ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಥ ಮಾಡಿಕೊಳ್ಳುವ ಸ್ವಾತಂತ್ರ್ಯ

Last Updated 23 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಸಿ.ಎಂ. ಸಾಹೇಬ್ರಿಗಿದು ಹೊಸತೇನಲ್ಲ. ಯಾವಾಗ ಅವರನ್ನು ಆ ದೇವರು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿದರೋ ಆವತ್ತಿನಿಂದ ಜನತೆ ಅದರಲ್ಲೂ ಮುಖ್ಯವಾಗಿ ವಿರೋಧ ಪಕ್ಷದವರು ಅವರನ್ನು ಅಪಾರ್ಥ ಮಾಡಿಕೊಳ್ಳಲು ಶುರು ಮಾಡಿಬಿಟ್ಟಿದ್ದಾರೆ. ಅಧಿಕಾರಕ್ಕೇರಿದ ಇಪ್ಪತ್ನಾಲ್ಕು ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಕ್ಕೆ ಎಲ್ಲರೂ ಅಡಿಗಡಿಗೆ ಗಡಿಯಾರ ನೋಡಲಾರಂಭಿಸಿಲ್ಲವೇ? ಇಪ್ಪತ್ನಾಲ್ಕು ಗಂಟೆ ಸಮಯ ಅಂದರೆ ‘ಆದಷ್ಟು ಬೇಗ’ ಎಂದು ತಿಳಿದುಕೊಳ್ಳುವಷ್ಟು ವ್ಯವಧಾನ ನಮಗಿರಬೇಡವೇ?

ನಂತರ ಒಮ್ಮೆ ‘ನಾನು ಕಾಂಗ್ರೆಸ್ ಹಂಗಿನಲ್ಲಿದ್ದೇನೆ’ ಎಂದು ಎಲ್ಲೋ ಹೇಳಿದರು. ಅಷ್ಟಕ್ಕೆ ಎಲ್ಲರೂ ಆ ಮಾತನ್ನು ಅಪಾರ್ಥ ಮಾಡಿಕೊಂಡು, ರಾಜ್ಯದ ದೊರೆ ಜನತೆಯ ಹಂಗಿನಲ್ಲಿರಬೇಕು, ಅದು ಬಿಟ್ಟು ಹಂಗಿನ ಅರಮನೆಯಲ್ಲಿರೋಕೆ ನಾಚಿಕೆಯಾಗಲ್ವಾ? ಎಂದು ಥೂ, ಛೀ ಅನ್ನತೊಡಗಿದರು. ಪಾಪ, ಸಿ.ಎಂ. ಒಂದು ಮೈತ್ರಿ ಸರ್ಕಾರ ನಡೆಸುವುದಕ್ಕೆ ಎಷ್ಟು ಹರಸಾಹಸ ಮಾಡಬೇಕಾಗುತ್ತೋ ಎಂದು ನೆನೆದು ಆ ಮಾತನ್ನು ಹೇಳಿದ್ದು ಸತ್ಯ.

ಮುಂದೆ ಆಪರೇಷನ್ ಕಮಲದ ಭೀತಿ ಉಂಟಾದಾಗ ಅವರು ತಮ್ಮ ಹೊಟ್ಟೆ ಮೇಲೆ ಕೈಯಾಡಿಸುತ್ತಾ ‘ಏನಾದರೂ ಆದರೆ ನಾವು ದಂಗೆ ಎಬ್ಬಿಸಬೇಕಾಗುತ್ತದೆ!’ ಅಂದಿದ್ದರು. ಅವರೇನೂ ಮಹಾರಾಜನಂತೆ ಗರ್ಜಿಸಿರಲಿಲ್ಲ. ಆದರೆ ಏನಾಯಿತು ನೋಡಿ! ಒಬ್ಬ ಸಿ.ಎಂ. ದಂಗೆಗೆ ಕರೆ ನೀಡುವುದೆಂದರೆ ಪುಟ್ಟ ವಿಷಯವೇ? ಆಕ್ಚುವಲಿ… ಅವರು ಹೇಳಹೊರಟದ್ದು ‘ಆಪರೇಷನ್ ಕಮಲ ನಡೆದರೆ ನಾವೂ ಸುಮ್ಮನಿರೊಲ್ಲ’ ಎಂದು (ಹೆಚ್ಚೆಂದರೆ ಟೈರು ಹೊತ್ತಿಸುವುದು).

ಇದೆಲ್ಲಾ ನಡೆದ ಮೇಲೆ ಮೊನ್ನೆ ಮೊನ್ನೆ ರೈತರ ಪ್ರತಿಭಟನೆ ಸಂದರ್ಭ ಮಹಿಳೆಯೊಬ್ಬರನ್ನು ‘ನೀನು ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ?’ ಅಂತ ಕೇಳಿದ್ದರು. ಹಳೆಯ ಹಾಸ್ಯ ನಟ ಮುಸುರಿ ಸಿನಿಮಾಗಳನ್ನು ನೋಡಿ ಬೆಳೆದವರ ತಲೆಗೆ (ಈಗಿನ ಕನ್ನಡ ಸಿನಿಮಾಗಳನ್ನು ನೋಡಿ ಬೆಳೆದವರನ್ನೂ ಸೇರಿಸಿ) ಡಬ್ಬಲ್ ಮೀನಿಂಗುಗಳೇ ಹೊಕ್ಕುತ್ತವೆ. ಈ ‘ಮಲಗಿದ್ದೆ’ ಡೈಲಾಗ್ ಕೂಡಾ ಹಾಗೇ ಅಪಾರ್ಥಕ್ಕೆ ಗುರಿಯಾಯಿತು. ರೈತರ ಹಳೇ ಬೇಡಿಕೆಗಳನ್ನು ನೋಡಿ, ಸಿ.ಎಂ. ಆಕೆಗೆ ಹೇಳಬಯಸಿದ್ದು ‘ನಾಲ್ಕು ವರ್ಷ ನೀನು ನಿದ್ದೆ ಮಾಡ್ತಿದ್ದೆಯಾ?’ ಎಂದು.

ಈಗ ಕೋಲಾಹಲ ಎದ್ದ ಮೇಲೆ ನಿದ್ದೆಗೂ ಮಲಗುವುದಕ್ಕೂ ಏನಾದರೂ ವ್ಯತ್ಯಾಸವಿದೆಯಾ ಎಂದು ಸಿ.ಎಂ. ರಾಜ್ಯದ ಪ್ರಸಿದ್ಧ ಕನ್ನಡ ಪಂಡಿತರನ್ನೆಲ್ಲಾ ಕೇಳುತ್ತಿದ್ದಾರಂತೆ! ಈಗಾಗಲೇ ಅವರು ಈ ಬಗ್ಗೆ ಅಗಾಧ ಅನುಭವಿ ಇರುವ ಮಾಜಿ ಸಿ.ಎಂ.ರೊಂದಿಗೆ ಚರ್ಚಿಸದೆ ಇರಲಿಕ್ಕಿಲ್ಲ ಬಿಡಿ! ಸಿ.ಎಂ. ಅವರಿಗೆ ಸುಂದರ ಪದಗಳನ್ನು ಬಳಸಬೇಕೆಂಬ ಅತಿಯಾಸೆಯೇ ಅವರ ಪಾಲಿಗೆ ಮುಳುವಾಗುತ್ತಿದೆಯಾ? ಎಂಬ ವಿಷಯದ ಮೇಲೆ ಯಾವ ಟಿ.ವಿ. ಚಾನೆಲ್‌ನವರೂ ಕಾರ್ಯಕ್ರಮ ನಡೆಸಿಕೊಡುವ ಗೋಜಿಗೇ ಯಾಕೆ ಹೋಗಿಲ್ಲವೋ!

ನಮ್ಮ ಸಿ.ಎಂ. ಸಾಹೇಬ್ರಂತೆ ಅಪಾರ್ಥಕ್ಕೆ ಪಾತ್ರರಾಗುವವರಿಗೇನೂ ಕೊರತೆಯಿಲ್ಲ. ಆಡಳಿತ ಪಕ್ಷದಲ್ಲಿ ಶಾಸಕರೊಬ್ಬರು ‘ನನಗೆ ಮುಖ್ಯಮಂತ್ರಿ ಸ್ಥಾನ ಕೊಡಿ’ ಎಂದುಬಿಟ್ಟರೆ ಸಾಕು. ಮಾರನೇ ದಿವಸ ವಿರೋಧ ಪಕ್ಷದವರಿಗೆ ಮೈತ್ರಿ ಸರ್ಕಾರ ಇನ್ನೇನು ಉರುಳಿಬೀಳುತ್ತೆ ಎಂದು ಖುಷಿಯೋ ಖುಷಿ! ಆಡಳಿತ ಪಕ್ಷದ ಹಿರಿಯರಿಗೆ ಏನೋ ಕಸಿವಿಸಿ-ಬಿಸಿ! ನಿಜ ಏನೆಂದರೆ ಆ ಶಾಸಕ ಪ್ರಮುಖ ಮಂತ್ರಿ ಸ್ಥಾನ ಕೊಡಿ ಅನ್ನಬೇಕಾಗಿತ್ತು.

‘ಐವತ್ತಾರು ಇಂಚಿನ ಎದೆಯ ನಾಯಕನನ್ನು ನಾವು ಮುಗಿಸುತ್ತೇವೆ’ ಎಂದು ಕಾಂಗ್ರೆಸ್ ನಾಯಕರೊಬ್ಬರ ಬಾಯಿಯಿಂದ ಅಪ್ಪಿ ತಪ್ಪಿ ಬಂದುಬಿಟ್ಟರೆ ಮುಗಿಯಿತು. ಆ ಐವತ್ತಾರು ಇಂಚಿನ ಭಕ್ತರೆಲ್ಲಾ ಒಕ್ಕೊರಲಿನಲ್ಲಿ ‘ಇದು ಕೊಲೆ ಬೆದರಿಕೆ! ಕೂಡಲೇ ಈತನನ್ನು ಬಂಧಿಸಬೇಕು’ ಎಂದು ಹಟ ಹಿಡಿಯದೇ ಬಿಡುವುದಿಲ್ಲ. ‘ಮುಂದಿನ ಲೋಕಸಭೆ ಚುನಾವಣೆಯಲ್ಲಿ ಐವತ್ತಾರು ಇಂಚಿನ ನಾಯಕನನ್ನು ಸೋಲಿಸುತ್ತೇವೆ’ ಎಂಬುದನ್ನು ಹೀಗೆ ಅಪಾರ್ಥ ಮಾಡಿಕೊಂಡರೆ ಯಾರ ತಪ್ಪು ಹೇಳಿ!

ಮಂಗಳೂರಿನ ಶಾಸಕರೊಬ್ಬರೊಂದಿಗೆ ‘ನಮ್ಮ ಮುಖ್ಯಮಂತ್ರಿಯ ಆಡಳಿತವೈಖರಿ ಹೇಗೆ?’ ಎಂದು ಸುಮ್ಮನೆ ಕೇಳಿ ನೋಡಿ. ‘ಅವರು ಸಾಯಲಿ ಮಾರಾಯರೆ, ನಮಗೇನಾಗಬೇಕು?’ ಎಂದು ಅವರೇನಾದರೂ ಉತ್ತರಿಸಿದರು ಅನ್ನಿ, ನಮ್ಮ ಸಿ.ಎಂ. ಕಡೆಯವರು ‘ದಂಗೆ’ಯನ್ನೇ ಎಬ್ಬಿಸಬಹುದೇನೋ! ‘ಸಾಯಲಿ’ ಅಂದರೆ ನಮಗೆ ಅವರ ಉಸಾಬರಿ ಯಾಕೆ? ಎಂದು. ಆದರೆ ಅಪಾರ್ಥ ಮಾಡಿಕೊಳ್ಳು
ವವರ ಸ್ವಾತಂತ್ರ್ಯ ಕಸಿಯುವುದಕ್ಕಾಗುತ್ತದೆಯೇ?

‘ಪಕ್ಷದ ಕೆಲ ನಾಯಕರು ನನ್ನಂತಹ ಒಂಟಿ ಮಹಿಳೆಯ ಹಿಂದೆ ಬಿದ್ದು ಕಿರುಕುಳ ನೀಡುತ್ತಿರುವುದು ಸರಿಯಲ್ಲ’ ಎಂದು ಮಹಿಳಾ ‘ಧುರಿಣಿ’ ಹೇಳಿದರೆ, ಅಪಾರ್ಥ ಮಾಡಿಕೊಳ್ಳುವುದಕ್ಕೆ ತುಂಬಾ ಅವಕಾಶ ಇರುತ್ತದೆ. ಪಕ್ಷದ ನಾಯಕರು ರಾಜಕೀಯ ಕಿರುಕುಳ ಕೊಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿರುತ್ತಿದ್ದರೆ, ಆ ನಾಯಕರ ಹೆಂಡತಿಯರಂತೂ ಬೇರೆ ಏನೂ ತಿಳಿದುಕೊಳ್ಳುತ್ತಿರಲಿಲ್ಲ. ಅಲ್ಲವೇ?

ಅಂದಹಾಗೆ, ಸಿ.ಎಂ. ಸಾಹೇಬ್ರು ತಮ್ಮ ನುಡಿಮುತ್ತುಗಳನ್ನು ಎಲ್ಲರೂ ತಪ್ಪು ತಪ್ಪಾಗಿಯೇ ಅರ್ಥೈಸಿಕೊಳ್ಳುವುದರಿಂದ ಬೇಸತ್ತು, ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕೆಂದಿದ್ದರಂತೆ. ಆದರೆ ವಿಶ್ರಾಂತಿಯನ್ನೂ ಎಲ್ಲರೂ ಅಪಾರ್ಥ ಮಾಡಿಕೊಳ್ಳುತ್ತಾರೆ ಎಂದು ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT