ವಿಶೇಷ ಆಪ್ತಸಮಾಲೋಚನೆಗೆ ‘ಪ್ಲೆಜ್’

7

ವಿಶೇಷ ಆಪ್ತಸಮಾಲೋಚನೆಗೆ ‘ಪ್ಲೆಜ್’

Published:
Updated:
Deccan Herald

‘ಪ್ರತಿಯೊಬ್ಬರೂ ಪ್ರತಿಭಾಶಾಲಿ ಆಗಿರುತ್ತಾರೆ. ಆದರೆ, ಮೀನಿಗೆ ಮರ ಹತ್ತುವ ಕೆಲಸ ಕೊಟ್ಟರೆ, ಅದು ತನ್ನ ಜೀವಮಾನವಿಡೀ ‘ಈ ಕೆಲಸ ನನ್ನಿಂದಾಗದು. ನಾನು ಅಸಮರ್ಥ’ ಎಂದು ಕೊರಗುತ್ತಿರುತ್ತದೆ. ಆಯಾ ವ್ಯಕ್ತಿ ಅಥವಾ ಮಗುವಿನ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕೆಲಸ ನೀಡಿದಾಗ ಅವರ ನೈಜ ಪ್ರತಿಭೆ ಹೊರಹೊಮ್ಮಲು ಸಾಧ್ಯ’ ಎಂಬ ಐನ್‌ಸ್ಟೈನ್‌ ಅವರ ಮಾತಿನಂತೆ ನಾವು ನಡೆದುಕೊಂಡಾಗ ಮಾತ್ರ ಪ್ರತಿ ವಿಶೇಷ ಮಗುವೂ ತನ್ನ ಪ್ರತಿಭೆ ತೋರಿ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎನ್ನುತ್ತಾರೆ ‘ಪ್ಲೆಜ್ ಅಕಾಡೆಮಿ’ ಸಂಸ್ಥಾಪಕಿ ಜೆನಿಫರ್ ಟಾವರೇಸ್.

ವೃತ್ತಿಯಲ್ಲಿ ನರ್ಸ್‌ ಆಗಿದ್ದ ಜೆನಿಫರ್ ಅವರ ಮಗಳು ಜಿಸೆಲ್ ಕೂಡ ನಿಧಾನ ಗತಿಯ ಕಲಿಕಾ ಪ್ರವೃತ್ತಿಯವಳಾಗಿದ್ದಳು. ತನ್ನ ಮಗಳ ಕಲಿಕೆಗೆ ನೆರವಾಗಲೆಂದೇ ಜೆನಿಫರ್ ‘ಕರ್ನಾಟಕ ಸ್ಪ್ಯಾಸ್ಟಿಕ್ಸ್ ಸೊಸೈಟಿ’ಯಲ್ಲಿ ವಿಶೇಷ ಶಿಕ್ಷಣದ ಕೋರ್ಸ್‌ ಮುಗಿಸಿಕೊಂಡರು. ಇದರಿಂದ ಅವರು ತಮ್ಮ ಮಗಳಿಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ ನೀಡಲು ಸಾಧ್ಯವಾಯಿತು. ತಾನು ಕಲಿತ ವಿದ್ಯೆಯನ್ನು ಸದುಪಯೋಗಪಡಿಸಿಕೊಂಡು ಇತರ ವಿಶೇಷ ಮಕ್ಕಳು ಹಾಗೂ ಅವರ ಪೋಷಕರಿಗೆ ನೆರವಾಗಬೇಕು ಎಂಬ ಸದುದ್ದೇಶದಿಂದ ಜೆನಿಫರ್ ತನ್ನ ಸಹೋದ್ಯೋಗಿ ಮರಿಯಾ ಜೊತೆಗೂಡಿ ಜಿಸೆಲ್‌ಳ 8ನೇ ಜನ್ಮದಿನದಂದು ಚಿಕ್ಕ ಕೊಠಡಿ ಒಂದರಲ್ಲಿ ‘ಪ್ಲೆಜ್’ ಅಕಾಡೆಮಿ ಸ್ಥಾಪಿಸಿದರು. ‘ಪ್ಲೆಜ್’ ಅಂದರೆ ಪ್ರತಿಜ್ಞೆ. ಲ್ಯಾಟೀನ್ ಶಬ್ದ ‘ಜಿಸೆಲ್‌’ ಕೂಡ ಇದೇ ಅರ್ಥ ಕೊಡುತ್ತದೆ.

ಆರಂಭಿಕ ಹಂತದಲ್ಲಿ ‘ಪ್ಲೆಜ್’ ನಾಲ್ಕು ವರ್ಷಗಳವರೆಗೆ ವಿಶೇಷ ಮಕ್ಕಳು ಕಲಿಕೆಯಲ್ಲಿ ಎದುರಿಸುವ ತೊಂದರೆಗಳಿಗೆ ಸಂಬಂಧಿಸಿ ಅವಧಾನ ಕೊರತೆ, ಡಿಸ್ಲೆಕ್ಸಿಯ, ಆಟಿಸಂ, ಡೌನ್ ಸಿಂಡ್ರೋಂ, ಬುದ್ಧಿಮಾಂದ್ಯತೆ, ಲಘು ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ, ಬಹುವಿಧ ನ್ಯೂನತೆ, ಹೈಪರ್‌ ಡಿಸಾರ್ಡರ್‌, ವರ್ತನಾ ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ಕಡಿಮೆ ವೆಚ್ಚ ಹಾಗೂ ವೆಚ್ಚ ರಹಿತ ತರಬೇತಿ ನೀಡುವ ಕಾರ್ಯಕ್ಕೆ ಆದ್ಯತೆ ನೀಡಿತು. ಈ ಸಂದರ್ಭದಲ್ಲಿ ಬಹು ಸಂವೇದನಾ ವಾಹಕ ಸಾಮಗ್ರಿಗಳು, ಮಾಂಟೇಸರಿ ಕಲಿಕಾ ಸಾಮಗ್ರಿಗಳ ಬಳಕೆ ಮಾಡಿಕೊಳ್ಳಲಾಯಿತು.

ವಿಶೇಷ ಮಕ್ಕಳಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳು, ಪೋಷಕರಿಗೆ ಎದುರಾಗುವ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದ ಜೆನಿಫರ್ ನಂತರದ ದಿನಗಳಲ್ಲಿ ವಿಶೇಷ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲು, ಪೋಷಕರೊಡನೆ ಆಪ್ತಸಮಾಲೋಚನೆ ನಡೆಸಲು ಆದ್ಯತೆ ನೀಡಿದರು.

ಪ್ರಸ್ತುತ ಬೆಂಗಳೂರಿನ ಕೋರಮಂಗಲ 6ನೇ ಬ್ಲಾಕ್‌, 17 ‘ಎ’ ಮುಖ್ಯರಸ್ತೆಯಲ್ಲಿ ಇರುವ ಮನೆ ಸಂಖ್ಯೆ: 571ರಲ್ಲಿ ‘ಪ್ಲೆಜ್ ಅಕಾಡೆಮಿ’ ಹಲವು ವಿಶೇಷ ಶಿಕ್ಷಣ ಸಂಸ್ಥೆಗಳಿಗೆ ಕಲಿಕಾ ಸಾಮಗ್ರಿ ಮತ್ತು ಸಂಪನ್ಮೂಲ ಕೊಠಡಿಗಳನ್ನು ಒದಗಿಸಿದೆ. ಪೋಷಕರಿಗಾಗಿ 100ಕ್ಕೂ ಹೆಚ್ಚು ಆಪ್ತಸಮಾಲೋಚಕ ಕಾರ್ಯಾಗಾರಗಳನ್ನು ಆಯೋಜಿಸಿದೆ. ವಿಶೇಷ ಮಕ್ಕಳ ಸಾಮರ್ಥ್ಯದ ಔಪಚಾರಿಕ ಮೌಲ್ಯಮಾಪನ, ಪ್ರಮಾಣೀಕರಣ, ಆ ಮಕ್ಕಳಿಗೆ ಸರ್ಕಾರದಿಂದ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸಿಗುವ ವಿಶೇಷ ಸೌಲಭ್ಯಗಳ ಕುರಿತು ಪೋಷಕರಿಗೆ ಮಾಹಿತಿಯನ್ನು ಪ್ಲೆಜ್ ನೀಡುತ್ತದೆ.

ವಿಶೇಷ ಮಕ್ಕಳಿಗೆ ನೀಡಬೇಕಾದ ಭಾಷೆ ಮತ್ತು ಸಂವಹನ ತರಬೇತಿ, ಮನೋ–ಚಾಲನಾತ್ಮಕ ತರಬೇತಿ, ಜ್ಞಾನಾತ್ಮಕ ಅರಿವು, ಜೀವನ ಕೌಶಲಗಳ ತರಬೇತಿ, ವೃತ್ತಿ ಕೌಶಲ ವಿಕಸನ, ಸಾಮಾಜಿಕ– ಶೈಕ್ಷಣಿಕ ಮೌಲ್ಯವರ್ಧನೆ ಕುರಿತು ಇಲ್ಲಿ ಪೋಷಕರಿಗೆ ಮಾರ್ಗದರ್ಶನ ನೀಡಲಾಗುತ‌್ತದೆ. ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಸೆನ್ಸರಿ ಥೆರಪಿ, ಪೆಟ್‌ ಥೇರಪಿ, ವಾಟರ್‌ ಥೆರಪಿ, ಸ್ಯಾಂಡ್ ಥೆರಪಿ, ಕ್ಲೇ ಥೆರಪಿ, ಮ್ಯೂಸಿಕ್ ಥೆರಪಿ, ಯೋಗ ತರಬೇತಿಯ ಪರಿಜ್ಞಾನ ಒದಗಿಸಲಾಗುತ್ತದೆ.

‘ಪ್ರತಿ ವಿಶೇಷ ಮಗುವಿನಲ್ಲೂ ಒಂದು ನಿರ್ದಿಷ್ಟ ಸಾಮರ್ಥ್ಯ ಇದ್ದೇ ಇರುತ್ತದೆ. ಆ ಸಾಮರ್ಥ್ಯ ಓದುವಿಕೆ, ಬರೆಯುವಿಕೆಯೇ ಆಗಬೇಕು ಎಂದೇನಿಲ್ಲ. ಬದಲಿಗೆ ಆ ಸಾಮರ್ಥ್ಯ ಹಾಡುವುದು, ನೃತ್ಯ ಮಾಡುವುದು, ಈಜುವುದು, ಓಡುವುದು, ಜಿಗಿಯುವುದು, ಚಿತ್ರ ಬಿಡಿಸುವುದು, ಗಿಡ ಬೆಳೆಸುವುದು, ಭಾರ ಎತ್ತುವುದು, ಕಸೂತಿ ಕೆಲಸ... ಹೀಗೆ ಯಾವುದಾದರೂ ಆಗಿರಬಹುದು. ನಾವು ಆ ಸಾಮರ್ಥ್ಯವನ್ನು ಗುರುತಿಸಿ ಮಗುವಿಗೆ ಆ ನಿಟ್ಟಿನಲ್ಲಿ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಅವರ ಆತ್ಮವಿಶ್ವಾಸ ವೃದ್ಧಿಸಬೇಕು’ ಎಂಬುದು ಜೆನಿಫರ್ ಅಭಿಮತ.

ವಿಶೇಷ ಮಕ್ಕಳ ನಿರ್ವಹಣೆಗೆ ಸಂಬಂಧಿಸಿ ಯಾವುದೇ ಮಾಹಿತಿಗಾಗಿ ಮೊ: 98860 15150 ಅಥವಾ ಇಮೇಲ್ ಐಡಿ pledgeacademy@outlook.com ಮೂಲಕ ‘ಪ್ಲೆಜ್ ಅಕಾಡೆಮಿ’ಯನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !