ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಿಯಲ್ಲಿರುವ ಕ್ರಾಂತಿಕಾರಿ ಸಂತ: ಇದು ನಾರಾಯಣಗುರುಗಳಿಗೂ ಅನ್ವಯ

Last Updated 21 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಅಸಾಧಾರಣ ಸಾಮಾಜಿಕ ಪ್ರಜ್ಞೆ ತೋರಿದ ವಿವೇಕಾನಂದರನ್ನು ಪ್ರಖ್ಯಾತ ಚಿಂತಕ ಬರಗೂರು ರಾಮಚಂದ್ರಪ್ಪ-‘ಕಾವಿಯಲ್ಲಿರುವ ಕ್ರಾಂತಿಕಾರಿ ಸಂತ’- ಎಂದಿದ್ದಾರೆ. ಈ ಮಾತು ನಾರಾಯಣ ಗುರುಗಳಿಗೂ ಅನ್ವಯವಾಗುತ್ತದೆ. 19-20ನೇ ಶತಮಾನದಲ್ಲಿ ಕೇರಳದಲ್ಲಿ ಹುಟ್ಟಿ ತಮ್ಮ ತಣ್ಣನೆಯ ಬಂಡಾಯದ ಮೂಲಕ ಭಾರತದ ಧಾರ್ಮಿಕ ಹಾಗೂ ಸಾಮಾಜಿಕ ಚರಿತ್ರೆಗೆ ಹೊಸ ದಿಕ್ಕನ್ನು ತೋರಿದ ನಾರಾಯಣ ಗುರುಗಳದು ಪೆರಿಯಾರ್ ಅವರಂತೆ ಸಂಘರ್ಷದ ಹಾದಿಯಲ್ಲ. ಮೇಲ್ವರ್ಗವನ್ನು ದೂಷಿಸುವ ಮೂರ್ತಿಭಂಜಕ ಮಾದರಿಯಲ್ಲ. ‘ನನ್ನದು ವಿನಾಶದ ಮಾರ್ಗವಲ್ಲ, ವಿರಚನಾಮಾರ್ಗ’-ಎಂದಿದ್ದರು ವಿವೇಕರು. ಅಂತೆಯೆ ಗುರುಗಳದು ಕೂಡ. ತಣ್ಣನೆ ಹರಿವ ನದಿಯಂತೆ ಇಕ್ಕೆಲಗಳನ್ನು ಒಳಗೊಳ್ಳುತ್ತಾ ತುಂಬಿಹರಿದರು. ಭೋರ್ಗರೆಯಲಿಲ್ಲ ಹಾಗೆಯೇ ತಲೆಬಾಗಲೂ ಇಲ್ಲ. ಒಂದರ್ಥದಲ್ಲಿ ಅವರದು ಮಧ್ಯಮ ಮಾರ್ಗ. ವರ್ತಮಾನದ ಭಾರತದಲ್ಲಿ ಭುಗಿಲೇಳುತ್ತಿರುವ ಅಸಹನೆ ಮತಾಂಧತೆ ಜಾತೀಯತೆ ಮತ ಮೌಢ್ಯಗಳಿಗೆ ನಾರಾಯಣ ಗುರುಗಳದು ಪರಿಹಾರದ ಮಾರ್ಗ. ಅವರು ದೀನದಲಿತರಿಗಾಗಿ ಮರುಗಿದರು. ಅವರ ಉದ್ಧಾರಕ್ಕಾಗಿ ಅವಿರತ ಶ್ರಮಿಸಿದರು. ಇದಕ್ಕಾಗಿ ಅವರು ಮೇಲ್ಜಾತಿಯವರನ್ನು ದ್ವೇಷಿಸಲಿಲ್ಲ ಪ್ರತಿಭಟಿಸಲಿಲ್ಲ ಹಾಗೂ ಯಾರೊಂದಿಗೂ ತಾರತಮ್ಯ ಮಾಡಲಿಲ್ಲ. ಇದು ಅವರ ಯಶಸ್ಸಿಗೆ ಮುಖ್ಯ ಕಾರಣವಾದ ಸಂಗತಿ.

ಪ್ರಬಲ ನಂಬೂದರಿ ಬ್ರಾಹ್ಮಣರು ಕೆಳಜಾತಿಯವರಾದ ಈಳವ ಪುಲಯ್ಯ ಪರಯ್ಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಬ್ರಿಟಿಷರ ಬೆಂಬಲದೊಂದಿಗೆ ನಂಬೂದರಿಗಳೇ ಭೂಮಾಲಿಕರಾಗಿದ್ದರು. ಸಂಸ್ಕೃತ, ಮಲಯಾಳ ಸಾಹಿತ್ಯ, ರಾಮಾಯಣ, ಮಹಾಭಾರತ, ಭಾಗವತ, ಭಾಷಾಶಾಸ್ತ್ರ, ತರ್ಕಶಾಸ್ತ್ರ, ವೇದಾಂತ, ಧ್ಯಾನ ಮೊದಲಾದವುಗಳಲ್ಲಿ ಪಳಗಿ ಬಂದ ಗುರುಗಳು ಮೊದಲಲ್ಲಿ ಕೆಳವರ್ಗದವರಿಗೆ ಧಾರ್ಮಿಕ ಸಮಾನತೆ ಕೊಡಿಸುವ ಪ್ರಯತ್ನದ ಮೂಲಕ ತಮ್ಮ ಹೋರಾಟಕ್ಕೆ ಗಟ್ಟಿಯಾದ ತಳಹದಿಯನ್ನು ಕಟ್ಟಿಕೊಂಡರು. ‘ಅಧ್ಯಾತ್ಮ ಮತ್ತು ಧರ್ಮ ಅನ್ನೋದು ಮನುಷ್ಯನಿಗೆ ಅನ್ನನೀರುಗಳಷ್ಟೆ ಮುಖ್ಯ, ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ ವಾದಿಸಿ ಜಯಿಸಲಿಕ್ಕೂ ಅಲ್ಲ, ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು’ ಎನ್ನುತ್ತಿದ್ದ ಗುರುಗಳು ಧಾರ್ಮಿಕ ಸಮಾನತೆಯ ಮೂಲಕ ಅಸ್ಪೃಶ್ಯರು ಕೆಳಜಾತಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು.

‘ಒಂದೇ ಧರ್ಮ, ಒಂದೇ ಜಾತಿ, ಒಬ್ಬನೇ ದೇವರು’ ಎಂದು ಘೋಷಿಸಿ ಪ್ರಕೃತಿ ಮೂಲದ ಕಲ್ಲನ್ನು ಎತ್ತಿತಂದು ಅರಿವಿಪುರಂನಲ್ಲಿ ಸ್ಥಾಪಿಸಿ ಅದನ್ನು ‘ಮೂಲಲಿಂಗ’ ಎಂದರು. ‘ನಾವೇನು ಸ್ಥಾಪಿಸಿದ್ದೇವೆಯೋ ಅದು ಬ್ರಾಹ್ಮಣ ಶಿವನಲ್ಲ, ಇದು ಕೇವಲ ನಮ್ಮ ಶಿವ-ಶೂದ್ರಶಿವ’ ಎಂದರು. ಮೂಲಲಿಂಗಸ್ಥಾಪನೆಯ ದಿನ ಅವರ್ಣೀಯರನ್ನು ಸೇರಿಸಿ ಅವರ ಮಕ್ಕಳನ್ನು ತಮ್ಮ ಎಡಬಲಗಳಲ್ಲಿ ತಬ್ಬಿಕುಳಿತು ‘ದೇವರ ಮಕ್ಕಳು’ ಎಂದದ್ದು ವಿಶೇಷವಾಗಿತ್ತು. ಕೆಳಜಾತಿಯವರಿಗಾಗಿ ದೇವಸ್ಥಾನ ಕಟ್ಟುವ ಗುರುಗಳ ಪ್ರಯತ್ನದ ಫಲವಾಗಿ ಕರ್ನಾಟಕ ಕೇರಳ, ತಮಿಳುನಾಡು, ಶ್ರೀಲಂಕಾ ಸೇರಿ ಒಟ್ಟು 79 ಶಿವಮಂದಿರಗಳು ಸ್ಥಾಪನೆಯಾದವು. ಇದರ ಹಿಂದೆ- ಕೆಳಜಾತಿಗಳನ್ನು ಸವರ್ಣೀಯರ ಹಿಡಿತದಿಂದ ಬಿಡುಗಡೆಗೊಳಿಸುವುದು, ಧಾರ್ಮಿಕ ಸಮಾನತೆ ತಂದುಕೊಡುವುದು, ಸಾಮಾಜಿಕ ಶೋಷಣೆಗಳಿಂದ ಮುಕ್ತಗೊಳಿಸುವ ಪ್ರಯತ್ನ ಹಾಗೂ ಶೈಕ್ಷಣಿಕ ಜಾಗೃತಿಯ ಉದ್ದೇಶವಿತ್ತು. ಸವರ್ಣೀಯರು ಯಾವ ಅಸ್ತ್ರಗಳ ಮೂಲಕ ಕೆಳವರ್ಗಗಳನ್ನು ಶೋಷಣೆ ಮಾಡುತ್ತಿದ್ದರೊ ಅದೇ ಅಸ್ತ್ರ(ಧರ್ಮ) ಹಿಡಿದು ಧಾರ್ಮಿಕ ಹಾಗು ಸಾಮಾಜಿಕ ಸ್ವಾತಂತ್ರ್ಯ ತಂದುಕೊಟ್ಟರು. ಭಾರತೀಯ ಸಮಾಜದ ದುರಂತವೂ ಮಹಾ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ವಿರುದ್ಧ ನಿಂತು ಸಮಾಜಸುಧಾರಣೆಗೆ ಅಧ್ಯಾತ್ಮಿಕ ಸ್ಪರ್ಶ ನೀಡಿದರು. ದೇವಾಲಯಗಳು ಅವರಿಗೆ ಶ್ರದ್ಧಾಕೇಂದ್ರಗಳಾಗಿ ಮಾತ್ರವಿರದೆ-ಬದಲಾವಣೆಯ ಪ್ರೇರಕಶಕ್ತಿ ಕೇಂದ್ರಗಳಾಗಿದ್ದವು. ಸಾಮಾಜಿಕ ಅನಿಷ್ಟಗಳಿಗೆ ಕಾರಣವಾದ ಧರ್ಮವೆ ಈ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಬಲ್ಲದು ಎಂಬುದರಲ್ಲಿ ಅವರಿಗೆ ನಂಬಿಕೆ ಇತ್ತು. ಈ ಕಾರಣದಿಂದಾಗಿಯೆ ಅವರು ಏಕಕಾಲಕ್ಕೆ ಸಂತ ಹಾಗೂ ಸಾಮಾಜಿಕ ಹೋರಾಟಗಾರರಾಗಿ ಬೆಳೆದು ನಿಂತರು.

ಮೌಢ್ಯ-ಕೆಳವರ್ಗದ ದಮನಿತರ-ಸ್ತ್ರೀಯರ ಮೊದಲ ಶತೃ ಎಂದು ತಿಳಿದಿದ್ದ ಅವರು ನಾಗಪೂಜೆಯ ನಿಷೇಧ, ಭೂತಪೂಜೆ-ಪ್ರಾಣಿಬಲಿಗಳ ವಿರೋಧ, ದೇವದಾಸಿ ನಿಷೇಧ, ತಾಳಿಕಟ್ಟು ನಿಷೇಧ, ತಿರಂಡು ಕುಳಿ-ಪುಳಿಕುಟಿ ನಿಷೇಧ ಇವುಗಳೊಂದಿಗೆ ಮದ್ಯಪಾನ-ಅಸ್ಪೃಶ್ಯತೆ ಆಚರಣೆಗಳ ನಿಷೇಧ, ಆಡಂಬರ ಹಾಗೂ ಖರ್ಚುಗಳಿಲ್ಲದ ಸರಳ ವಿವಾಹಗಳು, ವರದಕ್ಷಿಣೆಯ ನಿಷೇಧ, ವಿವಾಹ ನೋಂದಣಿ, ಶಿಶುಪಾಲನೆಯಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ಸಾಧಿಸಿ ತೋರಿದರು. ಇಂತಹ ಅಸಾಧಾರಣ ಸಾಮಾಜಿಕ ಸುಧಾರಣೆಗಳ ಮೂಲಕ ಗುರುಗಳು ಆಧುನಿಕ ಭಾರತದ ನಿರ್ಮಾಣಕ್ಕೆ ತಮ್ಮ ಕನಸುಗಳನ್ನು ಜೋಡಿಸಿ ಜೀವತುಂಬಿದರು.

ನಾರಾಯಣ ಗುರುಗಳ ದೂರದೃಷ್ಟಿಯ ಫಲವಾಗಿ ಜನರನ್ನು ಶೈಕ್ಷಣಿಕವಾಗಿ ಸಬಲರನ್ನಾಗಿಸುವ ಅರಿವಿನ ಮಾರ್ಗದಲ್ಲಿ ಮುನ್ನಡೆಸುವ ಉದ್ದೇಶದಿಂದ ‘ ಒಂದು ದೇವಸ್ಥಾನ, ಒಂದು ಶಾಲೆ’ ಎಂಬ ಘೋಷಣೆಯೊಂದಿಗೆ ಶಾಲೆಗಳನ್ನು ಸ್ಥಾಪಿಸಿದರು. ಸ್ವತಃ ಪುಲಯ್ಯರ ಕೇರಿಗೆ ಹೋಗಿ ಅವರ ಮಕ್ಕಳಿಗೆ ಅಕ್ಷರಾಭ್ಯಾಸ ನೀಡಿದರು. ‘ವಿದ್ಯೆಯೆ ಜ್ಞಾನ, ಜ್ಞಾನವೆ ಬೆಳಕು’ ‘ ಅಕ್ಷರಜ್ಞಾನದಿಂದಲೆ ಜನರ ಅಜ್ಞಾನವನ್ನು ದೂರಮಾಡಿ’ ‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ’ ಎಂಬಿತ್ಯಾದಿ ಮಾತುಗಳು ಮುಂದೆ ಅಂಬೇಡ್ಕರ್ ಅವರ ಮೂಲಕ ಅನುರಣನಗೊಂಡವು. ಶಿವಗಿರಿಯಲ್ಲಿ ‘ಶಾರದಾದೇವಿ’ಯನ್ನು ಪ್ರತಿಷ್ಠಾಪಿಸಿ ಒಂದು ಕೈಯಲ್ಲಿ ಪುಸ್ತಕ ಇರಿಸಿದರು. ಚಿದಂಬರ ಕ್ಷೇತ್ರದಲ್ಲಿ ಜ್ಯೋತಿಯೊಂದನ್ನಷ್ಟೆ ಬೆಳಗಿಸಿ ‘ ದೇವಸ್ಥಾನ ಕಟ್ಟಿದ್ದು ಸಾಕು, ಇನ್ನು ಕಟ್ಟ ಬೇಕಾಗಿರುವುದು ಶಾಲೆಗಳನ್ನು ಮಾತ್ರ’ ಎಂದು ಘೋಷಿಸಿದರು. ಇಂತಹ ಅಸಾಧಾರಣ ಸಂತಗುರುವನ್ನು ಕಾಣಲು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಎಸ್.ರಾಧಾಕೃಷ್ಣನ್, ಸಿ.ಎಫ್.ಆಂಡ್ರೂಸ್ ಮೊದಲಾದ ರಾಷ್ಟ್ರಮಟ್ಟದ ನಾಯಕರೆ ಕೇರಳಕ್ಕೆ ಬಂದರು. ‘ನಿಮ್ಮಂತಹ ಸಾಧಕರಿಂದಲೇ ನಮ್ಮ ದೇಶದ ಉದ್ಧಾರ ಸಾಧ್ಯ’-ಎಂದು ತಮ್ಮ ಮೊದಲ ಭೇಟಿಯಲ್ಲಿಯೆ ಉದ್ಘರಿಸಿದರು ಟ್ಯಾಗೋರ್. ‘ದಲಿತವರ್ಗದ ಉದ್ಧಾರಕ್ಕಾಗಿ, ಅಸ್ಪೃಶ್ಯತೆಯ ಉಚ್ಛಾಟನೆಯೆ ಅತಿರಿಕ್ತವಾಗಿ ಅವರಿಗೆ ಏನೇನು ಉಪಲಬ್ಧಿಯಾಗಬೇಕು?’ ಎಂದು ಗಾಂಧಿ ಕೇಳಿದ ಪ್ರಶ್ನೆಗೆ ಗುರುಗಳ ಉತ್ತರ ಅವರಿಗೆ ಆರ್ಥಿಕ ಮತ್ತು ಶಿಕ್ಷಣದ ಅವಕಾಶಗಳು ಲಭಿಸುವಂತಾಗಬೇಕು. ಸಹಪಂಕ್ತಿಭೋಜನ ಹಾಗೂ ಅಂತರ್ಜಾತೀಯ ವಿವಾಹಗಳು ಪ್ರಸ್ತುತ ಅನಿವಾರ್ಯಗಳಲ್ಲ. ಉನ್ನತಿಗಾಗಿ ಅವರಿಗೆ ಸವರ್ಣೀಯರೊಂದಿಗೆ ಸಮಾನ ಅಧಿಕಾರ ಪ್ರಾಪ್ತವಾಗಬೇಕು’-ಎಂದಿದ್ದರು. ನಾರಾಯಣ ಗುರುಗಳದು ಭಾವುಕ ನೋಟವಲ್ಲ, ವಾಸ್ತವದ ನೆಲೆಯದ್ದು. ಈ ಮಾತು ಇಂದಿಗೂ ಸತ್ಯ. ಧಾರ್ಮಿಕ ತಳಹದಿಯ ಮೇಲೆ ಸಾಮಾಜಿಕ ಸಮಾನತೆಯನ್ನು ಸಾಧಿಸಬಹುದೆಂಬುದನ್ನು ಗುರುಗಳು ಅರ್ಥಪೂರ್ಣವಾಗಿ ಸಾಧಿಸಿ ತೋರಿದರು.

ಸಾಮಾಜಿಕ ಸಮಾನತೆಯನ್ನು ಸಾಧಿಸುವುದೆಂದರೆ ಮೇಲಿನವರನ್ನು ಕೆಳಗಿಳಿಸುವುದಲ್ಲ. ಬದಲಿಗೆ ಕೆಳಸ್ಥರದಲ್ಲಿರುವವರನ್ನು ಮೇಲಕ್ಕೇರಿಸುವುದು ಎಂಬ ತತ್ವದಡಿ ಅವರು ಕೆಲಸ ಮಾಡಿದರು. ಇದು ಅತ್ಯಂತ ಸೂಕ್ತ ಮಾರ್ಗವಾಗಿತ್ತು. 1892ರಲ್ಲಿ ಗುರುಗಳ ಶಿಷ್ಯರಾದ ಡಾ.ಪಲ್ಪುರವರು ಮೈಸೂರಿಗೆ ಬಂದಿದ್ದ ವಿವೇಕಾನಂದರನ್ನು ಭೇಟಿಯಾದ ಸಂದರ್ಭವೊಂದು ದಾಖಲಾಗಿದೆ. ಕೇರಳದ ಅಸಮಾನ ಸಮಾಜದ ಬಗ್ಗೆ ಅವರಿಬ್ಬರ ನಡುವೆ ಸುದೀರ್ಘ ಚರ್ಚೆ ನಡೆದು ಧಾರ್ಮಿಕ ತಳಹದಿಯ ಮೇಲೆಯೆ ಸಾಮಾಜಿಕ ಪರಿವರ್ತನೆಗಳು ಆಗಬೇಕೆಂದು ವಿವೇಕಾನಂದರು ಅಭಿಪ್ರಾಯಪಟ್ಟಿರುವುದನ್ನು ಈ ಹಿನ್ನೆಲೆಯಲ್ಲಿಯೆ ಗ್ರಹಿಸಬೇಕು.

ನರಜಾತಿಯಿಂದಲ್ಲವೇ ಹುಟ್ಟುವುದು ವಿಪ್ರನೂ

ಮಾದಿಗ ತಾನು ಏನುಂಟಂತರವು ನರಜಾತಿಯೊಳ್

ಮಾದಿಗಿತ್ತಿಯಲಿ ಹಿಂದೆ ಪರಾಶರ ಮಹಾಮುನಿ

ಹುಟ್ಟಿದ ವೇದವ ಸೂತ್ರಿಸಿದ ಮುನಿ ಬೆಸ್ತ ಕನ್ಯೆಯೊಳು

(ಅನು|| ಬಾಬು ಶಿವಪೂಜಾರಿ-ಶ್ರೀ ನಾರಾಯಣಗುರು ವಿಜಯದರ್ಶನ) ಎಂದಿರುವ ಗುರುಗಳು ಜಾತಿಮೀಮಾಂಸೆಯನ್ನು ತಿರಸ್ಕರಿಸಿ ಮನುಕುಲದ ಐಕ್ಯತೆಯನ್ನು ಬಯಸಿದರು. ಅವರು ಕಟ್ಟಬಯಸಿದ ಸಮಾಜದಲ್ಲಿ ಯಾರ ಬಗ್ಗೆಯೂ ದ್ವೇಷವಿರಲಿಲ್ಲ. ಅವರದು ಸಂಘರ್ಷವಿಲ್ಲದ ಅನುಸಂಧಾನದ ಹಾದಿ. ದೇವರು-ದೇವಾಲಯಗಳನ್ನು ನಿರಾಕರಿಸದೆ ಅವುಗಳಿಗೆ ಹೊಸ ರೂಪ ಕೊಡುವ ಪ್ರಯತ್ನ ಮಾಡಿದರು. ಇದರಿಂದಾಗಿ ಅವರು ಮೇಲ್ವರ್ಗದಿಂದ ವಿರೋಧ ಎದುರಿಸುವ ಸನ್ನಿವೇಶಗಳೆ ಒದಗಿ ಬರಲಿಲ್ಲ. ದೀನದಲಿತರ ಉದ್ಧಾರಕ್ಕಾಗಿ ತಮ್ಮ ಶಕ್ತಿಯನ್ನೆಲ್ಲಾ ಧಾರೆಯೆರೆದರು. ಸವರ್ಣೀಯರನ್ನು ದ್ವೇಷಿಸಲಿಲ್ಲ. ‘ನಮ್ಮ ಹಕ್ಕು ಸಮಾನತೆಯನ್ನು ಪಡೆದುಕೊಳ್ಳಲು ಮೇಲ್ವರ್ಗದವರ ಜತೆ ಸಂಘರ್ಷ ಮಾಡಬೇಕಾಗಿಲ್ಲ. ಕೆಳವರ್ಗದವರ ಬದುಕನ್ನು ಮೇಲೆತ್ತಬೇಕು’ ಎಂದರು.

ಶಿವನಿಂದ ಹೊರಟ ಅವರು ಅಂತಿಮವಾಗಿ ಶಿಕ್ಷಣದ ಅರಿವಿನ ನೆಲೆಗೆ ಬಂದು ನಿಂತರು. ಪ್ರಕೃತಿಯಲ್ಲಿ ಶಿವನನ್ನು ಕಂಡರಿಸಿ, ಕನ್ನಡಿಯನ್ನು ಸ್ಥಾಪಿಸಿ ‘ತತ್ವಮಸಿ’(ಅದು ನೀನೆ) ಎಂದು ನಮ್ಮನ್ನೆ ನಮಗೆ ಪರಿಚಯಿಸಿದರು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ‘ಜ್ಯೋತಿ’ಯನ್ನು ಬೆಳಗಿಸಿ ಕೆಳವರ್ಗದವರಲ್ಲಿ ಅರಿವನ್ನು ವಿಸ್ತರಿಸಿದರು. ಈ ಬಗೆಯ ಪ್ರಯೋಗಗಳನ್ನು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಮತ್ತೊಬ್ಬ ಸಂತ ನಮಗೆ ದೊರೆಯಲಾರ.

ಧರ್ಮವೆ ಬೇರೆ, ಸಮಾಜಸುಧಾರಣೆಯೆ ಬೇರೆ ಅಂದುಕೊಂಡವರಿಗೆ ನಾರಾಯಣ ಗುರುಗಳ ಸಮಾಜೋಧಾರ್ಮಿಕ ಚಳುವಳಿ ಸೂಕ್ತ ಉತ್ತರ ನೀಡಿತು. ವೈದಿಕರಿಂದ ಹೊರತಾದ ವೈಚಾರಿಕವಾದ ಸಮಸಮಾಜದ ಹಿಂದೂಧರ್ಮವೊಂದರ ಸಾಧ್ಯತೆಯನ್ನು ತೆರೆದುತೋರಿದ್ದು ಅವರ ಅಸದೃಶ ಸಾಧನೆಯಾಗಿದೆ. ನಾರಾಯಣ ಗುರುಗಳಂತೆ ಭಾರತದ ಕೆಳಮಧ್ಯಮ ಜಾತಿಗಳಿಗೆ ಸೇರಿದವರೆಲ್ಲ ತಂತಮ್ಮ ಶೂದ್ರಶಿವನನ್ನು ಸ್ಥಾಪಿಸಿಕೊಂಡು ಹೊರಟರೆ ಸಾವಿರಾರು ವರ್ಷಗಳಿಂದ ಹಿಂದೂಸಮಾಜದ ಜುಟ್ಟನ್ನು ಹಿಡಿದು ತನ್ನ ಸಾಮ್ರಾಜ್ಯ ಕಟ್ಟಿಕೊಂಡಿರುವ ಪುರೋಹಿತಶಾಹಿಯ ಗತಿಯೇನಾಗಬಹುದು?

ಪೆರಿಯಾರ್-ಈ ಶತಮಾನದ ಆಧುನಿಕ ನಾಸ್ತಿಕರಲ್ಲಿ ಪ್ರಭಾವಶಾಲಿ ನಿಜ. ಒಂದರ್ಥದಲ್ಲಿ ಅವರನ್ನು 20ನೇ ಶತಮಾನದ ಚಾರ್ವಾಕ ಎಂದೂ ಕರೆಯಬಹುದು. ಆದರೆ ಆ ಕಾಲದ ಸಮಾಜ ಅವರ ಅತಿ ಉಗ್ರ ನಾಸ್ತಿಕವಾದವನ್ನು ಸಹಿಸಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಈಗಲೂ ಇಲ್ಲ. ನಾಸ್ತಿಕತೆಯ ಪ್ರತಿಪಾದನೆಯೊಂದಿಗೆ ಶೂದ್ರಜನಾಂಗಗಳಲ್ಲಿ ಎಚ್ಚರದ ಪ್ರಜ್ಞೆ ಬಿತ್ತಲು ಅವರು ಪ್ರಯತ್ನಿಸಿದರು. ಆದರೆ ಅದು ಫಲ ನೀಡಲಿಲ್ಲ. ಅವರು ತೀರಿಹೋದ ಬಳಿಕ ಜನ ಅವರನ್ನು ಮರೆತುಬಿಟ್ಟರು. ಪೆರಿಯಾರ್ ಪಾಶ್ಚಿಮಾತ್ಯ ರೀತಿಯ ವಿಚಾರವಾದಿ. ಅವರು ಈ ನೆಲದ ಧರ್ಮಸಂಸ್ಕೃತಿ ಮನುಷ್ಯನ ಒಳಗಿನ ಆಧ್ಯಾತ್ಮಿಕತೆಗಳ ನಡುವಿನ ಸಂಬಂಧವನ್ನು ಕುರಿತು ಸೂಕ್ಷ್ಮವಾಗಿ ಚಿಂತಿಸಲಿಲ್ಲ. ಶತಮಾನಗಳಿಂದ ರೂಪುಗೊಂಡಿರುವ ಜನಸಮುದಾಯದ ಮನೋಧರ್ಮವನ್ನು ನಂಬಿಕೆ, ಆಚಾರಗಳನ್ನು ಒಂದೇ ಏಟಿಗೆ ಬದಲಿಸುವೆನೆಂಬ ಅತ್ಯುತ್ಸಾಹ-ಮಿತಿಮೀರಿದ ಆಕ್ರೋಶದಿಂದ ಹೊರಟಿದ್ದು ಫಲನೀಡಲಿಲ್ಲ. ಅವರು ಅತಿದೀರ್ಘಕಾಲ ಜಾತಿವಿನಾಶ ಚಳುವಳಿ ನಡೆಸಿದ ತಮಿಳುನಾಡಿನಲ್ಲಿಯೆ ಇಂದು ಅತಿ ಹೆಚ್ಚು ಜಾತಿದೌರ್ಜನ್ಯಗಳು ಘಟಿಸುತ್ತಿವೆ. 2011ರಲ್ಲಿ ಇಂತಹ 1400ಕ್ಕಿಂತ ಹೆಚ್ಚಿನ ಪ್ರಕರಣಗಳು ಈ ರಾಜ್ಯದಲ್ಲಿ ದಾಖಲಾಗಿವೆ. ಅಲ್ಲಿ ದೇಶದಲ್ಲಿಯೆ ಅತಿ ಹೆಚ್ಚು ಸಂಖ್ಯೆಯ ದೇವಸ್ಥಾನಗಳನ್ನು ಕಟ್ಟಲಾಗಿದೆ.

ಪೆರಿಯಾರ್-ಮೊದಲು ಬ್ರಾಹ್ಮಣರ ವಿಷ್ಣುಪಾರಮ್ಯದ ಕತೆಗಳನ್ನು ತುರುವಾಯ ಈ ದೇಶದ ಮೂಲದೈವವಾದ ಶಿವನನ್ನೂ ಟೀಕಿಸಿ ಮಾತನಾಡತೊಡಗಿದರು. ವೈಷ್ಣವಕತೆಗಳನ್ನು ಗುಡಿಸಿ ಎಸೆಯಲು ಮೊದಮೊದಲು ಪೆರಿಯಾರ್ ಅವರೊಂದಿಗೆ ಕೈಜೋಡಿಸಿದ್ದ ಶೈವರಾದ ಮರೈಮಲೈ ಮೊದಲಾದ ಸಮುದಾಯಗಳು ತದನಂತರ ಅವರಿಂದ ದೂರ ಸರಿದುಬಿಟ್ಟವು. ರಾಮಾಯಣ-ಮಹಾಭಾರತದ ಕಥನಗಳೊಂದಿಗೆ ‘ಪೆರಿಯಪುರಾಣಂ’ವನ್ನೂ ವಿಡಂಬಿಸಿ ಮಾತಾಡತೊಡಗಿದರು. ಇದರಿಂದ ಜನಸಾಮಾನ್ಯರು ಅವರಿಂದ ಅಂತರಕಾಯ್ದುಕೊಂಡರು. ಪೆರಿಯಾರ್ ಅವರ ಸಾಂಸ್ಕೃತಿಕ ರಾಜಕಾರಣದ ಮಾದರಿ ‘ಸಮಗ್ರ ನಿರಾಕರಣೆಯ ಮೂಲದ್ದು’. ಅವರು ಯಾವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದರೋ ಅದರಲ್ಲಿ ಏನೂ ಚೈತನ್ಯವೆ ಇಲ್ಲ ಎಂಬ ಪೂರ್ವಾಗ್ರಹವಿತ್ತು. ಧರ್ಮ ಮತ್ತು ಸಂಸ್ಕೃತಿಗಳೆರಡನ್ನೂ ಅವರು ಅಭಿನ್ನವಾಗಿ ಭಾವಿಸಿದ್ದರು. ಇವೆರಡರ ನಡುವೆ ಇರುವ ಸಂಘರ್ಷ ಹಾಗೂ ಸಾಮರಸ್ಯದ ನೆಲೆಗಳನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ. ವಿಜ್ಞಾನದ ಆವಿಷ್ಕಾರಗಳಲ್ಲಿಯೆ ಮನುಷ್ಯನ ಸುಖ-ಸಂತೃಪ್ತಿ ದೊರೆಯುವುದರಿಂದ ಧರ್ಮ-ಆಧ್ಯಾತ್ಮಗಳ ಹಂಗೇ ಬೇಕಾಗಿಲ್ಲ ಎಂದು ಅವರು ಭಾವಿಸುತ್ತಾರೆ. ಸಮುದಾಯ ಕೂಡ ಹಾಗೆಯೆ ಭಾವಿಸಿ-ಬದುಕಬೇಕೆಂದು ಒತ್ತಾಯಿಸುತ್ತಾರೆ. ಮಾನವನ ಒಳಚೈತನ್ಯಕ್ಕೂ ಧಾರ್ಮಿಕತೆಗೂ ಇರುವ ಸಂಬಂಧದ ಕಲ್ಪನೆಯನ್ನು ಅವರು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು.

ಲೋಹಿಯಾ ಅವರು ಪೆರಿಯಾರ್ ಹಾಗೂ ಅಂಬೇಡ್ಕರ್ ಅವರ ಹಾಗೆ ಹಿಂದೂಧರ್ಮದ ವಿನಾಶವನ್ನು ಬಯಸಲಿಲ್ಲ. ಧರ್ಮದೊಳಗಿನ ಜಾತಿ-ಅಸ್ಪೃಶ್ಯತೆ ಮತಾಚಾರಗಳಿಂದ ಮುಕ್ತವಾದ ಸಮಾಜವಾದಿ ಹಾಗೂ ಸಾಂಸ್ಕೃತಿಕವಾದ ಹಿಂದೂಧರ್ಮದ ಕನಸುಕಂಡರು. ನಾರಾಯಣ ಗುರುಗಳ ಮಾರ್ಗವೂ ಇದೆ ಆಗಿತ್ತು. ಅತ್ಯಂತ ವೈಚಾರಿಕವೂ ಹಾಗೂ ಸಮಾನತೆಯ ನೆಲೆಯಲ್ಲಿ ಹಿಂದೂ ಸಮಾಜವನ್ನು ಸುಧಾರಿಸಲು ಅವರು ಬಯಸಿದ್ದರು. ಹಿಂದೂಧರ್ಮದ ಆವರಣದಲ್ಲಿಯೆ ಇದ್ದು ಕೆಳವರ್ಗದವರ ಸ್ವಾಭಿಮಾನ ಅಸ್ತಿತ್ವಗಳಿಗೆ ಪೂರಕವಾದ ರಚನಾತ್ಮಕ ಯೋಜನೆಗಳನ್ನು ರೂಪಿಸಿದರು. ಶಿಕ್ಷಣದಿಂದ ಸಂಘಟನೆ-ಬಲ-ಅರಿವು ಎಂದಾದ ಮೇಲೆ, -‘ಇನ್ನು ದೇವಸ್ಥಾನ ಕಟ್ಟಿದ್ದು ಸಾಕು-ಶಾಲೆಗಳನ್ನು ಕಟ್ಟಿ, ಕೈಯಲ್ಲಿ ಪೂಜಾ ಸಾಮಾಗ್ರಿ ಹಿಡಿದು ಮಂದಿರಗಳಿಗೆ ಹೋಗುವ ಹಾಗೆ ನಿಮ್ಮ ಮಕ್ಕಳ ಕೈಹಿಡಿದು ಶಾಲೆಗೆ ಕರೆದೊಯ್ಯಿರಿ’- ಎಂದು ಕರೆಕೊಟ್ಟರು. ಯಾರ ಮನಸ್ಸನ್ನು ನೋಯಿಸದೆ, ಯಾರ ವಿರುದ್ಧವೂ ಸಂಘರ್ಷಕ್ಕಿಳಿಯದೆ, ಮೇಲಿನವರನ್ನು, ಕೆಳಗೆ ತಳ್ಳದೆ, ಕೆಳಗೆ ಬಿದ್ದವರನ್ನು ಕೈಹಿಡಿದೆತ್ತಿ ನಿಲ್ಲಿಸಲು ಪ್ರಯತ್ನಿಸಿದರು. ಧರ್ಮದ ಮೂಲಕ ಸಮಾಜಸುಧಾರಣೆಗೆ ರಚನಾತ್ಮಕ ಮಾರ್ಗ ಹುಡುಕಿಕೊಂಡರು. ಮುಖ್ಯವಾಗಿ ಗಮನಿಸಬೇಕಾದ ಮಾತೆಂದರೆ ಗುರುಗಳು ಧರ್ಮಕ್ಕೂ ಅಂಧಶ್ರದ್ಧೆಗೂ ಎಲ್ಲಿಯೂ ಸಂಬಂಧ ಕಲ್ಪಿಸಲಿಲ್ಲ. ಅರಿವನ್ನು ವಿಸ್ತರಿಸುವ ಧರ್ಮ ಮಾರ್ಗ ಹುಡುಕಿಕೊಟ್ಟರು. ಯಜಮಾನಿಕೆ ತೋರುವ ವೈಷ್ಣವಧರ್ಮಕ್ಕೆ ಪರ್ಯಾಯವಾಗಿ ಜನಸಾಮಾನ್ಯರ ಕಾಯಕನಿಷ್ಠವಾದ ಶಿವಸಂಸ್ಕೃತಿಯ ಹಿಂದೂಧರ್ಮವನ್ನು ಪರಿಚಯಿಸಿದರು.-‘ಮತ ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕಲ್ಲವೆ?’ ಎಂದು ಮಾನವತೆಯ ಧರ್ಮವೇ ಶ್ರೇಷ್ಠವಾದುದು ಎಂದು ಸಾರಿದರು. ನಿಜಕ್ಕೂ ಭಾರತದ ಆಧುನಿಕ ಹಿಂದೂಧರ್ಮದ ಮಹಾನ್‍ಗುರು ನಾರಾಯಣ ಗುರುಗಳು. ಧರ್ಮಕ್ಕೂ ಸಮಾಜಸುಧಾರಣೆಗೂ ಇರುವ ಸಂಬಂಧ ಹಾಗೂ ಸಾಧ್ಯತೆಗಳನ್ನು ಅವರ ಹಾಗೆ ತೋರಿದವರು ವಿರಳ.

ಆರ್ಯಸಂಸ್ಕೃತಿಗಿಂತ ಭಿನ್ನವಾದ ನೆಲಮೂಲದ ಸಂಸ್ಕೃತಿಯ ಬೇರುಗಳನ್ನು ಬಲಗೊಳಿಸುವ ‘ಸಾಂಸ್ಕೃತಿಕ ಅನುಸಂಧಾನದ’-ಮಾದರಿಯನ್ನು ವಿವೇಕಾನಂದ, ನಾರಾಯಣಗುರು, ಮಹಾತ್ಮ ಗಾಂಧಿ ಹಾಗೂ ಕುವೆಂಪು ಅನುಸರಿಸಿದರು. ಸಂಪ್ರದಾಯವಾದಿ ಮನಸ್ಸುಗಳು ಸೃಷ್ಟಿಸಿರುವ ಅಮಾನವೀಯ ಕ್ರೌರ್ಯದ ತೀವ್ರತೆಯನ್ನು ತಗ್ಗಿಸಿ ಸ್ವಾಭಿಮಾನದಿಂದ ಬದುಕಲಿಚ್ಛಿಸುವ ಆಂತರಿಕ ಪ್ರತಿರೋಧದ ಶಕ್ತಿಗಳು ರೂಪಿಸಿದ ಮಾದರಿಯಿದು. ಇದರ ಹಿಂದೆ ವಚನ-ಹರಿದಾಸ-ಸೂಫಿಸಂತರ ಪ್ರಭಾವಿರುವುದು ಸ್ಪಷ್ಟ. ವ್ಯವಸ್ಥೆಯಿಂದ ಹೊರಗೆ ನಿಂತು ಪ್ರತಿಭಟಿಸುವ ಪೆರಿಯಾರ್‍ಗಿಂತ, ಒಳಗೇ ನಿಂತು (ಕ್ರಿಟಿಕಲ್ ಇನ್‍ಸೈಡರ್) ವಿರೋಧ ವ್ಯಕ್ತಪಡಿಸುತ್ತ ಸಾಮಾಜಿಕ ಸುಧಾರಣೆಯನ್ನು ಸಾಧಿಸುವ ನಾರಾಯಣ ಗುರುಗಳದ್ದು ಅನುಸರಣೀಯ ಮಾರ್ಗ.

ಭಾರತದ ಪ್ರಗತಿಪರರು ನಾರಾಯಣ ಗುರುಗಳಿಂದ ಪಡೆದುಕೊಳ್ಳುವುದು ಸಾಕಷ್ಟಿತ್ತು. ಆದರೆ ಅವರಿಗೆ ಪೆರಿಯಾರ್‍ರವರ ವಿಫಲಗೊಂಡ ಹೋರಾಟದ ಮಾದರಿಯೆ ಹೆಚ್ಚು ಪ್ರಿಯವಾಯಿತು. ಎಡಪಂಥೀಯ ಚಿಂತನಧಾರೆಯು ವಿಮರ್ಶೆಗಳಿಗೆ ತನ್ನನ್ನು ತೆರೆದುಕೊಳ್ಳುವ ಹಾಗೂ ವಸ್ತುನಿಷ್ಠತೆಯನ್ನು ಉಳಿಸಿಕೊಂಡಿರುವುದೇ ಹೌದಾದರೆ ವಿವೇಕಾನಂದ ನಾರಾಯಣಗುರು ಗಾಂಧಿ ಕುವೆಂಪುರವರಿಂದ ತಮ್ಮ ಹೋರಾಟಗಳಿಗೆ ಹೊಸ ಆಯಾಮವನ್ನು ಕಂಡುಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT