ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ ಅನರ್ಹರ ಸೇರ್ಪಡೆ: ಆರೋಪ

ಹುನಗುಂದ ಕ್ಷೇತ್ರದಲ್ಲಿ ಅಕ್ರಮ: ಮಾಜಿ ಶಾಸಕ ದೊಡ್ಡನಗೌಡ ಆರೋಪ
Last Updated 29 ಮಾರ್ಚ್ 2018, 5:31 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಹುನಗುಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಅನಧಿಕೃತ ಮತದಾರರನ್ನು ಸೇರಿಸಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಹಿಂದಿನ ತಹಶೀಲ್ದಾರ್ ಈ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ. ‘ಈ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರಿಗೆ
ದೂರು ಸಲ್ಲಿಸುವೆ’ ಎಂದು ತಿಳಿಸಿದರು.

‘ಹಿಂದಿನ ತಹಶಿಲ್ದಾರ್ ಸುಭಾಷ್ ಸಂಪಗಾವಿ ಸರ್ಕಾರಿ ಅಧಿಕಾರಿಯಾಗಿರದೇ ಶಾಸಕರ ಮನೆಯ ಸದಸ್ಯರಂತೆ ಇದ್ದರು. ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಅವರು ಮಾಡಿರುವ ಅಕ್ರಮಗಳ ಬಗ್ಗೆ ಮೊದಲು ಜಿಲ್ಲಾಧಿಕಾರಿಗೆ ದೂರು ನೀಡುವೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮತದಾರರ ಪಟ್ಟಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು. ಅದನ್ನು ಸರಿಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಫೆಬ್ರುವರಿ 28ರಂದು ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಲ್ಲಿ ತಪ್ಪುಗಳನ್ನು ಸರಿಪಡಿಸಲಾಗಿಲ್ಲ. ಬದಲಿಗೆ ಇನ್ನಷ್ಟು ಅಕ್ರಮಗಳಿಗೆ ದಾರಿ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದರು.

‘ಇಳಕಲ್‌ನ ಭಾಗ ಸಂಖ್ಯೆ 155ರಲ್ಲಿ ಮನೆ ಸಂಖ್ಯೆ 1020ರಲ್ಲಿ 92 ಮಂದಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಆದರೆ ಆ ಬೂತ್‌ನಲ್ಲಿ ಆ ಹೆಸರಿನವರು ಯಾರೂ ವಾಸವಾಗಿಲ್ಲ. ಒಬ್ಬ ಮಹಿಳೆಯ ಭಾವಚಿತ್ರವನ್ನು ನಾಲ್ವರ ಹೆಸರಿನಲ್ಲಿ ಹಾಕಿದ್ದಾರೆ. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜ ಗದ್ದಿ ಹೆಸರು ಹುನಗುಂದ ಹಾಗೂ ಬೇವಿನಮಟ್ಟಿ ಎರಡೂ ಕಡೆ ಇದೆ. ಈ ರೀತಿ ಹಲವಾರು ತಪ್ಪುಗಳನ್ನು ಎಸಗಲಾಗಿದೆ’ ಎಂದು ಅವರು ದಾಖಲೆ ಬಿಡುಗಡೆ ಮಾಡಿದರು.

ಬದುಕಿದ್ದವರ ಹೆಸರು ತೆಗೆದರು: ‘ಹುನಗುಂದ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಆಗಿರುವ ಮಹಾದೇವಿ ಗುಡಿಮನಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಆದರೆ ಅವರ ಮಾವ ತೀರಿಕೊಂಡಿದ್ದರೂ ಅವರ ಹೆಸರನ್ನು ಪಟ್ಟಿಯಲ್ಲಿ ಉಳಿಸಲಾಗಿದೆ. ಈ ವಿಚಾರದಲ್ಲಿ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಚುನಾವಣಾ ಅಧಿಕಾರಿಗೆ ಒತ್ತಾಯಿಸಲಾಗುವುದು’ ಎಂದು ಅವರು ಹೇಳಿದರು.

ಅರ್ಜಿ ಕೊಡದೇ ಹೆಸರು ಸೇರಿಸಿದ್ದಾರೆ...

ಹುನಗುಂದದಲ್ಲಿ ಎರಡು ಕಡೆ ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ದೊಡ್ಡನಗೌಡ ಹಾಗೂ ಅವರ ಮಗನ ಹೆಸರನ್ನು ಸೇರಿಸಲಾಗಿದೆ ಎಂದು ಶಾಸಕ ವಿಜಯಾನಂದ ಆರೋಪಿಸಿದ್ದಾರೆ. ಅದರಲ್ಲಿ ಹುರುಳಿಲ್ಲ ನಾವು ಅರ್ಜಿ ಕೊಡದೇ ನಮ್ಮ ಹೆಸರು ಸೇರಿಸಲಾಗಿದೆ ಎಂದು ದೊಡ್ಡನಗೌಡ ಆರೋಪಿಸಿದರು.

ಟಿಕೆಟ್ ವಿಚಾರದಲ್ಲಿ ಗೊಂದಲವಿಲ್ಲ: ‘ಹುನಗುಂದ ಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಎಸ್.ಆರ್.ನವಲಿಹಿರೇಮಠ ಟಿಕೆಟ್ ಆಕಾಂಕ್ಷಿ ಅಲ್ಲ. ಅವರು ಪಕ್ಷ ಸೇರ್ಪಡೆಯಾಗುವಾಗಲೇ ಅದನ್ನು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಹೇಳಿದ್ದಾರೆ. ನಾನು ಈಗಾಗಲೇ ಪ್ರಚಾರದಲ್ಲಿ ತೊಡಗಿರುವೆ. ಕಾರ್ಯಕರ್ತರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ದೊಡ್ಡನಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT