ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನ್ ಮೆಕಾಫೆ: ವರ್ಣರಂಜಿತ ಬದುಕು ಜೈಲಿನಲ್ಲಿ ಅಂತ್ಯ

Last Updated 29 ಜೂನ್ 2021, 19:30 IST
ಅಕ್ಷರ ಗಾತ್ರ

ಬ್ರಿಟನ್‌ನ ಮಧ್ಯಮ ವರ್ಗದ ಕುಟುಂಬವೊಂದು ಅಮೆರಿಕಕ್ಕೆ ವಲಸೆ ಬರುತ್ತದೆ. ಆ ಕುಟಂಬದಲ್ಲೊಬ್ಬ ಸಣ್ಣ ಹುಡುಗನಿದ್ದ. ಮದ್ಯವ್ಯಸನಿಯಾಗಿದ್ದ ತಂದೆ, ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ಯುವಕನಿಗೆ 15 ವರ್ಷ ವಯಸ್ಸು. ಆತ ಅಲ್ಲಿಯೇ ಶಿಕ್ಷಣ ಪಡೆದು, ಸ್ವಂತ ಸಾಫ್ಟ್‌ವೇರ್‌ ಉದ್ಯಮ ಆರಂಭಿಸಿದ, ನೋಡನೋಡುತ್ತಿದ್ದಂತೆ ಜಗತ್ತಿನ ಗಮನ ಸೆಳೆದ.

ಎರಡು ದಶಕಗಳ ಅವಧಿಯಲ್ಲಿ ಕೋಟ್ಯಂತರ ಡಾಲರ್‌ ಸಂಪಾದಿಸಿದ ಆತನ ಬದುಕು ಭವ್ಯವಾಗಿ ಸಾಗುತ್ತಿದ್ದಾಗಲೇ ಹಲವು ಆರೋಪಗಳು ಬಂದು ಬಂಧನ ಭೀತಿಯಿಂದ ದೇಶ ತ್ಯಜಿಸಬೇಕಾಗುತ್ತದೆ. ಹಲವು ವರ್ಷಗಳ ಕಾಲ ಬ್ರೆಜಿಲ್‌ನಲ್ಲಿ ಜೀವನ ಸಾಗಿಸುತ್ತಾನೆ. ಆತನ ಕಂಪನಿ ಮಾರಾಟವಾಗುತ್ತದೆ. ನಂತರ ಆರಂಭಿಸಿದ ಯಾವ ವ್ಯಾಪಾರವೂ ಆತನ ಕೈಹಿಡಿಯುವುದಿಲ್ಲ. ದೇಶಾಂತರ ಅಲೆಯುತ್ತಾನೆ.

ಈ ಮಧ್ಯೆಯೇ ನೆರೆಮನೆಯ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗುತ್ತಾನೆ. ಜೀವನದ ಒಂದು ಹಂತದಲ್ಲಿ ಮಾಜಿ ವೇಶ್ಯೆಯೊಬ್ಬಳನ್ನು ವಿವಾಹವಾಗುತ್ತಾನೆ... ಕೊನೆಗೆ 75 ವರ್ಷ ವಯಸ್ಸಿನಲ್ಲಿ ಯಾವುದೋ ದೇಶದ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ...

ಹಾಲಿವುಡ್‌ ಸಿನಿಮಾದ ಕಥೆಯನ್ನು ಹೋಲುವ ಇಂಥ ಜೀವನವನ್ನು ವಾಸ್ತವದಲ್ಲಿ ನಡೆಸಿದ ವ್ಯಕ್ತಿ ಕಂಪ್ಯೂಟರ್‌ಗಳಿಗೆ ‘ಆ್ಯಂಟಿ ವೈರಸ್‌’ ತಯಾರಿಸಿದ ಮೆಕಾಫೆ ಸಂಸ್ಥೆಯ ಮುಖ್ಯಸ್ಥ ಜಾನ್ ಮೆಕಾಫೆ. ಕಳೆದ ವಾರ (ಜೂನ್‌ 23) ಸ್ಪೇನ್‌ ದೇಶದ ಜೈಲೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

1945ರಲ್ಲಿ ಜನಿಸಿದ ಮೆಕಾಫೆ ಅಮೆರಿಕದಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದವರು. ಉನ್ನತ ಶಿಕ್ಷಣ ಪಡೆಯಲು ಹೋದರೂ, ಅಸಭ್ಯ ವರ್ತನೆಯ ಕಾರಣಕ್ಕೆ ಅವರನ್ನು ಕಾಲೇಜಿನಿಂದ ಹೊರಗಟ್ಟಲಾಗಿತ್ತು. ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಲ್ಲಿ ಪ್ರೋಗ್ರಾಮರ್‌ ಉದ್ಯೋಗವೂ ಸೇರಿದಂತೆ 1970ರಿಂದ 1982ರವರೆಗೂ ಅನೇಕ ಕಂಪನಿಗಳಲ್ಲಿ ಮೆಕಾಫೆ ಕೆಲಸ ಮಾಡಿದ್ದರು.

1987ರಲ್ಲಿ ‘ಮೆಕಾಫೆ ಅಸೋಸಿಯೇಟ್ಸ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕಂಪ್ಯೂಟರ್‌ಗಳಿಗೆ ‘ಆ್ಯಂಟಿ ವೈರಸ್‌’ ಸಾಫ್ಟ್‌ವೇರ್‌ ತಯಾರಿಕೆಯನ್ನು ಮೆಕಾಫೆ ಆರಂಭಿಸುತ್ತಾರೆ. ಕೆಲವೇ ವರ್ಷಗಳಲ್ಲಿ ಕಂಪನಿ ಕೋಟ್ಯಂತರ ಡಾಲರ್‌ ಸಂಪಾದಿಸುತ್ತದೆ. 1994ರಲ್ಲಿ ತಮ್ಮದೇ ಸಂಸ್ಥೆಗೆ ರಾಜೀನಾಮೆ ಸಲ್ಲಿಸುತ್ತಾರೆ. ಆ ನಂತರ ಮೆಕಾಫೆ ಸಂಸ್ಥೆಯನ್ನು 770 ಕೋಟಿ ಡಾಲರ್‌ಗೆ (ಸುಮಾರು ₹57,000 ಕೋಟಿ) ಮಾರಾಟ ಮಾಡಲಾಗುತ್ತದೆ.

ತಾವೇ ಆರಂಭಿಸಿದ್ದ ಕಂಪನಿಯನ್ನು ಮಾರಿದ ಬಳಿಕ ಮೆಕಾಫೆ ವಿವಿಧ ವ್ಯವಹಾರಗಳನ್ನು ಆರಂಭಿಸಿದರು. ‘ಟ್ರೈಬಲ್‌ ವಾಯ್ಸ್‌’ ಎಂಬ ಸಂಸ್ಥೆ ಶುರು ಮಾಡಿದರು. ಫೈರ್‌ವಾಲ್‌ ತಯಾರಿಕಾ ಸಂಸ್ಥೆ ಝೋನ್‌ ಅಲಾರ್ಮ್‌ನಲ್ಲಿ ಹೂಡಿಕೆ ಮಾಡಿದರು. ಇನ್ನೂ ಹಲವು ಸಂಸ್ಥೆಗಳನ್ನು ಆರಂಭಿಸಿದರೂ ಯಾವುದೂ ದಡ ಹತ್ತಲಿಲ್ಲ.

2009ರ ವೇಳೆಗೆ ಅವರ ಒಟ್ಟು ಆಸ್ತಿ ಮೌಲ್ಯ 40 ಲಕ್ಷ ಡಾಲರ್‌ಗೆ ಕುಸಿಯಿತು. ಎಲ್ಲಾ ಸೊತ್ತುಗಳು, ಸಂಗ್ರಹಿಸಿದ್ದ ದುಬಾರಿ ಪ್ರಾಚೀನ ವಸ್ತುಗಳು ಹಾಗೂ ಅಪರೂಪದ ಕಲಾಕೃತಿಗಳನ್ನು ಮಾರಾಟ ಮಾಡಬೇಕಾಯಿತು. ಬ್ರೆಜಿಲ್‌ನಲ್ಲಿ ‘ಕೋರಂ ಎಕ್ಸ್‌’ ಎಂಬ ಸಂಸ್ಥೆ ಆರಂಭಿಸಿದ್ದರು. ಗಿಡಮೂಲಿಕೆಗಳಿಂದ ಪ್ರತಿಕಾಯಗಳನ್ನು ತಯಾರಿಸಲಾಗುತ್ತದೆ ಎಂದು ಆತ ಹೇಳಿದ್ದರು. ಆದರೆ ಅದರ ಸಂಶೋಧನಾ ಘಟಕದ ಮೇಲೆ 2012ರಲ್ಲಿ ಪೊಲೀಸ್‌ ದಾಳಿ ನಡೆಯಿತು. ಅಲ್ಲಿ ಅತ್ಯಂತ ಅಪಾಯಕಾರಿಯಾದ ಮಾದಕವಸ್ತುಗಳನ್ನು ತಯಾರಿಸಲಾಗುತ್ತಿತ್ತು ಮತ್ತು ಮೆಕಾಫೆ ಬಳಿ ಪರವಾನಿಗೆ ಇಲ್ಲದ ಶಸ್ತ್ರಾಸ್ತ್ರವೂ ಇತ್ತು ಎಂಬ ಆರೋಪವಿತ್ತು.

ಕೊನೆಗೆ ಆರೋಪಮುಕ್ತನಾದರೂ, ಸಂಶೋಧನಾ ಸಂಸ್ಥೆಯನ್ನು ಮುಚ್ಚಲಾಯಿತು. ಪೊಲೀಸರು ಕಂಪನಿಯ ಮೇಲೆ ದಾಳಿ ನಡೆಸಿದಾಗ ಮೆಕಾಫೆಯು 17 ವರ್ಷದ ಬಾಲೆಯ ಜತೆಗೆ ಹಾಸಿಗೆಯಲ್ಲಿದ್ದ ಎಂದೂ ಆಗ ವರದಿಯಾಗಿತ್ತು.

ಅದೇ ವರ್ಷ ತಮ್ಮ ನೆರೆಮನೆಯ ಗ್ರೆಗರಿ ಪಾಲ್‌ ಎಂಬಾತನನ್ನು ಕೊಲೆ ಮಾಡಿದ ಆರೋಪವೂ ಮೆಕಾಫೆ ಮೇಲೆ ಬಂತು. ಇದನ್ನು ಮೆಕಾಫೆ ನಿರಾಕರಿಸಿದರೂ, ಪೊಲೀಸರಿಂದ ತಲೆಮರೆಸಿಕೊಂಡು ಓಡಾಡಲಾರಂಭಿಸಿದ್ದರು.

ಸುಮಾರು ಒಂದು ತಿಂಗಳ ನಂತರ, ಗ್ವಾಟೆಮಾಲಾದಿಂದ ಅವರನ್ನು ಪೊಲೀಸರು ಬಂಧಿಸಿದರು. ಮರಳಿ ಅಮೆರಿಕಕ್ಕೆ ಕಳುಹಿಸುವ ಸಿದ್ಧತೆಯಲ್ಲಿದ್ದಾಗ ಅವರಿಗೆ ಎರಡು ಹೃದಯಾಘಾತಗಳಾದವು. ಅದು ಕೂಡ ನಾಟಕ ಎಂಬ ಆರೋಪಗಳು ಕೇಳಿ ಬಂದವು.

ಕೊನೆಗೆ ಅವರನ್ನು ಮಿಯಾಮಿಗೆ ಗಡಿಪಾರು ಮಾಡಲಾಯಿತು. ಅಲ್ಲಿ ಮಾಜಿ ವೇಶ್ಯೆಯೊಬ್ಬರು ಮೆಕಾಫೆಗೆ ಪರಿಚಯವಾಗುತ್ತಾರೆ. ಸ್ವಲ್ಪ ಕಾಲ ಆಕೆಯ ಜತೆಗೆ ಓಡಾಡಿದ ಮೆಕಾಫೆ, ಕೊನೆಗೆ ಆಕೆಯನ್ನು ವರಿಸುತ್ತಾರೆ. 2013ರಲ್ಲಿ ಅಮೆರಿಕಕ್ಕೆ ಮರಳುತ್ತಾರೆ.

ಅಧ್ಯಕ್ಷನಾಗುವ ಕನಸು
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸೈಬರ್‌ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಮೆಕಾಫೆ ಸುದ್ದಿಯಾಗಿದ್ದರು. ಅದಾಗಿ ಸ್ವಲ್ಪ ದಿನಗಳಲ್ಲೇ ಪಕ್ಷಾಂತರ ಮಾಡಿ ಲಿಬರ್ಟೇರಿಯನ್‌ ಪಕ್ಷವನ್ನು ಸೇರಿ ಆ ಪಕ್ಷದಿಂದ ಸ್ಪರ್ಧಿಸಿದ್ದರು. 2020ರಲ್ಲಿ ಪುನಃ ಅದೇ ಪಕ್ಷದಿಂದ ಸ್ಪರ್ಧಿಸಿದ್ದರು.

2019ರ ಜುಲೈ ತಿಂಗಳಲ್ಲಿ ಡೊಮಿನಿಕನ್‌ ರಿಪಬ್ಲಿಕ್‌ನಲ್ಲಿ ಮೆಕಾಫೆಯ ಬಂಧನವಾಗುತ್ತದೆ. ಆತ ಹಾಗೂ ಇತರ ಐದು ಮಂದಿ ವಿಹಾರ ನೌಕೆಯೊಂದರಲ್ಲಿ ಸೇನಾ ಸಮವಸ್ತ್ರದ ಮಾದರಿಯ ವಸ್ತ್ರವನ್ನು ಧರಿಸಿಕೊಂಡು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದರು ಎಂಬ ಆರೋಪ ಇತ್ತು. ಪೊಲೀಸರು ಕೆಲವು ದಿನಗಳ ಕಾಲ ಅವರನ್ನು ಬಂಧನದಲ್ಲಿಟ್ಟು, ಆನಂತರ ಬಿಡುಗಡೆ ಮಾಡಿದ್ದರು.

ಹೀಗೆ ವಿವಿಧ ದೇಶಗಳಲ್ಲಿ ಅವರ ಬಂಧನ– ಬಿಡುಗಡೆಯ ಘಟನೆಗಳು ನಡೆಯುತ್ತಲೇ ಇದ್ದವು. 2020ರ ಅಕ್ಟೋಬರ್‌ನಲ್ಲಿ ಬಾರ್ಸಿಲೋನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುನಃ ಬಂಧಿಸಲಾಗುತ್ತದೆ. ಅಮೆರಿಕ ಸರ್ಕಾರದ ಸೂಚನೆಯ ಮೇರೆಗೆ ಸ್ಪೇನ್‌ನ ಪೊಲೀಸರು ಅವರನ್ನು ಬಂಧಿಸಿದ್ದರು. 2014ರ ನಂತರದ ನಾಲ್ಕು ವರ್ಷಗಳಲ್ಲಿ ಕ್ರಿಪ್ಟೊ ಕರೆನ್ಸಿಯ ಮೂಲಕ ಗಳಿಸಿದ ಆದಾಯ, ಸಲಹೆಗಾರನಾಗಿ ಮಾಡಿದ ಕೆಲಸದಿಂದ ಬಂದ ಆದಾಯ ಹಾಗೂ ತಮ್ಮ ಜೀವನದ ಬಗ್ಗೆ ಕಿರುಚಿತ್ರ ರಚನೆಗೆ ಸಂಭಾವನೆಯ ರೂಪದಲ್ಲಿ ಪಡೆದ ಹಣಕ್ಕೆ ಆದಾಯ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಅವರ ಬಂಧನಕ್ಕೆ ಅಮೆರಿಕ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT