ಪಾದರಾಯನಪುರ ರಸ್ತೆ ವಿಸ್ತರಣೆ ಟಿಡಿಆರ್‌ಗೆ ಸ್ಥಳೀಯರ ವಿರೋಧ

ಬುಧವಾರ, ಮಾರ್ಚ್ 20, 2019
31 °C

ಪಾದರಾಯನಪುರ ರಸ್ತೆ ವಿಸ್ತರಣೆ ಟಿಡಿಆರ್‌ಗೆ ಸ್ಥಳೀಯರ ವಿರೋಧ

Published:
Updated:
Prajavani

ಬೆಂಗಳೂರು: ಹೊಸಹಳ್ಳಿ–ಪಾದರಾಯನಪುರ ಮುಖ್ಯರಸ್ತೆ (ಚೌಡಪ್ಪ ರಸ್ತೆ)ಯನ್ನು ಅನಗತ್ಯವಾಗಿ ವಿಸ್ತರಣೆ ಮಾಡಬಾರದು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಮತ್ತು ‘ಸೇವ್‌ ಬೆಂಗಳೂರು’ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು. 

ಇಲ್ಲಿನ ಕೋದಂಡರಾಮಸ್ವಾಮಿ ದೇವಸ್ಥಾನದ ಸಮೀಪ ಸೇರಿದ ಪ್ರತಿಭಟನಕಾರರು ಪಾಲಿಕೆ ನಿರ್ಧಾರವನ್ನು ಖಂಡಿಸಿ ಘೋಷಣೆ ಕೂಗಿದರು. 

ವಿರೋಧವೇಕೆ?: ‘ಚೌಡಯ್ಯ ರಸ್ತೆ ಸುಮಾರು 25 ಅಡಿ ಅಗಲವಿದೆ. ಅದನ್ನು 80 ಅಡಿಗೆ ವಿಸ್ತರಿಸಲು ಪಾಲಿಕೆ ಟೆಂಡರ್‌  ಆಹ್ವಾನಿಸಿದೆ. ಅದಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ತಲಾ 30 ಅಡಿಗಳಷ್ಟು ಭೂಸ್ವಾಧೀನ ಮಾಡಬೇಕು. ಆಗ ವಸತಿ, ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡಬೇಕಾಗುತ್ತದೆ. ತೆರವಾಗುವ ಕಟ್ಟಡಗಳ ಮಾಲೀಕರಿಗೆ ಪಾಲಿಕೆಯು ನಗದು ಪರಿಹಾರವನ್ನೂ ಕೊಡುತ್ತಿಲ್ಲ. ಬದಲಿಗೆ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪ್ರಮಾಣಪತ್ರ ನೀಡುವ ಷರತ್ತಿನೊಂದಿಗೆ ಭೂಸ್ವಾಧೀನ ನಡೆಸಲಾಗುತ್ತದೆ. ಅದರಿಂದ ಏನೂ ಪ್ರಯೋಜನವಿಲ್ಲ. ನಾವು ಎಲ್ಲಿಗೆ ಹೋಗಬೇಕು’ ಎಂದು ನಿವಾಸಿಗಳು ಪ್ರಶ್ನಿಸಿದರು.

ಪ್ರತಿಭಟನೆ ಕೈಮೀರುವ ಲಕ್ಷಣಗಳು ಕಂಡುಬಂದಾಗ ಪೊಲೀಸರು ಮಧ್ಯ ಪ್ರವೇಶಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ತಿಳಿ ಹೇಳಿದರು. ಕೆಲಕಾಲ ಘೋಷಣೆ ಕೂಗಿದ ನಿವಾಸಿಗಳು ಬಿಬಿಎಂಪಿ ಕಚೇರಿಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದರು. 

ಪ್ರತಿಕ್ರಿಯಿಸಿದ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ‘ಜನರಿಗೆ ಈ ಯೋಜನೆ ಬೇಡವೆಂದಾದರೆ ಮುಂದುವರಿಸುವುದಿಲ್ಲ. ಸುಮಾರು ಮೂರು ತಿಂಗಳ ಕಾಲ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಅಲ್ಲಿಯವರೆಗೆ ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆತಂಕ ಬೇಡ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !