ಅರಣ್ಯಾಧಿಕಾರಿಯೊಳಗಿನ ಛಾಯಾಚಿತ್ರಗ್ರಾಹಕ..!

7

ಅರಣ್ಯಾಧಿಕಾರಿಯೊಳಗಿನ ಛಾಯಾಚಿತ್ರಗ್ರಾಹಕ..!

Published:
Updated:
Deccan Herald

ವೃತ್ತಿಯಿಂದ ಅರಣ್ಯಾಧಿಕಾರಿ. ಪ್ರವೃತ್ತಿಯಿಂದ ಫೋಟೋಗ್ರಾಫರ್. ದೇಶ ಸುತ್ತಿ ಪಕ್ಷಿ, ಕಾಡು ಪ್ರಾಣಿ, ಪ್ರಕೃತಿ, ಸ್ಮಾರಕ ಸೇರಿದಂತೆ ಅಪರೂಪದ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದಿರುವ ಅಪರೂಪದ ಛಾಯಾಚಿತ್ರಗ್ರಾಹಕ ಆಲಮಟ್ಟಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೆ.ನಾಯಕ.

ಹಸನ್ಮುಖಿ. ಸಹನಾಶೀಲ. ಹೊಸ ತುಡಿತದ ಬೆನ್ನತ್ತಿರುವ ಪಿ.ಕೆ.ನಾಯಕ ಆಲಮಟ್ಟಿ ಭಾಗದಲ್ಲಿ ಹಸರೀಕರಣಕ್ಕೆ ಸದ್ದಿಲ್ಲದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಪರೂಪದ ಫೋಟೋಗ್ರಾಫಿ ಮಾಡಿದ್ದರೂ; ಬೀಗುವ ಜಾಯಮಾನವಲ್ಲ.

ಫೋಟೋಗ್ರಾಫಿ ಹವ್ಯಾಸವುಳ್ಳ ಸ್ನೇಹಿತರ ಜತೆ ಕಾಶ್ಮೀರದ ಲಡಾಖ್‌, ಶ್ರೀನಗರ, ಕಾರ್ಗಿಲ್‌, ಲುಬ್ರಾ ವ್ಯಾಲಿ, ಅಂಡಮಾನ್‌ ನಿಕೋಬಾರ್‌ ಸೇರಿದಂತೆ ದೇಶ ಸುತ್ತಿ ಅದ್ಭುತ ಎನಿಸುವ ಫೋಟೋಗಳನ್ನು ಸೆರೆಹಿಡಿದಿರುವುದು ಇವರ ಹಿರಿಮೆ.

‘ಫೋಟೋಗ್ರಾಫಿಗೆ ಸಹನಶೀಲತೆ ಬೇಕಿದೆ. ಒಂದೊಂದು ಫೋಟೋಗಾಗಿ ಒಂದೇ ಕಡೆ ಎರಡ್ಮೂರು ದಿನ ಕಾದಿದ್ದಿದೆ. ಹುಲಿ ಚಿತ್ರ ತೆಗೆಯಲು ಹರಸಾಹಸ ಪಟ್ಟಿದ್ದಿದೆ. ಲಡಾಖ್‌ನ ಫೋಟೋ ತೆಗೆಯಲು ಹಲವಾರು ಕಿ.ಮೀ. ಸುತ್ತಿತ್ತಿದೆ. ನೂರಾರು ಫೋಟೋಗಳನ್ನು ತೆಗೆದಾಗ ಒಂದೆರೆಡು ಫೋಟೋ ಮಾತ್ರ ಅಪರೂಪ ಎನಿಸುತ್ತವೆ’ ಎನ್ನುತ್ತಾರೆ ನಾಯಕ.

ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಇವರು, ವಿಜಯಪುರದ ಸ್ಮಾರಕಗಳ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ಆಲಮಟ್ಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಆಲಮಟ್ಟಿಯ ಸುತ್ತಮುತ್ತಲಿನ ಪರಿಸರದ ಫೋಟೋ ಸೆರೆ ಹಿಡಿಯುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ.

‘ಏಳು ವರ್ಷಗಳಿಂದಲೂ ಫೋಟೋ ತೆಗೆಯುವುದನ್ನೇ ಹವ್ಯಾಸವನ್ನಾಗಿ ಬೆಳೆಸಿಕೊಂಡಿದ್ದೇನೆ, ಅರಣ್ಯ ಅಧಿಕಾರಿಯಾಗಿದ್ದು, ಹೆಚ್ಚಿನ ಅವಕಾಶ ಲಭ್ಯವಾಗಿವೆ. ನನ್ನ ಸಹನಶೀಲ ಗುಣವೇ ಫೋಟೋ ತೆಗೆಯಲು ಪ್ರೇರಣೆ’ ಎನ್ನುತ್ತಾರೆ ಅವರು.

‘ಮೊದಲು ದಟ್ಟ ಅರಣ್ಯದ ಮಧ್ಯೆ ಇರುವ ಕಾಡು ಪ್ರಾಣಿಗಳ ಚಿತ್ರ ಸೆರೆ ಹಿಡಿಯಲು ಆರಂಭಿಸಿದೆ. ನಂತರ ಲ್ಯಾಂಡ್‌ಸ್ಕೇಪ್ ಫೋಟೋಗ್ರಾಫಿ. ಪಶ್ಚಿಮ ಘಟ್ಟದಲ್ಲಿ ತಿರುಗಿ ಪ್ರಕೃತಿ ಚಿತ್ರ ಸೆರೆಹಿಡಿದೆ. ಹೊಸತನ್ನು ಸಾಧಿಸುವ ತುಡಿತ, ಹವ್ಯಾಸ ನನ್ನನ್ನು ಚೈತನ್ಯವಾಗಿಟ್ಟಿದೆ, ಸದಾ ನನ್ನ ಕ್ಯಾಮರಾ ಕಣ್ಣು ಜಾಗೃತವಾಗಿರುತ್ತದೆ’ ಎಂದರು.

ಐಪಾಡ್‌ನಲ್ಲಿ ಸಂಗ್ರಹ

ಇವರು ತೆಗೆದಿರುವ ಛಾಯಾಚಿತ್ರಗಳ ಸಂಗ್ರಹ ಅದ್ಭುತ. ಎಲ್ಲವನ್ನೂ ಡಿಜಟಲೀಕರಣಗೊಳಿಸಿ ಐಪಾಡ್‌ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಚಿತ್ರ ಪುಟ ತೆರೆದಂತೆ ಒಂದಕ್ಕಿಂತ ಒಂದು ಅದ್ಭುತ. ವರ್ಣನೆಗೆ ನಿಲುಕದ್ದು, ಆಲಮಟ್ಟಿಯ ರಾಕ್‌ ಉದ್ಯಾನದ ಪಕ್ಕದ ಚಿತ್ರ ನೋಡಿದಾಗ ಇದು ಆಲಮಟ್ಟಿಯೇ ಎಂದು ಎಲ್ಲರೂ ಅಚ್ಚರಿಗೊಳ್ಳುತ್ತಾರೆ. ಆಲಮಟ್ಟಿಯ ಸೂರ್ಯೋದಯ, ಹಿನ್ನೀರು, ಪಕ್ಷಿಗಳ ಚಿತ್ರಗಳು ಗಮನ ಸೆಳೆಯುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !