ಪಲ್ಲಟಗಳು

ಶನಿವಾರ, ಏಪ್ರಿಲ್ 20, 2019
28 °C

ಪಲ್ಲಟಗಳು

Published:
Updated:
Prajavani

ಭೂ ಸುಧಾರಣೆಯಲ್ಲಿ ಕೊನೆಗೂ ರೈತನಿಗೆ ಹೊಲ ದಕ್ಕಿತು.
ಬೆಳೆ ರಕ್ಷಣೆ ಬೇಲಿ ಯೋಚನೆ.
ಸಿದ್ಧವಾಯ್ತು ಕಟಿಂಗ್
ಗಿಡದ, ಹೊಲದ ಸುತ್ತ ಸೊಳ್ಳೆಯೂ
ನುಸುಳದ ಹಾಗೆ ಭದ್ರ ಹಸಿರು ಬೇಲಿ. 

ಸುನಾಮಿಯಂತಹ ಪ್ರವಾಹದಲ್ಲಿ ತೇಲಿಬಂದು
ಬೇಲಿ ಸೇರಿತು ಒಂದು ಹಾವು..!
ಬೇಲಿಯೊಡಲಲ್ಲಿ ಭಿನ್ನವಾದರೂ ಕ್ರಮೇಣ ಬೇಲಿಯ
ಹಸಿರಿನಲ್ಲಿ ಹಾವೂ ಗಿಡದ ಒಡಲಲ್ಲಿ ಎಲೆಯೂ
ಲೀನವಾಗದ ಪರಿಯಲ್ಲಿ ಏಕವಾಯ್ತು.

ಈಗ ಎಲೆಯ ತಣ್ಣನೆ ಹಸಿರಿನಲ್ಲಿ ಹಾವಿನ ವಿಷ..!
ಪರಿವೇ ಇಲ್ಲದ ರೀತಿಯಲ್ಲಿ ಎಲೆಗಳ ರಾಶಿ ನಗುತ್ತದೆ ಮತ್ತು 
ಹಾವನ್ನು ತಣ್ಣಗೆ ತಟ್ಟುತ್ತದೆ.
ಹಾವು ಎಲೆಯ ಒಡಲಲ್ಲಿ ಗೂಡು, ಸರಿದಾಟ,
ತೆಕ್ಕೆಗಳಾಗಿ ಬದುಕು ಕಟ್ಟಿಕೊಂಡಿದೆ.

ರೈತನ ಬೇಲಿಯಲ್ಲಿ ಹಸಿರು ಮತ್ತು ಹಾವು..?
ಬೆಳೆ ನಗುತ್ತದೆ. ಅನ್ನ ಹಾಕಿದ ತನ್ನನ್ನು ರಕ್ಷಣೆಯ ಹೆಸರಿನಲ್ಲಿ
ಹತ್ತಿಕ್ಕಲು ‌ಬೇಲಿ ಹಾಕಿದ ರೈತನ ಮೂರ್ಖತನಕ್ಕೆ.
ರೈತ ಹಾವಿನ ಭಯಕ್ಕೆ ಹೊಲವನ್ನೇ ಬಿಟ್ಟಿದ್ದಾನೆ.
ಬೇಲಿಯಲ್ಲಿ ಹಾವಿಗೆ ಮತ್ತು ಒಳಗೆ ಬೆಳೆಗೆ ಸ್ವಾತಂತ್ರ್ಯ.

ರೈತನ ಅನುಪಸ್ಥಿತಿಯಲ್ಲಿ ಬೆಳೆ
ತನಗೆ ತಾನೇ ಸ್ವಾತಂತ್ರ್ಯ ಘೋಷಿಸಿ ಬೇಲಿಯ
ಜೊತೆ ಹೋರಾಟ ನಡೆಸಿದರೆ,
ಹಾವು ಗಲಾಟೆಯ ಪರಿಹಾರದ ಮಧ್ಯಸ್ಥಿಕೆ ಸೋಗಿನಲ್ಲಿ
ಈಗ ಬೇಲಿಯ ಜೊತೆ ಬೆಳೆಯಲ್ಲೂ ಹರಿದಾಡುತ್ತಿದೆ.

ರೈತ ಗಾಂಧಿ ಪ್ರತಿಮೆ ದಿಟ್ಟಿಸುತ್ತಲೇ
ಧರಣಿ ಕೂತಿದ್ದಾನೆ. ಬಂಡವಾಳಶಾಹಿಯೆದುರು
ಗಾಂಧೀಜಿಯ ವಿಚಾರಧಾರೆ ಸವಕಲು
ಎಂಬ ಅರಿವಿದೆ ಮತ್ತು ಈಗ ಅವನ ಕಣ್ಣು
ಗಾಂಧಿ ಕೈಯಲ್ಲಿನ ಕೋಲಿನ ಮೇಲೆ. ಸಿಕ್ಕಿದರೆ ಹಾವನ್ನು
ಬಡಿದು ಸದ್ಯದ ಪರಿಸ್ಥಿತಿ
ನಿಭಾಯಿಸಬಹುದೆಂಬ ಆಸೆಯಲ್ಲಿ.

ಸಂತ್ರಸ್ತ ರೈತನ ಸಹಾಯಕ್ಕೆ ಅವನೇ
ಆರಿಸಿದ ಸರ್ಕಾರವೂ ಬಂದಿದೆ. ರೈತನನ್ನು ಅಳಿವಿನಂಚಿನ
ಜೀವಿ ಎಂದೂ ಹಾವನ್ನು ಜಾಗತಿಕ
ಸಮಸ್ಯೆ ಎಂದೂ ಘೋಷಿಸಿ ಆ ಬಗ್ಗೆ ಅಧ್ಯಯನ ಪೀಠ ಸ್ಥಾಪಿಸಿ,
ಹಾವು ಸೇರದಂತೆ ಬೇಲಿಗೇ ಬೇಲಿ ಹಾಕುವ ಬಗ್ಗೆ
ಯೋಜನೆ ಹಾಕಿ...
... ವಿದೇಶಿ ಧನಸಹಾಯವನ್ನು ಎದುರು ನೋಡುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !