ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಸೋಮವಾರದಿಂದ ಬಿರುಸುಗೊಂಡ ಪುರಸಭೆ ಚುನಾವಣಾ ಕಣ

ನಾಮಪತ್ರ ಸಲ್ಲಿಕೆಗೆ 3 ದಿನ ಬಾಕಿ; ಪಕ್ಷಗಳ ಬಿ ಫಾರ್ಮ್‌ನತ್ತ ಆಕಾಂಕ್ಷಿಗಳ ಚಿತ್ತ!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ವಿಜಯಪುರ: ಇಂಡಿ, ಬಸವನಬಾಗೇವಾಡಿ, ತಾಳಿಕೋಟೆ ಪುರಸಭೆ ಚುನಾವಣೆ ಅಖಾಡ ಸೋಮವಾರದಿಂದ ಬಿರುಸುಗೊಂಡಿದೆ. ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿ ಉಳಿದಿದ್ದು, ಪಕ್ಷದ ಟಿಕೆಟ್‌ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ಪಕ್ಷಗಳು, ಈ ಮೂರು ಪುರಸಭೆಯ ತಲಾ 23 ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸ್ಥಳೀಯವಾಗಿ ಈಗಾಗಲೇ ಹಲವು ಸುತ್ತಿನ ಸರಣಿ ಸಭೆ ನಡೆಸಿವೆ. ಆಕಾಂಕ್ಷಿತರಿಂದ ಅರ್ಜಿ ಆಹ್ವಾನಿಸಿದ್ದು, ಪ್ರತಿ ವಾರ್ಡ್‌ನಿಂದ ಐದಾರು ಪ್ರಬಲ ಆಕಾಂಕ್ಷಿಗಳು ಸ್ಪರ್ಧೆಗೆ ಒಲವು ತೋರಿರುವುದು, ಸ್ಥಳೀಯ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದೇ ಇದೀಗ ಗೊಂದಲದ ಗೂಡಾಗಿದೆ. ಬಂಡಾಯದ ಅಪಾಯ, ಬಿರು ಬಿಸಿಲನ್ನೂ ಮೀರಿಸುವಂತಿದೆ. ಸ್ಪರ್ಧಾಕಾಂಕ್ಷಿಗಳು ಸಹ ಉಮೇದಿನಿಂದ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಪಕ್ಷದ ಬಿ ಫಾರ್ಮ್‌ ಸಿಗದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ, ಪಕ್ಷೇತರರಾಗಿ ಕಣಕ್ಕಿಳಿಯಲು ಸಕಲ ಸಿದ್ಧತೆ ನಡೆಸಿರುವುದು ಮೂರು ಪಕ್ಷಗಳ ಮುಖಂಡರಿಗೆ ತಲೆ ನೋವಾಗಿ ಕಾಡಲಾರಂಭಿಸಿದೆ.

ಉಸ್ತುವಾರಿಗಳ ನೇಮಕ:

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಾರಥ್ಯದಲ್ಲಿ ಒಂದೊಂದು ಪುರಸಭೆಯ ಚುನಾವಣೆಗೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಿಕೊಂಡಿದೆ. ಮೂರು ಪುರಸಭೆಗಳ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿಯೇ ಸಮಿತಿ ರಚಿಸಿದ್ದು, ಟಿಕೆಟ್‌ ಹಂಚಿಕೆಯ ಗೊಂದಲವನ್ನು ಈ ಹಂತದಲ್ಲೇ ಬಗೆಹರಿಸಲು ಕಸರತ್ತು ನಡೆಸಿದೆ.

ತಾಳಿಕೋಟೆ ಪುರಸಭೆಯ ಚುನಾವಣಾ ಉಸ್ತುವಾರಿಯನ್ನು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನಿರ್ವಹಿಸಲಿದ್ದಾರೆ. ಇಲ್ಲಿ ಪಕ್ಷದ ನಡೆ ಚಿದಂಬರ ರಹಸ್ಯವಾಗಿದೆ. ಶಾಸಕರು, ಅವರ ಬೆಂಬಲಿಗರು ಗೋಪ್ಯತೆ ಕಾಯ್ದುಕೊಂಡು, ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟಿದ್ದಾರೆ.

ಸ್ಥಳೀಯ ಮುಖಂಡರು, ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಜತೆ ಹೆಚ್ಚುವರಿಯಾಗಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರಿಗೆ ಬಸವನಬಾಗೇವಾಡಿ ಪುರಸಭೆ ಚುನಾವಣೆಯ ಹೊಣೆಗಾರಿಕೆ ನೀಡಲಾಗಿದೆ. ಇದೇ ರೀತಿ ಇಂಡಿಯಲ್ಲಿ ಪ್ರಧಾನ ಕಾರ್ಯದರ್ಶಿ ರವಿಕಾಂತ ಬಗಲಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ಜವಾಬ್ದಾರಿ ನೀಡಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂತ್ರಗಾರಿಕೆ ರೂಪಿಸುವಂತೆ ಸೂಚಿಸಲಾಗಿದೆ ಎಂದು ಕಮಲ ಪಾಳೆಯದ ಮೂಲಗಳು ತಿಳಿಸಿವೆ.

ಶಾಸಕ–ಸಚಿವರದ್ದೇ ಅಂತಿಮ:

ಆರೋಗ್ಯ ಸಚಿವ ಶಿವಾನಂದ ಪಾಟೀಲ ಸೋಮವಾರ ಸಂಜೆ ಬಸವನಬಾಗೇವಾಡಿ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಬೆಂಬಲಿಗರು, ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಅಪಸ್ವರಕ್ಕೆ ಅವಕಾಶವಿಲ್ಲದಂತೆ ಅಭ್ಯರ್ಥಿ ಆಯ್ಕೆಗೆ ಒತ್ತು ನೀಡಿದ್ದು, ತಮ್ಮದೇ ಪಾರಮ್ಯ ಮೆರೆದಿದ್ದಾರೆ.

ಇಂಡಿ ಪುರಸಭೆಗೆ ಸಂಬಂಧಿಸಿದಂತೆ ಶಾಸಕ ಯಶವಂತರಾಯಗೌಡ ಪಾಟೀಲ ಈಗಾಗಲೇ ಸಭೆ ನಡೆಸಿದ್ದಾರೆ. ಪ್ರಮುಖರೊಂದಿಗೆ ಕಾರ್ಯತಂತ್ರ ಹೆಣೆದಿದ್ದಾರೆ. ಸ್ವತಂತ್ರವಾಗಿ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ತಮ್ಮದೇ ತಂತ್ರಗಾರಿಕೆ ರೂಪಿಸಿದ್ದಾರೆ.

ಮಾಜಿ ಸಚಿವ ಸಿ.ಎಸ್.ನಾಡಗೌಡ ತಾಳಿಕೋಟೆ ಪುರಸಭೆಯನ್ನು ‘ಕೈ’ ವಶಪಡಿಸಿಕೊಳ್ಳಲು ಖುದ್ದು ಅಖಾಡಕ್ಕಿಳಿದಿದ್ದಾರೆ. ಪಕ್ಷೇತರರ ಬೆಂಬಲದೊಂದಿಗೆ ಇದೂವರೆಗೂ ಅಧಿಕಾರ ಚಲಾಯಿಸಿದ್ದ ನಾಡಗೌಡ, ಇದೀಗ ಪಕ್ಷಕ್ಕಾಗಿ ಕಸರತ್ತು ನಡೆಸುತ್ತಿರುವುದು ವಿಶೇಷ.

ನಾಮಪತ್ರ ಸಲ್ಲಿಕೆಗೆ ತಯಾರಿ:

‘ಇಂಡಿ, ಬಸವನಬಾಗೇವಾಡಿ ಪುರಸಭೆಯ ತಲಾ 23 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಮಂಗಳವಾರ ಶುಭಕರ ಎಂಬ ನಂಬಿಕೆಯಿಂದ ಬಸವನಬಾಗೇವಾಡಿಯ ಎಂಟತ್ತು ವಾರ್ಡ್‌ಗಳಿಗೆ ಪಕ್ಷದ ಅಭ್ಯರ್ಥಿಗಳು ಬಿ ಫಾರ್ಮ್‌ನೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಳಿಕೋಟೆ ಪುರಸಭೆ ಚುನಾವಣೆ ಸದ್ಯಕ್ಕೆ ಕಗ್ಗಂಟಾಗಿದೆ. ಕೆಲವರು ಪಕ್ಷದಿಂದಲೇ ಸ್ಪರ್ಧಿಸಲು ಆಸಕ್ತಿ ತೋರಿದರೆ, ಹಲವರು ಬೆಂಬಲ ಕೋರಿದ್ದಾರೆ. ಸೋಮವಾರ ಜಿಲ್ಲಾ ಘಟಕದಿಂದ ತಂಡವೊಂದನ್ನು ಕಳುಹಿಸಿಕೊಡಲಾಗಿದ್ದು, ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಲಿದೆ.

ಸ್ಥಳೀಯ ಮುಖಂಡರಾದ ಮಂಗಳಾದೇವಿ ಬಿರಾದಾರ ಸೇರಿದಂತೆ ಹಿರಿಯ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸಿ ಒಂದೆರೆಡು ದಿನದೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು