ಮೇಯರ್‌ ವಾರ್ಡ್‌ನಲ್ಲೇ ಹೊಸ ರಸ್ತೆ ಅಗೆದರು

ಶನಿವಾರ, ಮೇ 25, 2019
22 °C
ಪಟಾಲಮ್ಮ ದೇವಿ ಮಹೋತ್ಸವ: ಆಕರ್ಷಕ ಪ್ರವೇಶದ್ವಾರ; ಫಲಕ ನಿರ್ಮಾಣ

ಮೇಯರ್‌ ವಾರ್ಡ್‌ನಲ್ಲೇ ಹೊಸ ರಸ್ತೆ ಅಗೆದರು

Published:
Updated:
Prajavani

ಬೆಂಗಳೂರು: ಮೇಯರ್‌ ಗಂಗಾಂಬಿಕೆ ಅವರು ಪ್ರತಿನಿಧಿಸುವ ಜಯನಗರ ವಾರ್ಡ್‌ನಲ್ಲಿ ವರ್ಷದ ಹಿಂದಷ್ಟೇ ಡಾಂಬರೀಕರಣಗೊಂಡ ಸುಸಜ್ಜಿತ ರಸ್ತೆಯನ್ನು ಪಟಾಲಮ್ಮ ದೇವಿ ಮಹೋತ್ಸವದ ಪ್ರವೇಶದ್ವಾರ ನಿರ್ಮಾಣಕ್ಕಾಗಿ ಅಗೆಯಲಾಗಿದೆ. ಸುಸಜ್ಜಿತ ರಸ್ತೆಯನ್ನು ಅಗೆದಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಟಾಲಮ್ಮ ದೇವಸ್ಥಾನ ಟ್ರಸ್ಟ್‌ ಮೇ 15ರಂದು ಪಟಾಲಮ್ಮ ದೇವಿ ಮಹೋತ್ಸವವನ್ನು ಆಯೋಜಿಸಿದೆ. ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವಕ್ಕಾಗಿ ಜಯನಗರ ಅಶೋಕಸ್ತಂಭ ವೃತ್ತದ ಪೂರ್ವ ಭಾಗದಲ್ಲಿ ಆಕರ್ಷಕ ಮಂಟಪ ನಿರ್ಮಿಸಲಾಗಿದೆ. ಇದಕ್ಕಾಗಿ ನಡುರಸ್ತೆಯಲ್ಲಿ ಗುಂಡಿ ತೋಡಿ ಕಟ್ಟಿಗೆಯ ಕಂಬಗಳನ್ನು ನೆಡಲಾಗಿದೆ.

ವೃತ್ತದ ನಾಲ್ಕು ದಿಕ್ಕುಗಳಲ್ಲಿ ವಿದ್ಯುತ್‌ ದೀಪಾಲಂಕಾರದ ಫಲಕಗಳನ್ನು ಅಳವಡಿಸುವುದಕ್ಕೂ ರಸ್ತೆಯ ಅಂಚಿನಲ್ಲಿ ಕಂಬಗಳನ್ನು ನೆಡಲಾಗಿದೆ. ಈ ಸಲುವಾಗಿ 25ಕ್ಕೂ ಹೆಚ್ಚು ಗುಂಡಿಗಳನ್ನು ಅಗೆಯಲಾಗಿದೆ. ಇಲ್ಲಿಗೆ ಸಮೀಪದ ಕನಕನಪಾಳ್ಯದಲ್ಲಿ ಪ್ರವೇಶದ್ವಾರ ನಿರ್ಮಿಸಲು ಪಾದಚಾರಿ ಮಾರ್ಗವನ್ನು ಅಗೆದು ಕಂಬಗಳನ್ನು ನಿಲ್ಲಿಸಲಾಗಿದೆ.

‘ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಸುಸಜ್ಜಿತ ರಸ್ತೆಗಳನ್ನು ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇದರಿಂದ ಸಾರ್ವಜನಿಕ ಆಸ್ತಿ ಹಾನಿಯಾಗುವುದಿಲ್ಲವೇ’ ಎಂದು ಸ್ಥಳೀಯರಾದ ದೀಪಕ್‌ ತಿಮ್ಮಯ ಪ್ರಶ್ನಿಸಿದರು.

‘ಧಾರ್ಮಿಕ ಆಚರಣೆಗೆ ನನ್ನ ವಿರೋಧವಿಲ್ಲ. ನಗರದ ಪ್ರತಿ ವಾರ್ಡ್‌ನಲ್ಲೂ ಈ ರೀತಿ ಗುಂಡಿ ತೋಡುವ ಪರಿಪಾಠ ಬೆಳೆದರೆ, ಎಲ್ಲ ರಸ್ತೆಗಳು ಹಾಳಾಗುವುದಿಲ್ಲವೇ. ಹಾಗಾಗಿ ಉತ್ಸವ ಸಮಿತಿಯ ಪದಾಧಿಕಾರಿಗಳು ಈ ಬಗ್ಗೆ ಸೂಕ್ಷ್ಮ ಮನಸ್ಸಿನಿಂದ ಆಲೋಚಿಸಬೇಕು’ ಎಂದರು.

‘ಮೇಯರ್‌ ಪ್ರತಿನಿಧಿಸುವ ವಾರ್ಡ್‌ನಲ್ಲೇ ಹೀಗೆ ಆದರೂ ಕ್ರಮ ಜರುಗಿಸದಿದ್ದರೆ, ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಿದಂತಾಗುತ್ತದೆ. ಇದು ನಗರದ ಇತರೇ ಪ್ರದೇಶಕ್ಕೂ ಹರಡುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಉತ್ಸವ ಸಮಿತಿ ಹಣದಿಂದಲೇ ಗುಂಡಿ ಮುಚ್ಚಿಸುತ್ತೇವೆ’

‘ಕಂಬಗಳನ್ನು ನೆಡಲು ತೋಡಿರುವ ಗುಂಡಿಗಳನ್ನು ದೇವಿಯ ಮಹೋತ್ಸವದ ಬಳಿಕ ಉತ್ಸವ ಸಮಿತಿಯ ಹಣದಿಂದಲೇ ವೈಜ್ಞಾನಿಕವಾಗಿ ಮುಚ್ಚಿಸುತ್ತೇವೆ’ ಎಂದು ಮೇಯರ್‌ ಗಂಗಾಬಿಕೆ ಭರವಸೆ ನೀಡಿದರು.

‘ತ್ವರಿತ ನಗರೀಕರಣದ ಭರಾಟೆಯಲ್ಲಿ ನಮ್ಮ ಸಂಪ್ರದಾಯದ ಬಹುತೇಕ ಆಚರಣೆಗಳು ಕಣ್ಮರೆಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿಯೂ ನಡೆಯುವ ಮಹೋತ್ಸವಗಳನ್ನು ಪ್ರೋತ್ಸಾಹಿಸಬೇಕಿದೆ. ಅದಕ್ಕಾಗಿ ಉತ್ಸವಕ್ಕೆ ಬೇಕಾದ ಅನುಮತಿಗಳನ್ನು ನೀಡಲಾಗಿದೆ’ ಎಂದರು.

‘ಗುಂಡಿ ಅಗೆಯದೆ ಕಂಬಗಳನ್ನು ನಿಲ್ಲಿಸಿದರೆ, ಮಳೆ–ಗಾಳಿಗೆ ಅವು ಬೀಳಬಹುದು. ಸಾವಿರಾರು ಜನರು ಸೇರುವ ಈ ಉತ್ಸವದಲ್ಲಿ ನೂಕು–ನುಗ್ಗಲು ಸಹ ಇರುತ್ತದೆ. ಕಂಬಗಳು ಭದ್ರವಾಗಿಲ್ಲದಿದ್ದರೆ, ರಚನೆಗಳು ಬಿದ್ದು ಅವಘಡ ಸಂಭವಿಸಲೂಬಹುದು. ಈ ಎಲ್ಲ ಅಂಶಗಳನ್ನು ಗಮನಿಸಿಯೇ ಮುನ್ನೆಚ್ಚರಿಕೆಯ ಕ್ರಮವಾಗಿ ಗುಂಡಿ ತೋಡಿ ಕಂಬಗಳನ್ನು ನೆಡಲಾಗಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !