ಕುಲಭೂಷಣ್‌ ಜಾಧವ್‌ ಪ್ರಕರಣ: ಅಂತರರಾಷ್ಟ್ರೀಯ ಕೋರ್ಟ್‌ ತೀರ್ಪಿಗೆ ಬದ್ಧ -ಪಾಕ್‌

ಭಾನುವಾರ, ಮೇ 26, 2019
27 °C

ಕುಲಭೂಷಣ್‌ ಜಾಧವ್‌ ಪ್ರಕರಣ: ಅಂತರರಾಷ್ಟ್ರೀಯ ಕೋರ್ಟ್‌ ತೀರ್ಪಿಗೆ ಬದ್ಧ -ಪಾಕ್‌

Published:
Updated:
Prajavani

ಇಸ್ಲಾಮಾಬಾದ್‌: ಭಾರತದ ಕುಲಭೂಷಣ್‌ ಜಾಧವ್‌ (48) ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡುವ ತೀರ್ಪಿಗೆ ಬದ್ಧವಿರುವುದಾಗಿ ಪಾಕಿಸ್ತಾನ ಹೇಳಿದೆ.

ಇದೇ ಫೆ.18ರಿಂದ 21ರವರೆಗೆ ಐಸಿಜೆಯಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ವಿಚಾರಣೆಯಲ್ಲಿ ದೇಶ ಪ್ರತಿನಿಧಿಸಲು ಪಾಕಿಸ್ತಾನದ ವಕೀಲರ ನಿಯೋಗ ಈಗಾಗಲೇ ಹೇಗ್‌ಗೆ ತೆರಳಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಪಾಕ್‌ ನಿಯೋಗದಿಂದ ಅಟಾರ್ನಿ ಜನರಲ್‌ ಅನ್ವರ್‌ ಮನ್ಸೂರ್‌, ದಕ್ಷಿಣ ಏಷ್ಯಾದ ಮಹಾ ನಿರ್ದೇಶಕ ಮೊಹಮ್ಮದ್‌ ಫೈಸಲ್‌ ಅವರು ವಿದೇಶಿ ಕಚೇರಿ ಕಡೆಯಿಂದ ಹಾಗೂ ಭಾರತದಿಂದ ಹರೀಶ್‌ ಸಾಳ್ವೆ ಅವರು ಐಸಿಜೆಗೆ ಹಾಜರಾಗಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿರುವುದಾಗಿ ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

ವಕೀಲ ಖಾವರ್‌ ಖುರೇಷಿ ಪಾಕಿಸ್ತಾನದ ಪರವಾಗಿ ಇದೇ 19ರಂದು ಕೋರ್ಟ್‌ಗೆ ಮಾಹಿತಿ ಸಲ್ಲಿಸಲಿದ್ದಾರೆ. 20ರಂದು ಭಾರತ ಅದಕ್ಕೆ ಪ್ರತಿಕ್ರಿಯೆ ನೀಡಲಿದ್ದು, 21ರಂದು ಪಾಕ್‌ ತನ್ನ ವಾದ ಪೂರ್ಣಗೊಳಿಸಲಿದೆ. ಇದೇ ವರ್ಷದ ಬೇಸಿಗೆ ಅವಧಿಯೊಳಗೆ ಐಸಿಜೆ ತನ್ನ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಪತ್ರಿಕೆ ವರದಿ ಹೇಳಿದೆ.

ಗೂಢಚಾರಿಕೆ ಮತ್ತು ಭಯೋತ್ಪಾದನಾ ಚಟುವಟಿಕೆ ಆರೋಪದ ಪ್ರಕರಣದಲ್ಲಿ 2017ರ ಏಪ್ರಿಲ್‌ನಲ್ಲಿ ಭಾರತದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕ್‌ ಸೇನಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪು ವಿರೋಧಿಸಿ ಭಾರತ ಅದೇ ವರ್ಷ  ಐಸಿಜೆಗೆ ಪ್ರಕರಣ ಕೊಂಡೊಯ್ದಿದೆ.

10 ಮಂದಿ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯ ಪೀಠವು, ಪ್ರಕರಣದ ವಿಚಾರಣೆಯಾಗಿ ಅಂತಿಮ ತೀರ್ಮಾನಕ್ಕೆ ಬರುವವರೆಗೂ ಜಾಧವ್‌ ಅವರಿಗೆ ಪಾಕಿಸ್ತಾನ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು ತಡೆ ಹಿಡಿದಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !