‘ಸರಳ ಬದುಕೇ ಸುಂದರ ಬದುಕು’

7

‘ಸರಳ ಬದುಕೇ ಸುಂದರ ಬದುಕು’

ಡಿ. ಉಮಾಪತಿ
Published:
Updated:
ಸೋನಮ್ ವಾಂಗ್ಚುಕ್

ಜಮ್ಮು ಕಾಶ್ಮೀರದ ಲಡಾಕ್‌ ಅತಿ ಎತ್ತರ ಪ್ರದೇಶದ ಶೀತಲ ಮರುಭೂಮಿ. ಚಳಿಗಾಲದಲ್ಲಿ ಸೊನ್ನೆಯ ಕೆಳಗೆ 23 ಡಿಗ್ರಿಗಳಿಗೆ ಕುಸಿದು, ಬೆನ್ನ ಹುರಿಗೆ ಇಳಿಯುವ ಕಡುಕ್ರೂರ ಚಳಿ. ಇಲ್ಲಿ ಎದುರಾಗುವ ‘ಎತ್ತರ ಪ್ರದೇಶದ ಅಸ್ವಸ್ಥತೆ’ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದಂತೆ. ಸಮುದ್ರ ಮಟ್ಟದಿಂದ 9,000- 15,000 ಅಡಿಗಳಷ್ಟು ಎತ್ತರದ ಇಲ್ಲಿನ ಮಣ್ಣಿಗೆ, ನಿಸರ್ಗವು ಹಸಿರನ್ನು ಕರುಣಿಸಿಲ್ಲ. ಆದರೂ ಭಾರತದ ಉತ್ತರ ಸರಹದ್ದಿನ ಈ ಸೀಮೆ ಸುಂದರ, ಮನೋಹರ. ಗಡಿಯ ಗೆರೆ ದಾಟಿದರೆ ಹೆಜ್ಜೆಯೂರುವುದು ಚೀನಾ ಇಲ್ಲವೇ ಟಿಬೆಟ್ ನೆಲದಲ್ಲಿ. ಬೌದ್ಧರೇ ಇಲ್ಲಿ ಬಹುಸಂಖ್ಯಾತರು.

ಮೊನ್ನೆ ಪ್ರತಿಷ್ಠಿತ ಮಾಗ್ಸೆಸೆ ಪ್ರಶಸ್ತಿಯನ್ನು ಗೆದ್ದ ಇಬ್ಬರು ಭಾರತೀಯರಲ್ಲಿ ಒಬ್ಬಾತ ಇದೇ ಮಣ್ಣಿನ ಮಗ- ಸೋನಮ್ ವಾಂಗ್ಚುಕ್. ಹೊಚ್ಚಹೊಸ ಶೋಧಗಳಿಂದ ಮರುಭೂಮಿಗೆ ನೀರನ್ನೂ, ಮಕ್ಕಳ ಎದೆಗೆ ಅಕ್ಷರವನ್ನೂ ಹರಿಸಿದಾತ. ಯುವಜನರಿಗೆ ದಿಕ್ಕಾಗಿ ತನ್ನ ಸಮುದಾಯದ ನಿತ್ಯ ಬದುಕುಗಳ ಬೆಳಗಿರುವ ವಿರಳ ಎಂಜಿನಿಯರ್. ಲಡಾಕ್‌ನ ವಿದ್ಯಾರ್ಥಿ ಶಿಕ್ಷಣ ಮತ್ತು ಸಾಂಸ್ಕೃತಿಕ ಚಳವಳಿ (SECMOL) ಎಂಬ ಸಂಸ್ಥೆಯ ಸ್ಥಾಪಕ ನಿರ್ದೇಶಕ. ಕೌಶಲಗಳನ್ನು ಕಲಿಸಿ ಬದುಕುವ ದಾರಿಯನ್ನು ಬೋಧಿಸುವ ಪರ್ಯಾಯ ಶಾಲೆಯಿದು. ಈ ವಿಶಿಷ್ಟ ಸಂಸ್ಥೆಯ ಎರಡು ಸಾವಿರ ಎಕರೆ ಕ್ಯಾಂಪಸ್‌ಗೆ ಸೌರಶಕ್ತಿಯನ್ನೂ, ಅತ್ಯಂತ ಭಿನ್ನ ಬಗೆಯ ವಿನ್ಯಾಸವನ್ನೂ ನೀಡಿರುವಾತ.

ಸೋನಮ್ ಹುಟ್ಟೂರು ಉಲೇಟೋಪೋ. ಅಲ್ಲಿ ಶಾಲೆ ಇರಲಿಲ್ಲ. ಒಂಬತ್ತನೆಯ ವಯಸ್ಸಿನ ತನಕ ತಾಯಿಯೇ ಮೊದಲ ಗುರು. ತಂದೆ ಜಮ್ಮು-ಕಾಶ್ಮೀರ ಸರ್ಕಾರದಲ್ಲಿ ಮಂತ್ರಿಯಾಗುತ್ತಾರೆ. ಶ್ರೀನಗರದ ಶಾಲೆ ಸೇರುವ ಬಾಲಕ ಸೋನಮ್, ಇಂಗ್ಲಿಷ್ ಮತ್ತು ಉರ್ದು ಬಾರದೆ ಎಣೆಯಿಲ್ಲದ ಫಜೀತಿಗೆ ಬೀಳುತ್ತಾನೆ. ಓಡಿ ಹೋಗಿ ದೆಹಲಿಯ ವಿಶೇಷ ಶಾಲೆ ಸೇರಿ ಅರಳುತ್ತಾನೆ. ಬಿ.ಟೆಕ್ ಪದವಿ ಗಳಿಕೆಯ ನಂತರ ತನ್ನ ಜನರಿಗಾಗಿ ಬೆಳಗುವುದೊಂದೇ ಗುರಿ. ತಾವು ಎದುರಿಸಿದ ಗೊತ್ತು ಗುರಿಯಿಲ್ಲದ ಅತಂತ್ರ ಶಿಕ್ಷಣದ ಸಂಕಟದಿಂದ ಲಡಾಕ್‌ ಮಕ್ಕಳನ್ನು ಪಾರು ಮಾಡುವ ಪಣ ತೊಡುತ್ತಾರೆ.

ತನ್ನನ್ನು ಅಳಿವಿನ ಅಂಚಿಗೆ ನೂಕತೊಡಗಿರುವ ಹವಾಮಾನ ಬದಲಾವಣೆ ಕುರಿತು ಮಾನವ ಜನಾಂಗ ಇನ್ನೂ ಕಣ್ಣು ತೆರೆದಿಲ್ಲ. ಕಂಡದ್ದನ್ನೆಲ್ಲ ಕಬಳಿಸಿ, ಪ್ರಕೃತಿಯ ಭಂಡಾರವನ್ನು ಬರಿದು ಮಾಡುವುದೇ ಅಭಿವೃದ್ಧಿ ಎನ್ನಲಾಗುತ್ತಿದೆ. ಸರಕು ಸಂಸ್ಕೃತಿಯೇ ಆಧುನಿಕ ಮಾನವನ ಪಾಲಿಗೆ ಹೊಸ ಭಗವಂತ. ಕಣ್ಣು ಮುಚ್ಚಿ ಅವನ ಹಿಂದೆ ಮಂದೆ ಮಂದೆಯಾಗಿ ಓಡತೊಡಗಿದೆ ಮನಕುಲ. ಬಾಯಿ ತೆರೆದು ಕಾದಿರುವ ಪ್ರಪಾತದ ಶಂಕೆಯೂ ಅದಕ್ಕೆ ಇಲ್ಲ. ಇಂತಹ ಕುರುಡು ಓಟದ ಹಾದಿ ಬದಿಯಲ್ಲಿ ಸಾಲುಗಟ್ಟಿವೆ ವಿನಾಶದ ಹತ್ತು ಹಲವು ಘೋರ ದೃಶ್ಯಗಳು.

ಸಾವಿರಾರು ವರ್ಷಗಳಷ್ಟು ಹಿಂದೆ ಹೆಪ್ಪುಗಟ್ಟಿದ್ದ ದೈತ್ಯ ಹಿಮಬಂಡೆಗಳು ಪ್ರಕೃತಿಯ ಸಮತೋಲನ ಕಾಯುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಅವುಗಳು ಕರಗತೊಡಗಿರುವ ವಿದ್ಯಮಾನ ಒಳ್ಳೆಯ ಸುದ್ದಿ ಅಲ್ಲ. ಊರಿಗೆ ಬಂದದ್ದು ಕೇರಿಗೆ ಬರತೊಡಗಿದೆ. ಕೇರಿಗೆ ಬಂದದ್ದು ಲಡಾಕ್‌ನ ಹೊಸ್ತಿಲು ಮೆಟ್ಟಿ ಕದ ತಟ್ಟಿದೆ.

ಎತ್ತರದ ಪರ್ವತಗಳು ಮಳೆ ಮೋಡಗಳಿಗೆ ಅಡ್ಡ ಹಾಕುವ ಕಾರಣ ಸರಾಸರಿ 100 ಮಿಲಿಮೀಟರುಗಳಿಗಿಂತ ಹೆಚ್ಚು ಮಳೆ ಲಭ್ಯವಿಲ್ಲ. ಕಡು ಚಳಿಗಾಲದಲ್ಲಿ ಲಡಾಕ್‌ನ ಬೆಟ್ಟಗಳ ಮೇಲೆ ಜಮೆಯಾಗುವ ಮಂಜಿನ ಮಹಾ ದಿಣ್ಣೆಗಳು ಬೇಸಿಗೆಯಲ್ಲಿ ಕರಗಿ ಹರಿಯುವ ನೀರೇ ಸ್ಥಳೀಯರ ಜೀವನಾಧಾರ, ಕೃಷಿಗೂ ಕುಡಿಯುವುದಕ್ಕೂ. ಈ ದಿಣ್ಣೆಗಳು ಬೇಸಿಗೆಗೆ ಮೊದಲೇ ಕರಗಿ ಪ್ರವಾಹವಾಗಿ ಕಾಡತೊಡಗಿವೆ. ಜೊತೆಗೆ ನಶಿಸುತ್ತಲೂ ಇವೆ. ಇಂತಹ ದಿಕ್ಕೆಡಿಸುವ ಸ್ಥಿತಿಯಲ್ಲಿ ಸೋನಮ್ ಕಂಡು ಹಿಡಿದದ್ದು ಮಂಜಿನ ಸ್ತೂಪಗಳ ಉಪಾಯ. ಕಡು ಚಳಿಗಾಲದಲ್ಲಿ ಬೆಟ್ಟದ ಮೇಲಿನಿಂದ ತಗ್ಗಿಗೆ ಹರಿಯುವ ಹಿಮಬಂಡೆಗಳ ನೀರನ್ನು ನೆಲದಡಿ ಕೊಳವೆಗಳ ಮೂಲಕ ಕೆಳ ಭಾಗಕ್ಕೆ ಹರಿಸಿ ಗುರುತ್ವಾಕರ್ಷಣ ಶಕ್ತಿಯ ಮೂಲಕ ಹಠಾತ್ತನೆ ಮೇಲ ಮೇಲಕ್ಕೆ ಚಿಮ್ಮಿಸಿ ಕಾರಂಜಿಯಂತೆ ಕೆಳಕ್ಕೆ ಸುರಿಸುವುದು. ಶೂನ್ಯದ ಕೆಳಗೆ ಮೈನಸ್ 23 ಡಿಗ್ರಿ ಕಡು ಶೀತಲ ವಾತಾವರಣದ ಸಂಪರ್ಕಕ್ಕೆ ಬರುತ್ತಿದ್ದಂತೆಯೇ ಕಾರಂಜಿಯ ನೀರು ಹೆಪ್ಪುಗಟ್ಟಿ ಮಂಜಿನ ರೂಪ ಧರಿಸುತ್ತದೆ. ಅದಕ್ಕೆ ಆಸರೆಯಾಗಿ ನಡು ನಡುವೆ ಮುಳ್ಳು ಕಂಟಿಗಳ ಅಸ್ಥಿಪಂಜರವನ್ನು ಮೊದಲೇ ಒದಗಿಸಿದರೆ ಆಯಿತು. ಬೇಸಿಗೆಯಲ್ಲಿ ಕರಗಿ ರೈತರ ಹೊಲಗಳಿಗೆ ಹರಿಯುವ ಶಂಖಾಕೃತಿಯ ಮಂಜಿನ ಸ್ತೂಪ ಸಿದ್ಧ. ಆಕಾರದ ಕಾರಣ ಸೂರ್ಯನ ಬೆಳಕು ಹೆಚ್ಚಾಗಿ ನೇರ ಸ್ತೂಪದ ಮೇಲೆ ಬೀಳುವುದಿಲ್ಲ. ಹೀಗಾಗಿ ಕರಗುವಿಕೆ ನಿಧಾನ. ಹೀಗೆ ರಚಿಸಿದ 78.4 ಅಡಿ ಎತ್ತರದ ಸ್ತೂಪ ಹೊಸ ವಿಶ್ವದಾಖಲೆ ಸ್ಥಾಪಿಸಿದೆ.

ವಾಂಗ್ಚುಕ್ ಅವರ ಪತ್ನಿ ರೆಬೆಕ್ಕಾ ನಾರ್ಮನ್ ವಿದೇಶಿಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದ ಎಂ.ಇಡಿ ಪದವೀಧರೆ. ಲಡಾಕ್‌ನ ಬೇರೊಂದು ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ರೆಬೆಕ್ಕಾ, SECMOL ಸೇರಿ ವಾಂಗ್ಚುಕ್ ಜೊತೆ ದುಡಿಯುತ್ತಾರೆ. ಮಕ್ಕಳು ಹುಟ್ಟಿದರೆ ಜನಸೇವೆಗೆ ಕುಂದು ಬಂದೀತೆಂದು ಸಂತಾನವನ್ನು ನಿರಾಕರಿಸಿರುವ ತ್ಯಾಗಮಯೀ ದಾಂಪತ್ಯ ಇವರದು.

ಯಶಸ್ಸಿನ ಶಿಖರ ಏರಿದ ಹಿಂದಿ ಚಲನಚಿತ್ರ ‘ಥ್ರೀ ಈಡಿಯಟ್ಸ್’ನ ಕಥಾನಾಯಕ ‘ರ‍್ಯಾಂಚೋ’ ಅಲಿಯಾಸ್ ‘ಫುನ್ಸುಕ್ ವಾಂಗ್ಡೂ’ ಪಾತ್ರಕ್ಕೆ ಸೋನಮ್ ಅವರ ಬದುಕು- ಸಾಧನೆಗಳೇ ಪ್ರಧಾನ ಪ್ರೇರಣೆ. ಆದರೆ ಆಮಿರ್ ಖಾನ್ ನಟಿಸಿರುವ ಈ ಪಾತ್ರ ಸೋನಮ್ ಅವರ ಯಥಾವತ್ ನಿಜ ಬದುಕು ಅಲ್ಲ. ಬೆಳ್ಳಿ ತೆರೆಯ ಮೇಲಿನ ಫುನ್ಸುಕ್ ಗೆ ಗೊತ್ತೇ ಇಲ್ಲದ ಹತ್ತು ಹಲವು ಕಠಿಣ ಸವಾಲುಗಳೊಂದಿಗೆ ಸೆಣಸಿ ಜಯಿಸಿದ್ದಾರೆ ಸೋನಮ್. ಅವು ಪ್ರಕೃತಿ ನಿರ್ಮಿತ ಮತ್ತು ಮಾನವ ನಿರ್ಮಿತ ಎರಡೂ ಹೌದು.

ತಮ್ಮನ್ನು ಅರಸಿ ಬಂದ ಮ್ಯಾಗ್ಸೆಸೆ ಪ್ರಶಸ್ತಿಯು ಪರ್ವತ ಪ್ರದೇಶದ ಜನರ ಸಮಸ್ಯೆಗಳಿಗೆ ದೇಸಿ ಪರಿಹಾರಗಳನ್ನು ಪರಿಶೋಧಿಸಲು ಯುವಜನರಿಗೆ ಸ್ಫೂರ್ತಿದಾಯಕ ಆಗಲಿ ಎಂಬುದು ಅವರ ಆಶಯ. ‘ಲಡಾಕ್‌ನ ಎಲ್ಲ ತಲೆಯಾಳುಗಳಿಗೆ, ಎಲ್ಲ ವಿದ್ಯಾರ್ಥಿಗಳಿಗೆ, ಎಲ್ಲ ಶಿಕ್ಷಕರಿಗೆ, ಕನಸು ಕಾಣುವ ಎಲ್ಲ ಮನಸುಗಳಿಗೆ ಈ ಪ್ರಶಸ್ತಿ ಸಮರ್ಪಿತ’ ಎಂಬ ವಿನಮ್ರತೆ ಅವರದು.

1988ರಲ್ಲಿ ಸ್ಥಾಪಿಸಿದ SECMOL ಶಾಲಾ ಶಿಕ್ಷಣ ಹೊಸ ಪಠ್ಯಕ್ರಮದ ಪ್ರಯೋಗ ನಡೆಸಿತು. ಮಕ್ಕಳು ತಮ್ಮ ಪರಿಸರದಲ್ಲಿ ಕಂಡು ಕೇಳಿಲ್ಲದ ಅನ್ಯ ವಸ್ತು- ವಿಷಯಗಳನ್ನು ಬದಿಗಿರಿಸಿತು. ಲಡಾಕ್‌ ನೆಲದ ಕಡುಜಟಿಲ ಸವಾಲುಗಳು- ಪರಿಹಾರಗಳನ್ನು ಬೋಧಿಸಿತು. ಹತ್ತನೆಯ ತರಗತಿಯಲ್ಲಿ ಪಾಸಾಗುತ್ತಿದ್ದ ಮಕ್ಕಳ ಪ್ರಮಾಣ ನೂರಕ್ಕೆ ಐದು ಇದ್ದದ್ದು, ಎಂಬತ್ತು ತೊಂಬತ್ತಕ್ಕೆ ಏರಿತು.

ಪರ್ವತ ಪ್ರದೇಶಗಳ ಪರಮ ಪ್ರತಿಕೂಲ ವಾತಾವರಣವು ಮಾನವ ಚೈತನ್ಯವನ್ನು ಉಡುಗಿಸುವಂಥದ್ದು. ಅದರೊಡನೆ ಸೆಣಸುವ ಜೊತೆಗೆ ಗೆಳೆತನವನ್ನೂ ಬೆಳೆಸಬೇಕು. ಅದಕ್ಕೆ ಕೇವಲ ದೇಹಬಲ ಸಾಲದು. ನೆಲದ ಸಾಧನಗಳನ್ನೇ ಬಳಸಿ ಪ್ರತಿಕೂಲಗಳನ್ನು ಅನುಕೂಲಗಳನ್ನಾಗಿ ಬದಲಿಸಬೇಕು. ಹೊಸಹೊಸ ಪರಿಹಾರಗಳನ್ನು ಹುಡುಕಿ ತಡಕುವ ಚತುರಮತಿ ಬೇಕೇ ಬೇಕು. ಈ ದಿಕ್ಕಿನಲ್ಲಿ ಸೋನಮ್, ತಾವು ಗೆದ್ದು ತಮ್ಮ ಜನರನ್ನೂ ಗೆಲ್ಲಿಸುತ್ತಿದ್ದಾರೆ. ‘ದೀರ್ಘಕಾಲದ ವಸಾಹತುಶಾಹಿ ದಾಸ್ಯದ ಕಾರಣ ಭಾರತೀಯರ ಮನಸ್ಸು ಮಿದುಳುಗಳು ದಡ್ಡು ಬಿದ್ದಿವೆ. ಸ್ವಂತಿಕೆಯ ಚಿಂತನಾಶಕ್ತಿಯು ಆಳದಲ್ಲಿ ಹೂತು ಹೋಗಿದೆ. ಹೀಗಾಗಿ ಪರಿಹಾರಗಳಿಗಾಗಿ ಪಶ್ಚಿಮ ದೇಶಗಳತ್ತ ಮುಖ ಮಾಡಿ ನಿಲ್ಲುವ ದುಃಸ್ಥಿತಿ ಒದಗಿದೆ’ ಎನ್ನುತ್ತಾರೆ ಸೋನಮ್.

‘ಸರಳ ಬದುಕೇ ಸುಂದರ ಬದುಕು. ಪರಮ ಸಂತೃಪ್ತಿಯ ಬದುಕೂ ಅದೇ. ಮಹಾನಗರಗಳು ಪೇಟೆ ಪಟ್ಟಣಗಳು ಸರಳವಾಗಿ ಬದುಕಿದರೆ ಹಳ್ಳಿಗಳ ಬಾಳುವೆ ಹಾಳಾಗುವುದಿಲ್ಲ’ ಎಂಬ ಅವರ ಪಿಸು ಮಾತುಗಳಿಗೆ ಕಿವಿಗೊಡುವುದು
ಕಾಲದ ಅಗತ್ಯ.

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !