ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾಲಕ್ಕೂ ಹೊಳೆಯುವ ನಕ್ಷತ್ರ; ವೇಗದ ಬದುಕಿನ ಡಿ.ಆರ್‌.‌ನಾಗರಾಜ್‌

Last Updated 27 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರದ ನೇಯ್ಗೆ ಮಗ್ಗದ ಕುಟುಂಬದಲ್ಲಿ ಜನಿಸಿದ ಡಿ.ಆರ್. ನಾಗರಾಜ್‌ ಏರಿದ ಎತ್ತರಕ್ಕೆ ಏಣಿಗಳು ವಿರಳ. ಬಂಡಾಯ ಸಾಹಿತ್ಯಕ್ಕೆ ಒಂದು ಶಾಶ್ವತ ಚೌಕಟ್ಟು ಕೊಟ್ಟು ನಿರ್ಗಮಿಸಿದ ಡಿ.ಆರ್. ಎಲ್ಲ ಕಾಲಕ್ಕೂ ಹೊಳೆಯುವ ನಕ್ಷತ್ರ...

***

ಅಸಾಧಾರಣ ಮೇಧಾವಿಯಾಗಿದ್ದನಾಗರಾಜ್‌ ತನ್ನ ಆಳವಾದ ಅಧ್ಯಯನದ ಮೂಲಕ ತುಂಬಾ ಕ್ಲಿಷ್ಟಕರ, ಸಂಕೀರ್ಣ ವಿಷಯಗಳನ್ನು ಸಹ ತಲಸ್ಪರ್ಶಿಯಾಗಿ ಅರಿಯುವ, ವಿಶ್ಲೇಷಿಸುವ ಚೈತನ್ಯವನ್ನು ಪಡೆದಿದ್ದ. ಮಾರ್ಕ್ಸ್‌, ಗಾಂಧಿ, ಲೋಹಿಯಾ, ಅಂಬೇಡ್ಕರ್, ಪೆರಿಯಾರ್, ಬುದ್ಧ, ಬಸವ ಮತ್ತು ಜೈನ ಪರಂಪರೆಯ ವೈಶಿಷ್ಟ್ಯಗಳನ್ನು ತೌಲನಿಕವಾಗಿ ಚರ್ಚಿಸುವ ಹಾಗೂ ಅಲ್ಲಿನ ಮಿತಿಗಳನ್ನು ಸ್ಪಷ್ಟವಾಗಿ ಗುರುತಿಸುವ ಛಲವಂತ ಈತ.

***

ಬೆಂಗಳೂರಿನ ವಿಚಾರವಾದಿಗಳು 1973ನೇ ವರ್ಷದ ಆರಂಭದ ದಿನಗಳಲ್ಲಿ, ತೀವ್ರತರವಾದ ತಮ್ಮ ಆಸಕ್ತಿಗಳ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ನಮ್ಮೆಲ್ಲರ ಹೆಮ್ಮೆಯ, ಸಾಮಾಜಿಕ ನ್ಯಾಯದ ಪರವಾದ ಅಸಾಧಾರಣ ಹೋರಾಟಗಾರ ಇ.ವಿ. ರಾಮಸ್ವಾಮಿ ನಾಯ್ಕರ್ (ಪೆರಿಯಾರ್) ಅವರನ್ನು ಕರೆಸಿದ್ದರು. ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ ಮತ್ತಿತರ ಕರ್ನಾಟಕದ ಆ ಕಾಲದ ಸಂವೇದನಾಶೀಲರೆಲ್ಲರೂ ಒಗ್ಗೂಡಿ ಮೌಢ್ಯದ ವಿರುದ್ಧ ಸಮರ ಸಾರಿದ್ದ ನಮ್ಮೆಲ್ಲರ ಸಡಗರದ ದಿನಗಳು ಅವು.

ಆ ಹೊತ್ತಿಗಾಗಲೇ ಕೊಡಗಿನ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ನಾನು ಸಹ ಅದೇ ಸಮಾವೇಶದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದೆ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಾಗಿದ್ದು ಈ ಬಗೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಯುವಮಿತ್ರರಾದ ಡಿ.ಆರ್. ನಾಗರಾಜ್, ಸಿದ್ಧಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ ಮತ್ತು ಅವರ ತಂಡ ಅಪಾರವಾದ ಬದ್ಧತೆಯಿಂದ ದುಡಿಯುತ್ತಿತ್ತು. ಈ ಕುಪಿತ ತರುಣರ ಉತ್ಸಾಹವನ್ನು ಸಹಿಸಲಾರದ ಸನಾತನಿಗಳು ಪದವಿ ತರಗತಿಯ ಈ ಎಲ್ಲಾ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ಘಾಸಿಗೊಳಿಸಿದ್ದರು. ವೇದಿಕೆಯ ಮೇಲಿದ್ದ ಪೆರಿಯಾರ್ ಅವರ ಎದುರಿಗೆ, ಬಾಸುಂಡೆಗಳ ಸಹಿತ ಅರೆಬೆತ್ತಲಾಗಿದ್ದ ಇವರನ್ನು ಸಾಲಾಗಿ ಕೂರಿಸಿದ್ದ ದೃಶ್ಯ ಈಗಲೂ ನನ್ನ ಕಣ್ಣಲ್ಲಿ ಚೆನ್ನಾಗಿ ಅಚ್ಚೊತ್ತಿ ನಿಂತಿದೆ!

1974ರಲ್ಲಿ ಪ್ರೊ. ಜಿ.ಎಸ್. ಶಿವರುದ್ರಪ್ಪ ಮತ್ತು ಕುಲಪತಿ ಎಚ್. ನರಸಿಂಹಯ್ಯ ಅವರ ಪ್ರೀತಿಯ ಆಹ್ವಾನದ ಮೇರೆಗೆ ನಾನು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕನ್ನಡ ಅಧ್ಯಯನ ಕೇಂದ್ರ ಸೇರಿದೆ. ಆ ವರ್ಷ ಡಿ.ಆರ್., ಮೋಟಮ್ಮ ಮತ್ತಿತರರು ಎರಡನೇ ಎಂ.ಎ. ಹಾಗೂ ಸಿದ್ಧಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ ಮುಂತಾದವರು ಮೊದಲ ಎಂ.ಎ. ವಿದ್ಯಾರ್ಥಿಗಳು. ಮೊದಲೇ ತೀರಾ ಪರಿಚಿತರೂ ಪರಸ್ಪರ ಆಪ್ತರೂ ಆಗಿದ್ದ ನಾವೆಲ್ಲ ಅಲ್ಲಿ ಸೇರಿ ಮತ್ತಷ್ಟು ಗಟ್ಟಿಯಾದೆವು. ಲಂಕೇಶ್, ಕಿರಂ, ಮರುಳಸಿದ್ಧಪ್ಪ ಸಹ ಅದಾಗಲೇ ಅಲ್ಲಿದ್ದರು. ಶಿವರುದ್ರಪ್ಪನವರ ತುಂಬಾ ಅಪರೂಪದ ಜಾತ್ಯತೀತವೂ ಚಿಂತನಶೀಲವೂ ಆದ ಆರೋಗ್ಯಕರ ನೇತೃತ್ವ ಅಲ್ಲಿ ಆದರ್ಶಪೂರ್ಣವಾಗಿತ್ತು.

ನನ್ನ ಜೊತೆಗೆ ಕ್ರಮೇಣ ನಾಗರಾಜ್‌ ಮತ್ತು ಸಿದ್ಧಲಿಂಗಯ್ಯ ಸಹ ಅಪಾರವಾದ ಕಾಳಜಿಯ ಮೂಲಕವೇ ಮುಂದಿನ ವರ್ಷಗಳಲ್ಲಿ ಆಯ್ಕೆಯಾದರು. ಆನಂತರ ಇಡೀ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿ ಭೀಕರ ತುರ್ತುಪರಿಸ್ಥಿತಿ ಕಾಲಿಟ್ಟಿತು. ನಾವೆಲ್ಲಾ ಒಟ್ಟಾಗಿ, ಸೆರೆಮನೆ ಸೇರಿದ್ದ ಚಂಪಾ ಅವರ ‘ಗಾಂಧೀಸ್ಮರಣೆ’, ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಹೊರತಂದೆವು. ‘ಆಪತ್‍ಕಾಲೀನ ಕವಿತೆಗಳು’ ಪ್ರಾತಿನಿಧಿಕ ಸಂಕಲನವೂ ಹೊರಬಂತು. ಅಗ್ರಹಾರ ಕೃಷ್ಣಮೂರ್ತಿಯವರ ಜನಪದ ಕೃತಿ ‘ಬೆಳ್ದಿಂಗಳಪ್ಪನ ಪೂಜೆ’ ಪ್ರಕಟಿಸಿದೆವು. ಮುಂಗಾರು ಪ್ರಕಾಶನದ ಹೆಸರಲ್ಲಿ ನಾನೇ ಇವುಗಳ ಪ್ರಕಾಶಕ. ಈ ಬಗ್ಗೆ ಡಿ.ಆರ್. ಮತ್ತು ಕಿರಂ ಅವರ ಒತ್ತಾಸೆ ಅಪರಿಮಿತವಾದುದು.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮೊದಲನೆಯ ಬಂಡಾಯ ಸಾಹಿತ್ಯ ಸಮ್ಮೇಳನವು 1979ರ ಮಾರ್ಚ್‌ 11ರಂದು ಆರಂಭವಾಯಿತು. ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ಹುಟ್ಟಿ ಬೆಳೆದು, ನಮ್ಮ ಸಾಂಪ್ರದಾಯಿಕ ಪರಿಸರದಲ್ಲಿನ ಕ್ರೌರ್ಯ, ಅಸಮಾನತೆ, ಅಪಮಾನಗಳ ನಡುವೆ ಉದ್ದಕ್ಕೂ ನರಳುತ್ತಿರುವವರ ಸ್ಥಿತಿಗತಿಗಳಿಗೆ ನೇರವಾಗಿ ಸ್ಪಂದಿಸುವ ಗುಣದ ಲೇಖಕರುಗಳ ಅರ್ಥಪೂರ್ಣ ಸಂಘಟನೆ ಇದಾಗಿತ್ತು.

ಸೆಂಟ್ರಲ್ ಕಾಲೇಜು ಆವರಣದ ಉದ್ಯಾನವನದ ಹುಲ್ಲುಹಾಸಿನ ಮೇಲೆ ಕುಳಿತು ನಾವೆಲ್ಲ ಸಮಾನ ಮನೋಧರ್ಮದ ಲೇಖಕಮಿತ್ರರು ಆ ದಿನಗಳಲ್ಲಿ ಪ್ರತೀ ಸಂಜೆ ಸೇರಿ ಪ್ರಜಾಸತ್ತಾತ್ಮಕವಾಗಿ ಚರ್ಚಿಸುತ್ತಿದ್ದೆವು. ಡಿ.ಆರ್. ಆ ಕಾಲದಲ್ಲಿ ತುಂಬು ಅತ್ಯುತ್ಸಾಹಿ ಮತ್ತು ಕ್ರಿಯಾಶೀಲ ತರುಣನಾಗಿ ದುಡಿದ. ಸಂಘಟನೆಯ ಲಾಂಛನ ಮತ್ತು ಧ್ಯೇಯವಾಕ್ಯ ಸಿದ್ಧಪಡಿಸುವಾಗಿನ ಈತನ ಸಡಗರ ಹೇಳತೀರದು. ‘ಖಡ್ಗವಾಗಲಿ ಕಾವ್ಯ’ ಎಂಬ ಆಕರ್ಷಕ ವಾಕ್ಯ ಕಮ್ಯುನಿಸ್ಟರ ಪ್ರಭಾವಕ್ಕೆ ಆಗತಾನೇ ಒಳಗಾಗಿದ್ದ ನಾಗರಾಜ್‌ನ ಬತ್ತಳಿಕೆಯಿಂದ ಹೊರಬಂತು; ಸಭೆಯು ಉಲ್ಲಾಸದಿಂದ ಅದನ್ನು ಸ್ವೀಕರಿಸಿತು.

ಆ ಹೊತ್ತಿಗಾಗಲೇ ನನ್ನಂಥವನಿಗೆ ಒಂದು ರೀತಿಯಿಂದ ತೀರಾ ಕ್ಲೀಷೆ ಎನ್ನಿಸುತ್ತಿದ್ದ ಆ ಧ್ಯೇಯವಾಕ್ಯದ ಅಂತರ್ಗತ ಅಭಿಲಾಷೆಯ ದ್ಯೋತಕವಾಗಿ ಇನ್ನೊಂದಿಷ್ಟು ಅರ್ಥಪೂರ್ಣವಾದ ಅಂಶಗಳನ್ನು ನಾವು ಅದರಲ್ಲಿ ಅಡಕಗೊಳಿಸುವುದು ಸೂಕ್ತವೆನ್ನುವ ಚಿಂತನೆ ಬಂದಿತ್ತು. ಹೀಗಾಗಿ ‘ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಸಾಲು ಈ ಧ್ಯೇಯವಾಕ್ಯದ ಅವಿಭಾಜ್ಯ ಅಂಗವಾಗಿರಬೇಕು - ಎಂದು ನಾನು ಹಟ ಹಿಡಿದೆ; ಇದಕ್ಕೆ ಸಭೆಯ ಒಪ್ಪಿಗೆ ದೊರೆಯಿತು.

ಇದಾದ ಒಂದೆರಡು ದಿನಗಳಲ್ಲಿಯೇ ನಾನು, ನಾಗರಾಜ್‌, ಸಿದ್ಧಲಿಂಗಯ್ಯ ಸೇರಿ ಮೈಸೂರಿನ ಗೆಳೆಯರನ್ನು ಸಮ್ಮೇಳನಕ್ಕೆ ಖುದ್ದಾಗಿ ಆಹ್ವಾನಿಸಲೆಂದು ಬಂದೆವು. ಈ ಬಗ್ಗೆ ನಮ್ಮ ಜೊತೆಗೆ ಕೊಂಚ ಭಿನ್ನಮತದ ಸೊಗಸನ್ನು ಹೊಂದಿದ್ದ ದೇವನೂರ ಮಹಾದೇವ ಸಿಕ್ಕಿ, ಆಕಾಶದ ಕೆಳಗಿನ ಹಲವು ಸಂಗತಿಗಳನ್ನು ಕುರಿತು ಮಾತನಾಡಿದೆವು. ಸದಾ ಕಡಿಮೆ ಮಾತುಗಳ, ತೂಕದ ನಡವಳಿಕೆಯ ಈ ಮಹಾದೇವ ಆ ಮಾತು ಈ ಮಾತಿನ ನಡುವೆ ಸಹಜವಾಗಿಯೇ ‘ಸಂಘಟನೆಯ ಈ ಧ್ಯೇಯವಾಕ್ಯದ ಮೊದಲ ಪಾದ ನಾಗರಾಜನದು; ಮುಂದಿನ ಸಾಲು ನಾಗವಾರರ ರಚನೆ’ ಎಂದು ಹೇಳಿದ್ದು ನಮ್ಮೆಲ್ಲರ ವಿಸ್ಮಯಕ್ಕೆ ಕಾರಣವಾಗಿತ್ತು.

ಈ ಸಮಯಕ್ಕಾಗಲೇ ನಾಗರಾಜ್ ಚಿಂತಕನಾಗಿ ತುಂಬಾ ಬೆಳೆದಿದ್ದ: ಅಸಾಧಾರಣ ಮೇಧಾವಿಯಾಗಿದ್ದ ಈತ, ತನ್ನ ಬೌದ್ಧಿಕ ಸಾಮರ್ಥ್ಯ ಮತ್ತು ಸಾಮಾಜಿಕ ಬದ್ಧತೆಯ ಪ್ರತೀಕವಾಗಿ ಬಂಡಾಯ ಸಂಘಟನೆಯ ಸರ್ವಸಿದ್ಧತೆಗಳ ಸಕಲ ಹೊಣೆಗಾರಿಕೆಯನ್ನು ಅಕ್ಷರಶಃ ದಂಡನಾಯಕನಂತೆ ನಿರ್ವಹಿಸಿದ ರೀತಿ, ಅದನ್ನೆಲ್ಲಾ ತೀರಾ ಹತ್ತಿರದಿಂದ ಕಂಡ ನನಗೆ ನಿಜಕ್ಕೂ ಬೆರಗು ಹುಟ್ಟಿಸುವಂತಿತ್ತು. ನನ್ನ ಸಮಾಜವಾದಿ ಚಳವಳಿಯ ಹಿನ್ನೆಲೆಯ ಚಟುವಟಿಕೆಗಳನ್ನು ತುಂಬಾ ಹತ್ತಿರದಿಂದ ಕಂಡಿದ್ದ ಈತ, ಕರ್ನಾಟಕದ ಎಲ್ಲ ಜಿಲ್ಲೆಗಳ ಸಾಹಿತಿಗಳು ಮತ್ತು ಸಾಂಸ್ಕೃತಿಕ ವಲಯದ ತೀವ್ರಾಸಕ್ತರ ಜತೆಗೆ ಪತ್ರವ್ಯವಹಾರ ನಡೆಸುವ ಜವಾಬ್ದಾರಿಯನ್ನು ನಾನು ಹೊರಬೇಕೆಂದು ಬಯಸಿದ್ದ. ಅದನ್ನು ಒಪ್ಪಿ ಆ ಕಾರ್ಯ ನಿರ್ವಹಿಸಿದೆ. ಬೇರೆ, ಬೇರೆ ಹಿನ್ನೆಲೆಗಳ ಕ್ರಿಯಾಶೀಲ ಸಂಘಟಕ-ಸಂಚಾಲಕ ಸಮಿತಿಗಳ ರಚನೆಗೆ ಆಲೋಚಿಸಿದೆವು. ಬರಗೂರು ರಾಮಚಂದ್ರಪ್ಪ ಸಹ ಆ ಹೊತ್ತಿಗಾಗಲೇ ಕನ್ನಡ ಅಧ್ಯಯನ ಕೇಂದ್ರ ಸೇರಿದ್ದರಿಂದ ನಮ್ಮೊಡನೆ ಅವರನ್ನೂ ಒಳಗೊಳ್ಳುವುದು ಸೂಕ್ತವೆಂಬ ನನ್ನ ಸಲಹೆಗೆ ನಾಗರಾಜ್‌ ಮತ್ತು ಸಿದ್ಧಲಿಂಗಯ್ಯ ಒಪ್ಪಿಗೆ ಸೂಚಿಸಿದರು.

ಯಜಮಾನ ಸಂಸ್ಕೃತಿಯ ವಿರುದ್ಧದ ಹೋರಾಟದ ತೀವ್ರತೆ ಹೇಗಿರಬೇಕೆಂಬುದರ ಬಗ್ಗೆ ಖಚಿತವಾಗಿದ್ದ ಬಂಡಾಯ ಸಾಹಿತ್ಯ ಸಂಘಟನೆ ಕುರಿತ ನಾಗರಾಜ್ ಬರಹ ತುಂಬಾ ಅರ್ಥಪೂರ್ಣವಾಗಿತ್ತು. ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ತಂತಮ್ಮ ಖರ್ಚು-ವೆಚ್ಚಗಳಿಂದಲೇ ಬಂದಿದ್ದ ಸಾಹಿತಿ ಮಿತ್ರರು ಸಾಮೂಹಿಕ ಹೊಣೆಗಾರಿಕೆಯ ಮಹತ್ವವನ್ನು ಅರಿತು ನಾವೆಲ್ಲಾ ಒಗ್ಗೂಡಿ ದುಡಿಯಬೇಕಾದ ಅವಶ್ಯಕತೆಯ ಬಗ್ಗೆ ವಿವರವಾಗಿ ಚರ್ಚಿಸಿದೆವು.

ಅತ್ಯಂತ ಕ್ರಿಯಾಶಾಲಿಯೂ, ಪ್ರಜ್ಞಾವಂತನೂ ಆಗಿದ್ದ ನಾಗರಾಜ್‌ನ ವ್ಯಕ್ತಿತ್ವದ ಮಹತ್ವವನ್ನು ಅರಿಯುವುದು ತೀರಾ ಆಪ್ತರಿಗೆ ಸಹ ಆಗಾಗ ಸಾಧ್ಯವಾಗುತ್ತಿರಲಿಲ್ಲ. ಬಂಡಾಯ ಸಾಹಿತ್ಯ ಸಮ್ಮೇಳನವು ಚರಿತ್ರಾರ್ಹ ದಾಖಲೆಯನ್ನು ನಿರ್ಮಿಸಿತು. ಆದರೆ, ಸಂಚಾಲಕರಲ್ಲಿ ಒಬ್ಬನಾಗಿದ್ದ ಶೂದ್ರ ಶ್ರೀನಿವಾಸ ನಮ್ಮೆಲ್ಲರಿಗೆ ಪ್ರೀತಿಪಾತ್ರನಾಗಿದ್ದರೂ ತನ್ನ ಮಾಮೂಲಿ ಗೊಂದಲದಿಂದ ಸಂಚಾಲಕ ಸಮಿತಿಯಿಂದ ಹೊರಬಿದ್ದ. ನಾಗರಾಜ್, ‘ಇದನ್ನೆಲ್ಲಾ ನಿರ್ಲಕ್ಷಿಸೋಣ; ಆತ ಹಾಗೆ ಮಾಡದಿದ್ದಲ್ಲಿಯೇ ಆಶ್ಚರ್ಯವಾಗುತ್ತಿತ್ತು. ಇರಲಿ’ ಎಂದು ಮನಸಾರೆ ನಕ್ಕು ಹಗುರಾದ.

ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಟೊಂಕಕಟ್ಟಿ ನಮ್ಮೊಡನೆ ಉದಾರವಾಗಿ ಸಹಕರಿಸಿದ ‘ಪ್ರಜಾವಾಣಿ’ಯ ಕೆ.ಎನ್. ಹರಿಕುಮಾರ್ ಪಾತ್ರ ನಿಜಕ್ಕೂ ದೊಡ್ಡದು. ಹರಿಕುಮಾರ್ ಅಕ್ಕರೆಗೆ ತುಂಬು ಪಾತ್ರನಾಗಿದ್ದ ನಾಗರಾಜ್, ಅಪ್ರತಿಮ ಬದ್ಧತೆಯ ಲಂಕೇಶ್ ಮತ್ತು ನಾನು ಆಗಾಗ ಭೇಟಿಯಾಗಿ ಚರ್ಚಿಸಿ, ನಂನಮ್ಮ ಸಾಮೂಹಿಕ ಹೊಣೆಗಾರಿಕೆಯ ಚಾರಿತ್ರಿಕ ತುರ್ತಿನ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದ್ದೆವು. ನಮ್ಮ ಪ್ರಗತಿಪರ ಚಿಂತಕರಲ್ಲಿ ಅರ್ಪಣಾ ಮನೋಭಾವದ ಹೆಮ್ಮೆಯ ಗೆಳೆಯರಾದ ಹರಿಕುಮಾರ್ ಸಜ್ಜನಿಕೆ ಮತ್ತು ಬದ್ಧತೆ ನಿಜಕ್ಕೂ ಅಪರೂಪದ್ದು. ಮಾಧ್ಯಮಲೋಕದಲ್ಲಿ ದಲಿತ ಮತ್ತು ತಬ್ಬಲಿಜಾತಿಗಳ ಹಿನ್ನೆಲೆಯ ಪ್ರತಿಭಾವಂತರ ಅಭಾವ ತುಳುಕಾಡುತ್ತಿರುವ ಬಗ್ಗೆ ಆಗಾಗ ನಾವು ನೊಂದುಕೊಳ್ಳುತ್ತಿದ್ದೆವು. ಇಂತಹ ಒಂದು ಬಿಚ್ಚುಮನಸ್ಸಿನ ತೀವ್ರತರ ಸಮಾಲೋಚನೆಯ ನಂತರ ಹರಿಕುಮಾರ್ ‘ಪ್ರಜಾವಾಣಿ’ ಪತ್ರಿಕಾ ಸಮೂಹದಲ್ಲಿ ಆ ಬಗೆಯ ಪ್ರಾತಿನಿಧ್ಯ ತುಂಬಾ ಅವಶ್ಯವೆಂದು ನಿರ್ಧರಿಸಿ, ನಮ್ಮ ಸಹಕಾರ ಕೋರಿದರು. ನಾಗರಾಜ್‌ ಮತ್ತು ನಾನು ಈ ಬಗ್ಗೆ ವಿವರವಾಗಿ ಚರ್ಚಿಸುತ್ತಾ - ಬೇರೆ ಬೇರೆ ಹಂತಗಳಲ್ಲಿ ಇಂದೂಧರ, ರಾಕೆ, ಶಿವಾಜಿ, ಶಿವರಾಂ, ಕಾಟ್ರಹಳ್ಳಿ, ದಂಡಾವತಿ ಮುಂತಾದ ಗೆಳೆಯರನ್ನು ಆ ಬಳಗದಲ್ಲಿ ಸೇರಿಸಲು ಸಾಧ್ಯವಾಯಿತು.

ನಾಗರಾಜ್‌ನ ಬೌದ್ಧಿಕ ಶ್ರಮ, ಜ್ಞಾನದ ಹಸಿವಿನ ದೇಶ-ವಿದೇಶಗಳ ಸುತ್ತಾಟದ ತೀವ್ರತೆಯ ವೇಗವನ್ನು ಅವನ ಕಿರಿಯ ವಯಸ್ಸು ಅರಗಿಸಿಕೊಳ್ಳಲಿಲ್ಲ. ಯಾವಾಗಲೂ ಹತ್ತಾರು ಯೋಜನೆಗಳ ಚಿಂತನೆಗಳ ಭಾರದಲ್ಲಿಯೇ, ಟೆನ್ಶನ್‍ನಲ್ಲಿಯೇ ಇರುತ್ತಿದ್ದ. ನಾನು ಬೆಂಗಳೂರು ಬಿಟ್ಟು ಬಂದ ನಂತರ ಅವನ ಮತ್ತು ನನ್ನ ನಡುವೆ ಸಂಪರ್ಕ ಕಡಿಮೆಯಾಗಿತ್ತು. ಆದರೆ, ಅವನ ವಿಚಾರಗಳು, ಚಿಂತನೆಗಳು ಆಗಾಗ ಅವನ ಗೆಳೆಯರೆಲ್ಲರಿಗೂ ನೆನಪಾಗುತ್ತಾ ಕಾಡುವುದು ಮಾತ್ರ ನಿಜ.

(ಮಾ.28ರಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿರುವ ‘ಡಿ.ಆರ್‌.ನಾಗರಾಜ್‌ 67’ ಕಾರ್ಯಕ್ರಮದಲ್ಲಿ, ಶಿವರಾಜ್‌ ಬ್ಯಾಡರಹಳ್ಳಿ ಸಂಪಾದಿಸಿರುವ ‘ಅನನ್ಯ ಪ್ರತಿಭೆಯ ಪರಿ’ ಕೃತಿ ಬಿಡುಗಡೆ ನಡೆಯಲಿದೆ. ಈ ಲೇಖನ ಆ ಕೃತಿಯ ಆಯ್ದಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT