ಶುಕ್ರವಾರ, ಏಪ್ರಿಲ್ 10, 2020
19 °C

ಟಿಪ್ಪು ಜಯಂತಿ ಬೇಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

*ಟಿಪ್ಪು ಜಯಂತಿಗೆ ವಿರೋಧ ಏಕೆ?
ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ವಿರೋಧ ಮಾಡುತ್ತಿಲ್ಲ. ಆತ ಆಕ್ರಮಣಕಾರಿ ವ್ಯಕ್ತಿ. ನೂರಾರು ಬಗೆಯಲ್ಲಿ ದೌರ್ಜನ್ಯ ನಡೆಸಿದ್ದ. ಆತನ ವೈಭವೀಕರಣದಿಂದ ಇತಿಹಾಸ, ನೆಲ ಹಾಗೂ ಜಲಕ್ಕೆ ಅಪಚಾರ ಮಾಡಿದಂತಾಗುತ್ತದೆ.

*ಜಯಂತಿ ಮಾಡಿದರೆ ನಿಮಗೇನು ನಷ್ಟ?
ಒಬ್ಬ ಸಾಂಸ್ಕೃತಿಕ ವ್ಯಕ್ತಿಯ ಜಯಂತಿ ಬೇರೆ, ಆಕ್ರಮಣಕಾರಿ ವ್ಯಕ್ತಿಯ ಜಯಂತಿ ಬೇರೆ. ಕ್ರೈಸ್ತರ ಮತ ಗಟ್ಟಿ ಮಾಡಿಕೊಳ್ಳಲು ಸರ್ಕಾರ ನಾಳೆ ರಾಬರ್ಟ್‌ ಕ್ಲೈವ್‌ ಜಯಂತಿ ಮಾಡಬಹುದು. ಅದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವಅಪಮಾನ. ತಾಯಿ ಮೇಲೆ ಅತ್ಯಾಚಾರ ಮಾಡಲು ಬಂದ ವ್ಯಕ್ತಿಯನ್ನೇ ಸನ್ಮಾನ ಮಾಡಿದಂತಿದೆ ಸರ್ಕಾರದ ನಿಲುವು. ಇಸ್ಲಾಂ ಧರ್ಮದಲ್ಲಿ ಮಹಮ್ಮದ್‌ ಪೈಗಂಬರ್‌ ಜಯಂತಿ ಹೊರತುಪಡಿಸಿ ಬೇರೆ ಯಾವ ಜಯಂತಿ ಆಚರಿಸಲು ಅವಕಾಶ ಇಲ್ಲ. ಜಯಂತಿ ಮಾಡಿ ಎಂದು ಸತ್ತ ಪ್ರೇತಾತ್ಮ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತಾ?
–ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ 

*****
*ಟಿಪ್ಪು ಜಯಂತಿಯನ್ನು ಆಚರಿಸಲೇಬೇಕು ಎಂಬ ಹಟ ಸಮ್ಮಿಶ್ರ ಸರ್ಕಾರಕ್ಕೆ ಏಕೆ?
ಮೂರು ವರ್ಷಗಳಿಂದ ಸರ್ಕಾರದ ವತಿಯಿಂದ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಅದರಲ್ಲಿ ತಪ್ಪೇನಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ಮಹನೀಯರ ಜಯಂತಿ ಆಚರಿಸುತ್ತೇವೆ. ಆಗ ಬಿಜೆಪಿಯವರು ಚಕಾರ ಎತ್ತಿರಲಿಲ್ಲ. ಆಗ ಇಲ್ಲದ ಉರಿ ಈಗ್ಯಾಕೆ?‌

*ಜಯಂತಿ ಆಚರಣೆ ಮೂಲಕ ಹಿಂದುತ್ವವಾದಿಗಳಿಗೆ ನೆಲೆ ವಿಸ್ತರಣೆಗೆ ಇನ್ನಷ್ಟು ಅಸ್ತ್ರ ಕೊಟ್ಟ ಹಾಗೆ ಅಲ್ಲವೇ?
ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯವರು ಇಂತಹ ವಿಚಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ಕಡೆಯಲ್ಲಿ ನಗರಗಳ ಹೆಸರು ಬದಲಿಸುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಶಬರಿಮಲೆ ವಿಷಯದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಇಲ್ಲಿ ಟಿಪ್ಪುವನ್ನು ಹಿಡಿದುಕೊಂಡಿದ್ದಾರೆ ಅಷ್ಟೇ. ಇಂತಹ ನಾಟಕಗಳಿಗೆ ಜನರು ಮರುಳಾಗುವುದಿಲ್ಲ.

*ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಯೇ ಕಾರ್ಯಕ್ರಮಕ್ಕೆ ಗೈರುಹಾಜರಾಗುತ್ತಿದ್ದಾರಲ್ಲ?
ಅವರು ಮೂರು ದಿನಗಳ ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ, ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದು ಮೊದಲೇ ಹೇಳಿದ್ದರು. ಇದೊಂದು ದೊಡ್ಡ ವಿಚಾರ ಅಲ್ಲ.
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು