ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಸಾರಿನಲ್ಲೂ ಕನ್ನಡತನ...

Last Updated 16 ಜೂನ್ 2018, 9:47 IST
ಅಕ್ಷರ ಗಾತ್ರ

ಚಿಕನ್ ಎಂದರೆ ಮಾಂಸಾಹಾರಿಗಳ ಬಾಯಲ್ಲಿ ನೀರೂರಲು ಆರಂಭಿಸುತ್ತದೆ. ಅದರಲ್ಲೂ ಈಗ ಮಳೆಗಾಲ; ಹೊರಗಡೆ ತಣ್ಣನೆ ಮಳೆ ಸುರಿಯುತ್ತಿದ್ದರೆ, ಒಳಗೆ ಕುಳಿತು ಚಿಕನ್ ಖಾದ್ಯಗಳನ್ನು ಮೆಲ್ಲುತ್ತಿದ್ದರೆ ಅದರ ಸುಖವೇ ಬೇರೆ! ಚಿಕನ್ ಪ್ರಿಯರ ಅತಿ ನೆಚ್ಚಿನ ಖಾದ್ಯವಾದ ದಮ್‌ ಬಿರಿಯಾನಿ, ಪಾಲಕ್ ಚಿಕನ್‌, ಚಿಕನ್ ಚಾಪ್ಸ್ ಮುಂತಾದವುಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿಕೊಂಡು ತಿನ್ನಬಹುದು ಎನ್ನುವ ಜೋಹ್ನಾ ಜೋಶುವ ಈ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಿದ್ದಾರೆ.

ಪಾಲಾಕ್‌ ಚಿಕನ್‌
ಬೇಕಾಗುವ ಸಾಮಗ್ರಿಗಳು: ಚಿಕನ್‌ – 1/2ಕೆ.ಜಿ., ಈರುಳ್ಳಿ – 1ಮಧ್ಯಮ ಗಾತ್ರದ್ದು, ಟೊಮೆಟೊ – 1ಮಧ್ಯಮ ಗಾತ್ರದ್ದು, ಪಾಲಾಕ್‌ ಎಲೆಗಳು – 20, ಹಸಿಮೆಣಸಿನಕಾಯಿ – 5, ಅರಿಸಿನಪುಡಿ – 4ಟೀ ಚಮಚ, ಕಾರದಪುಡಿ – 1ಟೀ ಚಮಚ, ಗರಂಮಸಾಲ – 4ಟೀ ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ನಿಂಬೆಹಣ್ಣಿನ ರಸ – 1ಟೀ ಚಮಚ, ಉಪ್ಪು.


ಪಾಲಾಕ್‌ ಚಿಕನ್‌

ತಯಾರಿಸುವ ವಿಧಾನ: ಮೊದಲು ಪಾಲಾಕ್‌ ಸೊಪ್ಪನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿ ಇಟ್ಟುಕೊಳ್ಳಿ. ಟೊಮೆಟೊವನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಚಿಕನ್‌ ಮಾಂಸವನ್ನು ಚೆನ್ನಾಗಿ ತೊಳೆದು ಬದಿಯಲ್ಲಿ ಇಟ್ಟುಕೊಳ್ಳಿ.

ಒಂದು ಪಾತ್ರೆಯಲ್ಲಿ ಪಾಲಕ್‌ಸೊಪ್ಪು ಮುಳುಗುವಷ್ಟು ನೀರನ್ನು ಇಟ್ಟು, ಅದಕ್ಕೆ ಸ್ವಲ್ಪ ಅರಿಸಿನಪುಡಿ ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನಂತರ ನೀರು ಸೋಸಿದ ಮೇಲೆ ತಣ್ಣಗಾಗಲು ಬಿಡಿ.
ಇನ್ನೊಂದು ಕಡಾಯಿಯಲ್ಲಿ ಎಣ್ಣೆ ಹಾಕಿ, ಸ್ವಲ್ಪ ಈರುಳ್ಳಿ ಹಾಕಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಸ್ವಲ್ಪ ಟೊಮೆಟೊ ಹಾಕಿ ಸೌಟಿನಲ್ಲಿ ಅಲ್ಲಾಡಿಸಿ. ಸ್ಟೌವನ್ನು ಆರಿಸಿದ ಮೇಲೆ ಸ್ವಲ್ಪ ತಣ್ಣಗಾಗಲು ಬಿಡಿ.

ತಣ್ಣಗಾದ ನಂತರ ಪಾಲಾಕ್‌ ಸೊಪ್ಪು, ಹಸಿಮೆಣಸಿನಕಾಯಿ, ಫ್ರೈ ಮಾಡಿದ ಈರುಳ್ಳಿ ಮತ್ತು ಟೊಮೆಟೊವನ್ನು ಮಿಕ್ಸಿಯಲ್ಲಿ ಹಾಕಿ ನೀರಿಲ್ಲದೆ ರುಬ್ಬಿ ಪೇಸ್ಟ್‌ ಮಾಡಿಕೊಳ್ಳಬೇಕು.

ನಂತರ ಅದೇ ಕಡಾಯಿಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಬಿಸಿಯಾದ ನಂತರ, ಈರುಳ್ಳಿ ಹಾಕಿ ಕೆಂಪುಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಅದಕ್ಕೆ ಟೊಮೆಟೊ ಹಾಕಿ ಎಣ್ಣೆ ಬಿಡುವತನಕ ಸೌಟಿನಲ್ಲಿ ಅಲ್ಲಾಡಿಸಬೇಕು. ಇದಕ್ಕೆ ತೊಳೆದ ಮಾಂಸವನ್ನು ಹಾಕಿ ನೀರು ಬಿಡುವತನಕ 4-5 ನಿಮಿಷ ಸೌಟಿನಲ್ಲಿ ಅಲ್ಲಾಡಿಸಬೇಕು. ಅದಕ್ಕೆ ಸ್ವಲ್ಪ ಉಪ್ಪು, ಅರಿಸಿನಪುಡಿ, ಕಾರದಪುಡಿ ಮತ್ತು ಗರಂಮಸಾಲ ಹಾಕಿ ಕಲೆಸಬೇಕು. ನಂತರ ಕಡಾಯಿಗೆ ಮುಚ್ಚಳ ಹಾಕಿ 2 ನಿಮಿಷ ಕುದಿಯಲು ಬಿಡಿ. ನಂತರ ಇದಕ್ಕೆ ಪಾಲಾಕ್‌ ಪೇಸ್ಟನ್ನು ಹಾಕಬೇಕು. ಇದರ ಹಸಿವಾಸನೆ ಹೋಗುವ ತನಕ ಸೌಟಿನಲ್ಲಿ ಕಲೆಸುತ್ತಿರಬೇಕು. ನಿಮ್ಮ ಅಳತೆಗೆ ಬೇಕಾಗುವಷ್ಟು ಸ್ವಲ್ಪ ನೀರನ್ನು ಸೇರಿಸಬಹುದು. ಕಡಾಯಿಗೆ ಮುಚ್ಚಳ ಹಾಕಿ ಸಣ್ಣ ಉರಿಯಲ್ಲಿ 10-15 ನಿಮಿಷ ಬೇಯಲು ಬಿಡಿ.
ಚಿಕನ್‌ ಬೆಂದ ನಂತರ, ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿಸೊಪ್ಪನ್ನು ಅದರ ಮೇಲೆ ಹರಡಿ. ಇದಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಬಹುದು. ಈಗ ಬಿಸಿ ಬಿಸಿಯಾದ ಪಾಲಾಕ್‌ ಚಿಕನ್ ತಿನ್ನಲು ರೆಡಿ. ಇದನ್ನು ಅಕ್ಕಿ ರೊಟ್ಟಿ, ಚಪಾತಿ, ನಾನ್‌ ಅಥವಾ ಪರೋಟದೊಂದಿಗೆ ಸವಿಯಿರಿ.
*
ಕನ್ನಡ ಸ್ಟೈಲ್‌ ಕೋಳಿ ಸಾರು
ಬೇಕಾಗುವ ಸಾಮಗ್ರಿಗಳು: ಚಿಕನ್‌ – 4ಕೆ.ಜಿ., ಈರುಳ್ಳಿ – 2ಮಧ್ಯಮ ಗಾತ್ರದ್ದು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ – 2ಟೀ ಚಮಚ, ಟೊಮೆಟೊ – 3ಮಧ್ಯಮ ಗಾತ್ರದ್ದು, ದನಿಯಾಪುಡಿ – 1ಟೇಬಲ್‌ ಚಮಚ, ಅರಿಸಿನಪುಡಿ – 1ಟೀಚಮಚ, ಕೆಂಪು ಕಾರದಪುಡಿ – 1ಟೇಬಲ್‌ ಚಮಚ, ತುರಿದ ತೆಂಗಿನಕಾಯಿ – 1ಕಪ್‌, ಲವಂಗ – 3-4, ಚಕ್ಕೆ – 4ಇಂಚು ಉದ್ದ, ಗಸಗಸೆ – 2ಟೀ ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ಎಣ್ಣೆ – 3-4ಟೇಬಲ್‌ ಚಮಚ, ಉಪ್ಪು.


ಕನ್ನಡ ಸ್ಟೈಲ್‌ ಕೋಳಿ ಸಾರು

ತಯಾರಿಸುವ ವಿಧಾನ: ಮಾಂಸವನ್ನು ಚೆನ್ನಾಗಿ ತೊಳೆದು, ನೀರನ್ನು ಹಿಂಡಿ ಒಂದು ಕಡೆ ಇಟ್ಟುಕೊಳ್ಳಿ. ಒಂದು ಕಡಾಯಿಯಲ್ಲಿ ಎಣ್ಣೆಯಿಲ್ಲದೆ ಚಕ್ಕೆ, ಲವಂಗವನ್ನು ಹುರಿದು ಬದಿಯಲ್ಲಿ ಇಟ್ಟುಕೊಳ್ಳಿ. ಅದೇ ಕಡಾಯಿಯಲ್ಲಿ ಗಸಗಸೆಯನ್ನು ಸಹ ಎಣ್ಣೆಯಿಲ್ಲದೆ ಹುರಿಯಿರಿ. ಅದರ ಬಣ್ಣ ಸ್ವಲ್ಪ ಬದಲಾದ ತಕ್ಷಣ ಒಲೆಯಿಂದ ಇಳಿಸಿ ಆರಲು ಬಿಡಿ. ನಂತರ ಸ್ವಲ್ಪ ತರಿತರಿಯಾಗಿ ಪುಡಿಮಾಡಿ ಇಟ್ಟುಕೊಳ್ಳಿ.
ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಕತ್ತರಿಸಿದ ಈರುಳ್ಳಿಯನ್ನು ಕೆಂಪು ಬಣ್ಣ ಹುರಿಯಿರಿ. ಇದು ಆರಿದ ನಂತರ ಗಸಗಸೆ, ಹುರಿದ ಚಕ್ಕೆ, ಲವಂಗ, ತುರಿದ ತೆಂಗಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮತ್ತು ಈರುಳ್ಳಿಯನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರಿನೊಂದಿಗೆ ಪೇಸ್ಟ್‌ ಮಾಡಿ ಇಟ್ಟುಕೊಳ್ಳಬೇಕು.
ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದರಲ್ಲಿ ತೊಳೆದ ಚಿಕನ್‌ ಮಾಂಸವನ್ನು ಹಾಕಬೇಕು. ಅದರ ನೀರು ಬಿಡುವ ತನಕ ಸೌಟಿನಲ್ಲಿ ಅಲ್ಲಾಡಿಸಬೇಕು. ನಂತರ ನಾವು ಪೇಸ್ಟ್‌ ಮಾಡಿಟ್ಟುಕೊಂಡ ಮಸಾಲೆಯನ್ನು ಇದಕ್ಕೆ ಹಾಕಬೇಕು. ಇದಕ್ಕೆ ಸಣ್ಣಗೆ ಕತ್ತರಿಸಿದ ಟೊಮೆಟೊವನ್ನು ಮತ್ತು ಸ್ವಲ್ಪ ಉಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಮಾಂಸವನ್ನು ಬೇಯಿಸಬೇಕು. ಅರ್ಧ ಬೆಂದ ನಂತರ ಇನ್ನು ಸ್ವಲ್ಪ ನೀರನ್ನು ಹಾಕಿ ಕಡಾಯಿಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿಸೊಪ್ಪುನ್ನು ಅದರ ಮೇಲೆ ಹರಡಬಹುದು. ಇದನ್ನು ಅನ್ನ, ಅಕ್ಕಿ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ.
*
ಹೈದರಾಬಾದ್‌ ದಮ್‌ ಚಿಕನ್‌ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು: ಚಿಕನ್‌ – 4ಕೆ.ಜಿ., ಬಾಸುಮತಿ ಅಕ್ಕಿ – 3/4ಕೆ.ಜಿ., ಈರುಳ್ಳಿ – 3ಮಧ್ಯಮ ಗಾತ್ರದ್ದು, ಶುಂಠಿ-ಬೆಳ್ಳುಳ್ಳಿಪೇಸ್ಟ್‌ – 4ಚಮಚ, ಹಸಿಮೆಣಸಿನಕಾಯಿ – 4-5, ಕಾರದಪುಡಿ – 1ಟೇಬಲ್‌ ಚಮಚ, ಅರಿಸಿನಪುಡಿ – 1ಟೀ ಚಮಚ, ಗರಂ ಮಸಾಲ – 4ಟೀ ಚಮಚ, ಜೀರಿಗೆ – 1ಟೀ ಚಮಚ, ಪುದೀನ – 4ಕಟ್ಟು, ಕೊತ್ತಂಬರಿಸೊಪ್ಪು – 4ಕಟ್ಟು, ಮೊಸರು –1/2ಕಪ್, ಹಾಲು – 1/4ಕಪ್‌, ಕೇಸರಿ –ಸ್ವಲ್ಪ, ಎಣ್ಣೆ, ಉಪ್ಪು


ಹೈದರಾಬಾದ್‌ ದಮ್‌ ಚಿಕನ್‌ ಬಿರಿಯಾನಿ

ತಯಾರಿಸುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು, ಅರ್ಧಗಂಟೆ ನೆನೆಸಿಡಿ. ಮಾಂಸವನ್ನು ಚೆನ್ನಾಗಿ ತೊಳೆದು, ನೀರನ್ನು ಹಿಂಡಿ ಒಂದೆಡೆ ಇಟ್ಟುಕೊಳ್ಳಬೇಕು.
ಮೊದಲಿಗೆ ತೊಳೆದ ಕೊತ್ತಂಬರಿ ಸೊಪ್ಪು, ಪುದೀನ ಎಲೆಗಳು ಮತ್ತು ಹಸಿಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್‌ ಮಾಡಿಕೊಳ್ಳಬೇಕು. ಈ ಪೇಸ್ಟನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ, ಖಾರದ ಪುಡಿ, ಅರಿಸಿನಪುಡಿ, ಗರಂಮಸಾಲಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಮೊಸರು ಮತ್ತು ಸ್ವಲ್ಪ ಉಪ್ಪಿನೊಂದಿಗೆ ಚೆನ್ನಾಗಿ ಕಲೆಸಬೇಕು.

ಈಗ ಕಡಾಯಿಯಲ್ಲಿ ಎಣ್ಣೆ ಕಾದ ನಂತರ, ಈರುಳ್ಳಿ ಕೆಂಪಾಗುವವರೆಗೆ ಹುರಿದುಕೊಂಡು, ಅದಕ್ಕೆ ಮಾಂಸವನ್ನು ಹಾಕಬೇಕು. ಮಾಂಸದ ನೀರು ಬಿಡುವ ತನಕ ಸೌಟಿನಲ್ಲಿ ಅಲ್ಲಾಡಿಸಿ. ನಂತರ ಇದಕ್ಕೆ ಮಿಶ್ರಣ ಮಾಡಿದ ಮಸಾಲೆ ಪೇಸ್ಟನ್ನು ಹಾಕಿ, ಬೇಯಲು ಬಿಡಬೇಕು.
ಅಕ್ಕಿಯನ್ನು ನೆನೆಸಿದ ಪಾತ್ರೆಯಲ್ಲಿ ಸ್ವಲ್ಪ ಅರಿಸಿನಪುಡಿ, ಸ್ವಲ್ಪ ಗರಂಮಸಾಲ, ಅಕ್ಕಿ ಬೇಯಲು ಬೇಕಾಗುವಷ್ಟು ನೀರನ್ನು ಹಾಕಿ ಅಕ್ಕಿಯನ್ನು ಬೇಯಿಸಿರಿ. ಅನ್ನ ಅರ್ಧ ಬೆಂದ ನಂತರ ನೀರನ್ನು ಬಸಿದು ಅನ್ನವನ್ನು ಬೇರೆ ತೆಗೆದಿಟ್ಟುಕೊಳ್ಳಬೇಕು.
ಈಗ ಅದೇ ಪಾತ್ರೆಯನ್ನು ಸಣ್ಣ ಉರಿಯಲ್ಲಿ ಇಟ್ಟು, ಮೊದಲು ಸ್ವಲ್ಪ ಅನ್ನ ಮತ್ತೆ ಸ್ವಲ್ಪ ಮಾಂಸ – ಹೀಗೆ ಒಂದಾದಮೇಲೆ ಒಂದರಂತೆ ತುಂಬುತ್ತಾ ಬರಬೇಕು. ಕೊನೆಯಲ್ಲಿ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅನ್ನದ ಮೇಲೆ ಹರಡಬೇಕು. ಮುಚ್ಚಳ ಮುಚ್ಚಿ 20-25 ನಿಮಿಷ ಹಬೆ ಬರುವತನಕ ಬೇಯಿಸಿದರೆ ಹೈದರಾಬಾದ್‌ ದಮ್‌ ಚಿಕನ್‌ ಬಿರಿಯಾನಿ ತಿನ್ನಲು ರೆಡಿ.
*
ಚಿಕನ್‌ ಚಾಪ್ಸ್‌
ಬೇಕಾಗುವ ಸಾಮಗ್ರಿಗಳು: ಚಿಕನ್‌ – 1/2ಕೆ.ಜಿ., ಈರುಳ್ಳಿ – 1ಮಧ್ಯಮ ಗಾತ್ರದ್ದು, ಬೆಳ್ಳುಳ್ಳಿ – 2ರಿಂದ 3ಎಳಸು, ಶುಂಠಿ – 1ಇಂಚು ಉದ್ದದ್ದು, ಹಸಿಮೆಣಸಿನಕಾಯಿ – 4-5, ಅರಿಸಿನಪುಡಿ – 1ಟೀ ಚಮಚ, ಕಾರದಪುಡಿ – 1ಟೀ ಚಮಚ, ದನಿಯಾಪುಡಿ – 1ಟೀ ಚಮಚ, ಕರಿಮೆಣಸು – 1ಟೇಬಲ್‌ ಚಮಚ, ತುರಿದ ತೆಂಗಿನಕಾಯಿ – 3ಟೇಬಲ್‌ ಚಮಚ, ಚಕ್ಕೆ – 1ಇಂಚು ಉದ್ದ, ಲವಂಗ – 3, ಕೊತ್ತಂಬರಿಸೊಪ್ಪು – 4ಕಪ್‌, ಎಣ್ಣೆ, ಉಪ್ಪು.

ತಯಾರಿಸುವ ವಿಧಾನ: ಮೊದಲು ಸಣ್ಣಗೆ ಕತ್ತರಿಸಿದ ಮಾಂಸವನ್ನು ತೊಳೆದು ಅರಿಸಿನಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಬೇಯಿಸುವ ಮುಂಚೆ ಅರ್ಧಗಂಟೆ ಅದ್ದಿಡಬೇಕು.
ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಬದಿಯಲ್ಲಿ ಇಟ್ಟುಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಕರಿಮೆಣಸು, ಚಕ್ಕೆ, ಲವಂಗ ಮತ್ತು ತುರಿದ ತೆಂಗಿನಕಾಯಿ ಹಾಕಿ ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿ ಪೇಸ್ಟ್‌ ಮಾಡಿ ಇಟ್ಟುಕೊಳ್ಳಬೇಕು.
ಈಗ ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯೊಂದಿಗೆ ಈರುಳ್ಳಿಯನ್ನು ಕೆಂಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು. ಅದಕ್ಕೆ ಮಸಾಲ ಪೇಸ್ಟನ್ನು ಹಾಕಿ ಅದರ ಹಸಿವಾಸನೆ ಹೋಗುವ ತನಕ ಹುರಿಯಬೇಕು. ಇದಕ್ಕೆ ದನಿಯಾಪುಡಿ ಹಾಕಿ ಸ್ವಲ್ಪ ಹುರಿಯಬೇಕು. ಈಗ ಮಾಂಸವನ್ನು ಹಾಕಿ ಅದರ ನೀರು ಬಿಡುವ ತನಕ ಸೌಟಿನಲ್ಲಿ ಅಲ್ಲಾಡಿಸಬೇಕು. ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ಸ್ವಲ್ಪ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಮುಚ್ಚಳ ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಬೇಕು. ಮಾಂಸ ಬೆಂದ ನಂತರ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪನ್ನು ಅದರ ಮೇಲೆ ಹರಡಬಹುದು. ಈಗ ಬಿಸಿಬಿಸಿಯಾಗಿ ಚಿಕನ್‌ ಚಾಪ್ಸ್ ತಿನ್ನಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT