ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲೊಂದಿಪೆ ನಿನಗೆ ಗುರುದೇವ: ಸೃಜನಶೀಲ ಶಿಕ್ಷಕರು, ಪ್ರಯೋಗಶೀಲ ಶಾಲೆಗಳು...

Last Updated 4 ಸೆಪ್ಟೆಂಬರ್ 2022, 0:30 IST
ಅಕ್ಷರ ಗಾತ್ರ

ಸೋಮವಾರ ಶಿಕ್ಷಕರ ದಿನಾಚರಣೆ. ಹಾಗೆ ನೋಡಿದರೆ ಶಾಲೆಗಳಲ್ಲಿ ದಿನವೂ ಶಿಕ್ಷಕರ ದಿನಾಚರಣೆಯೇ. ಈ ದಿನದ ನೆಪದಲ್ಲಿ ನಮ್ಮ ಹಿಂದಿನ ಗುರುಪರಂಪರೆಯನ್ನೂ ಪ್ರಯೋಗಶೀಲ ಶಿಕ್ಷಕರ ಸಾಧನೆಯನ್ನೂ ಒಟ್ಟಿಗೆ ಓದುಗರ ಮುಂದೆ ಇಡುವ ಪ್ರಯತ್ನವೊಂದು ಇಲ್ಲಿದೆ.

ಬೋಧನೆಗೆ ಪಾಠೋಪಕರಣಗಳ ನಂಟು

ವಿದ್ಯಾರ್ಥಿಗಳ ಮನದಾಳಕ್ಕೆ ಜ್ಞಾನ ಇಳಿಯಬೇಕು ಎಂದರೆ ಪಠ್ಯ ಬೋಧನೆ ಮಾತ್ರ ಸಾಲದು, ಪಾಠೋಪಕರಣಗಳು ಅತಿ ಅಗತ್ಯ ಎಂಬುದನ್ನೇ ಧ್ಯಾನವಾಗಿಸಿಕೊಂಡ ಗದಗ ಜಿಲ್ಲೆ ಚಿಕ್ಕಹಂದಿಗೋಳ ಕ್ಲಸ್ಟರ್‌ ವ್ಯಾಪ್ತಿಯ ಶಿಕ್ಷಕ ಸಿದ್ದಯ್ಯ ಕೆ. ಮಠಪತಿ ವಿದ್ಯಾರ್ಥಿಗಳನ್ನೂ ಕ್ರಿಯಾಶೀಲ ಕಲಿಕೆಯಲ್ಲಿ ತೊಡಗಿಸಿದ್ದಾರೆ.

ಪಠ್ಯದಲ್ಲಿ ಇರುವ ಪಾಠಗಳನ್ನು ಪಾಠೋಪಕರಣಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಅವರು, ಶಾಲೆಯ ಇತರ ಶಿಕ್ಷಕರನ್ನೂ ಅದೇ ರೀತಿ ಬೋಧಿಸಲು ಅಣಿಗೊಳಿಸಿದ್ದಾರೆ. ಅವರು ತಯಾರಿಸುವ ಉಪಕರಣಗಳಲ್ಲಿ ತ್ಯಾಜ್ಯ ವಸ್ತುಗಳ ಬಳಕೆ ಹೆಚ್ಚಿರುತ್ತದೆ. ಬಳಸಿ ಬಿಸಾಡುವ ಮತ್ತು ಪ್ರಯೋಜನಕ್ಕೆ ಬಾರದ ವಸ್ತುಗಳಲ್ಲಿ ಅಮೂಲ್ಯವಾದುದನ್ನು ತಯಾರಿಸಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಅವರು ತಯಾರಿಸಿದ ‘ಆಲ್ಫಾಬೆಟ್‌ ಗೇಮ್‌’, ‘ರೇಖಾಗಣಿತದ ಆಕೃತಿಗಳು’ ಸಂಸತ್‌ ಭವನದ ಮಾದರಿ ಹೀಗೆ ಹಲವು ಪಾಠೋಪಕರಣಗಳು ವಿದ್ಯಾರ್ಥಿಗಳ ಕಲಿಕೆಗೆ ಒತ್ತಾಸೆಯಾಗಿವೆ.

15 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿರುವ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಜ್ಞಾನ ಹೆಚ್ಚಿಸಲು ಶಾಲಾ ಮಟ್ಟದಲ್ಲೇ ನಡೆಸುವ ವಿಜ್ಞಾನ ಹಬ್ಬ, ಕೋವಿಡ್‌ ಸಮಯದಲ್ಲಿ ಕೈಗೊಂಡ ಕಲಿಕಾ ಚಟುವಟಿಕೆಗಳು ಇತರ ಶಿಕ್ಷಕರಿಗೆ ಪ್ರೇರಣೆಯಾಗಿವೆ.

ಸಿದ್ದಯ್ಯ ಕೆ. ಮಠಪತಿ ಅವರು ಸಿದ್ಧಗೊಳಿಸಿದ ಪಾಠೋಪಕರಣ
ಸಿದ್ದಯ್ಯ ಕೆ. ಮಠಪತಿ ಅವರು ಸಿದ್ಧಗೊಳಿಸಿದ ಪಾಠೋಪಕರಣ

ಇದಲ್ಲದೇ ನಿಧಾನಕ್ಕೆ ಪರದೆಯ ಹಿಂದಕ್ಕೆ ಸರಿಯುತ್ತಿರುವ ಜಾನಪದ ಕಲೆಯನ್ನು ವಿದ್ಯಾರ್ಥಿಗಳ ಕಲಿಕೆ ಮೂಲಕ ಮುನ್ನೆಲೆಗೆ ತರುವ ಕಾಯಕದಲ್ಲೂ ಸಿದ್ದಯ್ಯ ತೊಡಗಿದ್ದಾರೆ. ಸ್ಥಳೀಯ ಕಲಾವಿದರ ನೆರವಿನಿಂದ ಪಠ್ಯದಲ್ಲಿ ಬರುವ ಪಾಠಗಳನ್ನು ಸೋಬಾನೆ ಪದ, ದೊಡ್ಡಾಟ, ಜೋಗುಳದ ಹಾಡುಗಳ ಮೂಲಕ ಪ್ರಸ್ತುತ ಪಡಿಸುತ್ತ ಕಲೆಯನ್ನು, ಪಠ್ಯವನ್ನು ವಿದ್ಯಾರ್ಥಿಗಳ ಮನಕ್ಕೆ ಇಳಿಸುವ ಹಾಗೂ ಸ್ಥಳೀಯ ಕಲಾವಿದರ ಕಲೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಅವರದ್ದು. ಇದಕ್ಕಾಗಿ ಇಂಡಿಯನ್‌ ಫೌಂಡೇಶನ್‌ ಫಾರ್‌ ದಿ ಆರ್ಟ್ಸ್‌ (ಐಎಫ್‌ಎ) ಸಂಸ್ಥೆಯ ಸಹಾಯ ಪಡೆದಿದ್ದಾರೆ.

ಕಾಡಿನ ಊರುಗಳ ಮನಗೆದ್ದ ಶಿಕ್ಷಕಿ

ಅದು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅಣಶಿ ಗ್ರಾಮ. ಈ ಗ್ರಾಮ ಇರುವುದೇ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ. ಅಲ್ಲಿರುವ ಸುಮಾರು 15ಕ್ಕೂ ಹೆಚ್ಚು ಕುಗ್ರಾಮಗಳ ಮಕ್ಕಳಿಗೆ ಅಣಶಿ ಸರ್ಕಾರಿ ಶಾಲೆಯೇ ಆಸರೆ. ಅಂತಹ ಶಾಲೆಯ ಶಿಕ್ಷಕಿಯಾಗಿ ರಾಜ್ಯದಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡಿದವರು ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ. ದಟ್ಟ ಕಾಡಿನಲ್ಲಿರುವ ಈ ಶಾಲೆಯನ್ನು ತಲುಪುವುದೇ ದುಸ್ಸಾಹಸ ಆಗಿದ್ದರೂ ಕುಂಭದ್ರೋಣ ಮಳೆ ಸುರಿಯಲಿ, ಮೈನಡುಗಿಸುವ ಚಳಿ ಇರಲಿ ಈ ಶಾಲೆಯಲ್ಲಿ ಅಕ್ಷತಾ ಅವರ ಪಾಠ ತಪ್ಪುವುದಿಲ್ಲ. ಮಳೆ ಹೆಚ್ಚಾದಾಗ ಊರಲ್ಲಿಯೇ ಠಿಕಾಣಿ ಹೂಡುತ್ತಾರೆ. ಮಳೆ ಮಾಪನವನ್ನೂ ಅಕ್ಷತಾ ಅವರ ಶಾಲೆಯ ವಿದ್ಯಾರ್ಥಿಗಳು ಮಾಡುವುದು ವಿಶೇಷ.

ಕುಣಬಿ ಮಕ್ಕಳೇ ಹೆಚ್ಚಾಗಿರುವುದರಿಂದ ಅವರ ಕೌಶಲಕ್ಕೆ ಮೆರುಗು ತುಂಬುವ ಕೆಲಸವನ್ನೂ ಅಕ್ಷತಾ ಅವರು ಮಾಡಿದ್ದಾರೆ. ಕಾಡಿನಲ್ಲಿ ಸಿಗುವ ಜಿಗುಟು ಮಣ್ಣಿನಿಂದ ಪ್ರಾಣಿಗಳು ಮತ್ತು ತರಕಾರಿಗಳ ಪ್ರತಿಕೃತಿ ಮಾಡಿ, ಪಾಠ ಮಾಡುವ ಅವರು, ಮಕ್ಕಳೇ ಸಂಗ್ರಹಿಸಿದ ಬೀಜಗಳನ್ನು ಮಣ್ಣಿನಲ್ಲಿ ಉಂಡೆ ಮಾಡಿ, ಕಾಡಿನಲ್ಲಿ ಎಸೆಯುವಂತೆಯೂ ಮಾಡುತ್ತಾರೆ. ಅಕ್ಷತಾ ಅವರು ಸ್ವತಃ ಕವಯಿತ್ರಿ. ಸುಕ್ರಿ ಬೊಮ್ಮಗೌಡ ಅವರ ಜೀವನ ಚರಿತ್ರೆ ದಾಖಲಿಸುವ ಕೆಲಸವನ್ನೂ ಮಾಡಿದ್ದಾರೆ.

ಬುಡಕಟ್ಟು ಮಕ್ಕಳಲ್ಲಿ ‘ಅಕ್ಷರ ಕ್ರಾಂತಿ’

‘ಮಕ್ಕಳೇ ವಿಶ್ವ, ಮಕ್ಕಳೇ ದೇಶ, ಮಕ್ಕಳೇ ಭವಿಷ್ಯ, ಮಕ್ಕಳೇ ನನ್ನ ಅನ್ನದಾತರು’ ಎನ್ನುವ ಭಾವವನ್ನು ಮನಸ್ಸಿನಲ್ಲಿ ಇಳಿಸಿಕೊಂಡು ಬುಡಕಟ್ಟು ಸಮುದಾಯದ ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ಜೀವನದ ಮೌಲ್ಯವನ್ನೂ ತುಂಬುತ್ತಿರುವ ಶಿಕ್ಷಕ ಟಿ.ಪಿ.ಉಮೇಶ್‌ ಇತರರಿಗೆ ಮಾದರಿ.

ಟಿ.ಪಿ.ಉಮೇಶ್‌
ಟಿ.ಪಿ.ಉಮೇಶ್‌

ಗೊಲ್ಲ ಜನಾಂಗದವರು ವಾಸಿಸುತ್ತಿರುವ, ಇಂದಿಗೂ ಬಸ್‌ ಸೌಲಭ್ಯ ಕಾಣದ ಗಡಿಗ್ರಾಮ ಅಮೃತಾಪುರದಲ್ಲಿ ‘ಅಕ್ಷರ ಕ್ರಾಂತಿ’ಯ ಜೊತೆಗೆ ಗ್ರಾಮದ ಸಾಮಾಜಿಕ ಅಭಿವೃದ್ಧಿಗೂ ಅವಿರತ ಶ್ರಮಿಸುತ್ತಿದ್ದಾರೆ ಉಮೇಶ್‌. ಕಟ್ಟಡವೇ ಇಲ್ಲದಿದ್ದ ಶಾಲೆ ಈಗ ಹೈಟೆಕ್‌ ಶಾಲೆಯಾಗಿ ರೂಪುಗೊಂಡಿದೆ. 2015ರಲ್ಲಿ ಜೋರು ಮಳೆಗೆ ಶಾಲಾ ಕಟ್ಟಡ ಕುಸಿಯಿತು. ಆರು ತಿಂಗಳು ದೇವಸ್ಥಾನದ ಆವರಣ, ತಾತ್ಕಾಲಿಕ ಟೆಂಟ್‌ನಲ್ಲಿಯೇ ಪಾಠ ಮಾಡಿದ ಅವರು, ಸರ್ಕಾರದಿಂದ ನೆರವು ಸಿಗದಾದಾಗ ಎನ್‌ಜಿಒಗಳು ಮತ್ತು ರೋಟರಿ ಸಂಸ್ಥೆಯಿಂದ ಧನಸಹಾಯ ಪಡೆದು ₹ 35 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಿದ್ದಾರೆ.

ಶಾಲೆಯೆಂದರೆ ಪಾಠ ಮಾಡಲು ತರಗತಿಗಳಷ್ಟೇ ಇದ್ದರೆ ಸಾಲದು ಎಂಬುದು ಉಮೇಶ್‌ ಅವರ ಅಂಬೋಣ. ಹಾಗಾಗಿ ಈ ಶಾಲೆಯಲ್ಲಿ ಮಕ್ಕಳ ವಿಶೇಷ ಕಲಿಕೆಗಾಗಿ ವಿಜ್ಞಾನದ ಲ್ಯಾಬ್‌, ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್‌ ಲ್ಯಾಬ್‌ ಸಹ ಸ್ಥಾನ ಪಡೆದಿವೆ. ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳಕ್ಕೂ ಅವರು ಶ್ರಮಿಸಿದ್ದು, ಆರಂಭದಲ್ಲಿ 39 ಇದ್ದ ದಾಖಲಾತಿ ಸಂಖ್ಯೆ ಈಗ 80ಕ್ಕೆ ಏರಿದೆ.

ಕೋವಿಡ್‌ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಬೀಳದಂತೆ ಮಾಡಲು ಹಲವು ವಿನೂತನ ಪ್ರಯೋಗಗಳನ್ನು ಮಾಡಿದ್ದರು. ಗ್ರಾಮದ ಶಾಲೆಯಲ್ಲೇ ಆರು ತಿಂಗಳು ತಂಗಿದ್ದು, ನಿರಂತರ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದರು. ಕೂಲಿ ಕಾರ್ಮಿಕರೇ ಇರುವ ಗ್ರಾಮದಲ್ಲಿ, ಸ್ಮಾರ್ಟ್‌ ಫೋನ್‌ ಮೂಲಕ ಆನ್‌ಲೈನ್‌ ತರಗತಿ ಮಾಡುವುದು ಅಸಾಧ್ಯದ ಮಾತು. ಈ ವಾಸ್ತವವನ್ನು ಸೂಕ್ಷ್ಮಮತಿಯಿಂದ ಗಮನಿಸಿದ ಉಮೇಶ್‌ ‘ಮಿಸ್‌ ಕಾಲ್‌ ಕೊಡಿ ನನ್ನ ಪಾಠ ಕೇಳಿ’ ಅಭಿಯಾನ ನಡೆಸಿದ್ದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತೊಡರನಾಳು ಗ್ರಾಮದ ಉಮೇಶ್‌ ಅವರು 2004ರಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಚಿಕ್ಕಬಳ್ಳಾರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದವರು. ಸಾಹಿತ್ಯದಲ್ಲೂ ಅಭಿರುಚಿ ಹೊಂದಿರುವ ಅವರು, ‘ಫೋಟೊಕ್ಕೊಂದು ಫ್ರೇಮು’, ‘ನನ್ನಯ ಸೈಕಲ್‌ ಟ್ರಿಣ್ ಟ್ರಿಣ್‌’, ‘ವಚನಾಂಜಲಿ’, ‘ವಚನವಾಣಿ’, ‘ದೇವರಿಗೆ ಬೀಗ’, ‘ಅಪ್ಪನು ಕೊಡಿಸಿದ ಮೊದಲ ಪುಸ್ತಕ’ ಹೀಗೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಪಾಠ ಬೋಧನೆಗೆ ಕರ್ಪಲ್‌ ಕಲೆ

‘ಕರ್ಪಲ್‌ ಕಲೆ’ ಈ ಪದ ಇಂದಿನ ಯುವಜನರ ಕಿವಿಗೆ ಬೀಳದಷ್ಟು ಹಿಂದಕ್ಕೆ ಸರಿದಿದೆ. ಈ ಕಲೆಯನ್ನು ಮುನ್ನೆಲೆಗೆ ತರುವ ಸದಾಶಯ ಹೊಂದಿರುವ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲ್ಲೂಕಿನ ದುಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಫ್‌.ಎ.ಕರಬುಡ್ಡಿ, ಕರ್ಪಲ್‌ ಕಲೆಯನ್ನು ವಿದ್ಯಾರ್ಥಿಗಳ ಮನದಾಳಕ್ಕೆ ಇಳಿಸಿ ಸಂಜ್ಞೆಗಳ ಮೂಲಕ ಅಕ್ಷರ ಕಲಿಕೆಯಲ್ಲಿ ನಾಂದಿ ಹಾಡಿದ್ದಾರೆ.

ಎಫ್‌.ಎ.ಕರಬುಡ್ಡಿ
ಎಫ್‌.ಎ.ಕರಬುಡ್ಡಿ

ಜಾನಪದ ಕಲೆಗಳಲ್ಲಿ ಒಂದಾಗಿರುವ ‘ಕರ್ಪಲ್‌ ಕಲೆ’, ಪುರಾತನ ಕಾಲದಲ್ಲಿ ರಾಜರು ವೈರಿಗಳ ಎದುರಿನಲ್ಲೇ ತಮ್ಮ ಆಪ್ತರಿಗೆ ಕೈಸಂಜ್ಞೆ ಮೂಲಕ ಮಹತ್ವದ ವಿಷಯಗಳನ್ನು ತಿಳಿಸುವ ಭಾಗವಾಗಿ ಉದಯಿಸಿತು. ಕ್ರಮೇಣ ಜಂಗಮ ಸಮುದಾಯದವರು ಹೊಟ್ಟೆಪಾಡಿಗಾಗಿ ‘ಸಾರೋ ಐನೋರು’ ಎಂಬ ಹೆಸರನ್ನಿಟ್ಟುಕೊಂಡು ತಮ್ಮ ದಿನ ನಿತ್ಯದ ಉಪಜೀವನಕ್ಕಾಗಿ ಈ ಕಲೆಯನ್ನು ಬಳಸುತ್ತಿದ್ದರು.

ನಶಿಸುತ್ತಿರುವ ಈ ಕಲೆಯನ್ನು ಜೀವಂತವಾಗಿರಿಸುವ ಕಾಳಜಿ ಹೊಂದಿರುವ ಕರಬುಡ್ಡಿ ಅವರು ಶಾಲೆಯ ಮುಖ್ಯ ಶಿಕ್ಷಕ ಡಿ.ಎಂ.ನಾವಳ್ಳಿ ಅವರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಈ ಕಲೆಯ ಮೂಲಕ ಅಕ್ಷರಗಳನ್ನು ಕಲಿಸಿದ್ದಾರೆ. ಈ ಕಲೆಯ ಮೂಲಕವೇ ವಿದ್ಯಾರ್ಥಿಗಳು ಸುಲಲಿತವಾಗಿ ಕನ್ನಡ ಓದುವ, ಬರೆಯುವ ಮಟ್ಟಕ್ಕೆ ಬೆಳೆದಿದ್ದಾರೆ. ಕೇವಲ ಬಲಗೈನ ಬೆರಳುಗಳ ಮೂಲಕ ವಿದ್ಯಾರ್ಥಿ ಮಾಡುವ ಸಂಜ್ಞೆಯನ್ನು ಉಳಿದ ವಿದ್ಯಾರ್ಥಿಗಳು ಗುರುತಿಸಿ ಪದವನ್ನು ಹೇಳುತ್ತಾರೆ.

ಇಂಗ್ಲಿಷ್, ಹಿಂದಿ ಭಾಷೆಯನ್ನೂ ಇದೇ ಶೈಲಿಯಲ್ಲಿ ಕಲಿಸುತ್ತಿದ್ದಾರೆ. ಕನ್ನಡದ ಒತ್ತಕ್ಷರ, ಕಾಗುಣಿತಗಳನ್ನು ಈ ಕಲೆಯ ಮೂಲಕವೇ ವಿದ್ಯಾರ್ಥಿಗಳ ಮನಕ್ಕೆ ಇಳಿಸಿದ್ದು, ಯಾವುದೇ ಶಬ್ದವನ್ನು ಸಂಜ್ಞೆಯ ಮೂಲಕವೇ ಸಂವಹನ ನಡೆಸುವಷ್ಟು ಚತುರರಾಗಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು. ಕರ್ಪಲ್‌ ಕಲೆಗೆಂದೇ ವಿಶಿಷ್ಟ ಸಮವಸ್ತ್ರವಿದ್ದು, ಅದನ್ನು ಧರಿಸಿ ವಿದ್ಯಾರ್ಥಿಗಳು ಸಂಜ್ಞಾ ಭಾಷೆಯನ್ನು ಪ್ರದರ್ಶಿಸುತ್ತಾರೆ.

ಇದರ ಜತೆಗೆ ಶಾಲೆಯನ್ನು ಪರಿಸರ ಸ್ನೇಹಿಯಾಗಿ ರೂಪಿಸಿರುವ ಅಗ್ಗಳಿಕೆ ಕರಬುಡ್ಡಿ ಇವರದ್ದು. ಶಾಲೆಯ ಆವರಣವನ್ನು ಸಸ್ಯಕಾಶಿಯಂತೆ ರೂಪಿಸಿರುವ ಅವರು ವಿದ್ಯಾರ್ಥಿಗಳನ್ನು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಹಸಿರು ಶಾಲೆ’ ಜಿಲ್ಲಾ ಪ್ರಶಸ್ತಿಗೆ ಈ ಶಾಲೆ ಭಾಜನವಾಗಿದೆ. ಅಲ್ಲದೇ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಶಾಲಾಭಿವೃದ್ಧಿ ಹಂಬಲದ ಶಿಕ್ಷಕ

ಸ್ವಸ್ಥ, ಸ್ವಚ್ಛ, ಸುಸಂಸ್ಕೃತ ಶಾಲೆಯನ್ನಾಗಿ ರೂಪಿಸುವ ಆಶಯದೊಂದಿಗೆ 31 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಒಡಿಲ್ನಾಳ ಗ್ರಾಮದ ಕಟ್ಟದಬೈಲು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಡ್ವರ್ಡ್‌ ಡಿ’ಸೋಜ ಅವರು ಒಂದು ರೀತಿ ‘ಲೆಕ್ಕಾಚಾರದ ಶಿಕ್ಷಕ’ ಎಂದು ಹೇಳಿದರೆ ತಪ್ಪಾಗಲಾರದು.

ಶಾಲೆಯ ಅಭಿವೃದ್ಧಿಗಾಗಿಯೇ ಹಲವು ರೀತಿಯ ನಿಧಿಗಳನ್ನು ಸ್ಥಾಪಿಸಿ, ಆ ನಿಧಿಗಳಿಂದ ಬಂದ ಹಣವನ್ನು ಶಾಲೆಯ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ವಿನಿಯೋಗಿಸುತ್ತಿದ್ದಾರೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಕಟ್ಟದಬೈಲು ಶಾಲೆಯನ್ನು ಹೈಟೆಕ್‌ ಆಗಿ ಇರಿಸಿದ್ದಾರೆ.

2020ರಲ್ಲಿ ಈ ಶಾಲೆ ಸ್ವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತ್ತು. ಇದರ ನೆನಪಿಗಾಗಿ ‘ಸ್ವರ್ಣ ನಿಧಿ’ ಸ್ಥಾಪಿಸಿದ್ದಾರೆ. 13 ತಿಂಗಳ ಸ್ವರ್ಣ ಸಿಂಚನ ಕಾರ್ಯಕ್ರಮ ನಡೆಸಿದ್ದಾರೆ. ‘ದಿನಕ್ಕೊಂದು ರೂಪಾಯಿ’ ಎಂಬ ಯೋಜನೆ ಹಾಕಿಕೊಂಡು ಸತತ 1071 ದಿನಗಳಲ್ಲಿ 300 ದಾನಿಗಳಿಂದ ₹ 3,33,333 ಹಣ ಸಂಗ್ರಹಿಸಿ ಶಿಕ್ಷಣ ನಿಧಿ ಸ್ಥಾಪಿಸಿದ್ದಾರೆ. ಈ ಹಣದಲ್ಲೇ 11 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ನೋಟ್‌ಬುಕ್‌, ಶಾಲಾ ಬ್ಯಾಗ್, 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಮೂವರಿಗೆ ತಲಾ
₹ 1,000 ಹಾಗೂ ಪಿಯುಸಿ ನಂತರ ವೃತ್ತಿ ಶಿಕ್ಷಣ ಪಡೆಯುವ ಮೂವರಿಗೆ ತಲಾ ₹ 5,000 ನೀಡುತ್ತಾ ಬರುತ್ತಿದ್ದಾರೆ.

ಇದೇ ರೀತಿ ‘ವಜ್ರ ನಿಧಿ’, ‘ವಜ್ರ ಸಂಜೀವಿನಿ ನಿಧಿ’. ‘ದಿ.ನೀಲಮ್ಮ ಸ್ಮಾರಕ ಶಿಕ್ಷಣ ನಿಧಿ’ ಹೀಗೆ ಹಲವು ‘ನಿಧಿ’ಗಳನ್ನು ಆರಂಭಿಸಿ, ದಾನಿಗಳಿಂದ, ಕೆಲವೊಮ್ಮೆ ಸ್ವಂತ ಖರ್ಚಿನಲ್ಲಿ ಹಣ ಭರಿಸಿ ಶಾಲೆಯ ಇಂದಿನ ಹಾಗೂ ಭವಿಷ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಡ್ವರ್ಡ್. ಶಾಲೆಯಲ್ಲಿ ಓದುತ್ತಿದ್ದ ಆಕಾಶ್‌ ಎಂಬ ಬಾಲಕನ ನೆನಪಿಗಾಗಿ ಪ್ರತಿವರ್ಷ ‘ಆಕಾಶ್‌ ಜಯಂತಿ’ಯನ್ನು ಶಾಲೆಯಲ್ಲಿ ಆಚರಿಸಲಾಗುತ್ತಿದೆ. ಆ ಸಮಯದಲ್ಲಿ ದಾನಿಗಳಿಂದ ನೆರವು ಪಡೆದು ಶಾಲೆಯ ಏಳ್ಗೆಗೆ ಆ ಹಣವನ್ನು ಬಳಕೆ ಮಾಡಲಾಗುತ್ತದೆ. ‘ದೇಹ ದಾನ’ ಮಾಡುವ ವಾಗ್ದಾನವನ್ನೂ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿರುವ ಅಪರೂಪದ ಶಿಕ್ಷಕ ಎಡ್ವರ್ಡ್‌.

ವಿಜ್ಞಾನ ಶಿಕ್ಷಕಿಗೆ ಹಸಿರು ಕಾಳಜಿ

ಹಸಿರೀಕರಣದ ಮಹತ್ವವನ್ನು ತಿಳಿಸುತ್ತಲೇ, ವಿದ್ಯಾರ್ಥಿಗಳನ್ನು ರಚನಾತ್ಮಕ ಕಲಿಕೆಯಲ್ಲಿ ತೊಡಗಿಸುವ ಮೂಲಕ ವಿಜ್ಞಾನದ ವಿಷಯವನ್ನು ಸುಲಲಿತವಾಗುವಂತೆ ಬೋಧಿಸುವ ತುಮಕೂರಿನ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ವಿ.ಪೊನಶಂಕರಿ ಎಂದರೆ ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚು.

ವಿದ್ಯಾರ್ಥಿಗಳನ್ನು ವಿಜ್ಞಾನ ಪ್ರಯೋಗದ ಕಲಿಕೆಯಲ್ಲಿ ತೊಡಗಿಸಿರುವ ಶಿಕ್ಷಕಿ ಪೊನಶಂಕರಿ
ವಿದ್ಯಾರ್ಥಿಗಳನ್ನು ವಿಜ್ಞಾನ ಪ್ರಯೋಗದ ಕಲಿಕೆಯಲ್ಲಿ ತೊಡಗಿಸಿರುವ ಶಿಕ್ಷಕಿ ಪೊನಶಂಕರಿ

ಬಹುತೇಕ ವಿದ್ಯಾರ್ಥಿಗಳಿಗೆ ವಿಜ್ಞಾನ ಎಂದರೆ ನಿರಾಸಕ್ತಿಯ ವಿಷಯ. ಆದರೆ ಪೊನಶಂಕರಿ ಅವರ ಪಾಠ ಕೇಳುವ ಮಕ್ಕಳೆಲ್ಲರಿಗೂ ವಿಜ್ಞಾನ ಇಷ್ಟದ ವಿಷಯ. ಹಲವು ಪ್ರಯೋಗಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಮೂಲಕ ವಿಷಯದ ಒಳಹೊರಗನ್ನು ಅರಿಕೆ ಮಾಡುವ ಛಾತಿ ಪೊನಶಂಕರಿ ಅವರದ್ದು. ಕೋವಿಡ್‌ ಸಮಯದಲ್ಲೂ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಪ್ರಯೋಗಗಳನ್ನು ಮಾಡಲು ಉತ್ತೇಜಿಸಿದ ಕಾರ್ಯ ಕಂಡು ಪೋಷಕರೂ ಬೆರಗಾಗಿದ್ದರು. ಪರಿಸರಕ್ಕೆ ಪೂರಕವಾಗಿರುವ ಪ್ರಯೋಗಗಳನ್ನು ಮಾಡುವ ಮೂಲಕ ಅವರು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದಾರೆ. ಅವರ ಬೋಧನಾ ಶೈಲಿ, ಪರಿಸರ ಜಾಗೃತಿ, ಸಾಮಾಜಿಕ ಕಳಕಳಿ ಇತರರಿಗೆ ಮಾದರಿ. ಅದನ್ನು ಗುರುತಿಸಿ ಅವರನ್ನು ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT