ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡವನ್ನು ಪ್ರೀತಿಸಿ’

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಉದ್ವೇಗ’, ‘ಒತ್ತಡ’ ಎನ್ನುವುದು ಎಲ್ಲರ ಅನುಭವದಲ್ಲಿರುವ ನಿಜ. ‘ಒತ್ತಡ’ ಎಂಬ ಮೂರಕ್ಷರದ ಪದವೇ ಒತ್ತಡದ ಅನುಭವವನ್ನು ಉಂಟು ಮಾಡುತ್ತದೆ! ಸಂಕ್ಷಿಪ್ತವಾಗಿ ವಿವರಿಸುವುದಿದ್ದರೆ, ನಾವು ಏನಾದರೊಂದು ಕ್ರಿಯೆಯನ್ನು ಮಾಡಲೇಬೇಕಾಗಿರುವ ಮತ್ತು ಮಾಡದೆಯೂ ಇರಬಹುದು ಎನ್ನುವ ಆಯ್ಕೆಯೇ ಇಲ್ಲದಿರುವ ಸಂದರ್ಭದ ಮನಃಸ್ಥಿತಿಯನ್ನು ‘ಒತ್ತಡದ ಮನಃಸ್ಥಿತಿ’ ಎನ್ನಬಹುದು. ಹಾ! ತಕ್ಕಮಟ್ಟಿಗೆ ವಿವರಣೆಯೊಂದು ದೊರಕಿತು ಎಂದಾಗ ಮನಸ್ಸು ನಿರಾಳವಾಯಿತು... ಇದೊಂದು ಆಶ್ಚರ್ಯ!

ಒತ್ತಡವನ್ನು ವಿವರಿಸಲು ಹೊರಡುವಾಗ ಆ ವಿವರಣೆಯಲ್ಲಿ ಒತ್ತಡವು ತನ್ನನ್ನೇ ಕಳೆದುಕೊಂಡು ಬಿಡುತ್ತದೆ. ಅಂದರೆ ನಮ್ಮನ್ನು ಕಟ್ಟಿಹಾಕಿದ ಆಲೋಚನೆಗಳನ್ನು ವಿಭಿನ್ನ ರೀತಿಗಳಲ್ಲಿ ವಿವರಿಸಿಕೊಳ್ಳುವುದರಿಂದ ಯೋಚನೆಗಳ ಕಟ್ಟು ಸಡಿಲಗೊಳ್ಳುತ್ತದೆ. ಆಗ ಮನಸ್ಸಿನ ಜಾಗ ಅಥವಾ ಸ್ಪೇಸ್‌ ವಿಸ್ತಾರಗೊಳ್ಳುತ್ತದೆ. ವಿಸ್ತಾರಗೊಳ್ಳುತ್ತಿದ್ದಂತೆಯೇ ಖಾಲಿ ಜಾಗಗಳು ಕಾಣತೊಡಗುತ್ತವೆ! ನಮ್ಮ ಆಲೋಚನೆಗಳನ್ನು ಅತಿಯಾಗಿ ಹಚ್ಚಿಕೊಂಡಿದ್ದರಿಂದ ಈ ಖಾಲಿ ಜಾಗಗಳೆಲ್ಲ ಮರೆಯಾಗಿದ್ದವು. ಯಾವಾಗ ಖಾಲಿ ಜಾಗವನ್ನು ಕಾಣುತ್ತೇವೆಯೋ ಆಗ ವಿಶ್ರಾಂತಿಯ ಅನುಭವವಾಗುತ್ತದೆ. ಆಲೋಚನೆಗಳನ್ನು ನಂಬಿದ್ದರಿಂದ ಬದುಕೆಲ್ಲ ದೊಡ್ಡದೊಂದು ಕ್ರಿಯಾ ಕಲಾಪ – ಕರ್ಮಕಾಂಡ ಎಂಬ ಭ್ರಾಂತಿ. ಬದುಕು – ಕ್ರಿಯೆಯೂ ಹೌದು; ವಿಶ್ರಾಂತಿಯೂ ಹೌದು. ನಾನು ಎಲ್ಲವನ್ನೂ ಬೇರೊಂದು ರೀತಿಯಲ್ಲಿ ವಿವರಿಸಿಕೊಳ್ಳುವ ಹಾದಿಯಲ್ಲಿರುವವನು. ಆದರೆ, ಅದು ಇನ್ನೊಬ್ಬರಿಗಲ್ಲ, ನನಗೇ ವಿವರಿಸಿಕೊಳ್ಳುವುದು.

ಮನುಷ್ಯನಿಗೆ ಒತ್ತಡ ಉಂಟಾಗುವುದು ಒಂದು ರೀತಿಯಲ್ಲಿ ಒಳ್ಳೆಯದೇ. ಖಂಡಿತವಾಗಿಯೂ ಅದು ಕಾಯಿಲೆಯಲ್ಲ. ಅದೊಂದು ವಿಶಿಷ್ಟ ಸಂಗತಿ. ಅದು ನಮ್ಮ ಕೈಯಲ್ಲಿ ಆಲೋಚನೆಯನ್ನು ಮಾಡಿಸುತ್ತಿದೆ. ನಮ್ಮಲ್ಲಿನ ಸೃಜನಶೀಲ ಪ್ರತಿಭೆಯ ಪರಿಚಯ ಆಗುವುದು ಒತ್ತಡದ ಸಂದರ್ಭಗಳಲ್ಲೇ. ಮನುಷ್ಯನ ಮನಸ್ಸಿನಲ್ಲಿ ಒತ್ತಡವು ಉಂಟು ಮಾಡುವ ಏರುಪೇರು, ಆತನಿಂದ ಉತ್ತಮ ಸಾಧನೆಯನ್ನು ಮಾಡಿಸುತ್ತದೆ. ಹಾಗಾಗಿ ನಾವು ಅದನ್ನು ಪ್ರೀತಿಸಬೇಕಾಗುತ್ತದೆ.

ನನ್ನ ಪ್ರಕಾರ, ಒತ್ತಡವೆಂಬುದು ವರವೇ ಹೊರತು ಶಾಪವಲ್ಲ. ಈ ಎರಡು ವಿಷಯಗಳೂ ಇದರಲ್ಲಿ ಹದವಾಗಿ ಬೆರೆತಿದೆ. ಪ್ರತಿ ಸಾಧನೆಯ ಹಿಂದೆ ನೋವು ಇದ್ದೇ ಇರುತ್ತದೆ. ‌ನೋವು ಅನುಭವಿಸಲು ತಯಾರಿಲ್ಲದವರಿಗೆ ಸಾಧ್ಯತೆ ಅಥವಾ ಸಾಧನೆಯ ಪರಿಚಯವಾಗುವುದಿಲ್ಲ. ಇದೊಂದು ರೀತಿಯ ಮನೋವ್ಯಾಪಾರ. ಅದನ್ನು ಕಾಯಿಲೆ ಎಂದು ನೋಡುವ ದೃಷ್ಟಿಕೋನ ಬದಲಾಗಬೇಕು. ಒತ್ತಡಕ್ಕೆ ಒಳಗಾಗಿ ನಂತರ ನೀವು ರಿಲ್ಯಾಕ್ಸ್‌ ಆಗಿಲ್ಲ ಎಂದರೆ ಅದು ರೋಗ. ಒತ್ತಡಕ್ಕೆ ಸಿಲುಕುವುದು, ಅದರಿಂದ ಪಾರಾಗುವುದು (ರಿಲ್ಯಾಕ್ಸೇಷನ್‌) – ಎರಡೂ ಪರಸ್ಪರ ಸಾಪೇಕ್ಷ ಸಂಗತಿಗಳು.

ನನಗೂ ಒತ್ತಡದ ಸಂದರ್ಭಗಳು ಎದುರಾಗಿವೆ. ಆದರೆ, ಎಲ್ಲದಕ್ಕಿಂತ ಹೆಚ್ಚಾಗಿ ನಾನು ಒತ್ತಡಕ್ಕೆ ಒಳಗಾಗುವುದು ಬರೆಯಲು ಒಪ್ಪಿಕೊಂಡ ಲೇಖನಗಳನ್ನು ಅಕ್ಷರರೂಪಕ್ಕೆ ಇಳಿಸಲು ಹೊರಟಾಗ. ನನ್ನದೇ ಒಂದು ಮಾತು ನನ್ನಲ್ಲಿ ಮೂಡದೆ, ಮುಂದಿನ ವಾಕ್ಯಗಳು ನನ್ನಿಂದ ಹೊರಡವು. ಹೋ! ಆ ಒಂದು ಮಾತಿಗೆ ಎಷ್ಟು ಕಾಯಬೇಕು! ಅದಕ್ಕಾಗಿ ತಳಮಳಿಸುತ್ತಾ ಕಾಯುತ್ತಿರುತ್ತೇನೆ. ಕೆಲವು ಬಾರಿ ಮಾತುಗಳು ಅನಿರೀಕ್ಷಿತವಾಗಿ ಹುಟ್ಟುವುದೂ ಇದೆ. ಒಮ್ಮೆ ಹೊಳಹು ಸಿಕ್ಕಿದರೆ ಅದು ನೀಡುವ ಥ್ರಿಲ್‌ ಅಷ್ಟಿಷ್ಟಲ್ಲ!

ಕಾಲ ಬದಲಾದಂತೆ ಒತ್ತಡದ ರೂಪವೂ ಬದಲಾಗಿದೆ. ನನ್ನ ಅನುಭವದಲ್ಲಿ ಹೇಳುವುದಾದರೆ – ಹಿಂದಿನ ತಲೆಮಾರಿನಲ್ಲಿ ವಿರಾಮದ ಒತ್ತಡವಿತ್ತು. ವಿಶ್ರಾಂತಿಯೇ ಸಮಸ್ಯೆಯಾಗಿತ್ತು. ಅದು ಹಲವು ಸಮಸ್ಯೆಗಳಿಗೂ ಕಾರಣವಾಗಿತ್ತು. ಈಗಿನ ತಲೆಮಾರಿನಲ್ಲಿ ಕೆಲಸವೇ ಒತ್ತಡವಾಗಿಬಿಟ್ಟಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT