ಪ್ರಬಲ ಜನಾದೇಶ: ವಿಶ್ಲೇಷಣೆ

ಮಂಗಳವಾರ, ಜೂನ್ 18, 2019
27 °C
ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ

ಪ್ರಬಲ ಜನಾದೇಶ: ವಿಶ್ಲೇಷಣೆ

Published:
Updated:

ಇಸ್ಲಾಮಾಬಾದ್‌: ಬಿಜೆಪಿ ನೇತೃತ್ವದ ಎನ್‌ಡಿಎ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದಕ್ಕೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಲು ಒದಗಿರುವ ಈ ಅವಕಾಶ ರಾಷ್ಟ್ರೀಯ ಭದ್ರತೆ ವಿಷಯವಾಗಿ ನೀಡಲಾದ ಸ್ಪಷ್ಟ ಜನಾದೇಶ’ ಎಂದು ಕೆಲವು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಕೆಲವು ಮಾಧ್ಯಮಗಳು, ‘ಭಾರತದಲ್ಲಿನ ಬಲಪಂಥೀಯ ಶಕ್ತಿಗಳಿಗೆ ಸಿಕ್ಕ ಜಯವಿದು. ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಜಾಗತಿಕ ವಿದ್ಯಮಾನವೂ ಆಗಿದೆ’ ಎಂದು ಹೇಳಿವೆ. ಇಲ್ಲಿನ ಬಹುತೇಕ ಮಾಧ್ಯಮಗಳಿಗೆ ಈ ಫಲಿತಾಂಶ ಅನಿರೀಕ್ಷಿತ ಎನಿಸಿಲ್ಲ. ಹೀಗಾಗಿ ಮೋದಿ ವಿರೋಧಿ ವರದಿಗಳು ಕಾಣಿಸಿಕೊಂಡಿಲ್ಲ ಎಂದು ಪಿಟಿಐ ವರದಿ ಮಾಡಿದೆ.

‘ರಾಷ್ಟ್ರೀಯ ಭದ್ರತೆಯೇ ಮುಖ್ಯ ಎಂಬುದಾಗಿ ಪ್ರತಿಪಾದಿಸಿದ್ದು ಮೋದಿಗೆ ಈ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಸಿಗುವಂತೆ ಮಾಡಿತು. ಬಾಲಾಕೋಟ್‌ ವಾಯುದಾಳಿಯ ರೂವಾರಿ ತಾನೇ ಎಂಬುದಾಗಿ ಮೋದಿ ಬಿಂಬಿಸಿದರು. ಜೊತೆಗೆ ದುರ್ಬಲ ವಿರೋಧಿ ಬಣವನ್ನು ಛಿದ್ರಗೊಳಿಸಿದರು’ ಎಂದು ‘ಡಾನ್‌’ ವರದಿ ಮಾಡಿದೆ. ‘ಮೋದಿಗೆ ಸಿಕ್ಕ ದೊಡ್ಡ ಪ್ರಮಾಣದ ಜನಾದೇಶ ಕೋಮುವಾದಿ ರಾಜಕಾರಣದ ಗೆಲವು’ ಎಂಬುದಾಗಿಯೂ ತನ್ನ ಸಂಪಾದಕೀಯದಲ್ಲಿ ಕಟುಟೀಕೆ ಮಾಡಿದೆ.

‘ಮೋದಿ ಗೆಲುವು ನಾಟಕೀಯ’ ಎಂದು ಅಭಿಪ್ರಾಯಪಟ್ಟಿರುವ ದಿ ನ್ಯೂಸ್‌ ಇಂಟರ್‌ನ್ಯಾಷನಲ್‌, ‘ಚುನಾವಣಾ ಫಲಿತಾಂಶ ಜಾಗತಿಕವಾಗಿ ಕಂಡುಬರುತ್ತಿರುವ ಪ್ರವೃತ್ತಿಯನ್ನೇ ಬಿಂಬಿಸುತ್ತದೆ’ ಎಂದಿದೆ. ಇದೇ ಪತ್ರಿಕೆಯಲ್ಲಿ ವಿಶ್ಲೇಷಣಾತ್ಮಕ ಲೇಖನವನ್ನು ಬರೆದಿರುವ ಏಜಾಜ್‌ ಝಕಾ ಸೈಯದ್‌ ಅವರು, ‘ಬಿಜೆಪಿಗೆ ಸಂದ ಗೆಲುವಿನ ಶ್ರೇಯಸ್ಸು ಮೋದಿಗೆ ಸಲ್ಲುತ್ತದೆ’ ಎಂದಿದ್ದಾರೆ.

‘ಇಂತಹ ಗೆಲುವಿಗೆ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಅರ್ಹತೆ ಇದೆ. ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರು ಕಠಿಣ ಶ್ರಮದಿಂದ ಈ ಗೆಲುವು ಸಾಧಿಸಿದ್ದಾರೆ. ಹಲವು ಪಾಪಗಳಿಗೆ ಮೋದಿಯನ್ನು ಹೊಣೆಯಾಗಿರಬಹುದು. ಆದರೆ ಅವುಗಳನ್ನು ಜನರಿಗೆ ತಿಳಿಸುವಲ್ಲಿ ವಿಪಕ್ಷಗಳು ಸಂಪೂರ್ಣ ವಿಫಲವಾಗಿವೆ’ ಎಂದೂ ವಿವರಿಸಿದ್ದಾರೆ.

ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌, ದಿ ನೇಷನ್‌ ಸಹ ವರದಿ ಪ್ರಕಟಿಸಿವೆ. ವಿದ್ಯುನ್ಮಾನ ಮಾಧ್ಯಮಗಳು ಚುನಾವಣಾ ಫಲಿತಾಂಶದ ನಿರಂತರ ವರದಿ ಪ್ರಸಾರ ಮಾಡಲಿಲ್ಲ. ಬದಲಾಗಿ, ಬ್ರೇಕಿಂಗ್‌ ನ್ಯೂಸ್‌ ಮೂಲಕ ಮಾಹಿತಿ ನೀಡುತ್ತಿದ್ದವು ಎಂದು ಪಿಟಿಐ ವರದಿ ಮಾಡಿದೆ.

ಮೋದಿಗೆ ಇಮ್ರಾನ್‌ ಶುಭಾಶಯ: ಚೀನಾ ಸ್ವಾಗತ

ಮೋದಿ ಅವರಿಗೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಶುಭಾಶಯ ಕೋರಿರುವುದನ್ನು ಚೀನಾ ಸ್ವಾಗತಿಸಿದೆ.

ಮೋದಿ ಅವರಿಗೆ ಗುರುವಾರ ಶುಭಾಶಯ ಕೋರಿದ್ದ ಇಮ್ರಾನ್‌, ಶಾಂತಿ ಸ್ಥಾಪನೆಗಾಗಿ ಜೊತೆಯಾಗಿ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ ಅವರು, ’ನಿಮ್ಮ ಶುಭಕೋರಿಕೆಗೆ ಧನ್ಯವಾದಗಳು. ಅಭಿವೃದ್ಧಿ ಮತ್ತು ಶಾಂತಿ ಸ್ಥಾಪನೆಗೆ ನಾನು ಯಾವಾಗಲೂ ಪ್ರಾಮುಖ್ಯತೆ ನೀಡುತ್ತೇನೆ’ ಎಂದಿದ್ದರು.

 ಎರಡು ದೇಶಗಳು ತಮ್ಮ ನಡುವಿನ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸುವ ವಿಶ್ವಾಸವಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್‌ ಹೇಳಿದ್ದಾರೆ.

 ’ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಮುಖ ದೇಶಗಳು. ಈ ಎರಡು ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದ ನೆಲೆಸಬೇಕೆನ್ನುವುದು ಎಲ್ಲರ ಆಶಯ’ ಎಂದಿದ್ದಾರೆ.

 

 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !