ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮೈತ್ರಿ: ಚುನಾವಣೆ ಲೆಕ್ಕಾಚಾರ ಶುರು

ಕೇಂದ್ರದಲ್ಲಿ ಗದ್ದುಗೆ ಏರಲು ಪಕ್ಷಗಳ ಕಸರತ್ತು
Last Updated 22 ಮೇ 2018, 19:26 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಯು ರಾಜ್ಯ ರಾಜಕೀಯದಲ್ಲಿ ಹೊಸ ಬಗೆಯ ಧ್ರುವೀಕರಣಕ್ಕೆ ಕಾರಣವಾಗಲಿದೆಯೇ ಅಥವಾ ಬಿಜೆಪಿಯ ಶಕ್ತಿಯನ್ನು ಕುಂದಿಸುತ್ತದೆಯೇ ಎಂಬ ಚರ್ಚೆಗೆ ನಾಂದಿಯಾಗಿದೆ.

ಹೊಸ ಸಮೀಕರಣದ ಲಾಭ ಯಾರಿಗೆ ಆಗುತ್ತದೆ, ಹಳೆ ಮೈಸೂರಿಗೆ ಸೀಮಿತವಾಗಿರುವ ಜೆಡಿಎಸ್‌ ಅಧಿಕಾರ ಪಡೆದ ಲಾಭದಿಂದ ರಾಜ್ಯವ್ಯಾಪಿ ಪ್ರಬಲ ಪಕ್ಷವಾಗಿ ಹೊರ ಹೊಮ್ಮುತ್ತದೆಯೇ, ಕಾಂಗ್ರೆಸ್‌ ಶಕ್ತಿಯನ್ನು ಹೀರಿ ಬೆಳೆದು ನಿಲ್ಲುತ್ತದೆಯೇ ಅಥವಾ ಎರಡೂ ಪಕ್ಷಗಳು ಸೇರಿ ಬಿಜೆಪಿಯನ್ನು ಶಕ್ತಿಹೀನಗೊಳಿಸುತ್ತವೆಯೇ ಎಂಬ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ.

ದೇಶದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ಗೆ ಕರ್ನಾಟಕದ ಅತಂತ್ರ ಫಲಿತಾಂಶ ವರವಾಗಿ ಪರಿಣಮಿಸಿದ್ದು, ಅದರ ಪೂರ್ಣ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದು ಗದ್ದುಗೆಗೆ ಏರುವ ಕನಸು ಕಾಣುತ್ತಿರುವ ಕಾಂಗ್ರೆಸ್‌ ಪಾಲಿಗೆ ಹೊಸ ಮೈತ್ರಿ ಆಶಾಕಿರಣವೆನಿಸಿದೆ.

ಈ ಮೈತ್ರಿಯಿಂದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟ 28 ಸ್ಥಾನಗಳಲ್ಲಿ 20ರಿಂದ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಕಾಂಗ್ರೆಸ್‌ಗೆ ದಕ್ಷಿಣದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅವಕಾಶ ಇರುವುದು ಕರ್ನಾಟಕದಲ್ಲಿ ಮಾತ್ರ. ಹಿಂದೆ ಆಂಧ್ರ ಪ್ರದೇಶದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿದ್ದ ಕಾಂಗ್ರೆಸ್‌ ಅಲ್ಲಿ ನಾಮಾವಶೇಷಗೊಂಡಿದೆ. ಕರ್ನಾಟಕ ದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲದಿದ್ದರೆ, ಅದರ ಕನಸು ನನಸಾಗುವುದಿಲ್ಲ.

ಕಳೆದ ಎರಡು ದಶಕಗಳಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೇಲುಗೈ ಸಾಧಿಸುತ್ತಾ ಬಂದಿವೆ. 1991ರಿಂದೀಚೆಗೆ ಜನತಾದಳ ಒಂದು ಸಲ ಮಾತ್ರ (1996) 16 ಸ್ಥಾನಗಳನ್ನು ಗೆದ್ದಿದ್ದು ಬಿಟ್ಟರೆ, ಮತ್ತೆಂದೂ ಎರಡಂಕಿ ದಾಟಿಲ್ಲ. ಕಾಂಗ್ರೆಸ್‌ ಕೂಡ 1999ರಲ್ಲಿ (18) ಬಿಟ್ಟರೆ ಮತ್ತೆಂದೂ ಎರಡಂಕಿ ತಲುಪಲಿಲ್ಲ.

ಮತದಾರರು ರಾಜ್ಯದಲ್ಲಿ ವಿಧಾನಸಭೆಗೆ ಕಾಂಗ್ರೆಸ್ ಅನ್ನು ಗೆಲ್ಲಿಸಿದರೂ ಕೇಂದ್ರದಲ್ಲಿ ಬಿಜೆಪಿ ಪರ ಒಲವು ತೋರಿಸುತ್ತಲೇ ಬಂದಿದ್ದಾರೆ. ಕೇಂದ್ರದಲ್ಲಿ ಎರಡು ಬಾರಿ ಯುಪಿಎ ಅಧಿಕಾರ ಹಿಡಿದಾಗಲೂ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಜೆಡಿಎಸ್‌ ಒಂದು ಬಾರಿ ಮಾತ್ರ ಅತ್ಯಧಿಕ, ಎಂದರೆ 3 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.

ಎಷ್ಟರ ಮಟ್ಟಿಗೆ ಸಹಕಾರಿ?: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಬೇಡಿಕೆ ಇಡಬಹುದಾದ ಕ್ಷೇತ್ರಗಳೆಂದರೆ ಹಾಸನ, ಮಂಡ್ಯ, ತುಮಕೂರು, ಮೈಸೂರು, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು. ಆದರೆ, ಕಾಂಗ್ರೆಸ್‌ 10 ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಹೆಚ್ಚೆಂದರೆ 6 ಸ್ಥಾನಗಳನ್ನು ನೀಡಬಹುದು.

ಮಂಡ್ಯ, ಹಾಸನ ಕ್ಷೇತ್ರಗಳನ್ನು ಜೆಡಿಎಸ್‌ ನಿರಾಯಾಸವಾಗಿ ಗೆಲ್ಲುತ್ತದೆ. ಬೆಂಗಳೂರು ಉತ್ತರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವುದರಿಂದ, ಕಾಂಗ್ರೆಸ್‌ ಈ ಸ್ಥಾನವನ್ನು ಬಿಟ್ಟುಕೊಡಬಹುದು. ಆದರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಕಾಂಗ್ರೆಸ್‌ ನಿರಂತರವಾಗಿ ಗೆಲ್ಲುತ್ತಾ ಬಂದಿದೆ. ಈ ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಕಡಿಮೆ.

ಮೈತ್ರಿ ಧರ್ಮ ಪಾಲಿಸಲು ಮತ್ತು ವೀರಪ್ಪ ಮೊಯಿಲಿ ಅವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೂ ಅಚ್ಚರಿ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಸೂಚನೆ ಸಿಕ್ಕರೆ ಕಾಂಗ್ರೆಸ್‌, ಸಿದ್ದರಾಮಯ್ಯ ಅವರನ್ನು ಮೈಸೂರಿನಿಂದ ಕಣಕ್ಕೆ ಇಳಿಸುವ ಚಿಂತನೆ ಹೊಂದಿದೆ ಎಂದು ಮೂಲಗಳು ಹೇಳಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ರಾಯಚೂರು ಮತ್ತು ವಿಜಯಪುರ ಲೋಕಸಭಾ ಕ್ಷೇತ್ರಗಳನ್ನೂ ಜೆಡಿಎಸ್‌ ಕೇಳುವ ಸಾಧ್ಯತೆ ಇದೆ. ಆದರೆ, ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಗಳಿಕೆ ಪ್ರಮಾಣ 2004ರಿಂದ ಈಚೆಗೆ ಹೆಚ್ಚಾಗಿದೆ. ಜೆಡಿಎಸ್‌ ಮತ ಗಳಿಕೆ ಪ್ರಮಾಣ ಇಳಿಕೆಯಾಗಿದೆ. ಕಾಂಗ್ರೆಸ್‌ ಪರಿಸ್ಥಿತಿ ಸುಧಾರಿಸಿದೆ.

‘ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟ ದೊಡ್ಡ ಮಟ್ಟದಲ್ಲಿ ಪ್ರತಿಸ್ಪರ್ಧೆ ಒಡ್ಡಲು ಸಾಧ್ಯವಾಗದು. ಬಿಜೆಪಿಗೆ ತನ್ನದೇ ಆದ ಮತ ಬ್ಯಾಂಕ್‌ ಇದೆ. ಅಲ್ಲದೆ, ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚುವ ಬಿಜೆಪಿ ಬೆಂಬಲಿಗರಲ್ಲದ ದೊಡ್ಡ ಸಮೂಹವೇ ಇದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.

‘ಜಾತ್ಯತೀತ ಮತಗಳು ವಿಭಜನೆ ಆಗುವುದಿಲ್ಲ. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು’ ಎಂದು ಜೆಡಿಎಸ್‌ ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT