4
ಮೋಜು, ನಕ್ಕುನಲಿದಾಟದ ಜೊತೆಗೆ ವಿಜ್ಞಾನದ ಪಾಠ

ಜ್ಞಾನ ವೃದ್ಧಿಸುವ ಅಚ್ಚರಿಯ ಉದ್ಯಾನ

Published:
Updated:
ಕಲಬುರ್ಗಿ ವಿಜ್ಞಾನ ಉದ್ಯಾನದಲ್ಲಿ ಹಗ್ಗದೊಂದಿಗೆ ಪ್ರಯೋಗ ನಿರತ ಬಾಲಕ–ಪ್ರಜಾವಾಣಿ ಚಿತ್ರಗಳು/ ಪ್ರಶಾಂತ ಎಚ್‌.ಜಿ

ಕಲಬುರ್ಗಿ: 20 ಕೆಜಿ ಸಮ ತೂಕದ ಮೂರು ಕಲ್ಲುಗಳ ಪೈಕಿ ಒಂದನ್ನು ಸುಲಭವಾಗಿ ಎತ್ತಿದರೆ, ಮತ್ತೆರಡನ್ನು ಎತ್ತಲು ಪ್ರಯಾಸಪಡಬೇಕು. ಬೇರೆ ಬೇರೆ ಎತ್ತರದಲ್ಲಿ ತೂಗು ಹಾಕಲಾದ ಮೂರು ಜೋಕಾಲಿಗಳಲ್ಲಿ ಎರಡು ವೇಗವಾಗಿ ಚಲಿಸಿದರೆ, ಇನ್ನೊಂದು ನಿಧಾನವಾಗಿ ಚಲಿಸುತ್ತದೆ. 15 ಅಡಿಗಳ ಅಂತರದಲ್ಲಿ ಇರುವ ಎರಡು ತಟ್ಟೆಯಾಕಾರದ ಆಕೃತಿಗಳ ಬದಿಯಲ್ಲಿ ನಿಂತು ಒಬ್ಬರು ಮೆಲುದನಿಯಲ್ಲಿ ಮಾತನಾಡಿದ್ದು, ಇನ್ನೊಬ್ಬರಿಗೆ ಸದ್ದುಗದ್ದಲ ಮಧ್ಯೆಯೂ ಸ್ಪಷ್ಟವಾಗಿ ಕೇಳಿಸುತ್ತದೆ!

ಇದೆಲ್ಲ ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿದರೆ, ನೇರವಾಗಿ ಜಿಲ್ಲಾ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ವಿಜ್ಞಾನ ಉದ್ಯಾನಕ್ಕೆ ಭೇಟಿ ನೀಡಿ. ಕಲ್ಲು, ಜೋಕಾಲಿ, ತಟ್ಟೆಯಾಕಾರದ ಆಕೃತಿಗಳು ಅಷ್ಟೇ ಅಲ್ಲ, ಅಲ್ಲಿ ಇರುವ ಪ್ರತಿಯೊಂದು ವಸ್ತು ಸಹ ವಿಭಿನ್ನವಾಗಿ ಗೋಚರಿಸುತ್ತದೆ. ಅವು ಎಷ್ಟೇ ಸಹಜ ಮತ್ತು ಸರಳವಾಗಿ ಕಂಡರೂ ರಹಸ್ಯ ಸಂಗತಿಗಳನ್ನು ಒಡಲೊಳಗೆ ಇಟ್ಟುಕೊಂಡಂತೆ ಕಾಣುತ್ತವೆ. ಇಡೀ ಉದ್ಯಾನವನ್ನು ಕನಿಷ್ಠ ಒಂದು ಗಂಟೆ ಸುತ್ತಾಡಿದ ನಂತರವೂ ವಿಜ್ಞಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮನಸ್ಸು ಹಾತೊರೆಯುತ್ತದೆ.

ಕಿರಿಯರಿಗೆ ಅಲ್ಲದೇ ಹಿರಿಯರಿಗೂ ವಿಜ್ಞಾನದ ಹಲವಾರು ಅಂಶಗಳನ್ನು ತಿಳಿಪಡಿಸುವ ಈ ಉದ್ಯಾನವು ಒಂದರ್ಥದಲ್ಲಿ ಜ್ಞಾನದ ಖನಿಜ. ನೆಮ್ಮದಿ ಭಾವ ಮೂಡಿಸುವ ತಂಪು ತಾಣವೂ ಹೌದು. ಪ್ರವೇಶದ್ವಾರ ದಾಟಿ ಒಳಗೆ ಹೆಜ್ಜೆಯಿಟ್ಟರೆ ಸಾಕು, ಬಾತುಕೋಳಿಗಳ ಸಾಲು ಮೆರವಣಿಗೆ ಮನಸ್ಸಿಗೆ ಮುದ ನೀಡುತ್ತದೆ. ಪಾರಿವಾಳಗಳ ಗುಟುರು, ಮೊಲಗಳ ಚಂಗನೆ ನೆಗೆತ ಮತ್ತು ಬಾಗಿ ಬಳಕುವ ಮರಗಳ ನೆರಳು, ಸೊಂಪಾಗಿ ಬೀಸುವ ತಂಗಾಳಿ ಉದ್ಯಾನದಲ್ಲಿ ದೀರ್ಘಕಾಲದವರೆಗೆ ಉಳಿಯುವಂತೆ ಮಾಡುತ್ತವೆ.

ಉದ್ಯಾನದ ಮಧ್ಯೆಯಿರುವ ದೊಡ್ಡ ಗೋಪುರ ಆಕರ್ಷಕವಾಗಿ ಕಂಡರೆ, ಮತ್ತೊಂದು ಗೋಪುರದ ಒಳಗೆ ಇಡಲಾಗಿರುವ ಹಲವು ಪ್ರಕಾರದ ಕಳ್ಳಿ ಗಿಡಗಳನ್ನು ನೋಡಬಹುದು. ಅಲ್ಲಿಂದ ಸ್ವಲ್ಪ ದೂರ ಹೆಜ್ಜೆಯಿಟ್ಟರೆ, ಸುಮಾರು 50 ಮೀಟರ್‌ಗಳಿಗೂ ಹೆಚ್ಚು ಉದ್ದವಿರುವ ಪೈಪ್ ಕಾಣಿಸುತ್ತದೆ. ಅದರೊಳಗೆ ಮಾತನಾಡಿದ್ದು ಎಲ್ಲವೂ ಪ್ರತಿಧ್ವನಿಸುತ್ತದೆ. ಅಲ್ಲೇ ಬದಿಯಲ್ಲಿ ಇರುವ ಕಬ್ಬಿನ ಹಾಲು ನುರಿಸುವ ಮಾದರಿ ಯಂತ್ರಗಳನ್ನು ತಿರುಗಿಸಿದರೆ, ಅವುಗಳ ವೇಗದ ಪ್ರಮಾಣ ಅರಿವಿಗೆ ಬರುತ್ತದೆ ಅಲ್ಲೇ ಜೋಕಾಲಿ ಆಟವಾಡುತ್ತ ಮನರಂಜನೆ ಪಡೆಯುವುದರ ಜೊತೆಗೆ ಹಲವು ವೈಜ್ಞಾನಿಕ ಅಂಶಗಳ್ನು ಕಲಿಯಬಹುದು.

‘ಶಾಲೆಗೆ ರಜೆ ಇದ್ದಾಗಲೆಲ್ಲ, ವಿಜ್ಞಾನ ಉದ್ಯಾನದಲ್ಲಿ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೇನೆ. ಇಲ್ಲಿ ಹಲವಾರು ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡಲು ಪ್ರೇರೇಪಿಸುತ್ತವೆ. ವಸ್ತುಗಳ ಎದುರಿನ ಫಲಕದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ನೀಡಲಾಗಿರುವ ಮಾಹಿತಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು’ ಎಂದು ವಿದ್ಯಾರ್ಥಿ ಅಲೆಕ್ಸ್ ತಿಳಿಸಿದರು.

‘ಕ್ರಿಕೆಟ್, ಫುಟ್‌ಬಾಲ್‌ ಅಲ್ಲದೇ ಬೇರೆ ಬೇರೆ ಕ್ರೀಡೆಗಳು ದೈಹಿಕವಾಗಿ ಸದೃಢತೆ ನೀಡಬಹುದು. ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಬಹುದು. ಆದರೆ ವಿಜ್ಞಾನ ಉದ್ಯಾನದಲ್ಲಿ ಬೇರೆ ಬೇರೆ ಆಟಗಳನ್ನು ಆಡುವುದರ ಜೊತೆಗೆ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ವಿಜ್ಞಾನ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬಹುದು. ವಿಜ್ಞಾನಿ ಆಗಬೇಕೆಂದು ಬಯಸುವವರು ಈ ಉದ್ಯಾನದಿಂದ ಪ್ರೇರಣೆ ಪಡೆಯಬಹುದು’ ಎಂದು ಎನ್. ಸಿದ್ದೇಶ್ ತಿಳಿಸಿದರು.

 ‘ಉದ್ಯಾನದಲ್ಲಿ ಇನ್ನಷ್ಟು ಹೊಸತನ’

ಮಕ್ಕಳಿಗೆ ಆಟವಾಡಿಸುತ್ತ, ನಕ್ಕು ನಲಿಸುತ್ತ ಮತ್ತು ಅಚ್ಚರಿ ಮೂಡಿಸುತ್ತ ವಿಜ್ಞಾನದ ಬಗ್ಗೆ ತಿಳಿ ಹೇಳುವ ಗುರಿ ಹೊಂದಿರುವ ಜಿಲ್ಲಾ ವಿಜ್ಞಾನ ಕೇಂದ್ರವು (ಡಿಎಸ್ಸಿ) ಆವರಣದಲ್ಲಿನ ವಿಜ್ಞಾನ ಉದ್ಯಾನವನ್ನು ಇನ್ನಷ್ಟು ಆಕರ್ಷಕಗೊಳಿಸಲು ಸಿದ್ಧತೆ ನಡೆಸಿದೆ.

‘1995ರಲ್ಲಿ ನಿರ್ಮಿಸಲಾದ ಈ ಉದ್ಯಾನವನ್ನು ವರ್ಷದಿಂದ ವರ್ಷಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ಅಭಿವೃದ್ಧಿಪಡಿಸಿದ್ದೇವೆ. 50ಕ್ಕೂ ಹೆಚ್ಚು ಪ್ರಯೋಗಾತ್ಮಕ ಪ್ರದರ್ಶನ ವಸ್ತುಗಳು ಇಲ್ಲಿವೆ. ಒಂದೊಂದು ವಸ್ತು ಕೂಡ ವಿಜ್ಞಾನದ ಮಹತ್ವ ತಿಳಿಪಡಿಸುತ್ತದೆ. ಸರಳವಾಗಿ ವಿಜ್ಞಾನವನ್ನು ಅರಿಯಬಹುದು’ ಎಂದು ಡಿಎಸ್‌ಸಿ ವಿಜ್ಞಾನ ಅಧಿಕಾರಿ ಸಿ.ಎನ್‌.ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬದ ವೇಳೆ ಹೊರತುಪಡಿಸಿದರೆ ಇಡೀ ವರ್ಷ ಬೆಳಿಗ್ಗೆ 10.30 ರಿಂದ ಸಂಜೆ 6ರವರೆಗೆ ಉದ್ಯಾನವು ಸಾರ್ವಜನಿಕರಿಗೆ ತೆರೆದಿರುತ್ತದೆ. ₹ 10 ಪ್ರವೇಶ ಶುಲ್ಕವಿದೆ. ಕುಟುಂಬ ಸದಸ್ಯರು ಬೆಳಿಗ್ಗೆಯಿಂದ ಸಂಜೆಯವರೆಗೆ ಉದ್ಯಾನದಲ್ಲಿ ಇರಬಹುದು. ಇಲ್ಲೇ ಊಟ ಸವಿಯಬಹುದು. ನೀರಿನ ಸೌಲಭ್ಯವೂ ಇದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !