ಬಸ್ ಚಾಲಕರು, ಪ್ರಯಾಣಿಕರಿಗೆ ತೊಂದರೆ

7
ಬಸ್‌ ನಿಲ್ದಾಣದಲ್ಲಿ ಬೈಕ್‌ಗಳ ಅಡ್ಡಾದಿಡ್ಡಿ ನಿಲುಗಡೆ

ಬಸ್ ಚಾಲಕರು, ಪ್ರಯಾಣಿಕರಿಗೆ ತೊಂದರೆ

Published:
Updated:
ಬೈಕ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿರುವುದು

ಗುಂಡ್ಲುಪೇಟೆ: ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ ಮತ್ತು ಖಾಸಗಿ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ ಎಂಬ ನಿಯಮವನ್ನು ಬರೆದಿರುವ ನಾಮಫಲಕ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇದೆ. ಆದರೆ, ಅದ‌ನ್ನು ಪಾಲಿಸುವವರು ಯಾರೂ ಇಲ್ಲ. ಅಧಿಕಾರಿಗಳು ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಅನುಭವಿಸುತ್ತಿರುವವರು ಮಾತ್ರ ಚಾಲಕರು ಹಾಗೂ ಪ್ರಯಾಣಿಕರು.

ಬೈಕ್ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬಸ್‌ ಚಾಲಕರಿಗೆ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆಯ ವಾಹನಗಳನ್ನು ನಿಲ್ಲಿಸಲು ಮತ್ತು ತಿರುಗಿಸಲು ಸಮಸ್ಯೆಯಾಗುತ್ತಿದೆ.  ಈ ಬಸ್ ನಿಲ್ದಾಣದಲ್ಲಿ ಅಂತರರಾಜ್ಯ ಬಸ್‌ಗಳ ನಿಲುಗಡೆ ಮಾಡುವುದರಿಂದ ಪ್ರಯಾಣಿಕರು ಊಟ ತಿಂಡಿಗೆ ಇಳಿಯುತ್ತಾರೆ. ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸುವುದರಿಂದ ಬಸ್‌ಗಳನ್ನು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಬಸ್ ದೂರ ನಿಲ್ಲಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. 

ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳನ್ನು ಪೊಲೀಸರು ಎತ್ತಿಕೊಂಡು ಹೋಗಿ ಅವುಗಳ ಮಾಲೀಕರಿಗೆ ದಂಡ ಹಾಕಿದರೆ ಸ್ವಲ್ಪ ಬುದ್ಧಿ ಬರಬಹುದು ಎಂದು ಬಸ್‌ ಚಾಲಕರು ಹೇಳುತ್ತಾರೆ.  ಪುಂಡರ ಹಾವಳಿ: ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಬೈಕ್‌ಗಳನ್ನು ನಿಲ್ಲಿಸಲು ಪ್ರತ್ಯೇಕ ಜಾಗವಿದ್ದರೂ ಅಲ್ಲಿ ಯಾರೂ ನಿಲ್ಲಿಸುತ್ತಿಲ್ಲ. ಅನೇಕ ಕಾಲೇಜು ಯುವಕರು, ಪುಂಡರು ಬಸ್ ನಿಲ್ದಾಣದೊಳಗೆ ಬೈಕ್‌ಗಳನ್ನು ಚಾಲನೆ ಮಾಡುತ್ತಾ, ಎಲ್ಲೆಂದರಲ್ಲಿ ನಿಲ್ಲಿಸಿ ಹುಡುಗಿಯರಿಗೆ ಕೀಟಲೆ ಮಾಡುತ್ತಿರುತ್ತಾರೆ ಎಂದು ಇಲ್ಲಿ ಕಾರ್ಯನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಆರೋಪಿಸುತ್ತಾರೆ.

‘ಬೆಳಿಗ್ಗೆ ಮತ್ತು ಸಂಜೆ ಹೊತ್ತು ಪುಂಡರ ಹಾವಳಿ ವಿಪರೀತವಾಗಿರುತ್ತದೆ. ನಿಲ್ದಾಣದೊಳಗೆ ಬೈಕ್‌ ವ್ಹೀಲಿಂಗ್ ಮಾಡುವುದು, ಕರ್ಕಶ ಧ್ವನಿ ಮಾಡುವುದು, ಸ್ಟಂಟ್‌ಗಳನ್ನೆಲ್ಲ ಮಾಡುತ್ತಾರೆ. ಈ ಸಮಯದಲ್ಲಿ ಪೊಲೀಸರು ಇಲ್ಲಿ ಗಸ್ತು ತಿರುಗಬೇಕು. ಹಿಂದೆ ಇದ್ದ ಪೊಲೀಸ್ ಅಧಿಕಾರಿಗಳು, ಅನವಶ್ಯಕವಾಗಿ ಬಸ್ ನಿಲ್ದಾಣದಲ್ಲಿ ತಿರುಗುತ್ತಾ ಕೀಟಲೆ ಮಾಡುವವರನ್ನು ನಿಯಂತ್ರಣ ಮಾಡಿದ್ದರು. ಈಗಿನ ಅಧಿಕಾರಿಗಳು ಆ ಕೆಲಸಕ್ಕೆ ಮರು ಚಾಲನೆ ನೀಡಬೇಕು’ ಎಂದು ನಿವೃತ್ತ ಶಿಕ್ಷಕ ರಾಮಲಿಂಗಪ್ಪ ಒತ್ತಾಯಿಸಿದರು. ನಿಲ್ದಾಣದೊಳಗೆ ಹೋಟೆಲ್, ಎಟಿಎಂ, ಚಿಲ್ಲರೆ ಮತ್ತು ಫ್ಯಾನ್ಸಿ ಅಂಗಡಿಗಳಿವೆ. ಇಲ್ಲಿಗೆ ಬರುವವರು ಕೂಡ ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲ್ಲುಸುತ್ತಿಲ್ಲ. 

‘ಎಚ್ಚರಿಕೆ ನೀಡಿದರೂ ಪ್ರಯೋಜನವಿಲ್ಲ’

‘ನಿಲ್ದಾಣದೊಳಗೆ ವಾಹನಗಳನ್ನು ನಿಲ್ಲಿಸಬಾರದು ಎಂದು ಅನೇಕ ಬಾರಿ ಹಲವಾರು ಯುವಕರಿಗೆ ಹೇಳಿದ್ದೇವೆ. ಎಟಿಎಂ, ಹೋಟೆಲ್‌ಗೆ ಹೋಗುತ್ತೇವೆ ಎಂದು ಹೇಳಿ ಬಸ್ ನಿಲ್ದಾಣದೊಳಗೆ ಕಾಲ ಕಳೆಯುತ್ತಾರೆ. ಅಲ್ಲದೇ, ನಿಲ್ದಾಣದೊಳಗೆ ತ್ರಿಬಲ್ ರೈಡಿಂಗ್ ಮಾಡುತ್ತಾರೆ. ಬಸ್ ಹಿಂದೆ –ಮುಂದೆ ತೆಗೆಯುವಾಗ ಏನಾದರೂ ಅನಾಹುತವಾದರೆ ಎಂಬ ಎಚ್ಚರಿಕೆ ನೀಡಿದರೂ ಕೆಲ ಯುವಕರು ದರ್ಪ ಮೆರೆಯುತ್ತಾರೆ. ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ. ಬೈಕ್‌ಗಳ ನಿಯಂತ್ರಣಕ್ಕಾಗಿ ಒಬ್ಬರು ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ’ ಎಂದು ಇಲ್ಲಿನ ಡಿಪೋ ವ್ಯವಸ್ಥಾಪಕ ಜಯಕುಮಾರ್ ಅಸಹಾಯಕತೆ ತೋಡಿಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !