ಸುಷ್ಮಾ–ಪಾಕ್‌ ಸಚಿವರ ಟ್ವೀಟ್‌ ಸಮರ

ಮಂಗಳವಾರ, ಏಪ್ರಿಲ್ 23, 2019
31 °C
ಸಿಂಧ್‌ನಲ್ಲಿ ಹಿಂದೂ ಬಾಲಕಿಯರ ಬಲವಂತದ ಮತಾಂತರ

ಸುಷ್ಮಾ–ಪಾಕ್‌ ಸಚಿವರ ಟ್ವೀಟ್‌ ಸಮರ

Published:
Updated:

ಇಸ್ಲಾಮಾಬಾದ್‌/ನವದೆಹಲಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎನ್ನಲಾದ ಮಾಧ್ಯಮ ವರದಿಯ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ಪಾಕಿಸ್ತಾನದ ಮಾಹಿತಿ ಸಚಿವ ಫಹಾದ್‌ ಚೌಧರಿ ನಡುವೆ ಭಾನುವಾರ ವಾಕ್ಸಮರ ನಡೆದಿದೆ.

ಬಾಲಕಿಯರ ಅಪಹರಣದ ಕುರಿತ ಮಾಧ್ಯಮ ವರದಿಯನ್ನು ಲಗತ್ತಿಸಿ ಟ್ವೀಟ್‌ ಮಾಡಿದ ಸುಷ್ಮಾ, ಈ ಕುರಿತು ವರದಿ ನೀಡುವಂತೆ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್‌ಗೆ ಸೂಚಿಸಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಫಹಾದ್‌ ಚೌಧರಿ ಅವರು ’ಇದು ನಮ್ಮ ದೇಶದ ಆಂತರಿಕ ವಿಚಾರ‘ ಎಂದಿದ್ದಾರೆ.

ಇದಕ್ಕೆ ಮರು ಟ್ವೀಟ್‌ ಮಾಡಿದ ಸುಷ್ಮಾ ಅವರು,’ ನಾನು ಬಾಲಕಿಯರ ಅಪಹರಣದ ಕುರಿತು ವರದಿಯಷ್ಟೆ ಕೇಳಿದ್ದೇನೆ. ಇದು ನಿಮ್ಮಲ್ಲಿ ದಿಗಿಲು ಹುಟ್ಟಿಸಿದೆ. ಅಪರಾಧ ಪ್ರಜ್ಞೆ ಕಾಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ‘ ಎಂದು ತಿರುಗೇಟು ನೀಡಿದ್ದಾರೆ.

‘ಇತರ ದೇಶಗಳಲ್ಲಿರುವ ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ಭಾರತಕ್ಕಿರುವ ಕಾಳಜಿ ಕಂಡು ಸಂತಸವಾಗಿದೆ. ಈ ಕಾಳಜಿಯಿಂದಲೇ ನೀವು ನಿಮ್ಮ ದೇಶದೊಳಗಿನ ಅಲ್ಪಸಂಖ್ಯಾತ ಸಮುದಾಯದವರ ಪರವಾಗಿ ನಿಲ್ಲಲಿದ್ದೀರಿ ಎಂಬುದು ನನ್ನ ವಿಶ್ವಾಸ’ ಎಂದು ಫಹಾದ್‌ ಸುಷ್ಮಾ ಟ್ವಿಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಗುಜರಾತ್‌ ಮತ್ತು ಕಾಶ್ಮೀರದಲ್ಲಿರುವ ಇಂತಹ ಸಮುದಾಯದವರ ಬಗ್ಗೆ ನಿಮ್ಮ ಹೃದಯ ಹೆಚ್ಚಾಗಿ ಮಿಡಿಯಲಿ ಎಂದೂ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತನಿಖೆಗೆ ಆದೇಶ: ಬಾಲಕಿಯರ ಅಪಹರಣದ ಕುರಿತು ತನಿಖೆ ನಡೆಸುವಂತೆ ಸಿಂಧ್‌ ಮತ್ತು ಪಂಜಾಬ್‌ ಸರ್ಕಾರಗಳಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಭಾನುವಾರ ಆದೇಶಿಸಿದ್ದಾರೆ.

ಸಿಂಧ್‌ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧಾರ್ಕಿ ನಗರದಲ್ಲಿ ಹೋಲಿ ಹಬ್ಬದ ಸಂದರ್ಭದಲ್ಲಿ ಇಬ್ಬರು ಬಾಲಕಿಯರನ್ನು ಬಂದೂಕುಧಾರಿಗಳಾದ ದುಷ್ಕರ್ಮಿಗಳ ಗುಂಪೊಂದು ಅವರ ಮನೆಯಿಂದ ಅಪಹರಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಅಪಹರಣ ನಡೆದ ಬಳಿಕ ಇಬ್ಬರು ಬಾಲಕಿಯರನ್ನು ಮತಾಂತರ ಮಾಡಿ ಮದುವೆ ಮಾಡಿಸುತ್ತಿರುವ ವಿಡಿಯೊ ವೈರಲ್‌ ಆಗಿತ್ತು.

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 2

  Frustrated
 • 4

  Angry

Comments:

0 comments

Write the first review for this !