ಬುಧವಾರ, ಆಗಸ್ಟ್ 21, 2019
22 °C

‘ಪಿಂಕ್ ಬೇಬಿ’ ಬಾಂಡ್ ವಿತರಣೆ

Published:
Updated:
Prajavani

ಬೆಂಗಳೂರು: ಬಿಬಿಎಂಪಿ ಅಧೀನದ 19 ಹೆರಿಗೆ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ ಹುಟ್ಟಿದ ಮೊದಲ ಹೆಣ್ಣು ಮಗುವಿನ ಪೋಷಕರಿಗೆ ‘ಪಿಂಕ್ ಬೇಬಿ’ ಯೋಜನೆಯಡಿ ನೀಡುವ ₹ 5 ಲಕ್ಷ ಮೊತ್ತದ ಬಾಂಡ್‌ ಅನ್ನು ಮೇಯರ್ ಗಂಗಾಂಬಿಕೆ ಗುರುವಾರ ವಿತರಣೆ ಮಾಡಿದರು.

‘2018ರಲ್ಲಿ ವರ್ಷದ ಮೊದಲನೇ ದಿನ ಹುಟ್ಟಿದ ಒಂದು ಹೆಣ್ಣು ಮಗುವಿಗೆ ₹5 ಲಕ್ಷದ ಬಾಂಡ್ ವಿತರಿಸಲಾಗಿತ್ತು. 2019ರಲ್ಲಿ ಪಾಲಿಕೆ ಅಧೀನದ  24 ಆಸ್ಪತ್ರೆಗಳಲ್ಲಿ ಹುಟ್ಟುವ ಮೊದಲ ಹೆಣ್ಣು ಮಕ್ಕಳಿಗೆಲ್ಲಾ ಈ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಪಾಲಿಕೆ ಬಜೆಟ್‍ನಲ್ಲಿ ₹1.20 ಕೋಟಿ ಮೀಸಲಿರಿಸಲಾಗಿದೆ’ ಎಂದು ಮೇಯರ್‌ ತಿಳಿಸಿದರು.

‘24 ಆಸ್ಪತ್ರೆಗಳ ಪೈಕಿ ಕಾವೇರಿಪುರ, ದಾಸಪ್ಪ ಹಾಗೂ ಯಶವಂತಪುರ ಹೆರಿಗೆ ಆಸ್ಪತ್ರೆಗಳನ್ನು ನವೀಕರಣ ಮಾಡಲಾಗುತ್ತಿದೆ. ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತೆಯಲ್ಲಿ ಹೆಣ್ಣು ಮಗು ಜನಿಸಿತ್ತಾದರೂ ಅದರ ಪೋಷಕರು ಹೊರರಾಜ್ಯದವರು. ಅವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಮೂಡಲಪಾಳ್ಯ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪೋಷಕರು ಪಾಲಿಕೆಗೆ ಸಲ್ಲಿಸಿಲ್ಲ. ಹಾಗಾಗಿ 19 ಫಲಾನುಭವಿಗಳಿಗೆ ಮಾತ್ರ ಬಾಂಡ್ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಹೆಣ್ಣು ಮಗುವಿಗೂ ಶಿಕ್ಷಣ ಸಿಗಬೇಕು, ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕೆಂಬ ಉದ್ದೇಶದಿಂದ ‘ಪಿಂಕ್ ಬೇಬಿ’ ಯೋಜನೆ ಆರಂಭಿಸಲಾಗಿದೆ. ಠೇವಣಿಯಿಂದ
ಬರುವ ಬಡ್ಡಿ ಹಣವನ್ನು ಮಗುವಿನ ವಿದ್ಯಾಭ್ಯಾಸಕ್ಕೆ ಉಪಯೋಗಿಸಬಹುದು. 18 ವರ್ಷ ತುಂಬಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಬಯಸಿದಲ್ಲಿ ಯೋಜನೆಯಡಿ ಇಟ್ಟಿರುವ ಸಂಪೂರ್ಣ ಠೇವಣಿ
ಮೊತ್ತವನ್ನು ಪೋಷಕರ ಖಾತೆಗೆ ವರ್ಗಾಯಿಸಲಾಗುವುದು. ಒಂದು ವೇಳೆ ಮಗುವಿಗೆ ಪೋಷಕರು ಶಿಕ್ಷಣ ಕೊಡಿಸದಿದ್ದರೆ ಠೇವಣಿ ಹಣವನ್ನು ಪಾಲಿಕೆ ಖಾತೆಗೆ ಹಿಂಪಡೆಯಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಪಾಲಿಕೆ ಅಧಿಕಾರಿಗಳು ನಗರ ತೊರೆಯುವಂತಿಲ್ಲ’

ಶನಿವಾರದಿಂದ ಮೂರು ದಿನಗಳ ಕಾಲ ಸರ್ಕಾರಿ ರಜೆ ಇದ್ದರೂ ಬಿಬಿಎಂಪಿ ಅಧಿಕಾರಿಗಳು ನಗರ ಬಿಟ್ಟು ಹೊರ ಹೋಗದಂತೆ ಮೇಯರ್ ಗಂಗಾಂಬಿಕೆ ಆದೇಶ ಮಾಡಿದ್ದಾರೆ. ‘ನಗರದಲ್ಲಿ ಇನ್ನು ನಾಲ್ಕೈದು ದಿನ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ ಅಧಿಕಾರಿಗಳು ಮಳೆಯಿಂದ ಅನಾಹುತ ಸಂಭವಿಸಿದರೆ, ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿರಬೇಕು’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Post Comments (+)