ಅಣುಸ್ಥಾವರಗಳ ಮಾಹಿತಿ ಹಂಚಿಕೊಂಡ ಭಾರತ–ಪಾಕ್‌

7

ಅಣುಸ್ಥಾವರಗಳ ಮಾಹಿತಿ ಹಂಚಿಕೊಂಡ ಭಾರತ–ಪಾಕ್‌

Published:
Updated:

ಇಸ್ಲಾಮಾಬಾದ್‌: ದ್ವಿಪಕ್ಷೀಯ ಒಪ್ಪಂದದ ನಿಬಂಧನೆಗಳ ಪ್ರಕಾರ ಪಾಕಿಸ್ತಾನವು ತನ್ನ ಪರಮಾಣು ಸ್ಥಾವರಗಳ ಪಟ್ಟಿ ಮತ್ತು ಅವುಗಳಿಗೆ ಕಲ್ಪಿಸಿರುವ ಸೌಲಭ್ಯಗಳ ಮಾಹಿತಿಯನ್ನು ಮಂಗಳವಾರ ಭಾರತದ ಜತೆಗೆ ಹಂಚಿಕೊಂಡಿದೆ.

ಪಾಕಿಸ್ತಾನ ಮತ್ತು ಭಾರತ ನಡುವೆ 1988ರ ಡಿಸೆಂಬರ್ 31ರಂದು ನಡೆದಿರುವ ಪರಮಾಣು ಸ್ಥಾವರಗಳು ಮತ್ತು ಪರಮಾಣು ಸೌಲಭ್ಯಗಳ ವಿರುದ್ಧದ ದಾಳಿಗಳ ನಿಷೇಧದ ಒಪ್ಪಂದದ ಕಲಂ-2ರ ಪ್ರಕಾರ ಈ ಪಟ್ಟಿಯನ್ನು ಭಾರತಕ್ಕೆ ನೀಡಲಾಗಿದೆ ಎಂದು ವಿದೇಶಾಂಗ ಕಚೇರಿ (ಎಫ್ಒ) ಹೇಳಿಕೆಯಲ್ಲಿ ತಿಳಿಸಿದೆ.

‘ಪಾಕಿಸ್ತಾನದಲ್ಲಿರುವ ಪರಮಾಣು ಸ್ಥಾವರಗಳು ಮತ್ತು ಸೌಕರ್ಯಗಳ ಪಟ್ಟಿಯನ್ನು ಭಾರತೀಯ ಹೈಕಮಿಷನ್ ಪ್ರತಿನಿಧಿಗೆ ವಿದೇಶಾಂಗ ಇಲಾಖೆಯಲ್ಲಿ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ’ ಎಂದು ಅದು ಹೇಳಿದೆ.

ಭಾರತದ ವಿದೇಶಾಂಗ ಸಚಿವಾಲಯವೂ ಸಹ ತನ್ನಲ್ಲಿರುವ ಅಣುಸ್ಥಾವರಗಳು ಮತ್ತು ಸೌಲಭ್ಯಗಳ ಮಾಹಿತಿಯನ್ನು ಇದೇ ವೇಳೆ ನವದೆಹಲಿಯಲ್ಲಿ ಪಾಕಿಸ್ತಾನದ ಹೈಕಮಿಷನ್ ಪ್ರತಿನಿಧಿಗೆ ಹಸ್ತಾಂತರಿಸಿದೆ ಎಂದು ಎಫ್‌ಒ ಹೇಳಿದೆ.

1988ರ ಡಿಸೆಂಬರ್ 31ರಂದು ಸಹಿ ಹಾಕಲ್ಪಟ್ಟ ಈ ಒಪ್ಪಂದವು 1991ರ ಜನವರಿ 27ರಿಂದ ಜಾರಿಗೆ ಬಂದಿದೆ. ಈ ಒಪ್ಪಂದದ ಪ್ರಕಾರ ಪ್ರತಿ ವರ್ಷ ಜನವರಿ ಮೊದಲ ದಿನ ಎರಡು ರಾಷ್ಟ್ರಗಳು ತಮ್ಮಲ್ಲಿನ ಪರಮಾಣು ಸ್ಥಾವರಗಳು ಮತ್ತು ಸೌಲಭ್ಯಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕಿದೆ. 1992ರ ಜನವರಿ 1ರಿಂದ ಸತತವಾಗಿ ಮಾಹಿತಿ ವಿನಿಮಯ ಮಾಡಿಕೊಂಡು ಬರಲಾಗುತ್ತಿದೆ.

ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಕಡಿಮೆ ಪ್ರಮಾಣದಲ್ಲಿ ಇದ್ದಾಗಲೂ ಪರಮಾಣು ಸ್ಥಾವರಗಳ ಪಟ್ಟಿ ವಿನಿಮಯ ಪದ್ಧತಿ ರೂಢಿಯಲ್ಲಿದೆ.

ಅಪ್ರಚೋದಿತ ಗುಂಡಿನ ದಾಳಿ: ಪಾಕ್‌ ಖಂಡನೆ

ಇಸ್ಲಾಮಾಬಾದ್ : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನ, ಭಾರತದ ನಿಯೋಜಿತ ಉಪ ಹೈ ಕಮಿಷನರ್‌ ಅವರನ್ನು ಕರೆಸಿ ಮಂಗಳವಾರ ಪ್ರತಿಭಟನೆ ದಾಖಲಿಸಿದೆ. 
ಭಾರತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ದೂರಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರೂ ಆಗಿರುವ ದಕ್ಷಿಣ ಏಷ್ಯಾ ಮತ್ತು ಸಾರ್ಕ್‌ನ ಮಹಾನಿರ್ದೇಶಕ ಮೊಹಮ್ಮದ್‌ ಫೈಸಲ್‌ ಅವರು ಭಾರತದ ಸೈನಿಕರ ಅಪ್ರಚೋದಿತ ದಾಳಿಯನ್ನು ಖಂಡಿಸಿದ್ದು, ವಿಷಯವನ್ನು ಭಾರತದ ಅಧಿಕಾರಿಯ 
ಗಮನಕ್ಕೆ ತಂದಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಪಡೆಗಳು ಗಡಿಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ಪದೇ ಪದೇ ದಾಳಿ ಮಾಡುತ್ತಿವೆ. ಡಿ.31ರಂದು ಶಹಾಕೋಟ್‌ ವಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆಸಿಯಾ ಬೀಬಿ ಎಂಬ ಮಹಿಳೆ 
ಮೃತಪಟ್ಟಿದ್ದಾರೆ. 2018ರಲ್ಲಿ ಭಾರತದ ಯೋಧರು 2,350 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿಕೆ ಆರೋಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !