ಭಾರತ–ಆಸಿಯಾನ್ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

7
ಇಂಡೊ–ಫೆಸಿಫಿಕ್: ಭಾರತದ ಬದ್ಧತೆ ಮನವರಿಕೆ

ಭಾರತ–ಆಸಿಯಾನ್ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

Published:
Updated:
Deccan Herald

ಸಿಂಗಪುರ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಡೆದ ಇಂಡೊ–ಆಸಿಯಾನ್ ದೇಶಗಳ ಉಪಹಾರ ಸಭೆಯಲ್ಲಿ ಭಾಗಿಯಾಗಿದ್ದರು. ಇಂಡೊ–ಫೆಸಿಫಿಕ್ ಭಾಗದ ಸಮೃದ್ಧಿಗೆ ಕೇಂದ್ರೀಕೃತ ವ್ಯಾಪಾರ ಹಾಗೂ ಕಡಲ ಸಹಕಾರದ ಅಗತ್ಯತೆಯನ್ನು ಮೋದಿ ಅವರು ಒತ್ತಿ ಹೇಳಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. 

ಆಸಿಯಾನ್ ಜೊತೆಗಿನ ಭಾರತದ ಬಾಂಧವ್ಯ ಗಟ್ಟಿಯಾಗಿದ್ದು, ಶಾಂತಿ ಹಾಗೂ ಸಮೃದ್ಧಿಗಾಗಿ ಆ ದೇಶಗಳು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿ ಮೋದಿ ಟ್ವೀಟ್ ಮಾಡಿದ್ದಾರೆ. ಇಂಡೊ–ಫೆಸಿಫಿಕ್ ಭಾಗದ ಬಗ್ಗೆ ಭಾರತಕ್ಕೆ ಇರುವ ದೃಷ್ಟಿಕೋನವನ್ನು ಅಮೆರಿಕದ ಸಚಿವ ಮೈಕ್ ಪೆನ್ಸ್ ಅವರೊಂದಿಗೆ ಮೋದಿ ಬುಧವಾರ ಹಂಚಿಕೊಂಡಿದ್ದರು. 

ಈ ಭಾಗದ ಸಮುದ್ರದ ಮುಕ್ತ ಬಳಕೆಯನ್ನು ಖಚಿತಪಡಿಸುವುದು ಹಾಗೂ ಈ ಬಗ್ಗೆ ಇರುವ ಬದ್ಧತೆಯನ್ನು ಸ್ಪಷ್ಟಪಡಿಸಲು ಇತ್ತೀಚೆಗೆ ಭಾರತ–ಅಮೆರಿಕ–ಜಪಾನ್ ಜಂಟಿಯಾಗಿ ಕೈಗೊಂಡಿದ್ದ ಸೇನಾ ಕಸರತ್ತು ನಿದರ್ಶನ ಎಂದು ಪೆನ್ಸ್ ಹೇಳಿದ್ದರು. 

ಇಂಡೊನೇಷ್ಯಾ, ಥಾಯ್ಲೆಂಡ್, ಸಿಂಗಪುರ, ಮಲೇಷ್ಯಾ, ಫಿಲಿಪ್ಪೀನ್ಸ್, ವಿಯೆಟ್ನಾಂ, ಮ್ಯಾನ್ಮಾರ್, ಕಾಂಬೊಡಿಯಾ, ಬ್ರೂನೇ ಮತ್ತು ಲಾವೋಸ್‌ಗಳು ಆಸಿಯಾನ್ ಸದಸ್ಯ ರಾಷ್ಟ್ರಗಳು.

ಥಾಯ್ಲೆಂಡ್‌ಗೆ ಅಧ್ಯಕ್ಷ ಪಟ್ಟ

ಈ ಬಾರಿಯ ಆಸಿಯಾನ್ ಅಧ್ಯಕ್ಷ ಪಟ್ಟವು ಸಿಂಗಪುರದಿಂದ ಥಾಯ್ಲೆಂಡ್‌ಗೆ ಹಸ್ತಾಂತರವಾಗಿದೆ. ಕಳೆದ ಬಾರಿ ಆಗಿದ್ದ ಪ್ರಮಾದಗಳು ಮರುಕಳಿಸುವುದಿಲ್ಲ ಎಂಬ ವಿಶ್ವಾಸವನ್ನು ಥಾಯ್ಲೆಂಡ್ ವ್ಯಕ್ತಪಡಿಸಿದೆ. 

ಕಳೆದ ಬಾರಿ ಥಾಯ್ಲೆಂಡ್ ಆಸಿಯಾನ್‌ ನೇತೃತ್ವ ವಹಿಸಿಕೊಂಡಿದ್ದಾಗ ಪ್ರತಿಭಟನೆಗಳು ನಡೆದು, ಆಸಿಯಾನ್ ಗಣ್ಯರು ಒತ್ತಾಯಪೂರ್ವಕವಾಗಿ ಹೆಲಿಕಾಪ್ಟರ್ ಮೂಲಕ ಜಾಗ ಖಾಲಿಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. 

ಮಿಲಿಟರಿ ಆಡಳಿತಕ್ಕೆ ಒಳಪಟ್ಟಿರುವ ಥಾಯ್ಲೆಂಡ್‌ನಲ್ಲಿ ಬರುವ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಹಿಂಸಾಚಾರದ ರಾಜಕೀಯದಿಂದ ಇದು ಕುಖ್ಯಾತಿ ಪಡೆದಿದೆ. 

ಹ್ಯಾಕಥಾನ್ ವಿಚೇತರಿಗೆ ಪ್ರಶಸ್ತಿ ಪ್ರದಾನ

ಭಾರತ–ಸಿಂಗಪುರ ಮೊದಲ ಹ್ಯಾಕಥಾನ್ ವಿಜೇತ ಆರು ತಂಡಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ರಶಸ್ತಿ ಪ್ರದಾನ ಮಾಡಿದರು. ವಿಜೇತರಲ್ಲಿ ಭಾರತ ಹಾಗೂ ಸಿಂಗಪುರದ ತಲಾ ಮೂರು ತಂಡಗಳು ಸೇರಿವೆ.

ಐಐಟಿ ಖರಗಪುರ, ತಿರುಚಿನಾಪಳ್ಳಿಯ ಎನ್‌ಐಟಿ ಹಾಗೂ ಪುಣೆಯ ಎಂಐಟಿ ಎಂಜಿನಿಯರಿಂಗ್ ಕಾಲೇಜಿನ ತಂಡಗಳು ಭಾರತದ ಪಾಳಯದಲ್ಲಿ ಪ್ರಶಸ್ತಿ ಪಡೆದಿವೆ. 

ಎರಡೂ ದೇಶಗಳ ಯುವಪ್ರತಿಭೆಗಳು ತಮ್ಮ ಹೊಸ ಆವಿಷ್ಕಾರಗಳನ್ನು ಒರೆಗೆ ಹಚ್ಚಲು ಹ್ಯಾಕಥಾನ್‌ನಲ್ಲಿ ವೇದಿಕೆ ಕಲ್ಪಿಸಲಾಗಿತ್ತು. 36 ಗಂಟೆಗಳ ಸುದೀರ್ಘ ಹ್ಯಾಕಥಾನ್‌ನಲ್ಲಿ ಈ ತಂಡಗಳು ಭಾಗಿಯಾಗಿದ್ದವು.

‘ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಯುವಜನತೆ ಇಟ್ಟುಕೊಂಡಿರುವ ಗುರಿ ಹಾಗೂ ಅವರ ಬದ್ಧತೆ ಬಗ್ಗೆ ಹೆಮ್ಮೆಯಿದೆ. ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿಂಗಪುರದ ಶಿಕ್ಷಣ ಸಚಿವ ಒಂಗ್ ಯೆ ಕುಂಗ್ ಇದ್ದರು.

ಮೊದಲ ಸ್ಥಾನ ಪಡೆದ ತಂಡ ₹5.26 ಲಕ್ಷ, ಎರಡನೇ ತಂಡ ₹3.13 ಲಕ್ಷ ಹಾಗೂ ಮೂರನೇ ತಂಡ ₹2.9 ಲಕ್ಷ ಬಹುಮಾನ ಪಡೆದವು. ಎರಡೂ ದೇಶಗಳ ತಲಾ 20 ತಂಡಗಳು ಹ್ಯಾಕಥಾನ್‌ನಲ್ಲಿ ಪಾಲ್ಗೊಂಡಿದ್ದವು.

ಮ್ಯಾಪಿಂಗ್, ಸಿಂಕ್ರೊನೈಸ್ಡ್ ಔಟ್‌ಪುಟ್, ಸ್ಪೇಸ್ ಮ್ಯಾನೇಜ್‌ಮೆಂಟ್, ಪರ್ಸನಲ್ ಸೆಕ್ಯುರಿಟಿ ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳನ್ನು ಮಂಡಿಸಿದರು. ಭಾರತದಿಂದ 83 ಮಂದಿಯ ನಿಯೋಗ ತೆರಳಿತ್ತು. 

ಮೋದಿ ಅವರು ಎನ್‌ಸಿಸಿ ಕೆಡೆಟ್‌ಗಳ ಜೊತೆಗೂ ಸಮಯ ಕಳೆದರು. 

ಮೋದಿ ಅವರು ಸಿಂಗಪುರ, ಆಸ್ಟ್ರೇಲಿಯಾ ಹಾಗೂ ಥಾಯ್ಲೆಂಡ್‌ನ ಪ್ರಧಾನಿಗಳ ಜೊತೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ವ್ಯಾಪಾರ, ರಕ್ಷಣೆ ಹಾಗೂ ಭದ್ರತೆ ವಿಷಯಗಳಲ್ಲಿ ಮೈತ್ರಿಯನ್ನು ಇನ್ನಷ್ಟು ಬಲಗೊಳಿಸುವ ಮಾರ್ಗೋಪಾಲಯಗಳನ್ನು ಚರ್ಚಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !