮಾ ಜೋಯಿಸ್. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು. ಬಿ.ಎ. ಹಾಗೂ ಕಾನೂನು ಪದವಿ ಪಡೆದಿದ್ದ ಜೋಯಿಸ್ ಅವರನ್ನು ಕುವೆಂಪು ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್ ಲಾ’ ನೀಡಿ ಗೌರವಿಸಿತ್ತು.

ರಾಮಾ ಜೋಯಿಸ್ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗಿದ್ದರು. ಜಾರ್ಖಂಡ್ ಮತ್ತು ಬಿಹಾರದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ರಾಜಕೀಯ ನಂಟು

1975–77ರ ಅವಧಿಯ ತುರ್ತುಪರಿಸ್ಥಿತಿ ಸಂದರ್ಭದ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಜೋಯಿಸ್‌ ಅವರು ಜೈಲುವಾಸಕ್ಕೂ ಗುರಿಯಾಗಿದ್ದಾರೆ. ತುರ್ತುಪರಿಸ್ಥಿತಿ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ಮಧು ದಂಡವತೆ ಇತ್ಯಾದಿ ನಾಯಕರ ಜತೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸದಲ್ಲಿದ್ದರು. ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು, ರಾಜ್ಯ ಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿ ನೇಮಕಗೊಳ್ಳದಂತೆ ಕಡೆಗಣಿಸಿದ್ದನ್ನು ಪ್ರತಿಭಟಿಸಿ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರ ಹುದ್ದೆಯನ್ನೇ ತ್ಯಜಿಸಿದ್ದರು ರಾಮಾ ಜೋಯಿಸ್.

‘ಧರ್ಮ ದಿ ಗ್ಲೋಬಲ್ ಎಥಿಕ್’, ‌‘ಹಿಸ್ಟಾರಿಕಲ್ ಬ್ಯಾಟಲ್’ ಸೇರಿದಂತೆ ಕಾನೂನು ಮತ್ತು ಸಂವಿಧಾನಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಅವರು ರಚಿಸಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದ ನೆನಪೊಂದನ್ನು ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಮಾರಂಭವೊಂದರಲ್ಲಿ ಅವರು ಹೀಗೆ ಹೇಳಿದ್ದರು; ‘ದೇಶದಲ್ಲಿನ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಕಾರಣಕ್ಕೆ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ ಸೇರಿದಂತೆ ಹಲವು ಮುಖಂಡರನ್ನು ಬೆಂಗಳೂರಿನ ಸೆಂಟ್ರಲ್‌ ಜೈಲಿನಲ್ಲಿ ಇಡಲಾಗಿತ್ತು. ಅವರ ಪರವಾಗಿ ನಾನು ವಾದಿಸಿದ್ದೆ. ಹೈಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬಂತು. ಆದರೆ, ಸುಪ್ರೀಂ ಕೋರ್ಟ್‌ ಈ ಆದೇಶವನ್ನು ರದ್ದುಪಡಿಸಿತು. ಇದರಿಂದ ಸುಪ್ರೀಂ ಕೋರ್ಟ್‌ಗೆ ಕೆಟ್ಟ ಹೆಸರು ಬಂತು. ‘ಈ ಪ್ರಕರಣದಲ್ಲಿ ನಾನು ತಪ್ಪು ಮಾಡಿದೆ’ ಎಂದು ನ್ಯಾಯಮೂರ್ತಿ ವೈ.ವಿ.ಚಂದ್ರಚೂಡ್‌ ಬಳಿಕ ಬೇಸರ ವ್ಯಕ್ತಪಡಿಸಿದ್ದರು. ವಾಜಪೇಯಿ 18 ತಿಂಗಳು ಜೈಲಿನಲ್ಲಿದ್ದರು. ಅವರ ಪರವಾಗಿ ವಾದಿಸಿದ್ದ ಕಾರಣಕ್ಕೆ ನನ್ನನ್ನೂ ಜೈಲಿಗೆ ಅಟ್ಟಲಾಗಿತ್ತು’.

ತುರ್ತು ಪರಿಸ್ಥಿತಿಯ ಜೈಲುವಾಸಕ್ಕೆ ಸಂಬಂಧಿಸಿ ‘ಹಿಸ್ಟಾರಿಕ್‌ ಲೀಗಲ್‌ ಬ್ಯಾಟಲ್‌ ಆಫ್‌ ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಶ್ಯಾಮನಂದನ್‌ ಮಿಶ್ರಾ, ಮಧು ದಂಡವತೆ’ ಎಂಬ ಕೃತಿಯನ್ನೂ ಜೋಯಿಸ್ ಅವರು ರಚಿಸಿದ್ದಾರೆ. ವಾಜಪೇಯಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾಗಿ ಜೋಯಿಸ್ ಅವರೇ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT