ಭಾರತ ದಾಳಿ ನಡೆಸಿದರೆ ಪ್ರತಿದಾಳಿ ಖಂಡಿತ: ಇಮ್ರಾನ್‌ ಖಾನ್‌ ಎಚ್ಚರಿಕೆ

ಸೋಮವಾರ, ಮೇ 20, 2019
30 °C

ಭಾರತ ದಾಳಿ ನಡೆಸಿದರೆ ಪ್ರತಿದಾಳಿ ಖಂಡಿತ: ಇಮ್ರಾನ್‌ ಖಾನ್‌ ಎಚ್ಚರಿಕೆ

Published:
Updated:

ಇಸ್ಲಾಮಾಬಾದ್: ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ನಮ್ಮ ವಿರುದ್ಧ ಸಮರ ಸಾರಿದರೆ ನಾವು ಯೋಚಿಸುವುದಿಲ್ಲ, ಪ್ರತಿದಾಳಿ ನಡೆಸುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮಂಗಳವಾರ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮವೊಂದರಲ್ಲಿ ಪಾಕ್‌ ಉದ್ದೇಶಿಸಿ ಮಾತನಾಡಿದ ಅವರು, ‘ಫೆಬ್ರುವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನದ ನಂಟು ಇದೆ ಎನ್ನುವುದನ್ನು ನಿರೂಪಿಸುವ ಸಾಕ್ಷ್ಯವನ್ನು ಭಾರತ ಒದಗಿಸಿದ್ದೇ ಆದಲ್ಲಿ ಅದರ ವಿರುದ್ಧ ಖಂಡಿತ ಕ್ರಮಕೈಗೊಳ್ಳುತ್ತೇವೆ’ ಎಂದರು.

40 ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಬಲಿ ಪಡೆದ ಆತ್ಮಾಹುತಿ ದಾಳಿಗೆ ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್ (ಜೆಎಎಂ) ಉಗ್ರ ಸಂಘಟನೆಯೇ ಕಾರಣ ಎಂದು ಭಾರತ ಪ್ರತಿಪಾದಿಸುತ್ತಿದೆ.

ಇದನ್ನೂ ಓದಿ‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’

‘ದಾಳಿಯಲ್ಲಿ ಪಾಕ್‌ ನಂಟು ಇದೆ ಎನ್ನುವ ಯಾವುದೇ ಸಾಕ್ಷ್ಯಗಳೂ ಭಾರತದ ಬಳಿ ಇಲ್ಲದಿದ್ದರೂ, ಪಾಕಿಸ್ತಾನದ ವಿರುದ್ಧ ಆರೋಪ ಮಾಡಲಾಗುತ್ತಿದೆ. ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಯಾವುದೇ ರೀತಿಯ ತನಿಖೆಗೂ ನಾವು ಸಿದ್ಧವಿದ್ದೇವೆ. ನಿಮ್ಮ ಬಳಿ ಸೂಕ್ತ ಸಾಕ್ಷ್ಯಗಳು ಇದ್ದರೆ ಅದನ್ನು ನಮಗೆ ಕೊಡಿ, ನಾವು ಕ್ರಮಕೈಗೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಪಾಕಿಸ್ತಾನದ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನುವ ಕಾರಣಕ್ಕೆ ಈ ಮಾತುಗಳನ್ನು ಹೇಳುತ್ತಿಲ್ಲ. ಬದಲಿಗೆ, ಭಯೋತ್ಪಾದನೆ ಮತ್ತು ಅದರಲ್ಲಿ ಒಳಗೊಂಡಿರುವವರೂ ನಮ್ಮ ದೇಶಕ್ಕೂ ಶತ್ರುಗಳು’ ಎಂದು ಹೇಳಿದರು.

‘ಪಾಕಿಸ್ತಾನದವರು ಅಥವಾ ಹೊರಗಡೆಯಿಂದ ಭಯೋತ್ಪಾದನಾ ಸಂಘಟನೆಗಳಿಗೆ ಸೇರುವುದನ್ನು ‘ನವ ಪಾಕಿಸ್ತಾನ’ ಸಹಿಸುವುದಿಲ್ಲ. ಹೀಗಾಗಿ ಭಯೋತ್ಪಾದನೆಯನ್ನು ಬೇರೆ ಸಹಿತ ಕಿತ್ತೊಗೆಯಲು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ’ ಎಂದು ಖಾನ್‌ ಕರೆಕೊಟ್ಟಿದ್ದಾರೆ.

ಇದನ್ನೂ ಓದಿಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ

‘ಎಲ್ಲವನ್ನೂ ಮರೆತು ನಮ್ಮೊಂದಿಗೆ ಮಾತುಕತೆ ನಡೆಸುವುದನ್ನು ಬಿಟ್ಟು, ನೀವು ಭೂತಕಾಲದ ಘಟನೆಗಳಿಗೆ ಅಂಟಿಕೊಂಡು ಎಲ್ಲದಕ್ಕೂ ಪಾಕಿಸ್ತಾನದ ಮೇಲೆ ಆರೋಪಿಸುತ್ತಲೇ ಇರುತ್ತೀರಾ?’ ಎಂದು ಭಾರತ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

‘ಭಾರತದ ಮಾಧ್ಯಮಗಳು ಹಾಗೂ ರಾಜಕಾರಣಿಗಳು ಪುಲ್ವಾಮಾ ದಾಳಿಯ ನಂತರ ಪ್ರತೀಕಾರದ ಮಾತುಗಳನ್ನು ಆಡುತ್ತಿವೆ. ನೀವು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಬಗ್ಗೆ ಯೋಚಿಸುತ್ತಿದ್ದರೆ, ನಾವು ಅದಕ್ಕೆ ಚಿಂತಿಸುವುದಿಲ್ಲ ಪ್ರತಿದಾಳಿ ನಡೆಸುತ್ತೇವೆ. ಆದರೆ, ಇದೆಲ್ಲಾ ಎಲ್ಲಿಗೆ ಹೋಗಿ ಮುಟ್ಟುತ್ತದೆ. ಯುದ್ಧ ಶುರುಮಾಡುವುದು ಮನುಷ್ಯರ ಕೈಯಲ್ಲಿರುತ್ತದೆ. ಆದರೆ, ಅದನ್ನು ಕೊನೆಗೊಳಿಸುವುದು ನಮ್ಮ ಕೈಯಲ್ಲಿರುವುದಿಲ್ಲ. ಯುದ್ಧ ಎಲ್ಲದಕ್ಕೂ ಉತ್ತರವಲ್ಲ’ ಎಂದು ತಿಳಿಸಿದರು.

ಇದನ್ನೂ ಓದಿಉಗ್ರ ದಾಳಿ: 42 ಯೋಧರು ಬಲಿ

ಅಫ್ಗಾನಿಸ್ತಾನ ಶಾಂತಿ ಮಾತುಕತೆ ವಿಚಾರದಲ್ಲಿ ಅಮೆರಿಕ ಹಾಗೂ ತಾಲಿಬಾನ್ ಪ್ರತಿನಿಧಿಗಳು ಮಾತುಕತೆ ನಡೆಸಿ ಸಂಘರ್ಷ ಪರಿಹರಿಸಿಕೊಳ್ಳಲು ಯತ್ನಿಸಿದ್ದರು. ಹೀಗಾಗಿ, ‘ಮಾತುಕತೆ ಮೂಲಕವೇ ಮುನ್ನಡೆಯಬೇಕಿದೆ ಹೊರತು ಹಿಂಸಾಚಾರದ ಮೂಲಕವಲ್ಲ’ ಎಂದು ಅಫ್ಗಾನಿಸ್ತಾನದ ಉದಾಹರಣೆ ನೀಡಿ ಭಾರತಕ್ಕೆ ಸಂದೇಶ ನೀಡುವ ಯತ್ನ ನಡೆಸಿದ್ದಾರೆ.

‘ಕಾಶ್ಮೀರದಲ್ಲಿ ಯುವಕರು ಏಕೆ ಹಿಂಸಾಚಾರದ ಮಾರ್ಗ ತುಳಿಯುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಭಾರತಕ್ಕೆ ಇದು ಸೂಕ್ತ ಸಮಯ. ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು. ಭಾರತದಲ್ಲಿ ಈಗ ಚುನಾವಣಾ ವರ್ಷವಾಗಿದ್ದು, ಪಾಕ್‌ ವಿರುದ್ಧ ದಾಳಿ ನಡೆಸಿದರೆ ಅಲ್ಲಿನ ಸರ್ಕಾರಕ್ಕೆ ಒಳ್ಳೆಯದಾಗುತ್ತದೆ ಎನ್ನುವುದು ನನಗೆ ಅರ್ಥವಾಗುತ್ತದೆ. ಆದರೆ, ದಾಳಿ ನಡೆಸಿದರೆ ಪಾಕಿಸ್ತಾನ ಸುಮ್ಮನಿರುತ್ತದೆ ಎಂದು ಅವರು ಯೋಚಿಸಬಾರದು’ ಎಂದೂ ವೀಡಿಯೋ ಸಂದೇಶದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 31

  Angry

Comments:

0 comments

Write the first review for this !