ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಮೋದಿ ಜಪ ಮಾಡುತ್ತ ಮತ ಕೇಳಿದ ಪಿ.ಸಿ.ಮೋಹನ್‌

ಮಂಗಳವಾರ, ಏಪ್ರಿಲ್ 23, 2019
33 °C
ಕಾಶಿ ವಿಶ್ವನಾಥನಿಂದ ವೆಲ್ಲಾರಿಯಮ್ಮನವರೆಗೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಮೋದಿ ಜಪ ಮಾಡುತ್ತ ಮತ ಕೇಳಿದ ಪಿ.ಸಿ.ಮೋಹನ್‌

Published:
Updated:
Prajavani

ಬೆಂಗಳೂರು: ಮುಂಜಾನೆ 9ರ ಹೊತ್ತಿಗೆ ಬಿಸಿಲಿನ ತಾಪ ಜೋರಾಗಿ ಏರುತ್ತಿತ್ತು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರು ವಿವೇಕನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತಬೇಟೆಗೆ ದೈವದ ಆಶೀರ್ವಾದ ಬೇಡುತ್ತಿದ್ದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೋಹನ್‌ ತೆರೆದ ಜೀಪನ್ನು ಏರಿ ಮತಯಾಚನೆ ಶುರು ಮಾಡಿದರು. ಅವರು ಸಾಗುತ್ತಿದ್ದ ರಸ್ತೆಗಳ ಇಕ್ಕೆಲಗಳಲ್ಲಿ ಸೇರುತ್ತಿದ್ದ ಜನರತ್ತ ಕೈಮುಗಿದು ತಮ್ಮ ‘ಕೈ ಹಿಡಿಯುವಂತೆ’ ಕೇಳಿಕೊಂಡರು. ಹಲವೆಡೆ ಅಭಿಮಾನಿಗಳು ಶಾಲುಗಳನ್ನು ಹೊದಿಸಿ, ಹೂ ಮಾಲೆಗಳನ್ನು ಹಾಕಿ, ಪೇಟಾಗಳನ್ನು ತೊಡಿಸಿದರು.

ಇನ್ನು ಕೆಲವು ಕಡೆ ತಮಗಾಗಿ ತಂದಿದ್ದ ಹೂವಿನ ಹಾರಗಳನ್ನು ಸ್ಥಳೀಯ ಮುಖಂಡರಿಗೆ ವಾಪಸ್‌ ಹಾಕಿದ ಮೋಹನ್‌ ಅವರು ಸ್ಥಳೀಯರ ಮನಗೆಲ್ಲಲು ಪ್ರಯತ್ನಿಸಿದರು. ಕೆಲವಡೆ ಯುವ ಕಾರ್ಯಕರ್ತರು ಹೂ–ದಳಗಳ ರಾಶಿಯನ್ನು ಚೆಲ್ಲುತ್ತ ಅಭ್ಯರ್ಥಿ ಪರ ಘೋಷಣೆಗಳನ್ನು ಮೊಳಗಿಸಿದರು.

‘ದೇಶದ ಸಮಗ್ರ ವಿಕಾಸಕ್ಕೆ ಮೋದಿ ಮತ್ತೊಮ್ಮೆ’ ಎಂಬ ಸಂದೇಶ ಹೊಂದಿದ್ದ ಕರಪತ್ರಗಳನ್ನು ಹಂಚುತ್ತ ಕಾರ್ಯಕರ್ತರು ಸಾಗಿದರು. ಜಾಥಾದಲ್ಲಿದ್ದ ಡೋಲು–ತಮಟೆಗಳ ನಾದಗಳಿಗೆ ಕೆಲವರು ಹೆಜ್ಜೆ ಹಾಕಿದರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ನಾಯಕರನ್ನು ಬರಮಾಡಿಕೊಂಡರು. ಮೋಹನ್‌ ಅವರನ್ನು ಮೆಚ್ಚುವವರು ಕೈ ಕುಲುಕಿ ಶುಭ ಕೋರುತ್ತ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡರು.

ಕಾಶಿ ವಿಶ್ವನಾಥ ದೇವಸ್ಥಾನದ ಮುಂಭಾಗದ ಪ್ರದೇಶಗಳಲ್ಲಿ ಹೂವು ಮಾರುವವರು, ಅಂಗಡಿ–ಮುಂಗಟ್ಟು ವ್ಯಾಪಾರಿಗಳ ಬಳಿ ಹೋಗಿ, ಕೈ ಮುಗಿದು, ವೋಟುಗಳನ್ನು ಬೇಡಿದರು.

ಶಾಂತಿನಗರ ವಿಧಾನಸಭಾ ಕ್ಷೇತ್ರದ ವನ್ನಾರಪೇಟೆ ಮತ್ತು ಅಗರಂ ವಾರ್ಡ್‌ಗಳ ಓಣಿಗಳಲ್ಲಿ ಸಾಗಿದ ಪ್ರಚಾರ ಜಾಥಾವು ಅಬ್ಬಯ್ಯ ಗಾರ್ಡನ್‌, ಬಜಾರ್ ಬೀದಿ, ವನ್ನಾರಪೇಟೆ, ರುದ್ರಪ್ಪ ಗಾರ್ಡನ್‌ ಮೂಲಕ ಸಾಗಿ ಅಗರಂ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ ಮುಂಭಾಗದಲ್ಲಿ ಕೊನೆಗೊಂಡಿತು.

ಕ್ಯಾಂಟೀನ್‌ ಮುಂಭಾಗದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಪಿ.ಸಿ.ಮೋಹನ್‌, ‘ದೇಶಕ್ಕಿಂದು ಸ್ಥಿರ ಸರ್ಕಾರ ಬೇಕು. ಅದಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅವರು ರೂಪಿಸಿದ ಜನ್‌ಧನ್‌, ಉಜ್ವಲ್‌, ಜನೌಷಧಿ, ಆಯುಷ್ಮಾನ್‌ ಭಾರತ್‌ ಯೋಜನೆ
ಗಳು ಕೋಟ್ಯಂತರ ಜನರಿಗೆ ಅನುಕೂಲ ಮಾಡಿಕೊಟ್ಟಿವೆ’ ಎಂದು ಹೇಳಿದರು.

‘ಕೆರೆಗಳು ಉರಿಯದಂತೆ, ಮರಗಳು ಉರುಳದಂತೆ ಅಭಿವೃದ್ಧಿ ಕಾಮಗಾರಿಗಳು ನಡೆಯುವಂತಾಗಲು ನನ್ನನ್ನು ಬೆಂಬಲಿಸಿ’ ಎಂದು ಅವರು ಕೇಳಿಕೊಂಡರು.

ವೆಲ್ಲಾರಿಯಮ್ಮನ ದರ್ಶನ ಪಡೆದ ಮೋಹನ್‌ 

ಮತಯಾಚನೆ ಜಾಥಾ ವನ್ನಾರಪೇಟೆಗೆ ಬಂದಾಗ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ಸ್ಥಳೀಯರ ಆರಾಧ್ಯ ದೈವವಾಗಿರುವ ವೆಲ್ಲಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದರು.

ದೇವಸ್ಥಾನದಲ್ಲಿ ಅರ್ಚನೆಯೊಂದಿಗೆ ಸರಳ ಪೂಜೆ ಸಲ್ಲಿಸಿದರು. ಅವರು ಆರತಿ ತಟ್ಟಿಗೆ ₹ 2,000 ಪಿಂಕ್‌ ನೋಟು ಹಾಕುವಾಗ, ಹೊರಗೆ ನಿಂತಿದ್ದ ಜಾಥಾದ ಗಾಡಿಯ ಧ್ವನಿ ವರ್ಧಕಗಳಲ್ಲಿ, ‘ಸರ್ಜಿಕಲ್‌ ಸ್ಟ್ರೈಕ್‌, ನೋಟ್‌ ಬ್ಯಾನ್‌ನ ಸಾಧಕ, ಮತ್ತೊಮ್ಮೆ ಮೋದಿ, ಮಗದೊಮ್ಮೆ ಪಿ.ಸಿ.ಮೋಹನ್‌’ ಎಂಬ ಸಾಲುಗಳುಳ್ಳ ಹಾಡು ಮೊಳಗುತ್ತಿತ್ತು. ಈ ಹಾಡಿನಲ್ಲಿ ಕೇಂದ್ರ ಸರ್ಕಾರಗಳ ಯೋಜನೆಗಳ ಪಟ್ಟಿಯೂ ಸೇರಿತ್ತು.

 ಪಿ.ಸಿ.ಮೋಹನ್‌ ಅವರ ಮತಯಾಚನೆ ಜಾಥಕ್ಕೆ ಪಾಲಿಕೆ ಸದಸ್ಯರಾದ ಕೆ.ಶಿವಕುಮಾರ್‌, ಭವ್ಯ ಲೋಕೇಶ್‌, ದ್ವಾರಕನಾಥ್‌ ಹಾಗೂ ಸ್ಥಳೀಯ ಮುಖಂಡ ಕೆ.ವಾಸುದೇವಮೂರ್ತಿ ಸಾಥ್‌ ನೀಡಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !