ನೀರು ನುಂಗುವ ಹೋಳಿ

ಸೋಮವಾರ, ಏಪ್ರಿಲ್ 22, 2019
29 °C
ನೀರಿನ ಮೂಲಗಳ ಮೇಲೆ ಭಾರಿ ಒತ್ತಡ ಹೇರುವ ಹೋಳಿಯ ಸಾಂಕೇತಿಕ ಆಚರಣೆ ಸಾಧ್ಯವಿಲ್ಲವೇ?

ನೀರು ನುಂಗುವ ಹೋಳಿ

Published:
Updated:
Prajavani

ಈ ಬಾರಿ ಹೋಳಿ ಹಬ್ಬ ಮತ್ತು ವಿಶ್ವ ಜಲ ದಿನ ಒಂದರ ಹಿಂದೊಂದು ಬಂದಿವೆ. ಹೋಳಿ ಹಬ್ಬ ಮಾಡಿ ಅಪಾರ ನೀರು ಬಳಸಿ, ಆನಂತರ ವಿಶ್ವ ಜಲ ದಿನ (ಮಾರ್ಚ್‌ 22) ಆಚರಿಸುವಾಗ, ನೀರನ್ನು ಹೇಗೆ ಉಳಿಸುವುದು– ಬಳಸುವುದು ಎಂದು ಚರ್ಚಿಸುವ ವಿಪರ್ಯಾಸ ಎದುರಾಗಿದೆ. ಕಳೆದ ಹೋಳಿಯ ನಂತರ ಕಪಾಟು ಸೇರಿದ್ದ ಪಿಚಕಾರಿಗಳು, ಗುಲಾಲಿನ ಪ್ಯಾಕೆಟ್‍ಗಳು, ಬಣ್ಣದ ಕ್ಯಾನ್‍ಗಳು, ಬಣ್ಣ ಕಲೆಸುವ ಗಡಿಗೆ– ಕೊಳಗಗಳೆಲ್ಲ ಪಡಸಾಲೆಗೆ ಬಂದು ಕೂತಿವೆ. ಹಬ್ಬದ ಸಲಕರಣೆಗಳ ಮಾರಾಟವು ಮಾಲ್ ಹಾಗೂ ಆನ್‍ಲೈನ್‍ನಲ್ಲಿ ತುರುಸಾಗಿ ನಡೆದಿದೆ. ಅಂದು ಅಂಗಡಿ ಬೀದಿ, ರಸ್ತೆ, ಮೈದಾನಗಳೆಲ್ಲ ಬಣ್ಣದ ಕೆಸರಿನಿಂದ ತುಂಬಿ ಹೋಗಲಿವೆ. ತೆರೆದ ನಲ್ಲಿಗಳು ನಿರಂತರ ನೀರು ಹರಿಸಲಿವೆ. ಹಬ್ಬದ ಸಂಭ್ರಮವನ್ನು ಎದುರು ನೋಡುತ್ತಿರುವ ಜನ, ಅಂದು ಬಳಕೆಯಾಗುವ ನೀರಿನ ಕುರಿತು ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.

ಕರ್ನಾಟಕದ ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಇನ್ನೂ 600 ಹಳ್ಳಿಗಳು ಈ ಅಭಾವದ ಪಟ್ಟಿಗೆ ಸೇರುವ ಅಂದಾಜಿದೆ (ಪ್ರ.ವಾ., ಮಾರ್ಚ್ 14). ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಹೇಳುವ ಪ್ರಕಾರ, ಪ್ರಸಕ್ತ ವರ್ಷ ರಾಜ್ಯದಲ್ಲಿ 2,300 ಗ್ರಾಮಗಳು ಹಾಗೂ ನಗರಗಳ 661 ವಾರ್ಡ್‌ಗಳು ತೀವ್ರ ಜಲಕ್ಷಾಮಕ್ಕೆ ತುತ್ತಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆ ಬಿಗಡಾಯಿಸಿರುವಾಗ ಹಬ್ಬೋನ್ಮಾದದಲ್ಲಿ ನಾವು ಬಳಸುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವೇ?

ಉತ್ತರ ಭಾರತದಲ್ಲಿ ಹೋಳಿ ಬಹುಸಂಖ್ಯಾತರ ಬಹುದೊಡ್ಡ ಹಬ್ಬ. ಲೆಕ್ಕಾಚಾರದ ಪ್ರಕಾರ, ಹೋಳಿಯ ದಿನ ಸಾಮಾನ್ಯ ದಿನಗಳ ಬಳಕೆಗಿಂತ ಶೇ 40ರಷ್ಟು ಹೆಚ್ಚು ನೀರು ಬಳಕೆಯಾಗುತ್ತದೆ. ನದಿ ದಡದ ಪಟ್ಟಣಗಳಲ್ಲಿ ಹಬ್ಬದ ದಿನದ ಸ್ನಾನಕ್ಕೆ, ಬಣ್ಣ ಕಲೆಸಲು ಹಾಗೂ ಬಟ್ಟೆ ಒಗೆಯಲು ನೀರು ನದಿಯಿಂದಲೇ ಸಿಗುತ್ತದೆ. ಆದರೆ, ಆ ಸೌಲಭ್ಯವಿಲ್ಲದ ಅನೇಕ ಊರುಗಳಲ್ಲಿ ನೀರಿನ ಮೂಲಗಳ ಮೇಲೆ ಅತೀವ ಒತ್ತಡ ಬೀಳುತ್ತದೆ.

ಭಾರತದಲ್ಲಿ ನಾಗರಿಕ ಬಳಕೆಗೆ ದೊರೆಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. 2001ರಲ್ಲಿ ವರ್ಷಕ್ಕೆ ಪ್ರತೀ ವ್ಯಕ್ತಿಗೆ ದೊರೆಯುತ್ತಿದ್ದ ನೀರು 1,832 ಘನ ಮೀಟರಿನಷ್ಟು. ಈಗ ಅದು 1,454 ಘನ ಮೀಟರ್‌ಗೆ ಕುಸಿದಿದೆ. ನೀರಿನ ಮೂಲಗಳ ಸಂರಕ್ಷಣೆ ಮತ್ತು ವಿವೇಚನೆಯ ಬಳಕೆ ನಡೆಯದಿದ್ದರೆ 2030ರ ವೇಳೆಗೆ ಲಭ್ಯತೆ 1,100 ಘನ ಮೀಟರ್‌ಗೆ ತಲುಪಲಿದೆ ಎಂದು ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಕಳೆದ ವರ್ಷದ ವಿಶ್ವ ಆರ್ಥಿಕ ಒಕ್ಕೂಟದ ಸಭೆಯಲ್ಲಿ ಖಚಿತಪಡಿಸಿದ್ದಾರೆ.

ವಿಶ್ವಸಂಸ್ಥೆಯ ನಿಯಮದಂತೆ, ಪ್ರತಿ ಭಾರತೀಯನಿಗೆ ದಿನವೊಂದಕ್ಕೆ ಸಿಗಬೇಕಾದ ನೀರಿನ ಪ್ರಮಾಣ 130 ಲೀಟರ್‌ಗಳು. ವಾಸ್ತವದಲ್ಲಿ ಸಿಗುತ್ತಿರುವುದು 65 ಲೀಟರ್‌. ಅಂದರೆ ಅರ್ಧದಷ್ಟು ಮಾತ್ರ. ನಗರ ಮತ್ತು ಗ್ರಾಮೀಣ ಪ್ರದೇಶವಾಸಿಗಳಿಗೆಸಿಗುವ ನೀರಿನ ಪ್ರಮಾಣದಲ್ಲೂ ವ್ಯತ್ಯಾಸ ಇದೆ. ಜನಸಂಖ್ಯೆಯ ಶೇ 30ರಷ್ಟು ಭಾಗ ನಗರದಲ್ಲಿದೆ. ಇವರು ಬಳಸುವ ನೀರು ಶೇ 70ರಷ್ಟು. ಗ್ರಾಮೀಣ ಪ್ರದೇಶದ ಶೇ 70ರಷ್ಟು ಜನ ಉಳಿದ ನೀರು, ಅಂದರೆ ಶೇ 30ರಷ್ಟನ್ನು ಬಳಸಬೇಕಾದ ದುರಂತ ನಮ್ಮಲ್ಲಿದೆ. ಭಾರತದ ಅನೇಕ ಹಳ್ಳಿಗಳಲ್ಲಿ ಪ್ರಜೆಯೊಬ್ಬನಿಗೆ ವಾರಕ್ಕೆ 100 ಲೀಟರ್ ನೀರು ಸಿಗುವುದೂ ದುಸ್ತರವಾಗಿದೆ.‌

ಆಫ್ರಿಕಾದ ಹಲವು ಭಾಗಗಳಲ್ಲಿ ಸೈನ್ಯದ ಮೇಲುಸ್ತುವಾರಿಯಲ್ಲಿ ನೀರಿನ ಪೂರೈಕೆ ನಡೆಯುತ್ತಿದೆ. ಅಭಿವೃದ್ಧಿಯ ರೇಸ್‍ನಲ್ಲಿರುವ ಅನೇಕ ದೇಶಗಳು ಇರುವ ನೀರಿನ ಮೂಲಗಳನ್ನು ಸಂರಕ್ಷಿಸುತ್ತಲೇ, ಮುಂದಿನ ಪೀಳಿಗೆಗೆ ನೀರುಣಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿವೆ.

ಭೂಮಿಯ ಶೇ 70ರಷ್ಟು ಭಾಗವನ್ನು ಆವರಿಸಿರುವ ನೀರಿನಲ್ಲಿ ಕುಡಿಯಲು ಯೋಗ್ಯವಾದುದು ಕೇವಲ ಶೇ 3ರಷ್ಟು. ಅದರಲ್ಲಿ ನಮಗೆ ಲಭ್ಯವಿರುವುದುಶೇ 0.4ರಷ್ಟು ಮಾತ್ರ. ವಾಯುಗುಣ ಬದಲಾವಣೆಯಿಂದಾಗಿ ಹಿಮಗಡ್ಡೆಗಳು ತ್ವರಿತವಾಗಿ ಕರಗುತ್ತಿವೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ನಿಸರ್ಗದ ಸ್ಪಾಂಜ್‌ಗಳೆನಿಸಿದ ಶೋಲಾ ಕಾಡುಗಳು ಮರೆಯಾಗುತ್ತಿವೆ. ಅಣೆಕಟ್ಟುಗಳಲ್ಲಿ ಹೂಳು ತುಂಬಿ ಸಂಗ್ರಹ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ವರ್ಷಪೂರ್ತಿ ಹರಿಯುತ್ತಿದ್ದ ನದಿಗಳ ಆಯಸ್ಸು ನಾಲ್ಕೂವರೆ ತಿಂಗಳಿಗೇ ಕ್ಷೀಣಿಸಿದೆ. ಭಾರತದ ಅನೇಕರಿಗೆ ಒಂದು ಕೊಡ ಶುದ್ಧ ಕುಡಿಯುವ ನೀರಿಗೂ ತತ್ವಾರ ಇರುವಾಗ, ಅಗಾಧ ಪ್ರಮಾಣದ ನೀರು ಬಯಸುವ, ನೀರಿನ ಮೂಲಗಳ ಮೇಲೆ ಭಾರಿ ಒತ್ತಡ ಹೇರುವ ಹೋಳಿ ಹಬ್ಬದ ಸಾಂಕೇತಿಕ ಆಚರಣೆ ಸಾಧ್ಯವಿಲ್ಲವೇ?

ಲೇಖಕ: ಪ್ರಾಚಾರ್ಯ, ಆಚಾರ್ಯ ಪದವಿ ಪೂರ್ವ ಕಾಲೇಜು, ಬೆಂಗಳೂರು

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !