ಶುಕ್ರವಾರ, ನವೆಂಬರ್ 22, 2019
22 °C
ಜಲಾಶಯಗಳಿಂದ ಕಾಲುವೆ–ನಾಲೆಗಳಿಗೆ ಹರಿದ ನೀರು

ಭರ್ತಿಯಾದ ಜಲಾಶಯ; ಬಿರುಸುಗೊಂಡ ಭತ್ತದ ನಾಟಿ

Published:
Updated:
Prajavani

ಮೈಸೂರು: ಭರ್ತಿಯಾದ ಜಲಾಶಯಗಳಿಂದ ಕಾಲುವೆ–ನಾಲೆಗಳಿಗೆ ಕೃಷಿ ಚಟುವಟಿಕೆಗಾಗಿಯೇ ನೀರು ಹರಿಸಿದ್ದು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತದ ನಾಟಿ ಬಿರುಸಿನಿಂದ ನಡೆದಿದೆ.

ಕಾಲುವೆ–ನಾಲೆಗಳಲ್ಲಿ ಇದೀಗ ನೀರು ಹರಿದಿದೆ. ನೀರು ಗದ್ದೆಗಳನ್ನು ತಲುಪಿದ್ದು, ಸಸಿ ಮಡಿ ತಯಾರಿಸುವಿಕೆ, ಭತ್ತದ ಸಸಿ ನಾಟಿಯ ಚಿತ್ರಣ ಜಿಲ್ಲೆಯ ವಿವಿಧೆಡೆ ಗೋಚರಿಸುತ್ತಿದೆ. ಕೃಷಿ ಕೂಲಿ ಕಾರ್ಮಿಕರಿಗೂ ಕೆಲಸ ಸಿಕ್ಕಿದೆ.

ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರ, ಮೈಸೂರು ತಾಲ್ಲೂಕಿನ ವರುಣಾ, ಕಸಬಾ ಹೋಬಳಿ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನ ಕೆಲವೆಡೆ, ಎಚ್‌.ಡಿ.ಕೋಟೆ, ಸರಗೂರಿನ ಕಬಿನಿ ಜಲಾಶಯದ ಹಿಂಭಾಗದ ಅಚ್ಚುಕಟ್ಟು ಪ್ರದೇಶಗಳಲ್ಲಿ ಭತ್ತದ ನಾಟಿ ಬಿರುಸುಗೊಂಡಿದೆ.

‘ಜಲಾಶಯಗಳು ಭರ್ತಿಯಾಗುವುದು ವಿಳಂಬವಾಗಿದ್ದರಿಂದ ಭತ್ತದ ಕೃಷಿ ಚಟುವಟಿಕೆ ತಡವಾಗಿ ಆರಂಭಗೊಂಡಿವೆ. ಇದೀಗ ನಡೆದಿರುವ ಭತ್ತದ ನಾಟಿಯನ್ನು ಮುಂಗಾರು ಹಂಗಾಮು ಎಂದೇ ಪರಿಗಣಿಸಲಾಗುವುದು. ಭತ್ತದ ನಾಟಿಗೆ ಪೂರಕವಾದ ವಾತಾವರಣ ಜಿಲ್ಲೆಯಲ್ಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದರು.

‘ಮೊದಲೇ ಸಸಿ ಮಡಿ ಮಾಡಿಕೊಂಡಿದ್ದವರು ಇದೀಗ ನಾಟಿ ನಡೆಸಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿಯೇ ನಾಲೆ–ಕಾಲುವೆಗೆ ನೀರು ಬಿಡುವುದನ್ನು ಕಾದಿದ್ದವರು ಸಸಿ ಮಡಿಗೆ ಭತ್ತ ಬಿತ್ತಿದ್ದು, ಮುಂದಿನ 15ರಿಂದ 20 ದಿನದೊಳಗೆ ನಾಟಿ ಕೆಲಸ ಪೂರ್ಣಗೊಳಿಸಲಿದ್ದಾರೆ’ ಎಂದು ಅವರು ಹೇಳಿದರು.

12ಸಾವಿರ ಕ್ವಿಂಟಲ್‌: ‘ಭತ್ತದ ಕೃಷಿ ಚಟುವಟಿಕೆ ನಡೆಯುವ ಕಾಲುವೆ–ನಾಲಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಐಆರ್‌ 64, ಎಂಟಿಯು–1010, ಆರ್‌ಎನ್‌ಆರ್‌, ಹೈಬ್ರೀಡ್‌ ವಿಎನ್‌ಆರ್‌ ತಳಿ ಸೇರಿದಂತೆ ಇನ್ನಿತರೆ ತಳಿಯ ಒಟ್ಟಾರೆ 12ಸಾವಿರ ಕ್ವಿಂಟಲ್‌ ಭತ್ತದ ಬಿತ್ತನೆ ಬೀಜವನ್ನು ಆರ್‌ಎಸ್‌ಕೆಗಳಿಗೆ ಪೂರೈಸಲಾಗಿದೆ’ ಎಂದು ಜಂಟಿ ನಿರ್ದೇಶಕರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜ್ಯೋತಿ’ ತಳಿಯ ಭತ್ತದ ಬಿತ್ತನೆ ಬೇಡ

‘ಈ ಭಾಗದ ಭತ್ತದ ಬಿತ್ತನೆ ಬೀಜಗಳಲ್ಲಿ ಹಳೆಯ ತಳಿ, ಜ್ಯೋತಿ ತಳಿಯ ಬಿತ್ತನೆ ಬೀಜವನ್ನು ಸಸಿ ಮಡಿ ಮಾಡಲು ಬಳಸಲೇಬಾರದು’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ಬೆಳೆಗಾರರಲ್ಲಿ ಮನವಿ ಮಾಡಿದ್ದಾರೆ.

‘ಈ ತಳಿಯ ಭತ್ತಕ್ಕೆ ಬೆಂಕಿ ರೋಗ, ಎಲೆ ಕವಚ ರೋಗ ಹೆಚ್ಚಾಗಿ ಬಾಧಿಸಲಿದೆ. ಕೀಟಬಾಧೆಯೂ ಕಾಡಲಿದೆ. ಆದ್ದರಿಂದ ರೈತರು ಈ ತಳಿ ಬಳಕೆಯಿಂದ ದೂರ ಉಳಿಯಬೇಕು. ಕೃಷಿ ಇಲಾಖೆ ಸೂಚಿಸುವ ಭತ್ತದ ತಳಿಯ ನಾಟಿ ನಡೆಸಬೇಕು’ ಎಂದು ಅವರು ತಿಳಿಸಿದರು.

ಅಂಕಿ–ಅಂಶ

1.02 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿಯ ಗುರಿ

36,700 ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಪೂರ್ಣ

ಶೇ 38 ನೀರಾವರಿಯಲ್ಲಿ ಭತ್ತದ ಬಿತ್ತನೆ, ನಾಟಿ

ಶೇ 83 ಮಳೆಯಾಶ್ರಿತ ಪ್ರದೇಶದಲ್ಲಿ ಮುಂಗಾರು ಬಿತ್ತನೆ

ಪ್ರತಿಕ್ರಿಯಿಸಿ (+)