ಲಖ್ವಿ ಜಾಮೀನು ರದ್ದತಿ ಕೋರಿ ಪಾಕ್‌ ತನಿಖಾ ಸಂಸ್ಥೆ ಅರ್ಜಿ

ಬುಧವಾರ, ಏಪ್ರಿಲ್ 24, 2019
27 °C
ಮುಂಬೈ ಮೇಲಿನ ಉಗ್ರರ ದಾಳಿಯ ಪ್ರಮುಖ ಸಂಚುಕೋರ

ಲಖ್ವಿ ಜಾಮೀನು ರದ್ದತಿ ಕೋರಿ ಪಾಕ್‌ ತನಿಖಾ ಸಂಸ್ಥೆ ಅರ್ಜಿ

Published:
Updated:
Prajavani

ಇಸ್ಲಾಮಾಬಾದ್‌ : ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್‌ ಎ ತಯಬಾ ಕಾರ್ಯಾಚರಣೆ ಕಮಾಂಡರ್‌ ಝಾಕಿಉರ್‌ ರೆಹಮಾನ್‌ ಲಖ್ವಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ಪಾಕಿಸ್ತಾನದ ರಾಷ್ಟ್ರೀಯ ತನಿಖಾ ಸಂಸ್ಥೆ (ಎಫ್‌ಐಎ) ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮುಂಬೈ ಮೇಲಿನ ದಾಳಿ ಕುರಿತು ಎರಡು ವಾರದೊಳಗೆ ದಾಖಲೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.

2008ರ ನವೆಂಬರ್‌ 26 ರಂದು ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ಪ್ರಮುಖ ಸಂಚುಕೋರ ಲಖ್ವಿಗೆ ಸಂಬಂಧಿಸಿದ ದಾಖಲೆಗಳು, ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಸ್ಲಾಮಾಬಾದ್‌ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯದ (ಎಟಿಸಿ) ಬಳಿ ಇವೆ.

ಮುಂಬೈ ದಾಳಿಗೆ ಸಂಬಂಧಿಸಿದಂತೆ ಲಖ್ವಿ, ಅಬ್ದುಲ್‌ ವಾಜಿದ್‌, ಮಜರ್‌ ಇಕ್ಬಾಲ್‌, ಹಮದ್‌ ಅಮೀನ್‌ ಸಾದಿಕ್‌, ಶಾಹೀದ್‌ ಜಮೀಲ್‌ ರೈಜಾ, ಜಮೀಲ್‌ ಅಹ್ಮದ್‌ ಮತ್ತು ಯೂನಿಸ್‌ ಅಂಜುಂ ವಿರುದ್ಧ ಕೊಲೆ, ಕೊಲೆಗೆ ಯತ್ನ, ಸಂಚು ರೂಪಿಸಿರುವ ಆರೋಪ ಇದೆ. 2014ರ ಡಿಸೆಂಬರ್‌ 18 ರಂದು ಎಟಿಸಿ ಲಖ್ವಿಗೆ ಜಾಮೀನು ನೀಡಿದೆ. ಅಂದಿನಿಂದ ಲಖ್ವಿ ರಹಸ್ಯ ಸ್ಥಳದಲ್ಲಿ ವಾಸಿಸುತ್ತಿದ್ದಾನೆ.

ಲಖ್ವಿ ವಿರುದ್ಧ ಸಮರ್ಪಕ ಸಾಕ್ಷ್ಯಗಳಿದ್ದು, ಆತನನ್ನು ಮತ್ತೆ ಬಂಧಿಸಿ ತನಿಖೆ ನಡೆಸುವ ಅಗತ್ಯವಿದೆ. ಆದ್ದರಿಂದ ಜಾಮೀನು ರದ್ದು ಪಡಿಸಬೇಕು ಎಂದು ಎಫ್‌ಐಎ ಕೋರ್ಟ್‌ಗೆ ಮನವಿ ಮಾಡಿದೆ.

‘ಈ ಪ್ರಕರಣದ ಪ್ರಾಸಿಕ್ಯೂಟರ್‌ಗಳಿಗೆ ಬೆದರಿಕೆ ಕರೆಗಳು ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಾಕ್ಷಿಗಳಿಗೂ  ಸಹ ಸಮರ್ಪಕ ಭದ್ರತೆ ಇಲ್ಲ. ಆದ್ದರಿಂದ ಜಾಮೀನು ರದ್ದು ಪಡಿಸಿ, ತನಿಖೆಗೆ ಅವಕಾಶ ಒದಗಿಸಬೇಕು’ ಎಂದು ಎಫ್‌ಐಎ ಕೋರಿದೆ.

ಮುಂಬೈ ಮೇಲೆ ನಡೆದ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. 10 ಉಗ್ರರು ದಾಳಿ ನಡೆಸಿದ್ದು, ಅವರಲ್ಲಿ 9 ಉಗ್ರರನ್ನು ಗುಂಡಿಕ್ಕಿ ಹೊಡೆದುರುಳಿಸಲಾಗಿತ್ತು. ಅಜ್ಮಲ್‌ ಕಸಾಬ್‌ ಎಂಬಾತನನ್ನು ಸೆರೆ ಹಿಡಿದು, ನಂತರ ಗಲ್ಲಿಗೇರಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !