ಸೋಮವಾರ, ಮೇ 17, 2021
24 °C

ಸರ್ಕಾರಿ ಶಾಲೆಗಳಿಗೆ ‘ಒಸಾಟ್‌’ ಶಕ್ತಿ

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಏನಾಗಬೇಕಾಗಿದೆ – ಹೀಗೊಂದು ಪ್ರಶ್ನೆಯನ್ನು ಎಸೆದು ನೋಡಿ. ಎಷ್ಟೆಲ್ಲ ಬಗೆ ಬಗೆಯ ಉತ್ತರಗಳು ಸಿಗುತ್ತವೆ ಎಂದು ಪಟ್ಟಿ ಮಾಡಿ. ಮೊದಲನೆಯದು ಆಂಗ್ಲ ಮಾಧ್ಯಮ ಬರಬೇಕು. ಪರೀಕ್ಷೆಗಳು ಇರಲೇಬಾರದು. ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು, ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡುವಂತಾಗಬೇಕು... ಹೀಗೆ ಎಷ್ಟೆಲ್ಲ ‘ಬೇಕು’ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳ ನಡುವೆ  ಕೊನೆ ಸಾಲಿನಲ್ಲಿ ‘ಶಾಲೆಗೆ ಒಳ್ಳೆಯ ಕಟ್ಟಡವಿರಬೇಕು’ ಎಂಬುದನ್ನು ಸೇರಿಸುತ್ತಾರೆ.

ಹೀಗೆ ಶಿಕ್ಷಣದ ವ್ಯವಸ್ಥೆಯಲ್ಲಿ ಕೊನೆಯ ಆದ್ಯತೆಯಾಗಿರುವುದನ್ನೇ ಮೂಲ ಹಾಗೂ ಮೊದಲ ಆದ್ಯತೆಯಾಗಿಸಿಕೊಂಡಿರುವ ಅಮೆರಿಕದ ಸ್ವಯಂ ಸೇವಾ ಸಂಸ್ಥೆ ‘ಒಸಾಟ್‌ (One School At A Time)’, ಆರ್ಥಿಕವಾಗಿ ದುರ್ಬಲವಾಗಿರುವ ಶಾಲೆಗಳಿಗೆ ‘ಮೂಲಸೌಲಭ್ಯ’ ಕಲ್ಪಿಸಲು ಮುಂದಾಗಿದೆ. ಕರ್ನಾಟಕದಾದ್ಯಂತ ಹದಿನೈದು ವರ್ಷಗಳಲ್ಲಿ 25 ಶಾಲೆಗಳಿಗೆ ಸಂಪೂರ್ಣ ಹೊಸ ಕಟ್ಟಡ ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ರಾಯಚೂರು ಜಿಲ್ಲೆಯ ತುಂಗಭದ್ರಾ ಎಂಬ ಪುಟ್ಟ ಗ್ರಾಮದಿಂದ ಹಿಡಿದು, ಮೈಸೂರು ಜಿಲ್ಲೆ, ಚಾಮರಾಜನಗರ ಜಿಲ್ಲೆಗಳವರೆಗೂ 24 ಶಾಲೆಗಳು ಈ ಸಂಸ್ಥೆ ನೀಡಿದ ಸೂರಿನಡಿ ಪಾಠ ಮಾಡುತ್ತಿವೆ. ಇನ್ನೊಂದು ಶಾಲೆ ಈ ಜೂನ್‌ ತಿಂಗಳಲ್ಲಿ ಸಮರ್ಪಣೆಗೊಳ್ಳಲಿದೆ. ಇನ್ನೂ ಮೂರು ಶಾಲೆಗಳು ನಿರ್ಮಾಣ ಹಂತದಲ್ಲಿವೆ. ಆರು ಶಾಲೆಗಳಿಗೆ ಈ ಸೌಲಭ್ಯ ಒದಗಿಸಬೇಕಾಗಿದೆ.

ಇದು ಕನ್ನಡಿಗರ ಸಂಸ್ಥೆ : ಈ ಸ್ವಯಂ ಸೇವಾ ಸಂಸ್ಥೆ ಅಮೆರಿಕದಲ್ಲಿದ್ದರೂ, ಅದರಲ್ಲಿನ ಸದಸ್ಯರೆಲ್ಲರೂ ಕನ್ನಡಿಗರು. ಕನ್ನಡಿಗರ ಈ ಗುಂಪು ಭಾರತದ ಎಲ್ಲೆಡೆಯೂ ಕಾರ್ಯನಿರ್ವಹಿಸಲು ಮುಂದಾಗಿದೆ. ಅದರ ಪರಿಣಾಮವೇ ಭಾರತದ ಒಂದು ಘಟಕ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ. ತಮಿಳುನಾಡು, ಉತ್ತರ ಪ್ರದೇಶ, ಹರಿಯಾಣ, ಮಣಿಪುರ ಹಾಗೂ ಮಹಾರಾಷ್ಟ್ರದಲ್ಲೂ ಶಾಲೆಗಳನ್ನು ಮರು ನಿರ್ಮಾಣ ಮಾಡಿಕೊಡುತ್ತಿದೆ.

ಒಸಾಟ್‌ನ ಗುಂಪಿನಲ್ಲಿ ಐಟಿ ಕ್ಷೇತ್ರದವರು ಮಾತ್ರವಲ್ಲ, ಆರ್ಕಿಟೆಕ್ಟ್‌, ಸಿ.ಎ. ಸಿವಿಲ್‌ ಎಂಜಿನಿಯರ್‌, ಶಿಕ್ಷಣ ತಜ್ಞರು ಹೀಗೆ ಹತ್ತಾರು ಕ್ಷೇತ್ರದವರು ಇದ್ದಾರೆ. ಹೀಗಾಗಿ, ಶಾಲೆಯಿಂದ ಕೋರಿಕೆ ಬಂದ ಮೇಲೆ, ಇವರೊಳಗಿರುವ ತಜ್ಞರ ತಂಡ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತದೆ. ಈ ವೇಳೆ ತಜ್ಞರು ಖರ್ಚು ವೆಚ್ಚದ ಅಂದಾಜು, ಮಕ್ಕಳ ದಾಖಲಾತಿ, ಶಿಕ್ಷಕರ ಇಚ್ಛಾಶಕ್ತಿ ಇವೆಲ್ಲವನ್ನೂ ಪರಿಶೀಲಿಸುತ್ತಾರೆ. ಮುಂದಿನ ಹಂತ ಆ ಶಾಲೆಗೆ ಅಗತ್ಯವಿರುವಂತೆ ಇರುವ ಕಟ್ಟಡವನ್ನು ಮರುವಿನ್ಯಾಸ ಮಾಡಲು ಯೋಜನೆ ರೂಪಿಸುತ್ತಾರೆ. ಅದಕ್ಕೆ ಬೇಕಾದ ಹಣ ನೀಡುವ ದಾನಿಗಳಿಗೆ ಈ ಯೋಜನೆಯ ಬಗೆಗಿರುವ ಎಲ್ಲ ಸಾಧ್ಯತೆಗಳನ್ನೂ ವಿವರಿಸುತ್ತಾರೆ. ನಂತರ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಒಪ್ಪಿಸಿಕೊಡುತ್ತಾರೆ. ಈ ನಡುವೆ ಶಾಲೆಗಳ ಕೆಲಸ ನಡೆಯುವಾಗ ತಜ್ಞರ ಗುಂಪು ಎರಡರಿಂದ ಮೂರು ಸಲ ಶಾಲೆಗೆ ಭೇಟಿ ನೀಡುತ್ತದೆ. ನಿರ್ಮಾಣ ಹಂತದಲ್ಲಿ ನಿಯಮಿತವಾಗಿ ಪರಿಶೀಲನೆ ನಡೆಸುತ್ತದೆ. ಏಕೆಂದರೆ, ಮಾಡುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳಬಾರದು ಎಂಬುದು ಈ ಸಂಸ್ಥೆಯ ಧ್ಯೇಯ. ಇವಿಷ್ಟೂ ಜವಾಬ್ದಾರಿಯನ್ನು ಸಂಸ್ಥೆಯ ಸ್ವಯಂ ಸೇವಕರೇ ನಿರ್ವಹಿಸುತ್ತಾರೆ.

ಸಂಸ್ಥೆ ನಡೆಸುವ ಕಾರ್ಯಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯನ್ನು ಇರಿಸಿಕೊಂಡಿಲ್ಲ. ಜತೆಗೆ, ಎಲ್ಲವನ್ನೂ ತಮ್ಮ ಖರ್ಚಿನಲ್ಲಿಯೇ ಮಾಡುತ್ತಾರೆ. ದಾನಿಗಳಿಂದ ಪಡೆಯುವ ದೇಣಿಗೆ ಎಲ್ಲವೂ ಶಾಲೆ ನಿರ್ಮಾಣಕ್ಕೇ ಸಮರ್ಪಿತವಾಗಿರುತ್ತದೆ. ಲೆಕ್ಕಾಚಾರದ ವಿಷಯದಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಮೊದಲಿನಿಂದಲೂ ಪಾಲಿಸುತ್ತಲೇ ಬಂದಿರುವುದು, ಇವರ ಸೇವೆಯ ಮೇಲೆ ದಾನಿಗಳ ನಂಬಿಕೆಯೂ ಕಟ್ಟಡದಷ್ಟೇ ಗಟ್ಟಿಯಾಗಿ ನಿರ್ಮಾಣವಾಗುತ್ತ ಹೋಗುತ್ತಿದೆ.

‘ಪ್ರಜಾವಾಣಿ’ಯೇ ಪ್ರೇರಣೆ: ಒಸಾಟ್‌, ಶಾಲೆಗಳ ಪುನಶ್ಚೇತನ ಕಾರ್ಯ ಶುರುಮಾಡಲು ‘ಪ್ರಜಾವಾಣಿ’ಯೇ ಪ್ರೇರಣೆ ಎನ್ನುತ್ತಾರೆ ಸಂಸ್ಥೆಯವರು. ಪತ್ರಿಕೆಯಲ್ಲಿ ಹಲವು ಶಾಲೆಗಳ ದುಸ್ಥಿತಿಯ ಬಗ್ಗೆ ವರದಿ ಪ್ರಕಟವಾಗುತ್ತಿತ್ತು. ಆ ವರದಿಗಳನ್ನು ಸಂಸ್ಥೆಯವರು ಗಮನಿಸುತ್ತಿದ್ದರಂತೆ. ವರದಿ ಮಾಡಿದ ಶಾಲೆಗಳಲ್ಲಿರುವ ಮೂಲಸೌಲಭ್ಯದ ಕೊರತೆಯನ್ನು ಸಂಸ್ಥೆ ಸರಿಪಡಿಸಿದೆ. ಹೀಗಾಗಿ ಶಾಲೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಜಾವಾಣಿಯ ವಿಶ್ವಾಸಾರ್ಹ ತೆ ಮಾನದಂಡವಾಗಿದೆಯಂತೆ.

ಸಂಸ್ಥೆಗೆ ಈಗಲೂ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಕಾರ್ಯವನ್ನು ಮುಂದುವರಿಸಿದೆ. ಒಸಾಟ್ ಕಾರ್ಯಕ್ಕೆ ಕೈಜೋಡಿಸುವ ದಾನಿಗಳು, ಆಸಕ್ತರು, ಸ್ವಯಂ ಸೇವಕರು ಹೆಚ್ಚಿನ ಮಾಹಿತಿಗೆ http://osaat.org/ ಗೆ ಲಾಗಿನ್‌ ಆಗಬಹುದು. 

ಶಾಲೆಗಳ ಆಯ್ಕೆ ಹೇಗೆ?

ಸರ್ಕಾರಿ ಶಾಲೆಯಾಗಿರಬೇಕು

(ಕೆಲವೊಂದು ಕಡೆ ಖಾಸಗಿ ಶಾಲೆಗೂ ಸಹಾಯ ಮಾಡಲಾಗಿದೆ. ಸಮೀಪದಲ್ಲಿ ಸರ್ಕಾರಿ ಶಾಲೆಗಳಿರಬಾರದು ಎಂಬ ಷರತ್ತಿನ ಅನ್ವಯ)

ಅಲ್ಲಿ ಶಾಲಾಮಕ್ಕಳ ಹಾಜರಾತಿ ಸಮರ್ಪಕವಾಗಿರಬೇಕು

ಶಾಲಾ ಕಟ್ಟಡದ ಜಮೀನುಗಳ ಬಗ್ಗೆ ಸೂಕ್ತ ದಾಖಲಾತಿ ಹೊಂದಿರಬೇಕು

ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವಲ್ಲಿ ಸಹಕರಿಸಬೇಕು

ಶಾಲಾ ಕಟ್ಟಡಗಳನ್ನು ನಿಭಾಯಿಸುವ ಜವಾಬ್ದಾರಿ ಹೊರಬೇಕು

ಸಂಪನ್ಮೂಲ ಕ್ರೋಡೀಕರಣ ಹೇಗೆ?

ಅಮೆರಿಕದ ಕನ್ನಡ ಸಂಘದ ಸದಸ್ಯರೆಲ್ಲ ವರ್ಷಕ್ಕೆ ಒಮ್ಮೆ ‘ನಾಟ್ಯ ರಾಗ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಸ್ಥಳೀಯ ಪ್ರತಿಭೆಗಳ ಅನಾವರಣ, ತಿಂಡಿ ಉತ್ಸವ ಮುಂತಾದವುಗಳನ್ನು ಏರ್ಪಡಿಸಿರುತ್ತಾರೆ. ಇದಕ್ಕೆ ಪಾಸುಗಳನ್ನು ಇಟ್ಟು, ಡೋನರ್‌ ಪಾಸುಗಳನ್ನು ಮಾರಾಟ ಮಾಡಲಾಗುತ್ತದೆ. ಹೀಗೆ ಕಾರ್ಯಕ್ರಮದಿಂದ ಸಂಗ್ರಹವಾದ ಎಲ್ಲ ಹಣ್ಣವನ್ನೂ ದೇಣಿಗೆ ರೂಪದಲ್ಲಿ ಓಸಾಟ್‌ ಸಂಗ್ರಹಿಸುತ್ತದೆ.

ಅಲ್ಲಿಯ ಕನ್ನಡ ಸಂಘಟನೆಗಳು ಕೆಲವೊಮ್ಮೆ ಶಾಲೆಯ ಪುನರುಜ್ಜೀವನ, ‍ಪುನರ್‌ನಿರ್ಮಾಣದ ಕೆಲಸವನ್ನು ಸಂಪೂರ್ಣವಾಗಿ ತಾವೇ ದತ್ತು ಪಡೆಯುತ್ತಾರೆ. ಹೆಚ್ಚಾಗಿ ಇವರ ಕಾರ್ಯವನ್ನು ಮೆಚ್ಚಿ ದಾನಿಗಳೇ ಮುಂದಾಗುತ್ತಾರೆ. ಒಂದೊಂದು ಕಡೆ ಒಂದಿಡೀ ಶಾಲೆಯ ಪುನರ್‌ನಿರ್ಮಾಣಕ್ಕೆ ಒಬ್ಬರೇ ದಾನಿ ಮುಂದಾಗಿರುವ ಉದಾಹರಣೆಯೂ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು