ಅರಿವನ್ನು ಹೆಚ್ಚಿಸುವ ಗ್ರಹಿಕೆ

7

ಅರಿವನ್ನು ಹೆಚ್ಚಿಸುವ ಗ್ರಹಿಕೆ

Published:
Updated:
Deccan Herald

ವಿದ್ಯಾರ್ಥಿಗಳಲ್ಲಿ ‘ಸಂಜ್ಞಾನ ಸಾಮರ್ಥ್ಯ’ದ (Cognitive Ability) ಬೆಳವಣಿಗೆ ಶಿಕ್ಷಣದ ಒಂದು ಮುಖ್ಯ ಉದ್ದೇಶ. ಸಂಜ್ಞಾನ ಸಾಮರ್ಥ್ಯ ಎಂಬುದನ್ನು ಸರಳವಾಗಿ ಹೇಳುವುದಾದರೆ ಅದೊಂದು ಅರಿವು. ಅಂದರೆ ಗ್ರಹಿಸಿದ್ದನ್ನು ತನ್ನದಾಗಿಸಿಕೊಳ್ಳುವ ಸಾಮರ್ಥ್ಯ. ಕಲಿಕೆಯಲ್ಲಿ ಅರಿವಿನ ಪಾತ್ರ ದೊಡ್ಡದು. ಕಲಿಕೆಯಲ್ಲಿ ಎರಡೇ ಸಮಸ್ಯೆ ಇರುವುದು: ಒಂದು ಅರಿವಿನದು, ಮತ್ತೊಂದು ಮರೆವಿನದು. ಇವೆರಡೂ ವ್ಯಕ್ತಿಯ ಎತ್ತರ-ಬಿತ್ತರಗಳನ್ನು ಚಿತ್ರಿಸಬಲ್ಲವು.

‘ತನ್ನ ತಾನರಿತವಗೆ ತನ್ನರಿವೇ ಗುರು’ ಎಂದಿದ್ದಾರೆ ವಚನಕಾರರು. ಇದೇ ಕಲಿಕೆಯ ಮೂಲತತ್ತ್ವವೂ ಹೌದು. ಶಿಕ್ಷಣದ ಸಿದ್ಧಾಂತಗಳು ಅಧ್ಯಾಪಕನು ಬಲ್ಲವನಾಗಿರುವುದಷ್ಟೇ ಅಲ್ಲ; ತಾನು ಬಲ್ಲದ್ದನ್ನು ಮಕ್ಕಳಿಗೆ ವರ್ಗಾಯಿಸಬಲ್ಲ ಶಕ್ತಿಸಾಮರ್ಥ್ಯವನ್ನು ಹೊಂದಿರಬೇಕು ಎನ್ನುತ್ತವೆ. ಇಲ್ಲವಾದರೆ ಶಿಕ್ಷಣ ಪೂರ್ಣಫಲಪ್ರದವಾಗುವುದಿಲ್ಲ. ಅರಿವು ಎಲ್ಲರಿಗೂ ಸಾಮಾನ್ಯವಲ್ಲ ಎಂದು ಮೊದಲಿಗೆ ನಾವು ತಿಳಿದುಕೊಳ್ಳಬೇಕು. ಅದು ಹೇಗೆ ಎಂಬುದಕ್ಕೆ ಉದಾಹರಣೆಯಾಗಿ ಈ ಕಥೆಯನ್ನು ಓದಿ:

ಒಂದೂರಿನಲ್ಲಿ ಒಬ್ಬ ಕಮ್ಮಾರನಿದ್ದ. ಅವನಿಗೆ ವಯಸ್ಸಾಗುತ್ತ ಬಂತು. ಒಬ್ಬ ಸಹಾಯಕನ ಆವಶ್ಯಕತೆ ಕಂಡಿತು. ಅನೇಕರು ಸಂದರ್ಶನಕ್ಕೆ ಬಂದರು. ಆದರೆ ಅವರೆಲ್ಲ ಕೊಂಚ ಹೆಚ್ಚು ಸಂಬಳ ಕೇಳಿದರು. ಕೊನೆಗೊಬ್ಬ ಬಂದ. ಅವನು ಕಡಿಮೆ ಸಂಬಳಕ್ಕೆ ಒಪ್ಪಿಕೊಂಡ. ಕೆಲಸದ ಮೊದಲ ದಿನವೇ ಆ ಹೊಸಬನಿಗೆ ಮುದುಕ ಕಮ್ಮಾರ ಹೇಳಿದ – ‘ನೋಡು, ನಾನು ಕುಲುಮೆಯಿಂದ ಕೆಂಪಗೆ ಕಾದ ಕಬ್ಬಿಣವನ್ನು ತೆಗೆದು ಅಡಿಗಲ್ಲ ಮೇಲೆ ಇಟ್ಟ ಬಳಿಕ ತಲೆ ಅಲ್ಲಾಡಿಸುತ್ತೇನೆ. ಆಗ ನೀನು ತಲೆಯ ಭಾಗದ ಮೇಲೆ ಸುತ್ತಿಗೆಯಿಂದ ಬಲವಾದ ಏಟು ಹಾಕು’ ಎಂದು. ಆದರೆ, ಆ ಹೊಸಬ ತನಗೆ ಅರಿತಂತೆ ಕೆಲಸ ಮಾಡಿದ. ಮರುದಿನ ಆ ಹಳ್ಳಿಗರು ಹೊಸ ಕಮ್ಮಾರನನ್ನು ನೇಮಿಸಿಕೊಳ್ಳಬೇಕಾಯಿತು!

ಸಾರಾಂಶ ಇಷ್ಟೆ: ಅಪಾಯವಿರುವುದು ನಾವು ಅರ್ಥಮಾಡಿಕೊಳ್ಳುವುದರಲ್ಲಿ. ನಾವು ಕೇಳಿದ ಪಾಠ, ನಾವು ಕಂಡ ಜೀವನ ನಮ್ಮ ಹಿನ್ನೆಲೆಗೆ ತಕ್ಕಂತೆ ಅರಿವಿನ ವಿಸ್ತಾರ ಪಡೆದುಕೊಳ್ಳುತ್ತದೆ. ಗ್ರಹಿಕೆ ಒಂದೇ ಬಗೆಯದಾಗಿರುವುದಿಲ್ಲ. ಅದರಿಂದ ದೊರೆವ ಅರಿವು ಒಂದೇ ಅಲ್ಲ. ಹೀಗಾಗಿ ನಮಗೆ ದೊರೆಯುವ ಪ್ರತಿ ಮಗುವೂ ವಿಶೇಷವೇ. ಅದರ ಆಲೋಚನಾಕ್ರಮ, ಪ್ರತಿಕ್ರಿಯೆಯ ಮಜಲೂ ಬೇರೆಯೇ. ಹೊಸಪಠ್ಯಗಳು ಬಂದಾಗಲೆಲ್ಲ ನಾನು ಈ ಸೋಜಿಗವನ್ನು ಗಮನಿಸಿದ್ದೇನೆ. ಒಂದು ಉದಾಹರಣೆ ನೋಡಿ: ದ್ವಿತೀಯ ಪಿಯುಸಿಗೆ ಆಗ ಹೊಸ ಪಠ್ಯ ಬಂದಿತ್ತು. ಮೊದಲ ಪಾಠ ‘ಆಪಪೊಇನತಮೆನತ ಡಿತಹ ಳೊವೆ’. ಮಹಾಯುದ್ಧದ ಬಳಿಕ ಪ್ರೇಮಿಗಳು ಸಂಧಿಸುವ ರಮ್ಯಕಥಾಪ್ರಸಂಗ. ತನ್ನ ಬಾಹ್ಯಸೌಂದರ್ಯದಿಂದ ಪ್ರೇಮಿಯು ಆಕರ್ಷಿತ
ನಾಗಿದ್ದಾನೋ ಎಂದು ಪರೀಕ್ಷಿಸಲು ಕಥಾನಾಯಕಿ ತನ್ನ ಬದಲಿಗೆ ಕೊಂಚ ವಯಸ್ಸಾದ ದಡೂತಿ ಹೆಂಗಸನ್ನು ನಿಲ್ಲಿಸಿ, ಆಕೆಯ ಬಳಿ ಬಂದು ಆತ ತನ್ನನ್ನು ಗುರುತಿಸಿಕೊಂಡಾಗ ಮಾತ್ರ ತನ್ನ ಬಳಿ ಬರುವಂತೆ ಮಾಡಿಕೊಳ್ಳುವ ತಂತ್ರ ಬಳಸುತ್ತಾಳೆ. ಕಥೆ ಸುಖಾಂತ್ಯ ಕಾಣುತ್ತದೆ. ನಾನೂ ಪಾಠವನ್ನು ರಮ್ಯವಾಗಿ ಮಾಡಿದೆ. ಪ್ರೇಮದ ಆದರ್ಶವನ್ನು ಹಾಡಿ ಹೊಗಳಿದೆ. ಪ್ರಶ್ನೆಗಳೇನಾದರೂ ಇವೆಯೇ ಎಂದಾಗ ಒಬ್ಬ ವಿದ್ಯಾರ್ಥಿನಿ ಕೇಳಿದಳು, ‘ಇವರಿಬ್ಬರ ಪ್ರೇಮಪರೀಕ್ಷೆಗೆ ಆ ಹೆಂಗಸನ್ನು ಮಧ್ಯದಲ್ಲಿ ಬಳಸಿಕೊಂಡಿದ್ದು ಎಷ್ಟು ಸರಿ? ಆ ಹೆಂಗಸಿನ ಭಾವನೆಗಳೇನಿರಬಹುದು? ಅವಳ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಕೂಡ ತಪ್ಪಲ್ಲವೆ?’ ಆ ಸಮಯದಲ್ಲಿ ನಾನು ಸಮಜಾಯಷಿಯೇನೋ ಕೊಟ್ಟೆ. ಆದರೆ ಆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಇಡೀ ಕಥೆಯನ್ನು ಮತ್ತೊಂದು ಕೋನದಿಂದ ನೋಡುವಂತೆ ಮಾಡಿತು ಮತ್ತು ಅವಳ ಅಭಿಪ್ರಾಯ ಸರಿಯಾಗಿದೆ ಎಂತಲೂ ಅನ್ನಿಸಿತು. ಇದು ಕಲಿಕೆಯ ಮತ್ತೊಂದು ಮಜಲು.

ಕಲಿಕೆಯು ಪರಿಣಾಮಕಾರಿಯಾಗಿರಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವೈಯಕ್ತಿಕ ಕಲಿಕೆಯ ಮಾದರಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಇದರಿಂದ ಅವನು ತನ್ನದೇ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯ. ಜೊತೆಗೆ ಅವನಿಗೆ ತನ್ನ ಬೆಳವಣಿಗೆಯ ಸ್ಪಷ್ಟಚಿತ್ರಣವೂ ನಿರಂತರವಾಗಿ ದೊರೆಯುತ್ತಿರುತ್ತದೆ. ಸೂಕ್ಷ್ಮಸಂಜ್ಞಾನದ, ಸಂಸಂಜ್ಞಾವನದ (Metacognition) ಎಂಬುದು ಮುಮ್ಮುಖದ ತಂತ್ರ; ಸ್ವಮೌಲ್ಯಮಾಪನ, ಯೋಜನೆ ಮತ್ತು ಜಾಗೃತಿಯ ಅಂತರೀಕ್ಷಣೆ. ವಿದ್ಯಾರ್ಥಿಗಳು ಈ ಮೂರು ಅಂಶಗಳಲ್ಲಿ ಹೆಚ್ಚು ಹೆಚ್ಚು ಕೌಶಲ ಸಾಧಿಸುತ್ತಿದ್ದಂತೆ ಕಲಿಕೆ ಎಂಬುದು ಸರಾಗವೂ ಆಗುತ್ತದೆ; ಜೊತೆಗೆ ಅವರ ಆತ್ಮವಿಶ್ವಾಸವೂ ವೃದ್ಧಿಸುತ್ತದೆ. ಇದರೊಂದಿಗೆ ವಿದ್ಯಾರ್ಥಿಯು ಕೆಲವು ಕೌಶಲಗಳ ಮೂಲಕ ಕಲಿಕೆಯ ವೇಗವನ್ನು ವೃದ್ಧಿಸಿಕೊಳ್ಳಬಹುದು; ಹೊಸ ಕಲಿಕೆಯಲ್ಲಿ ಉತ್ಸಾಹ, ನಿರ್ದಿಷ್ಟ ಗುರಿಯನ್ನು ಹೊಂದಿರುವುದು, ಸಮಯದ ಸದುಪಯೋಗ (ನಿರ್ವಹಣೆ), ತನ್ನ ಚಟುವಟಿಕೆಗಳ ಮೇಲೆ ಗಮನ, ತನಗೆ ನೀಡಿದ ಮನೆಗೆಲಸ, ಅಸೈನ್‍ಮೆಂಟ್‍ಗಳ ನಿರ್ವಹಣೆಯನ್ನು ಕುರಿತಂತೆ ಯೋಜನೆ, ಆಯ್ಕೆ ಮತ್ತು ನಿರ್ವಹಣೆ, ತನ್ನ ಬಗೆಗಿನ ಜವಾಬ್ದಾರಿ, ತನ್ನ ತಪ್ಪುಗಳನ್ನು ತಾನೇ ತಿದ್ದಿಕೊಳ್ಳುವ ಮನೋಭಾವ, ಆವಶ್ಯಕತೆಗೆ ತಕ್ಕಂತೆ ಕಲಿಕೆಯ ಕ್ರಮ-ಮಾದರಿಯನ್ನು ಮತ್ತು ತನ್ನ ನಡೆವಳಿಕೆಯನ್ನು ಬದಲಾಯಿಸಿಕೊಳ್ಳಬಲ್ಲ ಸಾಮರ್ಥ್ಯ, ತನ್ನ ಕಲಿಕೆಯನ್ನು (ಗಳಿಸಿದ ಜ್ಞಾನವನ್ನು) ಸೂಕ್ತ ಸಂದರ್ಭದಲ್ಲಿ ಮತ್ತೊಂದು ಸನ್ನಿವೇಶದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ - ಇವೆಲ್ಲವನ್ನೂ ವಿದ್ಯಾರ್ಥಿಯು ಬೆಳೆಸಿಕೊಳ್ಳಬೇಕು. ಈ ಬಗೆಯ ಅಂತರೀಕ್ಷಣೆ, ಕಲಿಕೆ ನಡೆದಾಗ ಯಾವುದೇ ಪರೀಕ್ಷೆ ಎದುರಿಸಲು ವಿದ್ಯಾರ್ಥಿ ಸಿದ್ಧನಿರುತ್ತಾನೆ. ಅಂತಹ ಸಂದರ್ಭದಲ್ಲಿ ಅವನಲ್ಲಿ ಏಳಬೇಕಾದ ಪ್ರಶ್ನೆಗಳು: ಈ ಪರೀಕ್ಷೆಗಳ ಗುರಿಯೇನು? ಅದು ನನಗೆ ಹೇಗೆ ಸಂಬಂಧಿತವಾಗಿದೆ? ನಾನು ಕಲಿಯಲು ಪ್ರೇರಿತನಾಗಿದ್ದೇನೆಯೆ? ಆಗಿದ್ದರೆ ಅದು ಯಾವ ಮಟ್ಟದ ಪ್ರೇರಣೆ? ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳು ನನ್ನ ಬಳಿ ಇವೆಯೆ? ಈ ಓದಿಗೆ ನಾನು ಅನುಸರಿಸಬೇಕಾದ ಕ್ರಮವೇನು? (ಶಾಲಾ/ಕಾಲೇಜಿನ ಅಧ್ಯಯನ ಮಾದರಿ, ಪರೀಕ್ಷಾ ಮಾದರಿ, ಕ್ರಮ ಬೇರೆ, ಇತರೆ ಸ್ಪರ್ಧಾತ್ಮಕ ಪರೀಕ್ಷೆ, ಉದ್ಯೋಗಾವಕಾಶಕ್ಕಾಗಿ ನಡೆಯುವ ಪರೀಕ್ಷೆ ಬೇರೆ. ಎರಡಕ್ಕೂ ಭಿನ್ನ ಮಾದರಿಯ ಪ್ರೇರಣೆ, ಅಧ್ಯಯನ ಕ್ರಮ ಅನುಸರಿಸಬೇಕು), ಈ ತಯಾರಿಗೆ ನನಗೆ ಎಷ್ಟು ಸಮಯ ಬೇಕಾಗುತ್ತದೆ? ಈ ಬಗೆಯ ಪ್ರಶ್ನೆ ಪರಿಪ್ರಶ್ನೆಗಳಿಂದ ಜ್ಞಾನ ಮತ್ತು ಸಾಮರ್ಥ್ಯ ಎರಡೂ ಹೆಚ್ಚುತ್ತಾ ಹೋಗುವುದು. ಇದನ್ನೇ ಋಗ್ವೇದದ ಪ್ರಾರ್ಥನಾ ಮಂತ್ರವೊಂದು ‘....ಸಂಜಾನಾನ ಉಪಾಸತೇ’ ಸಾಮರ್ಥ್ಯಗಳ ಹೆಚ್ಚಳಿಕೆ ಮೂಲಕ ವೈಯಕ್ತಿಕ ಗುರಿಗಳನ್ನು ತಲುಪುವುದು ಎಂದಿದೆ. ಶಿಕ್ಷಕ ಜ್ಞಾನಮಿತ್ರನಾಗಲಿ, ವಿದ್ಯಾರ್ಥಿಗಳ ಸಂಜ್ಞಾನ ಸಾಮರ್ಥ್ಯವನ್ನು ಬೆಳೆಸಲಿ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !