ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಉತ್ಸವ: ಶಾಂತಿ ಕಾಪಾಡಿ

Last Updated 18 ಆಗಸ್ಟ್ 2017, 5:53 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಆಚರಿಸುವ ಗಣೇಶ ಉತ್ಸವವನ್ನು ಶಾಂತಿಯುತವಾಗಿ ಆಚರಿಸುವಂತೆ ಗಣೇಶ ಉತ್ಸವ ಮಂಡಳಿಗಳಿಗೆ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷ ಪಿಒಪಿ ಗಣೇಶ ಮೂರ್ತಿ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಸಲಹೆ ನೀಡಿದರು.

‘ಗಣೇಶ ಉತ್ಸವ ಮಂಡಳಿಯವರು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ರಿಂದ ಸಂಜೆ 10 ಗಂಟೆಯೊಳಗೆ ಮಾತ್ರ ಹಚ್ಚಬೇಕು.

ಪ್ರತಿಯೊಂದು ಮಂಡಳಿಯಿಂದ 20 ಜನ ಸ್ವಯಂ ಸೇವಕರನ್ನು ನೇಮಕಮಾಡಿ ಮೊಬೈಲ್ ಸಂಖ್ಯೆ ಸಹಿತ ಪಟ್ಟಿಯನ್ನು ನೀಡಬೇಕು. ಅವರಿಗೆ ಪೊಲೀಸ್ ಇಲಾಖೆಯಿಂದ ಪೊಲೀಸ್ ಮಿತ್ರ ಎಂಬ ಗುರುತಿನ ಚೀಟಿ ನೀಡಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ಮೆರವಣಿಗೆಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಹಾಕುವಂತಿಲ್ಲ. ನಿಗದಿಪಡಿಸಿದ ಮಾರ್ಗದಲ್ಲಿಯೇ ಮೆರವಣಿಗೆ ಹೊರಡಬೇಕು. ಎರಡು ಸ್ಥಳಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಪ್ರದೇಶದವರಿಗೆ ಮಾರುದ್ರಪ್ಪನ ಹಳ್ಳ, ನವನಗರ ಮತ್ತು ವಿದ್ಯಾಗಿರಿಯವರಿಗೆ ಹನಮಂತನಗುಡಿ ಕ್ವಾರಿ ಹಳ್ಳದಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

‘ಮನೆಗಳಲ್ಲಿ ಕೂಡಿಸಲಾದ ಗಣೇಶ ಮೂರ್ತಿಗಳಿಗೆ ಕಳೆದ ವರ್ಷದಲ್ಲಿ ಗುರುತಿಸಲಾದ ಸ್ಥಳಗಳಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ‘ಎಂದು ಮೇಘಣ್ಣವರ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ತಹಶೀಲ್ದಾರ್ ವಿನಯ ಕುಲಕರ್ಣಿ ಹಾಗೂ ಗಣೇಶ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT