ಕೆ.ಆರ್‌.ಮಾರುಕಟ್ಟೆ ದುಸ್ಥಿತಿ ಕಂಡು ದಂಗಾದ ಪರಮೇಶ್ವರ

3
ಪಾಲಿಕೆ ಉಪಾಯುಕ್ತೆ ಮುನಿಲಕ್ಷ್ಮೀ ಅಮಾನತಿಗೆ ಸೂಚನೆ

ಕೆ.ಆರ್‌.ಮಾರುಕಟ್ಟೆ ದುಸ್ಥಿತಿ ಕಂಡು ದಂಗಾದ ಪರಮೇಶ್ವರ

Published:
Updated:
Deccan Herald

ಬೆಂಗಳೂರು: ನಗರದ ಕೆ.ಆರ್ ಮಾರುಕಟ್ಟೆಯ ದುಸ್ಥಿತಿ ಕಂಡು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ದಂಗಾದರು.

ಗುರುವಾರ ಮುಂಜಾನೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಲ್ಲಿನ ಕಸದ ರಾಶಿ, ಕೊಳಚೆಯನ್ನು ಕಂಡು ಕೆಂಡಾಮಂಡಲವಾದರು. ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವ್ಯಾಪಾರಿಗಳ ಜೊತೆಯೂ ಮಾತುಕತೆ ನಡೆಸಿ ಅಹವಾಲು ಆಲಿಸಿದರು. ‘ಇಲ್ಲಿ ಬಡ್ಡಿ ದಂಧೆ ನಡೆಯುತ್ತಿದೆ’ ಎಂದು ವ್ಯಾಪಾರಿಗಳು ಸಚಿವರ ಬಳಿ ಅಳಲು ತೋಡಿಕೊಂಡರು.

ಮಾರುಕಟ್ಟೆಯ ಹೊಸ ಕಟ್ಟಡದ ಸಾಲು ಅಂಗಡಿಗಳು ಯಾವ ಇಲಾಖೆ ವ್ಯಾಪ್ತಿಗೆ ಸೇರಲಿದೆ ಎಂದು ಪರಮೇಶ್ವರ್ ಅವರು ಮಾರುಕಟ್ಟೆ ವಿಭಾಗದ ಉಪಾಯುಕ್ತರಾದ ಮುನಿಲಕ್ಷ್ಮಿ ಅವರನ್ನು ಪ್ರಶ್ನಿಸಿದರು.

ಮುನಿಲಕ್ಷ್ಮಿ ಅವರು ಉತ್ತರಿಸದೇ ತಬ್ಬಿಬ್ಬಾದರು.  ಅಧಿಕಾರಿಗೇ ಮಾಹಿತಿ ಇಲ್ಲದೇ ಇರುವುದಕ್ಕೆ ಸಿಟ್ಟಾದ ಸಚಿವರು, ‘ಏನು‌ ಕೆಲಸ‌ ಮಾಡುತ್ತೀದೀರಿ. ನಿಮ್ಮ ಇಲಾಖೆಗೆ ಸೇರಿದಾಸ್ತಿಗಳ ಬಗ್ಗೆಯೇ ಗೊತ್ತಿಲ್ಲವೆಂದಾದರೆ ಈ ಹುದ್ದೆಯಲ್ಲಿ ಏಕಿರಬೇಕು’ ಎಂದು ಚಾಟಿ ಬೀಸಿದರು.

ಮುನಿಲಕ್ಷ್ಮೀ ಅವರನ್ನು ಅಮಾನತು ಮಾಡುವಂತೆ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್ ಪ್ರಸಾದ್ ಅವರಿಗೆ ಸೂಚಿಸಿದದರು.

ಹೊಸ ಕಟ್ಟದ ನೆಲಮಹಡಿಯ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಯುತ್ತಿತ್ತು. ಮೇಲಿನ ಮಹಡಿಗಳು ಖಾಲಿ ಇರುವ ಬಗ್ಗೆ ಆಯುಕ್ತರನ್ನು ಪ್ರಶ್ನಿಸಿದರು.

‘ಮಹಡಿಗಳಲ್ಲಿರುವ ಮಳಿಗೆಗಳಲ್ಲಿ ವ್ಯಾಪಾರ ಮಾಡಲು ಯಾರೂ ಆಸಕ್ತಿ ತೋರಿಸುತ್ತಿಲ್ಲ’ ಎಂದು ಆಯುಕ್ತರು ತಿಳಿಸಿದರು.

ಪಾದಾಚಾರಿ ಮಾರ್ಗವನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುವವರನ್ನು ಮಹಡಿಯ ಮಳಿಗೆಗಳಿಗೆ ಸ್ಥಳಾಂತರಿಸುವಂತೆ ಸಚಿವರು ಸೂಚನೆ ನೀಡಿದರು.

ಮಾರುಕಟ್ಟೆಯೊಳಗೆ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಕೇಂದ್ರದಲ್ಲಿ ಸಾಕಷ್ಟು ಹಳೇ ವಾಹನಗಳನ್ನು ನಿಲ್ಲಿಸಿರುವುದನ್ನು‌ ಸಚಿವರು ಗಮನಿಸಿದರು. ವರ್ಷಾನುಗಟ್ಟಲೆ ಇಲ್ಲೇ ನಿಲ್ಲಿಸಿರುವ ವಾಹನಗಳನ್ನು ಹರಾಜು ಹಾಕುವಂತೆ ಸೂಚಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ, ‘ಇಲ್ಲಿ ಅವ್ಯವಹಾರ ನಡೆಯುತ್ತಿದೆ. ಬಾಡಿಗೆ ನೀಡುತ್ತಿಲ್ಲ. ದಬ್ಬಾಳಿಕೆ ನಡೆಯುತ್ತಿದೆ ಎಂಬ ಮಾಹಿತಿ ಇತ್ತು. ಪ್ರತ್ಯಕ್ಷವಾಗಿ ಈ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿಯೇ ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದರು.

‘ಮೀನು ಮಾರುಕಟ್ಟೆ ಇಷ್ಟೊಂದು ದುರ್ನಾತ ಬೀರುತ್ತಿದೆ. ಆದರೂ ಏಕೆ ಕಸ ವಿಲೇವಾರಿ ಮಾಡುತ್ತಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ್ ತೆಗೆದುಕೊಂಡರು. ಕಸವನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಿದರು.

ಮೇಯರ್‌, ಉಪಮೇಯರ್‌ ಹಾಗೂ ಆಯುಕ್ತರು ಒಟ್ಟಿಗೆ ಕುಳಿತು ಚರ್ಚಿಸಿ ಈ ಮಾರುಕಟ್ಟೆಗೆ ಕಾಯಕಲ್ಪ ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಪಾಲಿಕೆ ಕೌನ್ಸಿಲ್‌ನಲ್ಲೂ ಸಲಹೆ ಪಡೆಯುತ್ತೇವೆ’ ಎಂದರು.

‘ಇಲ್ಲಿ ಮೀಟರ್‌ ಬಡ್ಡಿ ದಂಧೆ ನಡೆಯುತ್ತಿರುವ ದೂರುಗಳಿವೆ. ಮಾರುಕಟ್ಟೆಯಲ್ಲಿ ಇಂತಹ ಚಟುವಟಿಕೆ ಮೇಲೆ ನಿಗಾ ಇಡುವುದಕ್ಕೆ ಪ್ರತ್ಯೇಕ ಪೊಲೀಸ್‌ ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜಿಸುವಂತೆ ನಗರ ಪೊಲೀಸ್‌ ಕಮೀಷನರ್‌ಗೆ ಸೂಚನೆ ನೀಡಿದ್ದೇನೆ’ ಎಂದರು.

ಕೆಲವು ವ್ಯಾಪಾರಿಗಳು ವರ್ಷಾನುಗಟ್ಟಲೆ ಬಾಡಿಗೆ ಕಟ್ಟದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ಬಗ್ಗೆ ಸಮಗ್ರ ಪರಿಶೀಲನೆ ಸಡೆಸುವಂತೆ ಸೂಚನೆ ನೀಡಿದ್ದೇನೆ. ಆಂದೋಲನದ ರೀತಿ ಈ ಕೆಲಸ ಆಗಬೇಕು. 15 ದಿನಗಳ ಒಳಗೆ ಈ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಜನ ಕೆ.ಆರ್‌.ಮಾರುಕಟ್ಟೆಯನ್ನೇ ನೆಚ್ಚಿಕೊಳ್ಳಬೇಖಾದ ಸ್ಥಿತಿಇದೆ. ಇಲ್ಲಿ ಒತ್ತಡ ಕಡಿಮೆ ಮಾಡಲು ಇನ್ನೂ ಎರಡು ಕಡೆ ದೊಡ್ಡ ಮಾರುಕಟ್ಟೆಯನ್ನು ತೆರೆಯಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಮಂಜುನಾಥ್ ಪ್ರಸಾದ್, ‘ಮಾರುಕಟ್ಟೆಯಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಪ್ರಯ್ತನಿಸುತ್ತೇವೆ’ ಎಂದರು.

ಮೇಯರ್ ಗಂಗಾಂಬಿಕೆ, ಉಪಾಯುಕ್ತರಾದ ರಮೀಳಾ ಉಮಾಶಂಕರ್‌, ಪಾಲಿಕೆ ಆಡಳಿತ ಪಕ್ಷದ ನಾಐಕ ಎಂ.ಶಿವರಾಜ್‌, ನಗರದ ಪೊಲೀಸ್ ಕಮಿಷನರ್‌ ಟಿ.ಸುನೀಲ್ ಕುಮಾರ್ ಜೊತೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

  • 13

    Happy
  • 1

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !