ಕ್ಯಾರಿ ಬ್ಯಾಗ್‌ ನಿಷೇಧಕ್ಕೆ ಕ್ಯಾರೇ ಎನ್ನದ ಜನ

7
ಗ್ರಾಹಕರಸ್ನೇಹಿ ಅಂತಾರೆ ವ್ಯಾಪಾರಿಗಳು : ಪರಿಸರ, ಆರೋಗ್ಯಕ್ಕೆ ಮಾರಕ ಅಂತಾರೆ ತಜ್ಞರು

ಕ್ಯಾರಿ ಬ್ಯಾಗ್‌ ನಿಷೇಧಕ್ಕೆ ಕ್ಯಾರೇ ಎನ್ನದ ಜನ

Published:
Updated:
Deccan Herald

ಬೆಂಗಳೂರು: ಕ್ಯಾರಿ ಬ್ಯಾಗ್‌ ಸೇರಿದಂತೆ ಕಳಪೆ ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿಷೇಧವಿದ್ದರೂ ನಗರದ ಜನ ಬಿಬಿಎಂಪಿಯ ಈ ಆದೇಶಕ್ಕೆ ಕಿಮ್ಮತ್ತನ್ನೇ ನೀಡುತ್ತಿಲ್ಲ. ಹೋಟೆಲ್‌ಗಳಲ್ಲಿ, ಅಂಗಡಿಗಳಲ್ಲಿ ಜೋತು ಬಿದ್ದಿರುವ ಕ್ಯಾರಿ ಬ್ಯಾಗ್‌ಗಳು ನಿಷೇಧ ಹೇಗೆ ಅನುಷ್ಠಾನಗೊಂಡಿದೆ ಎಂಬುದರ ಕಥೆ ಹೇಳುತ್ತಿವೆ.

ನಗರದ ಪ್ರತಿ ಮಾರುಕಟ್ಟೆಯಲ್ಲಿ ಹೂ–ಹಣ್ಣು–ತರಕಾರಿ ಮಾರುವವರು, ರಸ್ತೆ ಬದಿ ಊಟ–ತಿಂಡಿ ಮಾರುವವರಿಂದ ಹಿಡಿದು ಆಹಾರವನ್ನು ಕಟ್ಟಿಕೊಡುವ ದರ್ಶಿನಿಗಳು, ಮಾಂಸ ಮಾರಾಟ ಅಂಗಡಿಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೆ ಸಾಗಿದೆ.

ಕೆ.ಆರ್.ಮಾರುಕಟ್ಟೆಯಲ್ಲಿನ ಹೂಗಳು, ಶಿವಾಜಿನಗರದ ಮಾಂಸಾಹಾರಗಳು, ಮಲ್ಲೇಶ್ವರ ಬೀದಿಗಳಲ್ಲಿ ಮಾರುವ ಫ್ಯಾನ್ಸಿ ವಸ್ತುಗಳು, ಬನಶಂಕರಿ ಮಾರುಕಟ್ಟೆಯಲ್ಲಿನ ತರಹೇವಾರಿ ತರಕಾರಿಗಳು... ಹೀಗೆ ನಗರದ ಪ್ರಮುಖ ವ್ಯಾಪಾರ–ವಾಣಿಜ್ಯ ಕೇಂದ್ರಗಳಲ್ಲಿನ ಸರಕು–ಸರಂಜಾಮುಗಳು ಪ್ಲಾಸ್ಟಿಕ್‌ ಕೈಚೀಲಗಳಲ್ಲಿ ಕೂತೇ ಮನೆಗಳಿಗೆ ಹೋಗುತ್ತಿವೆ.

ಪ್ಲಾಸ್ಟಿಕ್‌ ಬ್ಯಾಗ್‌ ಹಾಗೂ ಸಾಮಗ್ರಿಯನ್ನು ಸರಿಯಾಗಿ ವಿಲೇವಾರಿ ಮಾಡದೆ, ಕಸದೊಂದಿಗೆ ಮಿಶ್ರಣ ಮಾಡುವ ಹಳೆಯ ಚಾಳಿ ಸಹ ಮುಂದುವರಿದಿದೆ. ರಾಜಕಾಲುವೆಗಳ ಒಡಲನ್ನೇ ತುಂಬಿ, ನೀರು ಹರಿಯಲು ಸ್ಥಳಾವಕಾಶ ಇಲ್ಲದಂತಾದರೂ ಪ್ಲಾಸ್ಟಿಕ್‌ನ ಮೋಹ ಕಡಿಮೆಯಾಗಿಲ್ಲ. 

‘ನಾನೊಬ್ಬ ಪ್ಲಾಸ್ಟಿಕ್‌ ಬಳಕೆ ಬಿಟ್ಟರೆ, ಇಡಿ ನಗರವೇ ಸ್ವಚ್ಛವಾಗುತ್ತದೆಯೇ? ಪ್ಲಾಸ್ಟಿಕ್‌ ಅನುಕೂಲಕರ ವಸ್ತು. ಆಫೀಸ್‌ನಿಂದ ಮನೆಗೆ ಹೋಗುವಾಗ, ಹಣ್ಣು–ತರಕಾರಿ, ಮಕ್ಕಳಿಗೆ ತಿನಿಸುಗಳನ್ನು ಇದರಲ್ಲಿ ಸುಲಭವಾಗಿ ಒಯ್ಯಬಹುದು’ ಎಂಬುದು ಕಗ್ಗದಾಸಪುರದ ಸ್ವಪನ್‌ ಕುಮಾರ್‌ ಮಾತು. 

‘ಸಂಜೆ ಬರುವಾಗ ಏನಾದರೂ ಕೊಳ್ಳುತ್ತೇವೆ ಎಂದು, ಪ್ರತಿದಿನ ಆಫೀಸ್‌ಗೆ ಬಟ್ಟೆಚೀಲ ತೆಗೆದುಕೊಂಡು ಹೋಗಲು ಆಗುತ್ತದೆಯೇ’ ಎಂದು ಕೇಳುತ್ತಾರೆ ಸ್ವಪನ್‌. ಅವರ ಈ ಪ್ರಶ್ನೆ ನಗರದ ಬಹುತೇಕರ ಮನೋಭಾವದ ಪ್ರತೀಕದಂತಿದೆ. ಆದ್ದರಿಂದಲೇ ಮನೆಯಿಂದ ಕೈಬೀಸಿಕೊಂಡು ಬಂದು, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ನಲ್ಲೇ ಸಾಮಗ್ರಿ ಒಯ್ಯುವ ನೋಟಗಳು ಹಾದಿ–ಬೀದಿಯಲ್ಲಿ ಸಿಗುತ್ತವೆ.

‘ಅಂಗಡಿಯಿಂದ ವಸ್ತುಗಳನ್ನು ತುಂಬಿ ತಂದ ಪ್ಲಾಸ್ಟಿಕ್‌ಗಳನ್ನು ನಾವೇನು ಹಾಗೆ ಬಿಸಾಡುವುದಿಲ್ಲ. ಅದರಲ್ಲಿ ಮನೆಯಲ್ಲಿ ಉಳಿದ ಕಸವನ್ನು ಶೇಖರಿಸಿ, ಕಸ ಸಂಗ್ರಹಿಸಲು ಬರುವ ಪೌರಕಾರ್ಮಿಕರಿಗೆ ನೀಡುತ್ತೇವೆ’ ಎಂದು ಬೆನ್ನಿಗಾನಹಳ್ಳಿಯ ಗೃಹಿಣಿ ಸುನೀತಾ ಹೇಳುತ್ತಾರೆ.

‘ಪ್ಲಾಸ್ಟಿಕ್‌ ಕೈಚೀಲ ಇಲ್ಲ ಎಂದರೆ, ಬಹುತೇಕ ಗ್ರಾಹಕರು ಹೂಗಳನ್ನು ಕೊಳ್ಳದೆ ಹೋಗುತ್ತಾರೆ’ ಎಂಬುದು  ಕೆ.ಆರ್‌.ಪುರದಲ್ಲಿ ಹೂವಿನ ವ್ಯಾಪಾರ ಮಾಡವ ಪವಿತ್ರಮ್ಮರ ಅನುಭವದ ಮಾತು.

‘ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಚೀಲ ಸಿಗುವವರೆಗೂ ಜನ ಬಳಸುತ್ತಾರೆ. ಸರ್ಕಾರ ಮೊದಲು ಪ್ಲಾಸ್ಟಿಕ್‌ ತಯಾರಿಕಾ ಕಾರ್ಖಾನೆಗಳನ್ನೆ ಮುಚ್ಚಿಸಲಿ’ ಎಂದು ಚರ್ಚ್‌ ಸ್ಟ್ರೀಟ್‌ನಲ್ಲಿರುವ ಹೊಟೇಲ್‌ ಸಿಬ್ಬಂದಿ ಕ್ಯಾರಿ ಬ್ಯಾಗ್‌ನಲ್ಲಿ ಊಟವನ್ನು ಪಾರ್ಸಲ್‌ ಕಟ್ಟಿಕೊಡುತ್ತಲೇ ಪ್ರತಿಕ್ರಿಯಿಸುತ್ತಾರೆ.

ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳು

ಪ್ಲಾಸ್ಟಿಕ್‌ನಿಂದ ತಯಾರಾದ ಕ್ಯಾರಿಬ್ಯಾಗ್‌, ಭಿತ್ತಿಪತ್ರ, ತೋರಣ, ಫ್ಲೆಕ್ಸ್‌, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್‌ ಫಿಲ್ಮ್ಸ್‌, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಥರ್ಮೊಕೋಲ್‌. ಈ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಮಾರಾಟ ಮತ್ತು ವಿತರಣೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ದಂಡ ವಿಧಿಸಲು ಆ್ಯಪ್‌

ನಿಷೇಧಿತ ಪ್ಲಾಸ್ಟಿಕ್‌ ಬಳಸುವ ಸಾರ್ವಜನಿಕರಿಂದ ಆರೋಗ್ಯ ನಿರೀಕ್ಷಕರು ಮತ್ತು ವೈದ್ಯಕೀಯ ಅಧಿಕಾರಿಗಳು ದಂಡ ಸಂಗ್ರಹಿಸಲು ಪಾಲಿಕೆ ಆ್ಯಪ್‌ ರೂಪಿಸಿದೆ.

‘ನಿಷೇಧಿತ ಪ್ಲಾಸ್ಟಿಕ್‌ನ ಫೋಟೊಗಳನ್ನು ಈ ಆ್ಯಪ್‌ನಿಂದ ಕ್ಲಿಕ್ಕಿಸಿ, ಅವುಗಳನ್ನು ಬಳಸುತ್ತಿರುವ ವ್ಯಕ್ತಿಗೆ ಸ್ಥಳದಲ್ಲಿಯೇ ದಂಡ ವಿಧಿಸಬಹುದು. ದಂಡದ ಚಲನ್ ಅನ್ನು ಆನ್‌ಲೈನ್‌ನಲ್ಲೇ ಸೃಜಿಸಬಹುದು. ಅದನ್ನು ಪ್ಲಾಸ್ಟಿಕ್‌ ಬಳಕೆದಾರರಿಗೂ (ತಪ್ಪಿತಸ್ಥರು) ರವಾನಿಸಬಹುದು. ಆ ಮಾಹಿತಿ ಸಾಫ್ಟ್‌ವೇರ್‌ನಲ್ಲಿ ಶೇಖರಣೆ ಆಗುತ್ತದೆ. ದಂಡ ಪಾವತಿ ಆಯ್ಕೆಗಳು ಆ್ಯಪ್‌ನಲ್ಲೇ ಇರುತ್ತವೆ. ಹಾಗಾಗಿ ಅಧಿಕಾರಿಗಳು ವಿವೇಚನೆ ಬಳಸಿ ದಂಡದ ಮೊತ್ತ ನಿರ್ಧರಿಸುವುದಿಲ್ಲ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ದಂಡ ವಿಧಿಸಲು ಬೇಕಾದ ಗುಣಮಟ್ಟದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿಸಲು ಸಹ ಪಾಲಿಕೆ ಚಿಂತನೆ ನಡೆಸಿದೆ’ ಎಂದು ಹೇಳಿದರು.

ಕೆಲವೆಡೆ ಬಳಕೆ ಇಳಿಕೆ

ನಗರವಾಸಿಗಳಲ್ಲಿ ಮೂಡುತ್ತಿರುವ ಪರಿಸರದ ಅರಿವು ಮತ್ತು ಕಾನೂನು ಕಟ್ಟಳೆಗಳ ಜಾರಿಯ ಪ್ರಯತ್ನಗಳಿಂದಾಗಿ ಕೆಲವು ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್‌ ಕಸದ ರಾಶಿ ಕುಗ್ಗುತ್ತಿದೆ. ಒಣಕಸ ಸಂಗ್ರಹ ಕೇಂದ್ರಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಈ ಮಾಹಿತಿಯನ್ನು ಹೊರಹಾಕಿದೆ.

ಹಸಿರು ದಳ ಸ್ವಯಂಸೇವಾ ಸಂಸ್ಥೆ ನಡೆಸುತ್ತಿರುವ 12 ಒಣಕಸ ಸಂಗ್ರಹ ಕೇಂದ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದರ ಪ್ರಕಾರ 2016ರಲ್ಲಿ ಕಸ ಸಂಗ್ರಹ ಕೇಂದ್ರಗಳಲ್ಲಿ ಪ್ರತಿ ತಿಂಗಳು 1.45 ಟನ್‌ನಷ್ಟು ಒಂದೇ ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಕಸ ಸಂಗ್ರಹವಾಗುತ್ತಿತ್ತು. 2017ರಲ್ಲಿ ಅದು 1.63 ಟನ್‌ಗೆ ಏರಿಕೆಯಾಗಿತ್ತು. ಆದರೆ, ಈ ವರ್ಷ ಪ್ಲಾಸ್ಟಿಕ್‌ ತ್ಯಾಜ್ಯ ಅರ್ಧ ಟನ್‌ಗೆ ಇಳಿಕೆಯಾಗಿದೆ.

 

***

ಪ್ಲಾಸ್ಟಿಕ್‌ಗಳಲ್ಲಿ ಆಹಾರ ಕಟ್ಟಿದಾಗ, ಅದರಲ್ಲಿ ಕ್ಯಾನ್ಸರ್‌ ಕಾರಕಗಳು ಉತ್ಪತ್ತಿಯಾಗುತ್ತವೆ. ಇವು ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ

–ಟಿ.ವಿ.ರಾಮಚಂದ್ರ , ಐಐಎಸ್ಸಿ ವಿಜ್ಞಾನಿ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !