ಜನ ಸೇವಕ: ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳು

ಶುಕ್ರವಾರ, ಮಾರ್ಚ್ 22, 2019
28 °C

ಜನ ಸೇವಕ: ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳು

Published:
Updated:
Prajavani

ಪೀಣ್ಯದಾಸರಹಳ್ಳಿ: ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ‘ಜನ ಸೇವಕ’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದರು.

ಈ ಯೋಜನೆ ಜಾರಿಯಿಂದಾಗಿ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬಿಬಿಎಂಪಿ ಖಾತಾ ಸೇವೆಗಳು, ಹಿರಿಯ ನಾಗರಿಕರ ಗುರುತಿನ ಚೀಟಿ, ಆರೋಗ್ಯ ಚೀಟಿ ಸೇರಿದಂತೆ ಆಯ್ದ ಸೇವೆಗಳನ್ನು ಪಡೆಯಲು ಇನ್ನುಮುಂದೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ತಾಪತ್ರಯ ತಪ್ಪಲಿದೆ. ಇದರಿಂದ ಸಮಯ ಉಳಿತಾಯದೊಂದಿಗೆ, ಸಂಚಾರದ ವೆಚ್ಚವೂ ಉಳಿತಾಯ ಆಗಲಿದೆ.

ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಎಚ್‌.ಡಿ.ಕುಮಾರಸ್ವಾಮಿ, ‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ₹ 850 ಕೋಟಿ ಅನುದಾನ ನೀಡಿದೆ. ಕ್ಷೇತ್ರದಲ್ಲಿನ ಕೆಳವರ್ಗದ ಜನರಿಗಾಗಿ 4,000 ಮನೆಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗಿದೆ. ಕೆರೆಗಳ ಪುನರುಜ್ಜೀವನಕ್ಕೆ ₹ 48 ಕೋಟಿ ನೀಡಲಾಗಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಕಾರಿಗೆ ಮಹಿಳೆಯರು ಮುತ್ತಿಗೆ: ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಹೊರಡಲು ಅಣಿಯಾದಾಗ ಕರೆಕಲ್‌ ಗ್ರಾಮದ ಮಹಿಳೆಯರು ಸಿ.ಎಂ. ಕಾರಿಗೆ ಮುತ್ತಿಗೆ ಹಾಕಿದರು.

‘ಗ್ರಾಮದ ಸರ್ವೆ ಸಂಖ್ಯೆ 112ರಲ್ಲಿ 154 ಕುಟುಂಬಗಳು 25 ವರ್ಷಗಳಿಂದ ವಾಸ ಮಾಡುತ್ತಿವೆ. ಎಲ್ಲರಿಗೂ ಹಕ್ಕುಪತ್ರ ನೀಡಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಮುಜುಗರಕ್ಕೆ ಇಡಾಗಬೇಕಾಯಿತು.

ಜನ ಸೇವಕರ ಸೇವೆ ಪಡೆಯುವ ಬಗೆ

* ನಾಗರಿಕರು: ಸಾರ್ವಜನಿಕರು ಆಯ್ದ ಸೇವೆಗಳನ್ನು ಪಡೆಯಲು ನಿರ್ದಿಷ್ಟ ಕೇಂದ್ರಕ್ಕೆ ಕರೆ ಮಾಡಿ ವಿಳಾಸ ಹಾಗೂ ಇತರೆ ಅಗತ್ಯ ಮಾಹಿತಿ ನೀಡಿ, ನೋಂದಣಿ ಮಾಡಿಕೊಳ್ಳಬೇಕು. ಸೇವಕರು ಭೇಟಿ ನೀಡುವ ದಿನ ತಿಳಿದುಕೊಳ್ಳಬೇಕು.

* ಕರೆ ಕೇಂದ್ರ: ಕೋರಿದ ಸೇವೆಯ ಕುರಿತ ದಾಖಲಾತಿಗಳು ನಾಗರಿಕರ ಬಳಿ ಇರುವ ಬಗ್ಗೆ ಕರೆ ಕೇಂದ್ರದ ಸಿಬ್ಬಂದಿ ಖಚಿತಪಡಿಸಿಕೊಳ್ಳುತ್ತಾರೆ. ಸೇವಕರ ಭೇಟಿಯ ಸಮಯ ಖಾತರಿ ಪಡಿಸುತ್ತಾರೆ. ಭೇಟಿ ನೀಡುವ ಸೇವಕರ ಬಗ್ಗೆ ಕಿರುಮಾಹಿತಿ ನೀಡುತ್ತಾರೆ.

* ಸೇವಕರು: ಸಂಚಾರಿ ಸೇವಕರು ಸಮವಸ್ತ್ರ ಮತ್ತು ಗುರುತಿನ ಚೀಟಿಯೊಂದಿಗೆ ನಾಗರಿಕರ ಮನೆಗೆ ಭೇಟಿ ನೀಡುತ್ತಾರೆ. ಸ್ಕ್ಯಾನ್‌ ಮಾಡಿದ ದಾಖಲಾತಿಗಳನ್ನು ಹಾಗೂ ಇತರೆ ಮಾಹಿತಿಯನ್ನು ತಂತ್ರಾಂಶದಲ್ಲಿ ತುಂಬುತ್ತಾರೆ. ಸ್ವೀಕೃತಿ ಪತ್ರ ಹಾಗೂ ಹಣ ಸಂದಾಯದ ರಸೀದಿ ನೀಡುತ್ತಾರೆ. 

ಸ್ಪಂದನೆ: ನಾಗರಿಕರಿಕರು ಕೋರಿದ ಸೇವೆಗಳನ್ನು ಸೇವಕರು ಸಮಯಬದ್ಧವಾಗಿ ವಿಲೇವಾರಿ ಮಾಡುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !