ಶೇ 7.5 ಮೀಸಲಾತಿಗೆ ಆಗ್ರಹಿಸಿ ನಾಳೆ ಪಾದಯಾತ್ರೆ

7
ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಆಯೋಜನೆ

ಶೇ 7.5 ಮೀಸಲಾತಿಗೆ ಆಗ್ರಹಿಸಿ ನಾಳೆ ಪಾದಯಾತ್ರೆ

Published:
Updated:

ಚಾಮರಾಜನಗರ: ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಜಿಲ್ಲಾ ಘಟಕವು ಶುಕ್ರವಾರ (ಜ.4) ಯಳಂದೂರಿನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.

‘ಯಳಂದೂರಿನ ನಾಡಮೇಗಲಮ್ಮ ದೇವಸ್ಥಾನದಿಂದ ಆರಂಭವಾಗುವ ಪಾದಯಾತ್ರೆ ಚಾಮರಾಜನಗರ ಜಿಲ್ಲಾಡಳಿತ ಭವನದ‌ಲ್ಲಿ ಕೊನೆಗೊಳ್ಳಲಿದೆ. ಬಳಿಕ ಜಿಲ್ಲಾಧಿಕಾರಿ ಅವರ ಮೂಲಕ ರಾಜ್ಯಪಾಲರಿಗೆ ನಮ್ಮ ಹಕ್ಕೋತ್ತಾಯ ಸಲ್ಲಿಸುತ್ತೇವೆ’ ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಎಂ.ಎನ್‌.ರಾಜು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೆಳಿಗ್ಗೆ 8.30 ಗಂಟೆಗೆ ಆರಂಭವಾಗಲಿರುವ ಪಾದಯಾತ್ರೆಗೆ ಗಣ್ಯರು, ಮುಖಂಡರು ಚಾಲನೆ ನೀಡಲಿದ್ದಾರೆ. ಉಮ್ಮತ್ತೂರು, ಬಾಗಳಿ ಸೇರಿದಂತೆ ಈ ಭಾಗದ ಸಮುದಾಯದವರು ಸಂತೇಮರಹಳ್ಳಿಯಲ್ಲಿ ಪಾದೆಯಾತ್ರೆಯನ್ನು ಸೇರಲಿದ್ದಾರೆ. ನಂತರ ಚಾಮರಾಜನಗರದತ್ತ ಹೊರಡಲಿದೆ. ಕಣ್ಣೆಗಾಲ, ಶಿಂಡನಪುರ ಸೇರಿದಂತೆ ಆ ಭಾಗದ ಸಮುದಾಯದವರು ಚಾಮರಾಜನಗರಕ್ಕೆ ತಲುಪಲಿದ್ದಾರೆ. 200ಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಮಧ್ಯಾಹ್ನ 3 ಗಂಟೆ ಸಮಯಕ್ಕೆ ಜಿಲ್ಲಾಡಳಿತ ಭವನ ತಲುಪಲಿದ್ದೇವೆ’ ಎಂದು ವಿವರಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಒಟ್ಟಾಗಿ ನಿಗದಿಪಡಿಸಿದ್ದ ಶೇ 18ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಅಂದಿನ ಜನಸಂಖ್ಯೆಗೆ ಆಧಾರವಾಗಿ ಶೇ 3ರಷ್ಟು ನಿಗದಿಪಡಿಸಲಾಗಿತ್ತು. ಪ್ರಸ್ತುತ ಸಮುದಾಯದ ವ್ಯಾಪ್ತಿಗೆ ಹಲವು ಉಪಜಾತಿಗಳು ಸೇರಿವೆ. ಈ ಮೂಲಕ ಜನಸಂಖ್ಯೆಯೂ ಹೆಚ್ಚುತ್ತಿದೆ. 2011ರ ಜನಗಣತಿ ಅನ್ವಯ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದವರು 42 ಲಕ್ಷ ಇದ್ದಾರೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇದೆ. ಹೀಗಾಗಿ, ಹಿಂದುಳಿದ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಶೇ 7.5ರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ನಾಯಕ ಮಂಡಳಿಯ ಕಾರ್ಯದರ್ಶಿ ವೆಂಕಟಾಚಲ, ವಾಲ್ಮೀಕಿ ಸೇವಾ ಟ್ರಸ್ಟ್‌ ಉಪಾಧ್ಯಕ್ಷ ಮಂಜು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !